Wednesday, November 25, 2009

ಪ್ರತಿಬಾರಿಯೂ ನಾವೇಕೆ ಸೋಲುತ್ತೇವೆ?

ಆಡಳಿತದಲ್ಲಿ ಲೋಪಗಳ ತಡೆಯಲು, ಅಧಿಕಾರದ ವಿಕೇಂದ್ರಿಕರಣದ ಮುಖೇನ ಉತ್ತಮ ಆಡಳಿತ, ಮನೆಯಮುಂದಕ್ಕೆ ಆಡಳಿತ ಎಂಬ ಧೈಯದೊಂದಿಗೆ, ಪ್ರಜಾಪ್ರಭುತ್ವದ ಆಡಳಿತಾಧಿಕಾರವನು ಹಂತ
ಹಂತವಾಗಿ ವಿಂಗಡಿಸಿ ಆಡಳಿತ ಯಂತ್ರವನು ಚುರುಕುಗೊಳಿಸಿ ಬೇಗ ಬೇಗ ಜನರ ಕಷ್ಟಗಳಿಗೆಸ್ಪಂಧಿಸುವ ಧೈಯ ನಮ್ಮ ಸರ್ಕಾರಗಳದ್ದು.
ಜನರ ಕುಂದು-ಕೊರತೆಗಳ ನಿವಾರಿಸುವ, ಅವರ ಕಷ್ಟ-ನಷ್ಟಗಳಿಗೆ ಸ್ಪಂಧಿಸುವ ಸಲುವಾಗಿ ಸರ್ಕಾರ ತನ್ನ ಪುಟ್ಟ ಪುಟ್ಟ ಘಟಕಗಳಂತೆ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತ್,ತಾಲ್ಲೂಕು ಕಛೇರಿ, ಜಿಲ್ಲಾ ಕಛೇರಿಗಳನ್ನ ಸ್ಥಾಪಿಸಿದೆ. ಘಟಕಗಳ ಮೂಲಕ ಜನರ ಕೆಲಸ ನಿರ್ವಹಿಸುತ್ತಿರುವ ಸರ್ಕಾರವಿಂದು ನಿಜಕ್ಕೂ ತಮ್ಮ ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ, ಜನರ ಹಿತವನ್ನು ಕಾಯುವ ಕೆಲಸ ,ಮಾಡುತ್ತಿವೆಯ? ನಮ್ಮ ದೇಶದಲಿಂದು ಅಧಿಕಾರದ ವಿಕೇಂದ್ರಿಕರಣದ ಸಣ್ಣ ಸಣ್ಣ ಘಟಕಗಳು ಜನರ ಕೆಲಸಗಳನು ಮಾಡುತ್ತಿವೆಯ?ಅವುಗಳಿಗೆಲ್ಲ ಅಂತ ಅಧಿಕಾರ ಇದೆಯಾ? ಇಲ್ಲವ? ಯಾವ ಯಾವ ಸಮಯದಲಿ ಯಾವ ಯಾವ ಘಟಕಗಳುಹೇಗೆ ಕೆಲಸ ಕಾರ್ಯಗಳನು ಹಮ್ಮಿಕೊಳ್ಳಬೇಕು, ಏನೇನೂ ಕ್ರಮಗಳನ್ನು ಅನುಸರಿಸಬೇಕುಎಂಬುದು ನಿರ್ದ್ರಿಷ್ಟವಾಗಿ ಇದೆಯಾ? ಇದ್ದರೆ ಅವಗಡಗಳನ್ನು ನಿಭಾಯಿಸುವಲ್ಲಿ ಪ್ರತಿಭಾರಿಯೂ ನಾವೇಕೆ ಸೋಲುತ್ತೇವೆ. ನೋವಿನಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲಲು ನಮ್ಮ ಸರ್ಕಾರಗಳಿಗೆಕೆ ಸಾಧ್ಯವಾಗುವುದಿಲ್ಲ? ಅದು ಅಷ್ಟೆಲ್ಲ ಸರ್ಕಾರದ ಘಟಕಗಳಿದ್ದುಎಂಬುದೇ ನನ್ನ ಪ್ರಶ್ನೆ.

ಇಂದು ಗ್ರಾಮ ಮಟ್ಟದಿಂದ ಹಿಡಿದು ಶಾಸಕರವರೆಗೆ ಜನರ ಪ್ರತಿನಿಧಿಸುವ ಜನಪ್ರತಿನಿಧಿಗಳು,ಗ್ರಾಮಲೆಕ್ಕಿಗರು,ದಂಡಾಧಿಕಾರಿಗಳು,ಜಿಲ್ಲಾಧಿಕಾರಿಗಳು,ಸಚಿವರು ಹೀಗೆ ಆಯಾ ಹಂತವನ್ನು ಪ್ರತಿನಿಧಿಸುವ ನಾಯಕರು ಸರ್ಕಾರಿ ಅಧಿಕಾರಿಗಳು, ನೌಕರರು ಇರುವ ಸುಸಜ್ಜಿತವಾದ ವ್ಯವಸ್ಥೆ ಮಾಡುವುದಾದರೂ ಏನನ್ನ. ಅಧಿಕಾರದ ದುರ್ಬಳಕೆ ಆಗದಿರಲಿ,ಒಂದೇ ಕಡೆ ಕೇಂದ್ರಿತವಾಗದಿರಲಿ ಎಂದು ವಿಘಟನೆ ಗೊಳಿಸಿದ ಆಡಳಿತ ಯಂತ್ರ ಸರಿಯಾಗಿಸಮಯೋಚಿತ ಕಾರ್ಯಗಳನು ನಿರ್ವಹಿಸದೆ ಇದ್ದಲ್ಲಿ ಅವುಗಳಿದ್ದು ಲಾಭವೇನು?
ರೈತರು, ಬಡ ಕೂಲಿಕಾರರು, ಸಣ್ಣ ಸಣ್ಣ ಹಿಡುವಳಿದಾರರೆ ಹೆಚ್ಚಾಗಿರುವ ಕೃಷಿಯನೆ ನಂಬಿಬದುಕುವ ಉತ್ತರದ ಕರ್ನಾಟಕದ ಹಳ್ಳಿಗಲೆಲ್ಲ ನೆರೆ ಹಾವಳಿಗೆ ಸಿಲುಕಿ ಅವರ ' ಬದುಕುಮೂರಾಬಟ್ಟೆಯಾದಸಮಯದಲಿ'ಸರ್ಕಾರದ ಘಟಕಗಳು ಸಂತ್ರಸ್ತರ ನೆರವಿಗೆ ಪರಿಣಾಮಕಾರಿಯಾಗಿ ಸ್ಪಂಧಿಸದೆ ದಿನದೂಡುತ್ತ, ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದುಭರವಸೆಗಳನ್ನ ನೀಡುತ್ತ, ಇಂದು ಬೀದಿ ಪಾಲಾದ ಜನರಿಗೆ ಪರಿಹಾರಗಳನ್ನು ಒದಗಿಸದೆ ಸಭೆನಡೆಸಿ, ಸಮೀಕ್ಷೆ ನಡೆಸಿ, ತಿರ್ಮಾನ ಕೈಗೊಂಡು ವರುಷಗಳು ಕಳೆದ ನಂತರ ಸಂತ್ರಸ್ತತರು ಕಳೆದುಕೊಂಡ ಆಸ್ತಿಯ ನಾಲ್ಕನೇ ಒಂದು ಭಾಗದಷ್ಟೋ ಅಥವಾ ಅವರಿಗೆ ತೋಚಿದಷ್ಟು ಪರಿಹಾರನೀಡಿದರೆ ಅದರಿಂದಾಗುವ ಒಳಿತಾದರು ಏನು?
ತಮ್ಮ ಮನೆ ಮಠ, ಆಸ್ತಿ, ಬೆಳೆ,ದಾಸ್ತಾನು ಎಲ್ಲವು ನೀರು ಪಾಲಾಗಿ ಬದುಕು ಕಳೆದು ಕೊಂಡಜನರ ಬದುಕು ಕಟ್ಟಿಕೊಡುವ ಹೊಣೆಯಾದರು ಯಾರದ್ದು? ಅವರವರ ನೋವಿಗೆ ಅವರವರೆ ಪಾಲುದಾರರು.ಯಾವುದೇ ಪಕ್ಷದ ಸರ್ಕಾರವಿರಲಿ, ಯಾವುದೇ ಸರ್ಕಾರ ಬರಲಿ, ಹೋಗಲಿ ಶ್ರೀ ಸಾಮಾನ್ಯನಬವಣೆ, ಜಂಜಾಟ, ನೋವುಗಳಿಗೆಎಂದಿಗೂ ಪರಿಹಾರ ಅಸಾಧ್ಯ. ಜನ ನಾವುಗಳು ಶಕ್ತರಾಗದಹೊರತು ಯಾರಿಂದಲೂ ಬದಲಾವಣೆ ಎಂಬುದು ಸಾಧ್ಯವಿಲ್ಲ ನಮ್ಮ ನಾಡಿನಲ್ಲಿ ಎಂಬುದುಸರ್ವಕಾಲಿಕ ಸತ್ಯ ಎಂಬುದು ಮತ್ತೆ ಮತ್ತೆ ಸಾಬೀತಾದ ಅಂಶ.
ಜನರ ನೋವಿಗೆ ಸ್ಪಂಧಿಸುವುದೇ ನನ್ನ ಮೊದಲ ಆಶಯ, ಗುರಿ ಎಂದು ಬಡಾಯಿ ಬಾರಿಸುವ ನಾಯಕರೆಲ್ಲ ಅವರಿವರ ಮೇಲೆ ಗೂಬೆ ಕೂರಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವವರೇ. ಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಆರೋಪ ವರಿಸಿದರೆ, ಸಚಿವರುಗಳುಅಧಿಕಾರಿಗಳು ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದರೆ, ಅಧಿಕಾರಿಗಳು ಸರ್ಕಾರದಿಂದ ಸಮರ್ಪಕವಾದ ನೆರವು ಬಂದಿಲ್ಲ ಎಂದು ಆರೋಪಿಸಿ ಒಬ್ಬರನ್ನು ಇನ್ನೊಬ್ಬರು ತೆಗಳುವವರೆ.ಯಾರ ಮಾತು ಸತ್ಯ ಯಾರ ಮಾತು ಸುಳ್ಳು ಎಂಬುದ ತಿಳಿಯದ ಸಾಮಾನ್ಯ ಮಾತ್ರ ಪ್ರತಿಬಾರಿಯೂ ತಾ ಮಾಡಿದ ಮತದಾನವನ್ನೇ ಶಪಿಸುತ್ತ ಸುಮ್ಮನಾಗುತ್ತಲೇ ಇದ್ದಾನೆ. ಇದು
ಅಧಿಕಾರದ ದುರ್ಬಳಕೆಯೋ,
ಕರ್ತವ್ಯದ ಲೋಪವೋ , ಎಂಬ ಗೊಂದಲದಲ್ಲಿ ನಾ ಇದ್ದೇನೆ.

ಲೇಖನ: ಸೃಜನ

Wednesday, November 18, 2009

ವೈದ್ಯೋ ಬರಹಗಾರ!


ಸಾಹಿತ್ಯದ ಸೆಳೆವೆ ಅಂತದ್ದು. ಅರಿತವರೆ ಬಲ್ಲರು ಅದರ ಸಾಂಗತ್ಯದ ಪರಿವನ್ನ. ಮಳೆಯಲಿ ನೆಂದು ಬಂದ ಹಳ್ಳಿಯ ಹುಡುಗ,ಸ್ನಾನದ ಒಲೆಯ ಮುಂದೆ ಕೂತು ಬೆಂಕಿಯ ಕಾಯಿಸುವಾಗಿನ ಬೆಚ್ಚನೆ ಭಾವವ ಅನುಭವಿಸುವಷ್ಟೇ ಸೊಗಸು ಕಥೆ,ಕವನಗಳ ಸಾಂಗತ್ಯ. ಬಿಟ್ಟು ಬಿಡದ ನಂಟು ಅದು. ವೃತ್ತಿಯಲ್ಲಿ ವೈದ್ಯರಾಗಿರುವ ಹಿರಿಯರು, ಸ್ನೇಹಿತರು ಆಗಿರುವ ದೀಪಕ್ ರವರ ಸಾಹಿತ್ಯದ ಬಗೆಗಿನ ಗೀಳನ್ನು ನೋಡಿದರೆ ನನಗೆ ಹೀಗೆ ಅನಿಸುವುದು. ಅವರೊಟ್ಟಿಗೆ ಹರಟುವಾಗಲೆಲ್ಲ ಜೀವನದ ಬಗೆಗೆ, ಸಮಾಜದ ಆಗು-ಹೋಗುಗಳ ಬಗ್ಗೆ,ಅನುಭವಗಳ ಬಗೆಗಿನ ಅವರ ಒಳನೋಟಗಳು ನನಗೆ ವಿಶಿಷ್ಟ ಅನಿಸುತ್ತವೆ. ಅವರೊಂದಿಗೆ ಮಾತನಾಡುವಾಗಲೆಲ್ಲಾ ಇವರು ಅಪ್ಪಿ ತಪ್ಪಿ ವೈದ್ಯರಾಗಿಬಿಟ್ಟಿದ್ದಾರೆ,ಇಲ್ಲವೇ ನಮ್ಮ ಹಾಗೇ ಪಾಠ ಮಾಡಿಕೊಂಡು ಅದು ಇದು ಮನಸಿಗೆ ತೋಚಿದ್ದ ಗೀಚಿಕೊಂಡು ಇರುತ್ತಿದ್ದರೆನೋ? ಎಂದೆನಿಸುವುದು.
ಅವರು ವೈದ್ಯರಾಗಿ ರೋಗಿಗಳಿಗೆ ಗುಳಿಗೆ ನೀಡಿ,ಯಾವ ಯಾವ ರೋಗಗಳ ಗುಣಮುಖ ಮಾಡುತ್ತಾರೋ ನನಗಂತು ತಿಳಿಯದು. ಅವರೊಳಗಿನ ಕವಿ ಮನಸ್ಸು ಮತ್ತೆ ಮತ್ತೆ ನನ್ನ ಚಕಿತ ಗೊಳಿಸುವುದು. ವೃತ್ತಿ ಯಾವುದಾದರೇನು ಪ್ರವೃತ್ತಿಯಲ್ಲಿ ಅವರು ನನ್ನ ಒರಗೆಯವರೇ ಅನ್ನಿಸುವುದೇ ನನಗೆ ತೃಪ್ತಿ. ಅವರು ಬರೆದ ಒಂದು ಪುಟ್ಟ ಕವನವನ್ನು ನಿಮ್ಮ ಓದಿಗೆ ಬಿಡುತ್ತಿದ್ದೇನೆ,ಓದಿ ನಿಮ್ಮ ಅನಿಸಿಕೆಗಳ ತಿಳಿಸಿ....


ನಿನ್ನ ಹುಡುಕಿದೆ


ನಿನ್ನ ಹುಡುಕಿದೆ.... ಪ್ರಿಯಾ
ಹುದುಗಿದ ನೆನಪಿನೊಳಗೆ
ಜೀವನದ ಪುಟದಲಿ,
ಕಳೆದ ಸಮಯದಲಿ,
ನಿಸ್ತಂತು ಪಿಸುಮಾತಲಿ,
ಖಾಲಿ ವಿಸ್ಕಿ ಸೀಸೆಯಲಿ,
ಕಳೆದ ಸಿಗರೇಟು ಧೂಮದಲಿ,
ನೆನಪಿನಲಿ ಇರಿದು ಕೊಯ್ವ ನಿನ್ನ ಸೆಲೆ
ನನ್ನಬದುಕನ್ನೇ
ಅಂತರ್ಮುಖಿಯಾಗಿಸುತ್ತಿರುವುದ
ನಾನೇಕೆ ತಿಳಿಯಲಿಲ್ಲವೇ,
ದ್ವಂದ್ವಗಳ ಗೂಡಾಗಿಸಿ ನೀ ಹೋದುದಾರು
ಎಲ್ಲಿಗೆ ಅರುಹೆ ಗೆಳತಿ?

Tuesday, November 10, 2009

ಕವನ ಮಾಲೆ






ಜೀವನದಲ್ಲಿನ ವೈರುಧ್ಯಗಳು ಅಪಾರ, ನಮ್ಮ ಮನ ಬಯಸುವುದೊಂದು ವಾಸ್ತವದಲಿ ನಡೆಯುವುದೇ ಇನ್ನೊಂದು. ಆದರೂ ಅಂತಹ ಭ್ರಮೆಗಳಲೆ,ಕನಸುಗಳ ಸರಮಾಲೆಯ ಜೊತೆಯೇ ವೈರುಧ್ಯಗಳ ಜೀವನದ ಬಂಡಿ ಸಾಗಿದೆ ಎಡಬಿಡದೆ,ಅಲ್ಲವೇ...ನನ್ನ ಕವನಗಳಲು...




ಒರೆ ನೋಟವ ಬೀರಿ ಹಾಗೆ ನಡೆದೆ
ಹಿಂತಿರುಗಿ ನನ್ನ ದಾರಿಯೆಡೆಗೊಮ್ಮೆ
ನೋಡದೆ ನಡೆದೆ, ಆ ತಿರುವಿನಲಿ
ನೀ ಕಾಣದೆ ಮರೆಯಾದುದಷ್ಟೆ
ದುರಂತವಲ್ಲ ನನ್ನ ಜೀವನದೀ,
ನಾ ಸಾಗಿದ ಹಾದಿಯಲಿ ನನಗೆ
ನನ್ನದೇ ಹೆಜ್ಜೆಯ ಗುರುತು ಸಿಗುತ್ತಿಲ್ಲ..
*************************************

ಅವನ ಕೈ ಸೆರೆಯಲಿ ಬೆಚ್ಚನೆ
ಪ್ರೀತಿಯ ಹವಣಿಸುತ ಬಂದ
ಪ್ರೇಮ ಪಕ್ಷಿಯ ಮುಕ್ತವಾಗಿಸುವ
ಹುಂಬ ತವಕದಲಿ ಹಾರಿಬಿಟ್ಟ ಹಕ್ಕಿಯ
ಸ್ವಚ್ಚಂದ ಹಾರಟವನು ಆನಂದಿಸಲಾಗದೆ
ವಿರಹದ ಬೇಗೆಯಲಿ ಬಳಲಿದನಂತೆ
ಅಮರ ಪ್ರೇಮ ತ್ಯಾಗಿ....
***************************************

ನಿನಗಾಗಿ ಕಾಯುವ ಆ ಸರಿ ಹೊತ್ತಲಿ
ಬದುಕು ಹಾಗೆ ಸ್ಥಂಭವಾಗಲಿ ಗೆಳತಿ
ನಿನಗಾಗಿನ ನಿರೀಕ್ಷೆ, ಕಾಯುವ ಕಾತರಿಕೆಗೆ
ಮುಪ್ಪಡರುವುದಿಲ್ಲ, ನನ್ನ ಭಾವಕು
ಚಿರ ಯೌವ್ವನ, ನಿನಗೋ ಸಂಧಿಸಲವಣಿಸುವ
ಚಿರಂತನ ಯಾನ.....
****************************************

Sunday, November 1, 2009

ಕನ್ನಡ ಉಳಿಸಬೇಕೋ? ಬೆಳೆಸಬೇಕೋ?




ಸರ್ವಜನಾಂಗದ
ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ,...
...............................................
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ! ಕುವೆಂಪು
.

ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳೆಲ್ಲ ಒಟ್ಟಾಗಿ ಕಲೆತು ' ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ, ಬಾರಿಸು ಕನ್ನಡ ಡಿಂಡಿಮವ..' ಎನುವ ರಾಷ್ಟ್ರಕವಿ ಕುವೆಂಪು ರಚಿತ ಗೀತೆಯನ್ನು ಪ್ರಾಥಮಿಕ ಶಾಲಾ ದಿನಗಳಲ್ಲಿ ಹಾಡುತ್ತಿದ್ದರೆ, ಆಗುತ್ತಿದ್ದ ರೋಮಾಂಚನ ಹೇಳತೀರದು. ಅದೇಕೋ ತಿಳಿಯದು, ನಮ್ಮ ನಾಡಿನ ಜನರನ್ನು ನಾಡಿಗಾಗಿ,ನುಡಿಗಾಗಿ, ನಾಡಿನ ಜನರಿಗಾಗಿ ದುಡಿಯಿರೆಂದು ಭಾವನಾತ್ಮಕವಾಗಿ ಬಡಿದೆಬ್ಬಿಸುವ ಧಾಟಿಯ ಕವಿಯ ಗೀತೆಯ ಬಗ್ಗೆ ಚಿಕ್ಕವನಾದ ನನಗೆ ಆಗಲೇ ಏನೋ ವಿಶೇಷ ಆಸಕ್ತಿ. ನಾವೆಲ್ಲ ದೊಡ್ಡವರಾಗಿ ಕನ್ನಡಕ್ಕೆ, ನಾಡಿಗೆ ಏನಾದರೂ ನಮ್ಮ ಕೈಲಾದ ಕೆಲಸವನ್ನ ಮಾಡಬೇಕೆಂಬ ವಾಂಛೆ ಮನದಲಿ ಮೊಳೆತ ಮುಗ್ಧ ಸಮಯವದು. ಆಗ ಏನು ಮಾಡಬೇಕು, ಹೇಗೆ ಮಾಡಬೇಕು ಕನ್ನಡದ ಕೆಲಸ ಎಂಬುದರ ಅರಿವಿಲ್ಲ. ಕನ್ನಡದ ಬಗ್ಗೆ ಅದೇನೋ ಮೋಹ, "ಕನ್ನಡವೆಂದರೆ ನಾನು, ಕನ್ನಡ ನನ್ನ ಹೆಗ್ಗುರುತು" ಅನ್ನಿಸುತಿತ್ತು ಆಗಲೇ. ರಾಷ್ಟ್ರಕ್ಕೆ, ನಾಡಿಗೆ ಸಲ್ಲಿಸುವಷ್ಟೇ ಗೌರವವನ್ನು ನನ್ನ ಭಾಷೆಗೆ ಸಲ್ಲಿಸಬೇಕು ಎಂಬ ಹುಮ್ಮಸ್ಸು ಬೆಳೆದ ಕಾಲವೆಂದರೆ ನನ್ನ ಪ್ರಾಥಮಿಕ ಶಾಲಾ ದಿನಗಳು. ಅಂದು ನಾ ಕಂಡು ಕೊಂಡ ದಾರಿಯಲೇ, ನಾ ಸಾಗುತ ಹೊಸ ಹೊಸ ರೂಪಗಳನು, ಅನುಭವಗಳನು ಹರಸುತ್ತ, ಅನುಭವಿಸುತ್ತ ಬಂದಿದ್ದೇನೆ ಎಂಬುದು ಇಂದಿಗೂ ನನ್ನದೇ ಸತ್ಯ.

'ಏನೆಲ್ಲಾ ಸಿಕ್ಕಿಲ್ಲ ಎನುವುದಕ್ಕಿಂತ, ಏನೆಲ್ಲ ಸಿಕ್ಕಿದೆ! ಭಾಷೆಯಿಂದ ನಮಗೆ.. ಭಾಷೆಯೇ ಇಲ್ಲದ ನಮ್ಮ ಜೀವನವನೊಮ್ಮೆ ಊಹಿಸಿಕೊಳ್ಳಿ?..ಉತ್ತರ ದೊರೆವುದು ನಮಗೆ. ಇಂದು ನಾವುಗಳು ಏನಾಗಿದ್ದೇವೋ,ಮುಂದೆ ಏನಾಗುತ್ತೆವೋ, ಅದಕ್ಕೆಲ್ಲ ಭಾಷೆ ನೀಡಿರುವ, ನೀಡುವ ಸಹಕಾರ ಅಪಾರವಾದುದು. ನಮ್ಮೆಲ್ಲರ ಇಂದಿನ ಸ್ಥಾನ-ಮಾನ, ಸಂಗತಿ, ಸಂತೋಷಗಳು ದೊರೆವುದು ಭಾಷೆಯಿಂದಲೇ. ಭಾಷೆ ಇಲ್ಲದೇ ನಾವುಗಳು ಏನು ಅಲ್ಲ. ನಮ್ಮೆಲ್ಲರ ಅಸ್ಥಿತ್ವದ ಮೂಲಾಧಾರಗಳಲ್ಲಿ ಭಾಷೆಯು ನಮ್ಮ ಉಸಿರಿನಷ್ಟೇ ಅವಶ್ಯಕ. ಪ್ರಕೃತಿಯ ಜೀವಿಯಾಗಿ 'ಗಾಳಿ ಎಷ್ಟು ಅವಶ್ಯವೋ, ಸಾಮಾಜಿಕ ಜೀವಿಗೆ 'ಭಾಷೆಯು' ಅಷ್ಟೆ ಅತ್ಯವಶ್ಯ'.
ಭಾಷೆ ನಮಗೇನು ಕೊಟ್ಟಿದೆಯೋ, ನಾವು ಭಾಷೆಗೇನು ಕಾಣಿಕೆ ನೀಡಿದ್ದೆವೋ ಎಂಬುದನ್ನೆಲ್ಲ ಚರ್ಚಿಸುವ ಕನ್ನಡ ಹಬ್ಬದ ಈ ಸಂಧರ್ಭದಲ್ಲಿ ನನ್ನ ಮನದಲಿ ಎದ್ದ ಯೋಚನೆಯನಿಲ್ಲಿ ಹೇಳಬೇಕು ಎನಿಸಿತು. ನಮ್ಮ ಸುತ್ತ-ಮುತ್ತಲಿನ ಸಂಘಗಳ, ಪ್ರಗತಿಪರರ, ಚಿಂತಕರ ಭಾಷಣಗಳಲಿ, ಹೋರಾಟಗಳಲಿ ವ್ಯಕ್ತವಾಗುವ 'ನಮ್ಮ ಭಾಷೆಯ ಉಳಿವಿಗಾಗಿ ನಾವೆಲ್ಲರೂ ಶ್ರಮಿಸಬೇಕು ಎನುವ' ಹೋರಾಟಗಾರರ ಕರೆಯೊಂದು ಆಗಾಗ ನಮ್ಮ ಪಂಚೇಂದ್ರಿಯಗಳನ್ನು ಜಾಗೃತ ಗೊಳಿಸುತ್ತಿರುತ್ತದೆ.
ಭಾಷೆಯ ಉಳಿವಿನ ಬಗೆಗಿನ ವಿಷಯಕ್ಕೆ ಸಂಭಂದಿಸಿದಂತೆ ಮೂಲಭೂತವಾಗಿ ನನ್ನಲ್ಲಿ ಹುಟ್ಟುವ ಪ್ರಶ್ನೆ ಎಂದರೆ "ಮುಖ್ಯವಾಗಿ ಭಾಷೆಯನ್ನ ಉಳಿಸುವ ಕೆಲಸ ಕನ್ನಡಿಗರಿಂದ ಆಗಬೇಕ? ಅಥವಾ ಭಾಷೆಯನು ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕ? ನಾವೆಲ್ಲರೂ ಭಾಷೆಯ ಉಳಿವಿಗಾಗಿಯೇ ಹೋರಾಟ ಮಾಡುವುದಾದರೆ, ಬೆಳೆಸುವವರು ಯಾರು? ಭಾಷೆಯನ್ನೂ ಬೆಳೆಸುವಲ್ಲಿ ನಾವು ನಿರತರಾದರೆ, ಭಾಷೆಯನು ಉಳಿಸುವ ಪ್ರತ್ಯೇಕ ಹೋರಾಟ ಅನಿವಾರ್ಯವೇ?"
ನನ್ನಲ್ಲಿ ಹುಟ್ಟಿದ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟು, ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಗಾಗಿ ಕಾಯುವೆ ಅವುಗಳೊಂದಿಗೆ ಭಾಷೆಯ ವಿಚಾರವನು ಮತ್ತೆ ಪರಾಮರ್ಶಿಸಿ...ಉತ್ತರ ಸಿಕ್ಕರೆ ತಿಳಿಯಲು ನಿಮ್ಮಿಂದ.