Friday, February 26, 2010

ಬದುಕೇ ವಿಹಿತವು...














ಬದುಕೇ ವಿಹಿತವು...





ನಿಂತು ನೋಡುವ ಬಯಕೆ
ಬಯಲ ಬಯಲಾಟವನೆಲ್ಲ
ಸುತ್ತಲಿನ ಬದುಕನೊಮ್ಮೆ
ಬಯಸಿ, ದಿಟ್ಟಿಸಿ ದೀನನಾಗಿ ಬಿಡಬೇಕು
ಬದುಕ ಬದುಕುವ ಬೆರಗಿಗೆ.

ಎಲ್ಲೋ ನನ್ನ ಬದುಕು
ಕಳೆದು ಹೋಗುವ ಮುನ್ನ
ನಿನ್ನ ಹುಡುಕಾಟದಲೇ ನನ್ನ
ಕಂಡುಕೊಂಡು ಬಿಡಬೇಕು.

ಜೀವವೇ ಏಕಾಂತದುರಿಯಲಿ

ಬಳಲಿ ಬಾಳುವ ನೋವ ಮರೆತು

ಅರಳಿದ ಹೂವ
ಮಧುವೀರಿ
ದುಂಬಿ ನಗಲು, ಆ ಸಾನಿಧ್ಯದ ಸವಿ
ನಿನ್ನ ಕೂಡೆ ಸವಿಯಲು ಜೀವ ಜೀವಕೆ

ಯಾವ ಹಂಗು
ಹರೆಯ ಉಕ್ಕಿ ಮೋಹ ಬಳುಕಿ
ಬಾಗಿ ಹರಿಯಲು ಯಾವುದೋ

ಬಂಧ ಕಳಚಿ ಹಾರಲು ಮರಿಹಕ್ಕಿ,

ಬೆಚ್ಚಗಿನ ಗೂಡ ಸೆಳವು
ಮನದಲಿ ಆದ್ರವಾಗಿರಲು ಬದುಕೇ
ವಿಹಿತವು ಸಾಗುತ ಮರೆಯಾಗಲು....
ಎಚ್.ಎನ್.ಈಶಕುಮಾರ್

Saturday, February 13, 2010

ಮಾಸದ ನೆನಪೇ.....!






ಸತ್ತ ದಿನಗಳ ಜಪಿಸಿ ಜಡವಾಗದಿರು

ಮನವೇ,ಮತ್ತೆ ಹೊಸ ಚೇತನವ
ತಂದುಕೋ ಮನವೇ...'

ಸವಿ ನೆನಪುಗಳು ನೂರು ಸವಿಯಲು ಬದುಕು: ನಿಜ ನೆನಪುಗಳೇ ಹಾಗೇ ನಮ್ಮ ಮನಸನ್ನು ಮತ್ತೆ ಮತ್ತೆ ಆದ್ರ ಗೊಳಿಸುವುದು, ಮತ್ತೆ ಮತ್ತೆ ಹಸಿರಾಗಿಸುತ, ಚಿಗರಿಸುತ,ಸಂತೈಸುತ ಜೀವಕಣವಾಗಿ ಇಂದಿನ ಕ್ಷಣಗಳನು ಸಂತುಷ್ಟವಾಗಿ ಸವಿಯುವಂತೆ ಮಾಡುತ್ತವೆ. "ನೆನಪು ಅಂದರೆ ಹಾಗೇ ಎಂದಿನ ಅಡವಿಯಲಿ ಇಂದು ಅರಳಿದ ಹೂವು". ನಮ್ಮ ಮನಸಿನ ಮಹಾ ಅಡವಿಯಲಿ ಚಿಗುರುತ್ತ,ಅರಳುತ್ತ,ಮಾಗುತ್ತ,ಬಾಡುತ್ತಾ ಜೀವನದ ರಸ ಸಮಯಗಳು ಮತ್ತೆ ಮತ್ತೆ ಮನಸಿನಂಗಳದಲಿ ನಲಿಯುವಂತೆ ಮಾಡುತ್ತವೆ.
ಮಗುವಾಗಿದ್ದಾಗ ಯಾವುದೋ ಆಟಿಕೆಗೆ ಹಠವಿಡಿದ ನೆನಪು, ಯಾವುದೋ ಕ್ಷಣದಲಿ ದಾರಿ ತಪ್ಪಿ ಅಳುತ್ತ ಮತ್ತೆ ತಂದೆ-ತಾಯಿಯರನು ಕೂಡಿದ ನೆನಪು, ಯಾರದೋ ಮನೆಗೆ ಮೊದಲಬಾರಿಗೆ ಹೋದ ನೆನಪು, ಮೊದಲ ತರಗತಿಯಲಿ ಕಲಿತ ನೆನಪು, ಸ್ಕೂಲಿನಲ್ಲಿ ಸ್ನೇಹಿತರೊಂದಿಗೆ ಆಡಿದ ಗುದ್ದಾಟ, ಮಣ್ಣಿನಲಿ ಬಿಳಿಯ ಯುನಿಫಾಂ ಕೊಳೆಯಾಗುವಷ್ಟು ಕುಣಿದಾಡಿದ್ದು, ಗಣಿತ ಪರಿಕ್ಷೆಯಲಿ ಫೇಲಾದದ್ದು ಅಣ್ಣನಲ್ಲಿ ತಪ್ಪಿಸಿಕೊಳ್ಳಲು ಸುಳ್ಳು ಹೇಳಿದ್ದು, ಗೆಳೆಯರೊಂದಿಗೆ ಪ್ರವಾಸಕ್ಕೆ ಹೋದದ್ದು, ಮೊದಲ ಬಾರಿಗೆ ಸೈಕಲ್ ಸವಾರಿ ಮಾಡಿ ಕ್ರಿಕೆಟ್ ಆಡಲು ಹೋದದ್ದು, ಬಿ., ಎಂ. ಗಳ ಸಮಯದಲಿ ಸಿಕ್ಕ ಕೆಲವು ಸ್ಮರಣಿಯ ಚೆಲುವಿನ ಮುಖಗಳ ಮಾಸದ ನೆನಪು. ಹೀಗೆ ನೆನಪುಗಳ ಸರಮಾಲೆಗಳು ವಾಸ್ತವದ ಕ್ಷಣಗಳೊಂದಿಗೆ ತಳಕು ಹಾಕಿಕೊಂಡು ಭವಿಷ್ಯದ ಭರವಸೆಗಳೊಂದಿಗೆ ಸಾಗುತ್ತಿದೆ ನೆನಪ ಜೀವನ...
' ಆ ಕಾಲ ಒಂದಿತ್ತು...ಬಾಲ್ಯ ತಾನಾಗಿತ್ತು...
ಬೇಸರವಾಗಿದೆ ಬಯಲು! ಹೋಗುವೆನು ನಾ
ಹೋಗುವೆನು ನಾ, ನನ್ನ ಒಲುಮೆಯ ಗೂಡಿಗೆ..

ಸದಾ ಸವಿಯಬೇಕೆನುವ ಸವಿ ನೆನಪುಗಳ ಹಾಗೆಯೇ ನಮ್ಮ ಕಹಿ ನೆನಪುಗಳು ಕೊನೆ ಕ್ಷಣದವರೆಗೂ ನಮ್ಮ ಬಿಟ್ಟು ಬಿಡದೆ ಕಾಡುತ್ತವೆ. ಕಹಿ ನೆನಪುಗಳ ವೇದನೆ ಮನವ ಸುಡುವುದು. ಸವಿ ನೆನಪುಗಳ ಹಾಗೇ ಕಹಿ ನೆನಪುಗಳ ಸಾಂಗತ್ಯ ಸಾಧ್ಯವಿಲ್ಲ. ಏಕಾದರೂ ಉಳಿಯುತ್ತವೋ ನೆನಪುಗಳು ಎಂದು ನಮ್ಮನ್ನು ನಾವೇ ಶಪಿಸುವಂತಾಗುತ್ತದೆ. ಮಾನವನ ಮನಸೇ ಹಾಗೇ ನೆನಪುಗಳಿಂದ ಸುಖಿಸುವಷ್ಟೇ ದುಃಖಿಸುತ್ತದೆ. ನೆನಪುಗಳಿಲ್ಲದ ಸ್ಮೃತಿಯಂತೂ ಇಲ್ಲ. ನಮ್ಮ ಮನದ ಗುಣವೇ ವಿಶಿಷ್ಟ ಒಳ್ಳೆಯದು ಕೆಟ್ಟದ್ದು ಎಂದು ಭೇದ-ಭಾವ ತೋರದೆ ಎಲ್ಲ ನೆನಪುಗಳನು ತನ್ನಲ್ಲಿ ಬಂಧಿಸಿಡುತ್ತದೆ. ಸ್ಮೃತಿಯು ಮಹಾಸಾಗರವೇ ಏನೋ? ನಿನ್ನೆಯದು, ಇಂದಿನದು, ಎಂದೆಂದಿನದೋ ನಮ್ಮ ಸ್ಮೃತಿಯ ಸಾಗರದಲಿ ಇಂದು ಅಲೆ ಅಲೆಯಾಗಿ ತೊಯ್ದಾಡುತ್ತಿದೆ. ವಾಸ್ತವವು ಅಷ್ಟೆ ಕೆಲವೊಮ್ಮೆ ಬೇಸರವೆನಿಸುವುದು.
'ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕ್ಕೆ ಹಾಕದಿರು ನೆನಪೇ'
ಬದಲಾಗುತ್ತಿರುವ ಕಾಲದೊಂದಿಗೆ ಎಲ್ಲವು ಬದಲಾಗಿ, ಹಳತು ಹೋಗಿ, ಹೊಸದು ಸೃಷ್ಟಿಯಾಗುವುದು ಸ್ವಾಭಾವಿಕ. ಪುರಾತನದ ಅಮಲಿನಲಿ ಮುಳುಗಿದವರೆಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯ. ವರ್ತಮಾನದ ಬದಲಾವಣೆಗಳೊಂದಿಗೆ ಎಷ್ಟೇ ಮುನ್ನಡೆದರು ಮನಸಿನ ಯಾವುದೋ ಮೂಲೆಯಲ್ಲಿ ಸ್ಪಷ್ಟ ಚಿತ್ರವಾಗಿ ಮೂಡಿರುತ್ತದೆ ನಮ್ಮ ಸುತ್ತ ಮುತ್ತಲಿನ ಕೆಲವು ವಸ್ತುಗಳ ನೆನಪು, ಜನರ ನೆನಪು, ನಾವಿದ್ದ ವಾತಾವರಣದ, ಹಳ್ಳಿಯ ಮನೆಯ ನೆನಪುಗಳು, ಇಂದಿನ ಸ್ಪಷ್ಟತೆ ಅವುಗಳ ಇಲ್ಲದಿರುವಿಕೆಯನು ತಿಳಿಸುತ್ತಿದ್ದರು, ಅವುಗಳ ನೆನಪೇ ಭೂತಕಾಲದ ಚಿತ್ರಗಳು ನಮ್ಮಿಂದ ಎಂದಿಗೂ ಮಾಸದಂತೆ ಮನಸಿನಲಿ ಉಳಿಸುತ್ತವೆ.
ಚೈತ್ರದಲಿ ಚಿಗುರೊಡೆವ ಹಸಿರೆಲೆಯಂತೆ ಕಟು ವಾಸ್ತವಕೆ ತಂಪನೆರೆಯುತ್ತವೆ. ಹಸಿದ ಶಿಶುವಿಗೆ ಹಾಲುಣಿಸುವ ವಾತ್ಸಲ್ಯಮಯಿ ತಾಯಿಯಂತೆ ನೆನಪುಗಳು ನಮ್ಮ ಮನಸನ್ನು ಆಗಿಂದ್ದಾಹ್ಗೆ ಪುಳಕ ಗೊಳಿಸಿ ಇಂದಿನ ಜೀವನ ಅಂದಿನ ಜೀವಂತ ನೆನಪಿನೊಂದಿಗೆ ಬೆಸುಗೆಯೊಂದಿ ಮುಂಬರುವ ಅನುಭವಗಳನು ಹರಸುತ ಜೀವನದ ನಿರಂತರ ಯಾನ ಸಾಗುತ್ತಿರುತ್ತದೆ. ನೆನಪಿಲ್ಲದ ಜೀವನ ಫಲಕೊಡದ ಸಮೃದ್ಧ ಮರದಂತೆ. ಸವಿಯಾದ ನೆನಪುಗಳು ಜೀವನವನ್ನು ರಸಮಯವಾಗಿಸುತ್ತವೆ.