Wednesday, September 23, 2009

ವೈಟಿಂಗ್...ವೈಟಿಂಗ್...BUT ವೈಟಿಂಗ್...


ಸ್ನೇಹಿತರೆ ಬದುಕಿನ ಪರ್ಯಟನೆಯಲಿ ಕಾಯುವ ಅನಿವಾರ್ಯ ಸಂಗತಿಯ ಕೆಲ ಸ್ವ ಅನುಭವಗಳು ನಮ್ಮ ಜೀವನದ ಅನಿಶ್ಚಿತತೆಯ ಅರಿವನು ನಮಗೆ ಮೂಡಿಸುತ್ತದೆ. ಅಂತಹ ಅರಿವಿನ ಸಂಗತಿಯನು ನಿಮಗಾಗಿ ಇಲ್ಲಿ ವಿಷದಪಡಿಸಿದ್ದೇನೆ:



ಅದೇಕೋ ಹಾಗೇ ಅನಿಸುತ್ತದೆ: ವಿಶಾಲವಾದ ಬಯಲಲಿ ತಂಗಾಳಿ ಸಾಗಿದ ಹಾಗೇ. ಬಯಲೋ ಖಾಲಿ ಖಾಲಿ ಯಾವ ಹೂವ ಮೈಸ್ಪರ್ಶವು ಆಗದು ತಂಗಾಳಿಗೆ ಎನುವಂತೆ. ಏನಾದರು ಬರೆಯಬೇಕು ಎಂದೆನಿಸಿದರು ಏನ ಬರೆಯಬೇಕು ಎಂಬುದೇ ತಿಳಿಯದ ಸ್ಥಿತಿ.ಯಾವ ಘನಗೋರ ಕಾರ್ಯವಾಗಲಿ, ಮಹತ್ಸಾಧನೆಯಾಗಲಿ ಆಗದೆ;ಮಟ್ಟಸವಾಗಿ ಹರಿವ ನದಿ ಯಾವ ಪ್ರವಾಹವ ತಾನೇ ಸೃಷ್ಟಿಸಿತು? ತನ್ನ ಹರಿವಿನ ಪರಿವೇ ಇರದ ಹಾಗೇ ಅಂತ್ಯದೆಡೆಗೆ ಸಾಗುತಲೇ ಹತ್ತಿರವಾಗುವುದು ತನ್ನ ಕಾಲದ ಅಂಚು.
ದಿನಕಳೆದಂತೆ ಏನೋ ಬೇಸರ, ಜೀವನದೀ ಯಾವ ಅಂಶವು ಕೈಗೂಡದೆ ವಯೋವೃದ್ದಿಯಾಗುತಿದೆಯಲ್ಲ ಎನುವ ಅಂಶ ಮನಸನು ಕಸಿವಿಸಿಗೊಳಿಸುತ್ತದೆ. ದಿನ ದಿನವೂ ಅದೇ ದಿನಚರಿ, ಬದಲಾವಣೆಯೇ ಇಲ್ಲವೇ? ಮನ್ವಂತರದ ಹಾದಿಯೆಲ್ಲ ಭ್ರಮೆಯೇ? ಯಾವ ಮಹಾಮಾಯೆಯು ಇಲ್ಲವಲ್ಲ ಈ ಏಕತಾನತೆಯನ್ನು ಅಳಿಸಿ ಚೈತ್ರದ ರಸಧಾರೆಯ ಚಿತ್ರ-ವಿಚಿತ್ರ ತಲ್ಲಣಗಳು ಆವರಿಸಿ ನಮ್ಮಲೇನೋ ಸ್ಥಿತ್ಯಂತರವಾಗಿ ಬದುಕೇ ವಿಸ್ಮಯ ಕೂಪವಾಗುವಂತೆ ಮಾಡುವ ಮಾಯೆ ...?
ಕಟುವಾಸ್ತವ ನಮ್ಮ ಮುಂದಿರುವುದು. ಕನಸು ಕಾಣುವುದು ನಿದ್ರೆಯಲಿ, ಎಚ್ಚರದಲಲ್ಲ ಎನುವ ಸಾಮನ್ಯ ಅಂಶವು ಮರೆತಂತಾಗಿದೆ. ಆ ಕನಸುಗಳಲಿಯು ಹೊಸದಿಲ್ಲ ಅವೇ ಪೇಲವವಾಗಿಹ ಕನಸುಗಳು. ಕ್ಷಣಕಾಲವೂ ಮನ ಉಲ್ಲಸಿತಗೊಳ್ಳುವುದಿಲ್ಲ ಅಂತಹ ರುಚಿಸದ ಸ್ವಪ್ನಗಳು. ಈ ಬದುಕೇ ನಿರರ್ಥಕ ಎನುವಂತಹ ಮನಸ್ಥಿತಿಯಲಿ ಕೆಲ ದಿನಗಳು ಕಾಲದೂಡುವಂತಾಯಿತು, ನನಗೆ ಸರ್ಕಾರಿ ಕೆಲಸದ ಆದೇಶಕ್ಕಾಗಿ ಕಾಯುತ, ಕಾಯುತ ಬದುಕೇ ವ್ಯರ್ಥ ಎನುವಂತಾಯಿತು ನಿಜಕ್ಕೂ.
ಈ ಸರ್ಕಾರಿ ಕೆಲಸದ ಆದೇಶ ಬರುತ್ತದಲ್ಲ ಎಂಬ 'ಗುಮ್ಮನನ್ನು' ಕಾಯುತ್ತ ಕುಳಿತು ಇಂದಿನ ಅಮೂಲ್ಯ ಕ್ಷಣಗಳೆಲ್ಲ ನಿರಾಧಾರವಾಗಿ ಗತ ಇತಿಹಾಸವಾದವು. "ಎಂಥ ಅನಿಶ್ಚಿತತೆ ಆವರಿಸಿತು?" ಆ ದಿನಗಳಲಿ ಕೆಲವೊಮ್ಮೆ ದಿನದ ಅರ್ಧ ಸಮಯವನು ಮನೆಯಲ್ಲೇ ಕುಳಿತು ಸವೆಸಬೇಕಾದ ಘಳಿಗೆಯಲಿ ಮನದಲಿ ಪುಟಿದೆದ್ದ ಪ್ರಶ್ನೆ ಇದು. ಉತ್ತರ ಕಾಣದೆ ಸುಮ್ಮನಾದೇನಾದರು ಏನೋ ತಳಮಳ, ಸುಮ್ಮನಿರಲಾರದ ತುಮುಲ.
ನಮ್ಮ ವ್ಯವಸ್ಥೆಯೇ ನಮ್ಮನ್ನು ಜಡ್ಡು ಹಿಡಿಸಿ ಸೋಮಾರಿಗಳನ್ನಾಗಿ ಮಾಡಿಬಿಡುತ್ತದೆಯಾ? ಆ ಸಮಯದಲಿ ಹೌದೆನಿಸಿತು ನನಗೆ. ಕೆಲಸಕ್ಕೆ ಅರ್ಜಿ ಹಾಕಿ, ಸಂದರ್ಶನದ ಮಹಾಸಮರವನು ಎದುರಿಸಿ, ಆಯ್ಕೆಯಾದ ಸಂತಸವೆಲ್ಲ ಅಡಗಿ, ವರುಷಾನುಗಟ್ಟಲೆ, ನಿರುದ್ಯೋಗಿಯ ಬೇಸರ, ಯಾತನೆ, ಒಂಟಿತನವನು ದೂಡುವಂತಹ ಕೂಪದಲಿ ಕೆಲಕಾಲ ಬಳಲುವಂತೆ ವಿರಮಿಸಲು ಕಾರಣರಾರು? ಸ್ವತಃ ನಾನೆಯೇ? ಅಥವಾ ನಮ್ಮ ಸರ್ಕಾರಗಳ ಆಳು ವ್ಯವಸ್ಥ್ತೆಯೇ? ಸರಿಯಾದ ಸಮಯಕೆ ಆದೇಶ ಕೊಟ್ಟಿದ್ದರೆ ಈಗೆಲ್ಲ ಆಗುತಿತ್ತ ಎನುಸುತ್ತದೆಯಾದರೂ ಈ ವಯಸಿನಲ್ಲಿಯೇ ಏಕತಾನತೆಯನು ಅನುಭವಿಸುವಂತಹ ಪರಿಸ್ಥಿತಿ ಸೃಷ್ಟಿಸಿಕೊಂಡಿದ್ದಕ್ಕೆ ನನ್ನ ಬಗ್ಗೆಯೇ ಬೇಸರವಾಗುವುದು ಅಷ್ಟೆ ಸ್ಪಷ್ಟ.

'Waiting For Godot' ಎಂಬ ಅಸ್ತಂಗತ ನಾಟಕದಲಿ ಇಬ್ಬರು ಪಾತ್ರಧಾರಿಗಳು ತಮಗೆ ಯಾರೆಂಬುದೇ ತಿಳಿಯದ, ಅವರಿಗೆ ಪರಿಚಯವೇ ಇಲ್ಲದ Godot ಎಂಬ ವ್ಯಕ್ತಿ ಬರುತ್ತಾನೆ ಎಂದು ದಾರಿಬದಿಯ ಒಣ ಮರದಡಿಯಲಿ ಕಾಯುತ್ತಲೇ ಕೂಡುತ್ತಾರೆ. ಯಾವಗ ಬರುತ್ತಾನೆ Godot? ಗೊತ್ತಿಲ್ಲ, ನಾಳೆ ಬರುತ್ತಾನೆಯೇ; ನಾಳೆಯೇ ಅದು ಗೊತ್ತಿಲ್ಲ, ಹೋಗಲಿ ನಾಳಿದ್ದು, ನಾಳಿದ್ದು ಬಂದರು ಬರಬಹುದು, ಸರಿಯಾಗಿ ಗೊತ್ತಿಲ್ಲ. ಕೊನೆ ಪಕ್ಷ ಎಂದಾದರೂ ಬರುತ್ತಾನ ಅದು ಗೊತ್ತಿಲ್ಲ. ಮತ್ತೆ ಕಾಯುತ್ತಿರುವುದೇಕೆ ಅವನು ಬರುತ್ತಾನೆಂದು? 'ಅದು ಗೊತ್ತಿಲ್ಲ' . ಆದರೂ ನಾವು ಕಾಯಲೇ ಬೇಕೆಂಬ ಉತ್ತರ ಕೇಳಿ ಬರುತ್ತದೆ ಒಬ್ಬ ಪಾತ್ರಧಾರಿಯಿಂದ. Godot ಎಂತವ, ಯಾಗಿದ್ದಾನೆ, ಏನಾಗಿದ್ದಾನೆ ಏನೊಂದೂ ತಿಳಿಯದು ಅವನ ಬಗ್ಗೆ, ಆದರೂ ಅವನಿಗಾಗಿ ಕಾಯಲೇ ಬೇಕಾದ ಸಂಧಿಗ್ದತೆಯಲ್ಲಿ ಅವರಿರುತ್ತಾರೆ. ನಮ್ಮ ಜೀವನದ ಕಟು ವಾಸ್ತವವನು ಮೂದಲಿಸುತ ಅದರ ಗಮ್ಯತೆಯನು ಹಿಡಿದಿಡುವ ನಾಟಕಕಾರ SAMUEL BEKKET ನ ಕಲಾವಂತಿಕೆ ಅದ್ಭುತವಾದುದು. ಆಧುನಿಕ ಯುಗದಲಿನ ಮಾನವನ ಅಸಹಾಯಕ ಸ್ಥಿತಿಯನು ಯತಾವತ್ತಾಗಿ ಬಿಂಬಿಸುವ ನಾಟಕವದು. ಆ ಪಾತ್ರಧಾರಿಗಳ ಮಾತುಗಳು ನಮ್ಮ ಜೀವನದ ಎಳೆ ಎಳೆಯನು ಬಿಚ್ಚಿಡುತ್ತಿದ್ದಾರೆ ಎನಿಸುವಷ್ಟು ಹತ್ತಿರವಾಗಿದೆ ನಾಟಕದ ನಿರೂಪಣೆ. ನಮ್ಮ ಬದುಕಿನ ಅಣಕವೆಂದರೂ ತಪ್ಪಿಲ್ಲ.
ಜೀವನದಲಿ ಯಾವುದಕ್ಕಾಗಿಯೋ, ಯಾರಿಗಾಗಿಯೋ, ಏತಕ್ಕೋ, ಉದ್ದೇಶ ಪೂರ್ವಕವಾಗಿಯೋ, ಕಾರಣಾರ್ಥವೋ, ವಿನಾಕಾರಣವೋ, ಕಾಯಬೇಕಾದ ಪರಿಸ್ಥಿತಿಯಲ್ಲಿಯೇ ನಾವೆಲ್ಲಾ ಕಾಲ ದೂಡುತಿದ್ದೆವಲ್ಲ. ನೌಕರನೊಬ್ಬ ಪ್ರತಿದಿನ ಕಾಯುವ ಬಸ್ಸಿರಬಹುದು, ವಿದ್ಯಾರ್ಥಿಯೊಬ್ಬ ವರುಷ ವರುಷವು ಕಾಯುವ ಫಲಿತಾಂಶವಿರಬಹುದು, ಪ್ರೇಮಿಯೊಬ್ಬ ಇನಿಯಳ ಒಪ್ಪಿಗೆಗಾಗಿ ಕಾಯುವ ವಿರಹವಿರಬಹುದು, ಅಧಿಕಾರಕ್ಕಾಗಿ ಕಾಯುವ ನಾಯಕನಿರಬಹುದು, ನಮ್ಮ ಜೀವನದ ದಿಶೆಯನೆ ಬದಲಾಯಿಸುವ ಯಾವುದೋ ಒಂದು ಬದಲಾವಣೆಗಾಗಿ ಬದುಕಿನುದ್ದಕ್ಕೂ ಕಾಯುತ್ತಲೇ ಸಾಗುವ, ಸರಮಾಲೆಗಳ ನಡುವೆ ನಲುಗಿ-ನಲುಗಿ ಯಾವುದೋ ಸಮಯದಲಿ ಅರಿವಿರದೆ ಅಂತ್ಯವನ್ನು ಕಾಣುವುದೇ "ಜೀವನವ?" ಎಂಬ ಮಾಹನ್ ತಲೆ ಕೊರಕ ಅಂಶ ಕಾಯುವಿಕೆಯ ದಿನಗಳಲಿ ನನ್ನ ಕಾಡಿದಂತು ನನ್ನಷ್ಟೇ ಸತ್ಯ.
ಎತ್ತಲಿಂದೆತ್ತ ಯೋಚಿಸಿದರು ಈ ಯಾತನೆಗಳ ಸರಮಾಲೆಯೇ ಜೀವನವ? ಅಲ್ಲವ? ಎಂಬುದು ತಿಳಿಯದಾಗಿದೆ. ಆದರೂ ಒಂದು ಅಂಶವಂತೂ ಈ ಹಿಂದಿನ ಕೆಲ ದಿನಗಳ ಅನುಭವದೊಂದಿಗೆ ನಾನು ಕಂಡುಕೊಂಡ ಸತ್ಯ ಸಂಗತಿ ಎಂದರೆ, ಕಾಯದೆ ಬೇರೆ ದಾರಿಯೇ ಇಲ್ಲ.. ಬದುಕಿನಲಿ ಕೆಲವು ಸಂಕಿರ್ಣತೆಗಳಿಂದ ತಪ್ಪಿಸಿಕೊಳ್ಳಲು ಬೇರೆ ಇನ್ನಾವ ರಹದಾರಿಯಾಗಲಿ, ಕಳ್ಳದಾರಿಯಾಗಲಿ ಇಲ್ಲವೇ ಇಲ್ಲ ನುಸುಳಿಕೊಂಡು ಓಡಿಹೋಗಿ ಆ ಯಾತನೆಯಿಂದ ಪರಾದೇ ಎಂದು ಬೀಗಲು. ನಾವೆಲ್ಲ ಅಷ್ಟು ದುರ್ಬಲರು ನಿಜ ಜೀವನದಲಿ...ನಿಜವೇ? ಯೋಚಿಸಿ ಹೇಳಿ..ನೀವುಗಳೇ ಸ್ನೇಹಿತರೆ.



Tuesday, September 15, 2009

ನದಿಯ ಮೌನವೇ...!!


ಹರಿವ ನದಿಗೆ ತನ್ನದೇ ದಿಕ್ಕು; ತನ್ನದೇ ದಾರಿ.

ಯಾವ ತತ್ವ-ಚಿಂತನೆಯ ಸಾಲುಗಳು ನಿಲುಕದು, ನದಿಯ ನಿರಂತರತೆಯ ಚಲನಶೀಲ ಕಾಯಕ ತತ್ವದ ಎದುರು. ಅನುಗಾಲವೂ ತನ್ನ ಪಾಡಿಗೆ ತಾನು ತನ್ನ ಅರಿವಿನ ಕಾಯಕವನು ಮುಗಿಸಿ ಅನಂತತೆಯ, ಅಪಾರತೆಯಲಿ ಲೀನವಾಗುವ ನದಿಯ ಮೌನಯಾನವೇ ಅಭೂತ ವೆನಿಸುವುದು. ತನ್ನ ಹುಟ್ಟಿನಿಂದ ಚಲನೆಯನೆ ಕಾಯಕವಾಗಿಸಿಕೊಂಡು, ತನ್ನ ಮಾರ್ಗವನು ಸೃಷ್ಟಿಸಿಕೊಳ್ಳುತ ಅನಂತ ನೆಲೆಯನು ಅರಸುತ ಸಾಗುವ ನದಿಯ ಅನವರತ ಸಾಗಾಟದಲಿ ಯಾವ ನವ ಅನ್ವೇಷಣೆ ಅಡಗಿದೆಯೋ. ಅದರ ಅಖಂಡ ಮೌನವನೊಮ್ಮೆ ಹೊಕ್ಕು ಉತ್ತರ ಹುಡುಕುವಾಸೆ ಮನಕೆ. ಆದರೂ ಆ ಮೌನದಲೇ ಅಡಗಿರುವ ಅಮೂರ್ತ ಪರಿಭಾಷೆಯನು ಅರಿವ ಪ್ರಯತ್ನದಲಿ ಮೂಡಿಬಂದ ಕವನ 'ಮೌನ ನದಿ' ಅದರ ಮೌನ ಭಾಷೆಯಲಿನ ಅರಿವು ನಮ್ಮದಾಗಲಿ...
ಮೌನ ನದಿ
ನದಿಯ ಮೌನ
ಇರುಳ ನೀರವತೆಗೂ
ಧೃತಿಗೆಡದ ಮೌನ!
ಹೊಳೆವ ಅಪರಿಮಿತ
ನಕ್ಷತ್ರಗಳ ಬಿಂಬಗಳಲಿ
ಮಿರುಗುವ ನದಿಯಲೆಗಳು.
ಬೀಗುವ ಚಂಚಲ ಮೋಡದೊಡಲ
ಕಂಡು ಮೋಹಕ ಮರುಗುವ,
ಚದುರಿ ಉದುರುವ ಹನಿಗೆ
ಮಡಿಲೋಡ್ಡುವ ನದಿ ಮೌನ!
ಹನಿನೀರು ಜಲವಾಗಿ
ನದಿಯಾಗಿ ಹೊರಳಿ,
ಮಿರುಗಿ,ನಲುಗಿ,
ನೆಲೆಗೊಳ್ಳದೆ ಹರಿವನೆ
ಹರಸುವ ನದಿ ಮೌನ!
ಎಚ್.ಎನ್.ಈಶಕುಮಾರ್


Tuesday, September 8, 2009

ಆಹಾ! ಎಂಥ ಸಾವಿನ ಪರಿಯೋ...?















ಕಾಲ ಪ್ರವಾಹದ ನಿರಂತರ ಚಲನೆಯಲಿ
ಹುಟ್ಟು-ಸಾವುಗಳೆಂಬ ಆರಂಭ-ಅಂತ್ಯದಲಿ
ಅರಳುವ ಮುದುಡುವ ಹೂವುಗಳೆಷ್ಟೋ
ಅರಳಿ ಮುದುಡುವ ನಡುವೆ ಜನರ ಮನದ
ಮುಡಿಗೆರುವುದುಕೇವಲ ಕೆಲವಷ್ಟೇ.

ಜಗದ ಸಕ್ರಿಯತೆಯಲಿ ಮುಳುಗಿದ್ದವ, ಎಲ್ಲ ಚಲನ ವಲನಗಳಲ್ಲು ತನ್ನನ್ನು ತೊಡಗಿಸಿಕೊಂಡು, ಎಲ್ಲರ ಕಣ್ಣೆದುರೆ ತನಗೂ-ಇಲ್ಲಿಗೂ ಇನ್ಯಾವುದೇ ಸಂಭಂದವಿಲ್ಲ ಎಂದು ಸಂಭಂದ ಕಳಚಿಕೊಂಡು ಎಲ್ಲಿಗೆ ಹೋದ ತಿಳಿಯದು.ಜನರ ಮನದಲಿ ಅವರ ಅಚ್ಚು ಮೆಚ್ಚಿನ ನಾಯಕನಾಗಿ,ಅವರ ಕಷ್ಟ,ನೋವು;ನಲಿವಿನಲಿ ಭಾಗಿಯಾಗಿದ್ದವ ಇದ್ದಕಿದ್ದ ಹಾಗೇ ಕಣ್ಮರೆಯಾದರೆ ಅಂತಹ ನಾಯಕನ ಕಳೆದುಕೊಂಡ ಜನರೆಗೆ ಕಂಗಾಲಾಗಬೇಡ.
ಹುಟ್ಟು-ಸಾವು ನಿಗೂಢ, ಆದರೆ ಹುಟ್ಟಿನದು ಸಂತಸದ ಸಂಗತಿ,ಸಾವು ದುಖದ್ದು. ಸಾವಿನ ಭಯ ಎಲ್ಲರನ್ನು ಕಾಡುವುದೇ. ಆದರೂ ಯಾರ ಯಾರ ಸಾವು ಹೇಗೆ,ಎಲ್ಲಿದೆಯೋ ಅರಿತವರಿಲ್ಲ. ಆಂಧ್ರದ ಸಿಎಂ ರಾಜಶೇಖರರೆಡ್ಡಿ ಹಾಗೂ ಅವರ ಸಾವಿನ ಕಾರಣ, ಸಾವಿಗೆ ಶರಣಾದ ಜನರ ಸಾವುಗಳ ಬಗ್ಗೆ ಕ್ಷಣಕಾಲವು ಚಿಂತಿಸಲಾಗದೆ ಇದು ನಿಜ ಸಂಗತಿಯೇ ಎಂದು ನಮಗೆ ನಾವೇ ಪ್ರಶ್ನೆ ಕೇಳಿಕೊಳ್ಳುವಂತಹ ಶೋಚನಿಯ ಸ್ಥಿತಿ ನಮ್ಮದು. ಸಾವು ಯಾರದೇ ಆಗಿರಲಿ ನಮ್ಮ ಮನವನು ಕದಲಿಬಿಡುತ್ತದೆ. ನಮಗೆ ಸಂಭಂದ ಪಡಲಿ ಪಡದಿರಲಿ ಸಾವಿನ ಸಂಗತಿ ಮಾನವನಲಿ ಭಯ ಹುಟ್ಟಿಸುತ್ತದೆ.

ಒಂದು ದೇಹದಲಿ ಜೀವವಿರುವುದಕು, ಇಲ್ಲದಿರುವುದಕು ಇರುವ ವ್ಯತ್ಯಾಸವೇ ಅಜಗಜಾಂತರ. ಲವಲವಿಕೆಯಿಂದ ಓಡಾಡುತ, ಮಾತನಾಡುತ, ನಗುತ ನಮ್ಮ ಸುತ್ತ-ಮುತ್ತಲು ಕಾಣಸಿಗುವವರ ದೇಹ ಸ್ತಬ್ದವಾಗಿ ಯಾವುದೇ ಚಲನೆ ಇಲ್ಲದೆ ನಿಶ್ಚಲ ಜಡ ವಸ್ತುವಿನಂಥಾದ ಸ್ಥಿತಿಯನು ಕಂಡರಂತೂ ಎಂಥವರ ಗುಂಡಿಗೆಯಲು ನಡುಕ ಹುಟ್ಟುವುದು.
'ನಮ್ಮ ದೇಹವು ಇಂತಹ ಜಡತೆಯ,ನಿಷ್ಕ್ರಿಯ ಸ್ಥಿತಿಯನೊಮ್ಮೆ ತಲುಪುವುದಲ್ಲವೇ' ಎನ್ನುವ ಭವಿಷ್ಯವಾಣಿಯ ಮೂರ್ತ ಚಿತ್ರಣ ನಮ್ಮ ಮನದಲಿ, ಕ್ಷಣದಲಿ ಮೂಡಿ ಮರೆಯಾಗದೆ ಇರದು.
"ಸಾವು" ಎಂಬ ಅನಂತ ಸತ್ಯ ಯಾವ ಪರಿಯಲಿ,ವಿಧದಲಿ ನಮ್ಮ ಮೇಲೆ ಎರಗುವುದೋ ಎಂಬ ನಿಷ್ಪ್ರಯೋಜಕ ಮರ್ಮಚೇದ ಅಂಶವೊಂದು ಮನದಲಿ ಜಾಗೃತವಾಗಿಯೇ ಇರುತ್ತದೆ ಮಗುವನು ಕಾಡುವ ಗುಮ್ಮನಂತೆ. ರಾಜಶೇಖರ ರೆಡ್ಡಿ ಅಂತವರ ಸಾವು ದಟ್ಟ ಅರಣ್ಯದ ನಡುವೆಲ್ಲೋ, ನಿಗೂಢ, ನಿರ್ಜನ ಪ್ರದೆಶದಲಿತ್ತು ಅಂಥದಾರೆ, ನಮ್ಮ ಸಾವುಗಳು ಎಲ್ಲೆಲ್ಲಿವೆಯೋ ಅರಿವುದಾಗೋ ಹರಿಯೇ!
ಅವರ ಸಾವು ಹೇಗೆ ಇರಲಿ, YSR ಸಾವನು ಜನ ಸ್ವೀಕರಿಸಲು ಸಿದ್ದರಿರಲಿಲ್ಲ,ಎಲ್ಲಿಂದಲೋ ಎದ್ದು ಬಂದ ಸುಂಟರಗಾಳಿ ಹೊಲದಲಿ ಗುಡ್ಡೆ ಹಾಕಿದ ಹುಲ್ಲಿನ ರಾಶಿಯನು ಕಣ್ಣೆದುರೆ ಹೊತ್ತುಕೊಂಡು ಚೆಲ್ಲ ಪಿಲ್ಲಿಯಾಗಿ ಬಿಸಾಡಿ ಮರೆಯಾದಂತೆ. ನಮ್ಮ ಕಣ್ಣುಗಳನು ನಾವೇ ನಂಬದಂತಹ ಸ್ಥಿತಿ ಎಂದರೆ ಇದೆ ಏನೋ? ಸರ್ರನೆ ಬಂದೆರಗಿದ ದುರಂತ ಸುದ್ದಿಗೆ ದಿಗ್ಮುಡರಾಗಿ, ಅರಿವೇ ಇಲ್ಲದೇ ಹುಚ್ಚರಂತೆ ಪ್ರತಿಕ್ರಿಸಿದ ಅವರ ಅನುಯಾಯಿಗಳ, ಅಭಿಮಾನಿಗಳ, ಕಾರ್ಯ ಕರ್ತರ ವರ್ತನೆಯನು ಕಂಡ ಮೇಲಂತೂ "ಇದು ನಾಯಕನ ಮೇಲಿನ ನಿಜವಾದ ಅಭಿಮಾನವೇ?" ಎಂಬುದನು ಪರಾಮರ್ಶಿಸಬೇಕಾಗಿದೆ. ಮಾನಸಿಕ ಉದ್ವೇಗಕ್ಕೆ ಸಿಲುಕಿ ಕ್ಷಣಕ್ಕೆ ಜನರು ತೆಗೆದುಕೊಳ್ಳುವ ಆತ್ಮಹತ್ಯೆಯಂಥ ಅರ್ಥಹೀನ ನಿರ್ಧಾರಗಳು ಜನರ ಹುಚ್ಚುತನದ ಅತಿರೇಖಕೆ ನಿದರ್ಶನವೇ ಸರಿ ಮತ್ತೇನು ಅಲ್ಲ.
ಯಾವುದೇ ನಾಯಕನಿಗೆ ಮಟ್ಟದ ಜನ ಬೆಂಬಲ ದೊರೆಯುವುದು ಸುಲಭದ ಮಾತಲ್ಲ. ನಿಜಕ್ಕೂ ಜನಮಾನಸದಲಿ YSR 'ಮಹಾಮಹಿಮನಂತೆ'ಇದ್ದರೆನ್ನುವುದಕ್ಕೆ ಅವರ ಅಕಾಲ ಸಾವಿನ ದುರಂತಕ್ಕೆ ಆಂಧ್ರದ ಪ್ರಜೆಗಳ ರೋದನವೇ ಸಾಕ್ಷಿ. ದುಡ್ಡಿಗಾಗಿ ರಾಜಕಾರಣಿಗಳ ಹಿಂದೇ ಅಲೆಯುವ ಮಾಮೂಲು ಜನರ ಹಾವಳಿಯ ಕಾಲದಲಿ ಒಬ್ಬ ಜನ ನಾಯಕ ಮಟ್ಟದಲಿ ಜನರ ಮನವನು ಗೆದ್ದಿದ್ದನೆಂದರೆ ಅದರ ಹಿಂದಿನ ಅವರ ಜನಹಿತ ಕಾರ್ಯಗಳಿಗೆ ಸಿಕ್ಕಿದ ಮನ್ನಣೆಯೇ ಅದು. ಸಿನೆಮಾ ನಾಯಕರು, ಅವರ ಸಿನೆಮಾ ಜಗತ್ತಿನ ಭ್ರಮಲೋಕದಲಿ ಬಿದ್ದು ಸಾಯುವ ಆಂಧ್ರದ ಜನರು, ರಾಜಶೇಖರ ರೆಡ್ಡಿಯಂತಹ ರಾಜಕಾರಣಿಗೆ ತೋರಿದ ಆದರ, ಪ್ರೀತಿ ಅಪಾರವೇ. ಆದರೂ ಸಾವಿರಾರು ಕಿಲೋ ದೂರ ಪಾದಯಾತ್ರೆಯಲಿ ಸಾಗಿ ತನ್ನ ಜನರ, ರೈತರ, ಬಡವರ ಕಷ್ಟ,ಕಾರ್ಪಣ್ಯಗಳನು ಅರಿತು ಅವರ ನೋವಿಗೆ ಅಧಿಕಾರದ ಮುಖೇನ ಸ್ಪಂಧಿಸಿ ಮಾನವೀಯ ಅಂತಃಕರಣ ಮೆರೆದ YSR ರವರ ಸಾವಿಗೆ, ಮರುಕ ಪಡುತ ವಿನಾಕಾರಣ ತಮ್ಮ ಜೀವತ್ಯಾಗ ಮಾಡಿದ ನೂರಾರು ಜನರ ನಿಷ್ಠೆ ಮಾತ್ರ ಎಂತಹುದೋ ನೀವೇ ಅರಿಯಬೇಕು?
ಇಂತಹ ಮಹಾನ್ ಜೀವಿಗಳ ಸಾವು ಎಲ್ಲರನ್ನು ಕ್ಷಣಕಾಲ ಕಂಗೆಡಿಸುವುದಂತು ಸತ್ಯ. ಡಾ.ರಾಜ್ ಕುಮಾರ್ ಮರಣ ಹೊಂದಿದ ಸಮಯದಲು ನಮ್ಮ ಜನಗಳು ಅನಾಗರಿಕರಂತೆ ಅಶಾಂತಿ ಮೆರೆದರು. ಅದೇನೇ ಇರಲಿ ಅಂತವರ ಸಾವು ನಮಗೆ ' ಬದುಕು ಶಾಶ್ವತವಲ್ಲ' ಎಂಬ ತತ್ವ ತಿಳಿಸುವುದು. ಆಗಾಗಿ ಅವರು ಸಾಗಿದ ದಾರಿಯಲಿ ನಾವುಗಳು ಒಂದೊಂದು ಹೆಜ್ಜೆ ಮುಂದೆ ಸಾಗಿದರಷ್ಟೇ ಸಾಕು, ಅದೇ ನಮ್ಮ ಜೀವನ ಮೌಲ್ಯವು..ಎಂದು ಅರಿತು ಮುಂದೆ ಸಾಗೋಣ ಬನ್ನಿ.