Tuesday, December 13, 2011

ಚಿತ್ರ ಸಂತೆ.



ಹುಡುಕುತ ನಿಂತೆ
ಎದೆಯಾಳದಲಿ ಹುದುಗಿರುವ 
ನೆನಪಿಗೆ ಬಣ್ಣವ 
ಕುಂಚ ಮೂಡಿಸಿದ 
ವಯ್ಯಾರ ಚಿತ್ರಗಳ 
ಹರಾಜಿನಲ್ಲಿಟ್ಟು 
ಬೆಲೆ ಕಟ್ಟುತಿರುವರು
ಸುತ್ತಲು ಭಾವದ ಬಣ್ಣಕ್ಕೆ!

ಬಗೆ ಬಗೆಯ ಬಣ್ಣಗಳ 
ಚಿತ್ರ ರಾಶಿ 
ಸಂಜೆ ಗೋಧೂಳಿಯಲಿ 
ಆವರಿಸಿದ ಮಬ್ಬನು 
ಕಾಯುವ ಕುರಿಗಳಿಗೆ 
ತಿಳಿಸಿ ಹೆಜ್ಜೆ ಕೂಡಿಸಿದ 
ಹಳ್ಳಿ ಹೈದನ ಬಿರುಸಿಗೆ 
ಹೊಂಬಣ್ಣ ಬಳಿದ 
ಪಡುವಣದ ಸೂರ್ಯ.

ಚಿತ್ರಕಾರನ ನೋಟಕೆ ನಾಚಿ
ಬಿರಿದ ಮಾಸಲೊಪ್ಪದ ತುಂಟನಗೆ 
ಬಿಗುವಾದ ಅವಳೆದೆಯಲಿ
ಅರಳಿದ ಕಾಮನೆಗಳಿಗೆ 
ಬಣ್ಣ ರಾಶಿ ಹಾಕಿ 
ಚಿತ್ರ ಸಂತೆಯಲಿ ಹುಡುಕುತಲಿರುವನು
ಕೂತು ಕಾಮನಬಿಲ್ಲ 
ಕನಸುಗಾರ!

Saturday, November 26, 2011

ಮೋಹದ ಮರುಕ

ನನ್ನದಲ್ಲದ ಭಾವಕೆ 
ನಿನ್ನದಲ್ಲದ ಮಾತಿಗೆ 
ಸಾಕ್ಷಿ ಮಾತ್ರ  
ನಾನು-ನೀನು.
```````````````````````````

ಕೂತು ತೂಕಡಿಸಲು ಬಿಡದು 
ನಿನ್ನ ನೆನಪು!
ಮಮಕಾರಕು ಮರುಕವುಟ್ಟುವುದು
ನನ್ನ ಕಂಡು!
``````````````````````````

ಸುಡುವ ಬಿಸಿಲು 
ಮೈಮನವ ತರಗುಡಿಸುವ ಶೀತದಲೋ  
ಮುಸಲಧಾರೆಯಲೋ  ಕೊಚ್ಚಿ ಹೋಗದೆ 
ನೀನು ಮಾತ್ರ ಯಾಕೆ ಉಳಿದೆ 'ನೆನಪೇ'
``````````````````````````````````````````` 

ನಿನ್ನ ತನುವಿನ 
ಆಸರೆಗೆ ದೂಡುವ 
ಚಳಿಯನು ದೂಷಿಸದೆ 
ನನ್ನ ತೆಗಳುವ ಜಗದ
ಬಗ್ಗೆ ನನಗೇಕೋ ಮರುಕ!
``````````````````````````````````````



Thursday, November 3, 2011

ಆವರಿಸಿದ ಛಾಯೆ!

ಚೀರುವ ದನಿಯಲಿನ ನಿನ್ನ
ವೇದನೆಯ ಆರದ ಗೊಳು  ಆಲಿಸಲೋ 
ಅಸಾಧ್ಯ ಹಿಂಸೆ, ಒಡಲಾಳದಲಿನ 
ನಿನ್ನ ನೋವು ಬರಿದಾಗದೇ
ಉಮ್ಮಳಿಸುತಿಹ ನಿನ್ನ ರೋದನೆ.

ಮರುಗುವ  ಜೀವಗಳಿಗೋ
ಜಗದ ನೋವಲ್ಲಿ ಮುಳುಗುತಲಿಹ 
ಹೊಸ  ಆಕ್ರಂದನ, ಆಲಿಸಿದಷ್ಟು 
ಇಮ್ಮಡಿಸುವ ಬೇಸರ,
ಇನ್ನಾವುದೋ ನೆವದಲಿ ಪಲಾಯನಕೆ
ದಾರಿ  ಹುಡುಕುವ ಮರುಕ ಮನ!

ನಿನಗಾದರೂ ಸಹ ಮತ್ತೇನೂ 
ಅಸಹಾಯಕತೆಯ ವ್ಯಕ್ತವೊಂದೇ 
ಉಳಿದಿಹುದು ಬದುಕಲಿ ಎನುವ                                     
 ಪರಿಯಲಿ ದನಿ ಸೋತು 
ಕ್ಷೀಣಿಸಲು, ಬತ್ತಿರುವ ಹನಿಯ 
ಕಣ್ಣಲೂ ಜಗಕೆ ಕಂಗೊಳಿಸುತಿಹ 
ಶೂನ್ಯವು! ಕಾರಣವೇ ತಿಳಿಯದೆ 
ನೊಂದ ಮನಕೆ ಆವರಿಸಿದ 
ಛಾಯೆ ದುಗುಡ!

Sunday, October 2, 2011

ಶಿಖರವನೇರುತ...

ಶಿಖರವನೇರುತ...

ತುಂಗ ಉತ್ತುಂಗವ ಆವರಿಸಿ
ಮುಗಿಲ ಮುತ್ತಿಕ್ಕುವ ತವಕದ
ವನಸಿರಿಯ ಹಬ್ಬಿತಬ್ಬಿಹ
ಮುತ್ತ ಹನಿಯ ಚಿರ ಜಳಕದಲಿ
ತೊನೆಯುತ ಹಸಿರ ಚಿಮ್ಮುವ
ಮಬ್ಬು ಕಾನನದ ನೀರವದಲಿ

ಅಲೆಮಾರಿಯ ಅಸ್ಪಸ್ಟ
ಹೆಜ್ಜೆಗುರುತುಗಳು
ಮೆದು ನೆಲದಮೇಲೆ
ಅಸಂಬದ್ದ ಚಿತ್ರವ
ಮೂಡಿಸುತ
ಕವಿದ ಮೋಡದೊಳಗಣ
ಹಾದಿಯ ಹರಸುತ
ಶಿಖರದೆತ್ತರವ ಏರುತ ಏರುತ
ಮನ ನಿರಾಳ,ನಿರ್ಮಲ
ಹಗುರತೆಯ ಧನ್ಯ ಭಾವವ
ಸ್ಪುರಿಸಲು, ನಿಸರ್ಗದೊಡಲ
ಅನಪೇಕ್ಷಿತ ಮಮಕಾರವು
ಎನ್ನ ಸ್ಮೃತಿಯ ಕಾನನವ
ಆವರಿಸಲು;ಜೀವವು
ಗರಿಕೆಯ ಕುಡಿಯಂತೆ ತೃಣವು.


ತನುಮನ ತನ್ಮಯವು
ಪ್ರಕೃತಿ ಸೊಬಗ ರಸಜೇನ
ಸವಿಯಲು;ನನ್ನ ಕಣಕಣವು
ಲೀನವು ಪ್ರಕೃತಿ ಪರಬ್ರಮ್ಹನ
ಸಮಷ್ಟಿಯೋಳು.


ದಿಗಂತ ಮೀರಿದ ಭುವಿಯೊಡಲ
ಹರವನೇರಿ, ನೆಲಮುಗಿಲ
ಸಮಾಸಮದ ಅನನ್ಯ
ವಿಸ್ಮಯದೊಳಗಿನ ಬಿಂದು
ಭವಬಂಧನದೀ ಜೀವವು .
ಎಚ್ .ಎನ್. ಈಶಕುಮಾರ್

Wednesday, August 31, 2011

ಸ್ಪರ್ಶ..ಮೌನ!


ಕಾಯುವ ಹಪಾ ಹಪಿಯಲ್ಲೇ

ದಿನ ದೂಡುವ ಬದುಕಿಗೆ

ಇನ್ನಾವ ಹೊಸ ಅರ್ಥವನ್ನು

ನೀಡುವ ಹುಚ್ಚುತನ ನನ್ನಲ್ಲಿ ಉಳಿದಿಲ್ಲ!
~~~~~~~~~~~~~~~~~~

ನನ್ನವರ ಕಂಡಾಗ

ಅವರ ಮುಖದಲಿ

ಹೊಳೆವ ಸ್ವಚ್ಛಂದ ನಗುವಿನ

ಚೈತನ್ಯ ನನ್ನ ಸ್ವಾತಂತ್ರ.
~~~~~~~~~~~~~~~~~

ನದಿಯ ದಡದಲಿ ನಿಂತ

ಏಕಾಂತದಲಿ ನನ್ನ ಕೂಡಿದ

ಹಕ್ಕಿ ನುಡಿಯಿತು;

ನಿನ್ನ ಹಾಗೇ ನನಗೂ

ಇದುವೇ ಜೀವನ, ಇದರಲ್ಲೇ ಬದುಕು!
~~~~~~~~~~~~~~~~~
ಆವರಿಸಿದ್ದ ಮೌನದ ನಡುವೆ

ಮಾತನಾಡಿದ್ದು ಮಾತ್ರ

ಸ್ಪರ್ಶ!



Monday, August 8, 2011

ಜೀವಕೆ ಭಾವ!

ಜೀವಕೆ ಭಾವ!

ಆ ನದಿ -ದಡದ ನಿರಂತರ
ಸಲ್ಲಾಪದ ನಡುವೆ ನಿನ್ನ ಏಕಾಂತ!
ನಿನ್ನ ಕಾಲ ಬೆರಳ ಸೋಕಿ
ತೆರಳುತಿಹ ಅಲೆಯ ಪುಳಕ
ಕಂಡ ಪ್ರತಿ ಅಲೆಯು
ನಿನ್ನತ್ತ ತೆವಳಲು
ನೀ ನಿಂತ ನೆಲೆ, ನದಿಯ ಸೆಳೆತಕೆ
ಸಿಗದ ದಡದ ಬಿಂದು
ಅಲ್ಲಿ ನೀನಿತ್ತ ಸ್ಪರ್ಶದಲೇ ಉಳಿದಿಹ
ಭೂಮಿ ತೂಕದ ಎದೆಯ ಭಾರ!

ನಿಸರ್ಗದ ಮೃದು ನಿನ್ನ ತನ
ಮೆಲ್ಲಗೆ ಮಂಜು ಹೂವಿನ ಎಳೆಯ ಮೇಲೆ
ಮೂಡಿಸಿದ್ದು ಮಾತ್ರ ಹನಿಯ ಚಿತ್ತಾರ.
ಬಸುವಿನ ಹುಳು ತನ್ನ ದಾರಿಯಲಿ
ಗೆರೆ ಎಳೆದು ಬಿಡಿಸಿದ್ದು ಮಾತ್ರ
ಸರಳಾತಿಸರಳ ರೇಖೆ.
ಆವರಿಸಿಹ ಮೌನದ ನಡುವೆ
ಮಾತನಾಡಿದ್ದು ಮಾತ್ರ ಸ್ಪರ್ಶ!
ಇದೆಲ್ಲದರ ನಡುವೆ ನಿನ್ನಲ್ಲಿ
ಉಳಿದಿಹುದು ಮಾತ್ರ
ಜೀವಕೆ ಭಾವ!
ಭಾವಕೆ ಜೀವ!

ಎಚ್.ಎನ್. ಈಶಕುಮಾರ್

Monday, July 18, 2011

ಹೊಸತು ..!

ಆದರ್ಶ, ಆಧ್ಯಾತ್ಮಗಳೇಕೆ
ನನ್ನ ಅರಿಯಲು
ಈ ಜೀವನ ಸಾಕು!
*************************
ನೀ ನನ್ನ ಮನದ
ಮಾತಾಗು ಮೊದಲು
ಪ್ರೀತಿ-ಪ್ರೇಮದ
ಹುಚ್ಚು ಹೊಳೆಯಲಿ
ಮಾತು ಮರೆತು
ಮೌನಿಯಾಗುವ ಮುನ್ನ.
**********************
ಕಮಲದಂತೆ
ನೀರಿನಲ್ಲಿದ್ದು ಸ್ವಚ್ಛತೆಯ
ಕಾಪಾಡಲಿಚ್ಚಿಸುವ
ಹೆಣ್ಣು ಸಹ
ತನ್ನವನ
ಬಾಹು ಬಂಧನದ
ಪ್ರೇಮಕೆ ಪರಿತಪಿಸುವಳು
**************************

ನಿರ್ದಿಷ್ಟ ರೋಗದ
ಲಕ್ಷಣವಿಲ್ಲದಿದ್ದರು
ಬಗೆಹರಿಯದ
ಮಾರಕ ರೋಗವಿಹುದು
ಮನದಲಿ 'ಅನುಮಾನದ'
ಹೆಸರಿನಲ್ಲಿ...
**************************************************************************

Sunday, July 3, 2011

ದಾರಿ ಹೋಕ


ದಾರಿಯಲಿ ಕೇಳಿದ
ಹಳೆಯ ಹಾಡಿನ
ಗುಂಗಿನಲಿ ಮತ್ತೆ
ಉಮ್ಮಳಿಸಿ ಬರಲು
ನೆನಪು, ದಾರಿಹೋಕ
ಬಿಟ್ಟು ಹೋದ ಹಾಗೇ
ಬಿಮ್ಮನೆ ಬೀರಿದ ನಗೆಯ
ಮನದ ಗೋಡೆಯ ಮೇಲೆ.

ಸ್ಮಶಾನದ ಸಮಾದಿಯ
ಮೇಲೆಲ್ಲ ನಳನಳಿಸುತಿಹ
ತುಂಬೆಯ ಬೇರಿನ
ಆಳದಲಿ ಹುದುಗಿಹ
ಕಳೆಬರಹದ ಛಾಯೆ
ಹೂವಾಗಿ ನಲಿಯುತಿದೆ
ಇಂದು.
ನನ್ನೊಳಗೆ ಬಿತ್ತ
ಬಯಕೆಯ ಬೀಜ
ಮೊಳೆತು ಕನಸ
ಹೆಮ್ಮರವಾಗಲೇ ಇಲ್ಲ.
ಭ್ರಮೆಯ ಕನ್ನಡಿ
ಒಡೆದಾಗ ವಾಸ್ತವವೆಲ್ಲ
ಚಿದ್ರ ಚಿದ್ರಗೊಂಡ
ಬಿಂಬ.

ಅಲ್ಲೆಲ್ಲೋ ಬೆಟ್ಟದ
ಮರೆಯಲ್ಲಿ ತುಂತುರು ಮಳೆ
ಬೇರಿಗೆ ಇಳಿಯುತಿಹ ಹನಿ.

Friday, June 17, 2011

ಮಣ್ಣ ಕಾವ್ಯ!!

ಮಣ್ಣ ಕಾವ್ಯ...

ಬಾ! ಮಳೆಯಾಗಿ
ಕಾದು ಕೂತ ಬುವಿಯ
ತಣಿಸಿ, ತೊಳೆವಂತೆ
ಕೊಳೆಯನೆಲ್ಲ
ತನ್ನ ನಿರ್ಮಲ ಭಾವದಿ
ಜೊತೆಗೂಡೆ ತೇಲಿಸಿ
ತೆವಳಲಿ ಅತ್ತ ದೂರ.

ಉಳಿಯಲಿ ಹನಿ ಹನಿಯ
ತೇವವು ನೆಲದಿ
ಮೆದ್ದು ಮೆದುವಾದ
ಮಣ್ಣ ಕಂಪು ಹರಡಿ
ಮೆಲ್ಲಗೆ ರಮಿಸಲಿ
ಮನವ ಮಣ್ಣ ಕಾವ್ಯ.

ಹಸಿ ಮಣ್ಣ ಸ್ಪರ್ಶ
ಕಂಪಿಸುವ ಅವಳೆದೆಯ
ಆವರಿಸಿ ಒಮ್ಮೆಗೆ ಮೂಡಲಿ
ಚಿತ್ರ-ವಿಚಿತ್ರ ಚಿತ್ತಾರದ
ಒಲವ ಕಾವ್ಯ..



















Saturday, May 28, 2011

ಹೈಕು ...ಅರೆ ವಸಂತ



ಅಲ್ಲಿ ಇಲ್ಲಿ ಓದಲು ಸಿಕ್ಕ ಕೆಲವು ಹೈಕು ಗಳನು ಹೆಕ್ಕಿ , ಕನ್ನಡಿಕರಿಸಿ ನಿಮ್ಮ ಓದಿಗೆ ಹಚ್ಚುತ್ತಿದ್ದೇನೆ.
ಸೂಕ್ಷ್ಮವಾಗಿ ಓದಿ ನಿಮ್ಮ ಪ್ರತಿಕ್ರಿಯೆ, ಅಭಿಪ್ರಾಯ ಬರೆದರೆ ಸಾಕು.

ಮುಂಜಾವಿನ ನಿರ್ಜನ ದಾರಿ
ಕೋಟೆಯೆಡೆಗಿನ ಶೀತದ ದಾರಿ
ದುರ್ಗಮ ಶೀತದ ಕೋಟೆಯು.
***********************
ಹಳದಿಯಾಗಿಹ ಅರೆ ವಸಂತ
ಆಕಾಶದಗಲ ಭರವಸೆ
ಭವಿಷ್ಯವಂತೂ ಬರಲೇ ಇಲ್ಲ.
******************************
ಶಾಲೆಯ ದಾರಿಯಲಿ ಮಕ್ಕಳು
ನಾಚಿಕೆಯಿಲ್ಲದ ಆಟ-ಚೀರಾಟ
ಕಳೆದುಕೊಂಡದೆಂದು ನಾ ಅದನು?
***********************************





ಹಳೆಯ ನಿಶ್ಯಬ್ದ ಕೊಳ
ಕೊಳದೊಳಕೆ ಕಪ್ಪೆಯ ಜಿಗಿತ
ಪಚಕ್! ಮತ್ತೆ ಮೌನ.
*****************************.

Saturday, April 23, 2011

ಹೊತ್ತಲ್ಲದ ಹೊತ್ತಿನಲ್ಲಿ...ಕಲಾಂ.

ಯಾವ ಮೌಲ್ಯಯುತ ಹೊಣೆಗಾರಿಕೆಯು ಇಲ್ಲದೆ, ಎಂತಹವರಿಗೂ ಸಹ ಹೊಲಸು ಎನಿಸುವಂತೆ ಸಾಗುತಿದೆ ನಮ್ಮ ಸುತ್ತಲಿನ ರಾಜಕೀಯ ಸನ್ನಿವೇಶಗಳು. ಯಾರಿಗೆ ಯಾರು ಜಾವಬ್ದಾರರಲ್ಲ, ತಮ್ಮ ತಮ್ಮ ಸ್ವಾರ್ಥ ಸಾಧನೆಯೇ ಸಾರ್ವಜನಿಕ ಬದುಕಿನ ಇಂದಿನ ನಾಯಕರ ಒಂದಂಶದ ಕಾರ್ಯಕ್ರಮವಾಗಿದೆ. ರಾಜಕೀಯದ ದೊಂಬರಾಟದ ವಿಪ್ಲವ ನಡೆಯುತಿಹ ಈ ಸಮಯದಲಿ ಓಟು ಕೊಟ್ಟ ಮತದಾರ ತನಗೆ ತಾನು 'ಯಾವುದರಲ್ಲಿ ಹೊಡ್ಕೊಬೇಕೋ' ಅಂತ ಶಪಿಸಿಕೊಂಡು ನೋಡುತ್ತಿದ್ದ ಟಿವಿ ಯನ್ನು ಬಂದ್ ಮಾಡಿ ಅಸಾಹಯಕನಂತೆ ಎದ್ದು ಹೊರಗೆ ಹೋಗುವುದಷ್ಟೇ ಅವನಿಗೆ ಉಳಿದಿರುವ ಏಕ ಮಾತ್ರ ಮಾರ್ಗ.
ಎಲ್ಲ ರಾಜಕೀಯ ಪಕ್ಷದ ವಕ್ತಾರರು ತಮ್ಮಪಕ್ಷ ಮತ್ತು ಪಕ್ಷದ ನಾಯಕರು ನಡೆಸಿದ (ಅ)ನೈತಿಕ ಕಾರ್ಯಗಳನು ಶ್ಲಾಘಿಸುತ, ಟಿವಿ ಚಾನೆಲ್ ಗಳು ಕೊಟ್ಟ ಕಾಲಾವಕಾಶವನ್ನು ಬಳಸಿಕೊಂಡು ಅವರು ಮಾಡಿದ ತಪ್ಪನೆಲ್ಲ ಮುಚ್ಚಿಹಾಕುವ ಸೊಗಲಾಡಿತನದ ಪ್ರಯತ್ನದಲಿ, ಸುಳ್ಳಿನ ಸರಮಾಲೆಯನು ಸತ್ಯವೆನುವಂತೆ ಜನತೆಯ ಮುಂದಿಡುವ ಮಾತಿನ ಚಕಮಕಿಯ ಕಾರ್ಯಕ್ರಮವನು ನೋಡುತ ತಲೆ ಕೆಡಿಸಿಕೊಂಡ ಓಟು ಕೊಟ್ಟ ಪ್ರೇಕ್ಷಕ ಈ ಎಲ್ಲ ಬೆಳವಣಿಗೆಗಳೆಡೆಗೆ ವ್ಯಂಗದ ನಗೆ ನಕ್ಕು, ರಾಜ್ಯದ ನಾಯಕರ ದೊಂಬರಾಟ ನೋಡಿ ಕೆಲಕಾಲ ಯಾರಿಗೂ ಹೇಳಲಾಗದಂತೆ ತಮ್ಮಷ್ಟಕೆ ತಾವೇ ಖುಷಿ ಪಟ್ಟಿದಷ್ಟೇ ಅವರಿಗೆ ಸಿಕ್ಕ ಬಳುವಳಿ ಎಂದು ತಮ್ಮ ನಿತ್ಯದ ಜಂಜಡದಲಿ ಎಲ್ಲವು ಸಾಮಾನ್ಯ ಎನುವಂತೆ ನಿರ್ಲಿಪ್ತತೆ.
ಇವೆಲ್ಲ ಬೇಕು ಬೇಡದ, ಆಗು-ಹೋಗುಗಳ ನಡುವಲ್ಲೇ ಈ ಎಲ್ಲ ರಾಜಕೀಯ ಮೇಲಾಟವನ್ನು ಮರೆಸಿ ನಮ್ಮ ರಾಜಕೀಯ ನಾಯಕರ ನಡುವಳಿಕೆಯನು ಕಡೆಗಣಿಸಿ ನನ್ನ ಆವರಿಸಿದ್ದು ಆ ಮಹಾನ್ ಚೇತನದ ಅಂತಃಶಕ್ತಿ. ಅವರಲ್ಲಿನ ನಿಸ್ವಾರ್ಥ ಸೇವಾ ಮನೋಭಾವ, ದೇಶದ ಬಗ್ಗೆ,ಅವರಲ್ಲಿರುವ ದೂರ ದೃಷ್ಟಿಯ ಆಶಯಗಳು.

ಆ ಪುಸ್ತಕದ ಮುನ್ನುಡಿ- ಹಿನ್ನುಡಿಯಲ್ಲಿರುವ ಸಾಮಾನ್ಯ ವಿಚಾರಗಳು ಸಹ ಇಂದಿನ ರಾಜಕಾರಣಿಗಳೊಂದಿಗೆ ಹೋಲಿಸಿ ನೋಡಲು ಯೋಗ್ಯರಲ್ಲದ ಜನನಾಯಕರ ನಡುವೆಯೇ ಆರು ವರುಷಗಳ ಕಾಲ ದೇಶದ ಪುಟಾಣಿಯಿಂದ ಪ್ರತಿಯೊಬ್ಬನಿಗೂ 'ಮಾದರಿ' ಎನುವಂತೆ ರಾಷ್ಟ್ರದ ಅತ್ಯುನತ್ತ ಹುದ್ದೆಯಲಿದ್ದು ಎಲ್ಲರು ಮೆಚ್ಚುವಂತೆ ಅಧಿಕಾರ ನಡೆಸಿ ಸಾಗಿದ ವಿನಯತೆಯ ಪ್ರತಿರೂಪಕೆ ಸಾಕ್ಷಿಯಾಗಿಹ ಅಸಮಾನ್ಯ ಪುರುಷ ಅಬ್ಧುಲ್ ಕಲಾಂ ರ ಬಗ್ಗೆ ಅವರ ಆಪ್ತ ಕಾರ್ಯದರ್ಶಿ ಯಾಗಿದ್ದ P. M.ನಾಯರ್ ಬರೆದ " ಕಲಾಂ ಎಫೆಕ್ಟ್" KALAAM EFFECT. ಅನ್ನೋ ಪುಸ್ತಕ ನಮ್ಮನ್ನು ಆಲೋಚನೆಗೆ ಹಚ್ಚಿ, ಅವರ ವ್ಯಕ್ತಿತ್ವ ನಮ್ಮ ಆವರಿಸಿದ ಬಗೆಯಂತು ಅಪಾರ.

ರಾಜಕಾರಣದ ಬಗೆಗೆ ಜೀವನದಲ್ಲಿ ತೀವ್ರವಾಗಿ ಯೋಚಿಸದ, ಅದರ ಬಗೆಗೆ ತಮ್ಮ ಕನಿಷ್ಠ ಸಮಯವನು ವ್ಯಹಿಸದ ದೇಶ ಕಂಡ ಸಾಧಕ ವಿಜ್ಞಾನಿಯೊಬ್ಬ ಹುಟ್ಟು ರಾಜಕೀಯ ವ್ಯಕ್ತಿಯು ಬೆರಗಾಗಿ ಮೆಚ್ಚುವಂತೆ ದೇಶದ ಪ್ರಥಮ ಪ್ರಜೆಯಾಗಿ ಅವರು ನಡೆದುಕೊಂಡ ರೀತಿಯೇ ಆಧರಣೀಯ. ರಾಷ್ಟ್ರಪತಿಗಳಿಗೆ ರಾಷ್ಟ್ರಪತಿ ಭವನದಲಿ ಅವರ ದೈನಂದಿನ ಚಟುವಟಿಕೆಗೆ ನೆರವಾಗಲು ಇದ್ದ ಸುಮಾರು ೫೦ ಕ್ಕೂ ಹೆಚ್ಚು ಸಿಬ್ಬಂದ್ದಿ ವರ್ಗದ ಸಂಖ್ಯೆಯನ್ನು ಕೇವಲ ಇಬ್ಬರಿಗೆ ಇಳಿಸಿ ದಶಕಗಳಿಂದ ರೂಢಿಗತವಾಗಿದ್ದ ಶಿಷ್ಟಾಚಾರವನ್ನು ಮುರಿದ ಅವರು ತನಗಾಗಿ ವಿನಾಕಾರಣ 'ಮಾನವ ಸಂಪನ್ಮೂಲ' ದುರ್ಬಳಕೆಯಾಗುವುದು ಉಚಿತವಲ್ಲ ಎಂದು ಸರಳತೆಯ ಮೌಲ್ಯ ಮೆರೆದವರು.
ಬಕ್ರಿದ್ ಹಬ್ಬದ ಸಂಜೆ ರಾಷ್ಟ್ರಪತಿ ಭವನದಲಿ ಇಫ್ತಿಯಾರ್ ಕೂಟವನ್ನು ಏರ್ಪಡಿಸಿ, ಸರ್ಕಾರದ ಮಂತ್ರಿಗಳು, ಅಧಿಕಾರಿಗಳು, ಸಾಧಕರು, ಮೇಲ್ವರ್ಗದ ಪ್ರಜೆಗಳನ್ನು ಕೂಟಕ್ಕೆ ಆಹ್ವಾನಿಸಿ ಅವರಿಗೆ ಔತಣವನ್ನು ನೀಡುವುದು ಭವನದಲಿ ಜರುಗುವ ಎಂದಿನ ಆಚರಣೆ. ಅಂದು ತನ್ನ ಕಾರ್ಯದರ್ಶಿಯಾದ ನಾಯರ್ ನೊಂದಿಗೆ ಚರ್ಚೆ ಮಾಡಿ ಕಾಲಂ ರವರು ' ನೋಡಿ ನಾಯರ್ ಕೂಟಕ್ಕೆ ಆಗಮಿಸುವ ಗೌರವಯುತರೆಲ್ಲ ಮೇಲ್ದರ್ಜೆಯವರಾಗಿದ್ದು ಅವರಿಗೇನು ನಮ್ಮ ಔಪಚಾರಿಕ ಕಾರ್ಯಕ್ರಮದಲ್ಲಿ ಊಟದ ಅವಶ್ಯಕತೆ ಮುಖ್ಯ ಎನಿಸುವುದಿಲ್ಲ, ಆಗಾಗಿ ಔತಣ ಕೂಟಕ್ಕೆ ವಿನಿಯೋಗವಾಗುವ ಮೊತ್ತವನ್ನು ಮತ್ತು ನನ್ನ ವೈಯಕ್ತಿಕ ಖಾತೆಯಿಂದ ಒಂದು ಲಕ್ಷ ರೂಪಾಯಿಯನು ಸೇರಿಸಿ, ಯಾವುದಾದರು ಅನಾಥಾಲಯದ ಮಕ್ಕಳಿಗೆ ಅನುಕೂಲವಾಗುವ ಸಲಕರಣೆಗಳನು ನೀಡಿ' ಎಂದು ಆದೇಶಿಸುತ್ತಾರೆ. ದೀನರ ಬಗ್ಗೆ ಅವರಿಗೆ ಇರುವ ಕಾಳಜಿ ಅವರ ಆದೇಶದ ಹಿಂದಿರುವ ಸಾಮಾಜಿಕ ಕಾಳಜಿಗೆ ಸಾಕ್ಷಿ.

ಗುಲಗಂಜಿಯಷ್ಟು ಪ್ರಾಮಾಣಿಕತೆಯ ಗುಣವನ್ನು ಇಂದಿನ ರಾಜಕಾರಣಿಗಳಲ್ಲಿ ಹುಡುಕಬೇಕಾದ ಸಂದರ್ಭದ ಕಾಲದಲ್ಲಿ ನಾವಿದ್ದೇವೆ. ಸರ್ಕಾರದಲ್ಲಿ ಸಿಕ್ಕುವ ಯಾವುದೇ ಅಡಬಿಟ್ಟಿ ಸೌಲಭ್ಯವನ್ನು ತಮಗೆ ಮಾತ್ರವಲ್ಲ ತಮ್ಮ ಪಿಳಿಗೆಯವಾರಿಗೆಲ್ಲ ಧಾರೆಯೆರೆಯುವ ನಮ್ಮ ಮಂತ್ರಿ ಮಹೋದಯರುಗಳು ತಾನು ಮಾಡುತ್ತಿರುವುದು ದೇಶ ಸೇವೆ ಅದಕ್ಕಾಗಿ ನನಗೆ ನನ್ನ ಮನೆಯವರಿಗೆಲ್ಲ ಈ ಸವಲತ್ತು ಎಂದು ಕೊಂಡು ಮೆರೆಯುವ ನಮ್ಮ ರಾಜಕಾರಣಿಗಳಿಗೆಲ್ಲಿಂದ ಬರಬೇಕು ವಿನಯತೆಯ ವಿವೇಕ. ಕಲಾಂ ರವರು ರಾಷ್ಟ್ರ ಪತಿಗಳಾದ ಕೆಲವು ವರುಷಗಳ ನಂತರ ಅವರ ಸಂಭಂದಿಗಳೆಲ್ಲ ದೆಹಲಿಯ ಪ್ರವಾಸಕ್ಕೆ ಬಂದು ೧೦ ದಿವಸಗಳ ಕಾಲ ರಾಷ್ಟ್ರಪತಿ ಭವನದಲ್ಲೇ ಉಳಿಯುತ್ತಾರೆ. ರಾಷ್ಟ್ರದ ಅಧ್ಯಕ್ಷರ ಸಂಭಂದಿಗಳು ಅಂದ ಮೇಲೆ ಅವರಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬೇಕಾದದ್ದು ರಾಷ್ಟ್ರಪತಿ ಭವನದ ನಿರ್ವಾಹಕ ಮಂಡಳಿಯ ಕರ್ತವ್ಯವೇ ಸರಿ. ಕಲಾಂ ರ ಸಂಭಂದಿಗಳು ತಮ್ಮ ಎಲ್ಲ ಪ್ರವಾಸವನ್ನು ಮುಗಿಸಿ ತಮ್ಮ ಊರಿಗೆ ತೆರಳಿದ ಮೇಲೆ ಅವರುಗಳ ಓಡಾಟಕ್ಕೆ, ಊಟೋಪಚಾರಕ್ಕೆ ಹಾಗೇ ಮತ್ತಿತರ ಸಲಕರಣೆಗಳ ವೆಚ್ಚದ ಲೆಕ್ಕವನ್ನು ಕೇಳಿ ಪಡೆದು ಆರೂವರೆ ಲಕ್ಷ ಮೊತ್ತವನ್ನು ರಾಷ್ಟ್ರಪತಿ ಭವನದ
ನಿರ್ವಾಹಕ ಮಂಡಳಿಗೆ ಭರಿಸುತ್ತಾರೆ. ಅವರ ಈ ನಡುವಳಿಕೆ ಮೈಸೂರು
ದಿವಾನರಾಗಿದ್ದಾಗ ವಿಶ್ವೇಶ್ವರಯ್ಯನವರು ನಡೆಸಿದ ಮಾದರಿಯುತ ಆಡಳಿತದ ವೈಖರಿಯನ್ನು ನೆನೆಸುತ್ತದೆ.

ಶಿಷ್ತಾಚರಕ್ಕಾಗಿಯೇ ಅಲ್ಲದೆ ಬೇರೆ ಯಾವ ಕಾರಣಗಳಿಗೂ ಪಾಲಿಸ ಬೇಕಾದ ಹಲವಾರು ಶಿಸ್ತು ಪಾಲನೆಗಳನು ಮೀರಿ ಮಾನವೀಯತೆಯಾ ಅಂತಃಕರಣ ಮೆರೆಯುವ ಇಂತಹ ಅನೇಕ ಕಲಾಂರ ಗುಣಾವಳಿಗಳಿಗೆ ಸಾಕ್ಷಿಯಾಗಿ, ಅವರ ಆದರ್ಶ ಬದುಕನು ಮೆಚ್ಚಿ ಕಲಾಂರ ಅಪರೂಪದ ವ್ಯಕ್ತಿತ್ವಕ್ಕೆ ವಂದನೆಗೆ ಸಲ್ಲಿಸುವ ರೀತಿಯಲ್ಲಿದೆ, P. M ನಾಯರ್ ಅವರು ಬರೆದ KAALAM EFFECT ಪುಸ್ತಕ ಸಿಕ್ಕಾಗ ಒಮ್ಮೆ ಮನಸೋ ಇಚ್ಚೆ ಓದಿ.

Saturday, March 26, 2011

ನಿನ್ನ ನೆನಪ ಜ್ವಾಲೆ...



ನಿನ್ನ ನೆನಪ ಜ್ವಾಲೆ
ಮನವ ಸುಡುತಿರಲು
ಬದುಕೀಗ ಇರುಳಗಾದು ಗೆಳತಿ!

ನಿನ್ನ ನೆನಪೇ..
ನನಗೆ ಶಾಪವಾಗಿರುವಾಗ
ಇನ್ನಾವ ಪಾಪವು
ನನ್ನ ಕಾಡದು ಗೆಳತಿ!

ನಿನ್ನ ಅಗಲಿಕೆಯ ನೋವು
ಮನವ ತುಂಬಿರಲು
ಬದುಕೀಗ ಬರಿದಾಗದು ಗೆಳತಿ!

ವಿರಹವು ಅನಂತವಾಗಿರಲು
ಬದುಕೀಗ
ಕೊನೆಯಾಗದು
ಗೆಳತಿ!

Thursday, March 3, 2011

ಅಕಾಡೆಮಿಕ್ ಕಾಲೇಜ್ ನಲ್ಲಿ ಕೂತು...

















ಕೂತು ತಲೆ ತೂಕಡಿಸುವ
ಕಾಲ ಸ್ತಂಭಿಸುವ ಹೊತ್ತಲಿ
ಸಂಶೋಧಿಸಿ ಮನದ ಮಂಥನದಿಂದ
ಹೊರತೆಗೆದು ಹೇಳಿದ
ವಿಶ್ವವಿದ್ಯಾನಿಲಯದ ವಿದ್ವಾಂಸನ
ಮಾತು ಕಳೆದು ಹೋಗಿತ್ತು
ಅವನೇ ಹುಡುಕಿ ಹುಡುಕೀ
ಆರಿಸಿದ ತನ್ನ ಕಪಾಟಿನ
ದಶಕಗಳ ಜೀವಿತಾವಧಿಯ
ಪುಸ್ತಕದ ಸಾಲು ಸಾಲುಗಳಲಿ.

ಆ ಪಂಡಿತನ ಬಾಯಿಯಿಂದ
ಚಿಮ್ಮಿ ಬಂದ ಉಸಿರುಗಟ್ಟಿದ ಪದಗಳು
ಕದ ಮುಚ್ಚಿದ ಕೊಠಡಿಯ
ಫ್ಯಾನ್ ನ ಗಾಳಿಯಲಿ ತೇಲಾಡುತ
ಸಭಿಕರನು ಕಂಡು ಜೀವ ಬಂದಂತೆ
ಪುಳಕಗೊಂಡು ಬಳಿ ಧಾವಿಸಲು
ಅರ್ಪಣ ಭಾವದಲಿ, ಕಂಡದ್ದು
ಮುಖ ಮುಖದಲೂ ಕಂಗೊಳಿಸುತಿಹ
ಕಂಗೆಟ್ಟ ಭಾವ.
ಪುನರ್ಮನನಿಸಿದ ಪದಗಳು ಒಮ್ಮೆಗೆ
ಹಿಂತಿರುಗಿ ನಡೆದವು ಪ್ರೊಫೆಸರನ
ಬಳಿಗೆ ಶರಣಾಗಿ ಬೇಡಿದವು
ಉಸಿರುಗಟ್ಟಿ ಉಳಿಯುವೆವು ನಾವು
ಕಂಗೆಟ್ಟು ಕೊಳೆಯಲಾರೆವು
'ನೀವು ನಿರ್ಮಿಸಿ ಮುಚ್ಚಿಹ
ಕೊಠಡಿ ವಿನ್ಯಾಸದಲಿ...

Sunday, January 23, 2011

ನೀಲು ಕಾವ್ಯ

ಲಂಕೇಶರ ನೀಲುವಿನ ಸರಳ ಸುಂದರ ಕವನಗಳು ಓದಿದಾಗೆಲ್ಲ ಮನವ ತಣಿಸುವವು...






ಅವಳ ಆಕರ್ಷಕ ಯೌವ್ವನ
ತಾಯಿಯಲ್ಲಿ ಆತಂಕ
ಅಜ್ಜಿಯಲ್ಲಿ ನಿಟ್ಟುಸಿರು
ಮತ್ತು ಇಡೀ ಕೇರಿಯಲ್ಲಿ
ಉಲ್ಲಾಸ ಮೂಡಿಸಿತು
```````````````````````````````
ನನ್ನ ಚೆಲುವನೊಂದಿಗೆ
ನೋಡಿದ ತಾವರೆಕೆರೆ
ಈಗ ಒಬ್ಬಳೇ ನೋಡುವಾಗ
ನೀರು ತುಂಬಿದ ಕಣ್ಣಿನಂತೆ
ಕಾಣುವುದು.
~~~~~~~~~~~~~~~~~~~
ಗಂಡಿನ ಖಡ್ಗ, ಬಂದೂಕು
ಬಾಂಬ್ ಗಳೆಲ್ಲ
ನನ್ನೆದುರು ತಣ್ಣಗಾಗಿ
ಹಬ್ಬ ಆಚರಿಸುವುವು.
``````````````````````````````
ಚೆನ್ನಮಲ್ಲಿಕಾರ್ಜುನನನ್ನು
ಕುರಿತು ಹಾಡಿದ ಅಕ್ಕನ
ಹಾಡಿನ ಮುಂದೆ
ನನ್ನ ಕವನಗಳೆಲ್ಲ
ಮಿಣುಕು ಹುಳುಗಳು ಮಾತ್ರ.

Saturday, January 1, 2011

ಚರಿತ್ರೆಯ ಪ್ರತಿ ಪುಟವು...













ಮೂರಾಬಟ್ಟೆಯಾದ ಜೀವನದಲ್ಲಿ
ತೆವಲುಗಳಿಗೇನು ಕಡಿಮೆ
ನಾ ಸುಮ್ಮನೆ ಹರಿಬಿಟ್ಟು
ಮನದ ಹುಚ್ಚು ಹೊಳೆಯ
ದಂಡೆಯಲಿ ಮೈ ಹರವಿ
ಕುಳಿತ ಗಳಿಗೆಯಲಿ
ಹಿಗ್ಗಿನಲಿ ತೆವಳುತ ಬಂದ
ಪುಟ್ಟ ಅಲೆಯ ಲಲನೆ
ಅಣಕಿಸಿ ಕರೆಯಿತು ಬಾ!

ಚರಿತ್ರೆಯ ಪಾಪವನೆಲ್ಲ
ಒಡಲಲಿ ತುಂಬಿ ತುಳುಕುತಿಹುದು
ನನ್ನ ತಾಯಿ ಸಾಗರ
ನಿನ್ನ ಚರಿತ್ರ ಹೀನ
ಚರಿತೆಯನೆಲ್ಲ ಒಮ್ಮೆಗೆ
ತೊಳೆದು, ಬಿಡುವುದು
ನಿನ್ನ ಮತ್ತೆ ಈ ಜಗಕೆ!

ಯಾರಿಗೆ ಬೇಕು ಹೇಳು
ನಿನ್ನ ಚರಿತ್ರೆ
ಪ್ರತಿ ಪುಟವು ಕಳಂಕಿತ
ರಾಜನಾರೋ ತನ್ನ ಅಂತಪುರದ
ಕತ್ತಲಲಿ ತೆಕ್ಕೆಗೆ ಬಿದ್ದ
ದಾಸಿಯ ಒಡಲಾಳದಲಿ ಇಳಿಸಿದ
ಕಾಮ ತೃಷೆಯ ಪಾಪ
ಗರ್ಭ ಕಟ್ಟಿದಂತೆ
ಉಳಿದು ಬಿಡಲಿ ಆ ಸಾಗರದಲಿ
ನಿನ್ನ ಚರಿತೆಯು!
ಸಾಗರನ ಅಲೆ ನಲಿವಿನ
ಒಲವಿನ ಸೂಚಕವು
ಯಾರು ಬಲ್ಲರು
ಒಡಲಾಳದ ಬೇನೆಯ
ಚರಿತ್ರೆಯ ಪುಟಗಳಲಿ
ಪೊಣಿಸಿದ ಅಕ್ಷರಗಳಲೇನುಂಟು
ನಿಜ ಜೀವನದ ಸಾವೇ-ನೋವೆ?

ಬಾ ಬಟ್ಟೆ ಕಳಚಿದೆಯಷ್ಟೇ
ಸಾಗಲಿ ಬದುಕು ಮತ್ತೇನೂ ಇಲ್ಲ.