Friday, July 31, 2009

ಗಾಡಿ ಬುಲಾರಹೀ ಹೇ..ಸೀಟಿ ಬಜಾರಹೀ ಹೇ..


ನಮ್ಮ ಊರಿನಲ್ಲಿ ಅಂತಹ ರೈಲುಗಾಡಿಗಳಿಲ್ಲವಲ್ಲ ಎಂಬ ಬೇಸರ, ಅಲ್ಲಿಯ ಜನರ ವಿಭಿನ್ನ ಅನುಭವಗಳೆಡೆಗೆ ಹೊಟ್ಟೆ ಬುರುಕುತನ ನನ್ನಲಿನ್ನು ಏಕೋ ಹಾಗೇ ಉಳಿದುಬಿಟ್ಟಿದೆ. ದೇಶದ ಉದ್ದಗಲದಿಂದಲೂ ಬಂದು ಬಂದು ಎಲ್ಲೆಂದರೆಲ್ಲಿ ಬರಿ ಮನುಷ್ಯರೇ ತುಂಬಿ ಹೋಗಿರುವ ಮುಂಬೈ ನಗರಕೆ ನನ್ನ ಭೇಟಿಯೇ ಒಂದು ಆಕಸ್ಮಿಕ.
ಚಿಕ್ಕಂದಿನಿದಲೇ ಅದೊಂದು ನಗರದ ಬಗ್ಗೆ ಸುಮ್ಮಸುಮ್ಮನೆ ಭಾರೀ ದಂತಕಥೆಗಳನ್ನ ಕೇಳಿದ್ದೆ. ನಮ್ಮೂರಿನಲ್ಲಿ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಬಹಳಷ್ಟು ಹುಡುಗರು ಮುಂಬಯಿಗೆ ಹೋಗಿ ಅಲ್ಲಿಯ ಹೋಟೆಲು, ಬಾರುಗಳಲ್ಲಿ ಚಾಕರಿ ಮಾಡಿ ದುಡ್ಡು ದುಡಿದು ಹಬ್ಬ ಹರಿದಿನಕ್ಕೆ ಊರಿಗೆ ಬಂದಾಗ ದಿವಾನರಂತೆ ಓಡಾಡುತಿದ್ದವರ ಬಗ್ಗೆ ಅವ್ವ(ಅಜ್ಜಿ) ಹೇಳುತಿದ್ದುದು 'ಬೊಂಬಾಯಲಿ ಚೆನ್ನಾಗಿ ದುಡ್ಡ್ ಮಾಡ್ಕೊಂಡು ಬಂದವ್ನೇ ತಗೋ ಅವನಿಗೇನು ದೌಲತ್ತಾಗಿ ತಿರುಗುತ್ತಾನೆ ಇಲ್ಲಿ ಅನ್ನೋರು'.
ಹೀಗೆ ಬಾಂಬೆಯ ಬಗ್ಗೆ ತರಾವರಿಯಾಗಿ ಕೇಳಿಯೆ ಕುತೂಹಲಿಯಾಗಿದ್ದ "ಕಾರ್ಮಿಕರ ಕೈಲಾಸವಾದ ಮುಂಬೈ"ನಗರಿಯನು ನೋಡಬೇಕೆಂಬ ಅಲೆಮಾರಿಯ ಹಂಬಲ ಕಳೆದ ವರ್ಷ ಸಾಕಾರವಾಹಿತು.ಹಲವು ವಿಚಿತ್ರ, ವಿಕ್ಷಿಪ್ತ, ವೈಶಿಷ್ಟ್ಯಗಳಿಗೆ ಹೆಸರಾಗಿದ್ದರು ಮುಂಬೈನ 'Local Train' ವ್ಯವಸ್ಥೆಯೇ ನನಗೆ ಅದ್ಭುತವೆನಿಸಿದ್ದು.ಎಡಬಿಡದೇ ಮುಂಬೈ ನಾಗರಿಕರನ್ನು ಹೊತ್ತು ಸಾಗುವ ಸಂವಹನ Local train ಎಂಬ ಗರೀಭಿ ರಥದ ವೈಶಿಷ್ಟ್ಯವನ್ನು ನಾ ಕಂಡಂತೆ ನಿಮಗೆ ಹೇಳಬೇಕೆನಿಸುತ್ತದೆ. ರೈಲು ಲೋಕಲ್ ಆದರೂ, ಅದರ ವೈವಿಧ್ಯತೆ ಮಾತ್ರ 'Local' ಎಂದು ನಿಮಗನಿಸುವುದಿಲ್ಲ ಎಂಬುದು ನನ್ನ ನಂಬಿಕೆ ಸ್ನೇಹಿತರೆ.


ದುಡಿಯುವವರ ನಗರವೆಂದೇ ಖ್ಯಾತಿಯಾದ ಮುಂಬೈಯನ್ನು ಪೂರ್ವ-ಪಶ್ಚಿಮ ಮುಂಬೈ ಎಂದು ಸೀಳು ಮಾಡಿರುವ ಹಳಿಗಳ ಮೇಲೆ ಜಗದ ಪರಿವೇ ಇಲ್ಲದೆ ತನ್ನ ಪಾಡಿಗೆ ತಾನು ದಿನಂಪ್ರತಿ ಸವೆಸಿಯು ಸವೆಸದ ಹಳಿಗಳ ಮೇಲೆ ಅತ್ತಿಂದಿತ್ತ ಅಡ್ಡಾಡುತ 'ಮಾನವ ಸಂಪರ್ಕ ಸೇತುವೆಯಾಗಿರುವ' local train' ಎಂಬ ಆಧುನಿಕ ಅನ್ವೇಷಣೆಯು ನಿಜಕ್ಕೂ "ಮುಂಬೈ ಎಂಬ ದೇಹಕ್ಕೆ ರಕ್ತನಾಳವಿದ್ದಂತೆ".ಒಂದಿಲ್ಲೊಂದು ಕಾರಣಕ್ಕೆ ಮುಂಬೈ ನಿವಾಸಿಗರ ಜೀವನದಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈ ರೈಲು ಬಂಡಿಗಳು,ಪ್ರದೇಶ-ಪ್ರದೇಶಗಳ ಜೊತೆಗೆ ಮಾನವರ ನಡುವೆಯು ಸಂಪರ್ಕ,ಸಂಬಂಧಗಳನು ನಿರ್ಮಿಸುತ್ತಲೇ ಸಾಗಿದೆ.
ಎಲ್ಲಿ ಸಂಪರ್ಕ ಸಂವಹನಗಳ ಸೌಲಭ್ಯ ಉತ್ತಮವಾಗಿರುತ್ತದೋ ಅಲ್ಲಿ ಮಾನವನ ಸಂಬಂಧಗಳು ಉತ್ತಮವಾಗಿ ಬೆಳೆಯುತ್ತವೆ ಅನ್ನೋದಕ್ಕ್ಕೆ ಬಾಂಬೆಯ ಜನ ಜೀವನ ಸ್ವರೂಪವೇ ಸಾಕ್ಷಿ.ಬಡವರು,ಕಾರ್ಮಿಕರು,ಕಾಲೇಜು ಹುಡುಗ ಹುಡುಗಿಯರು, ಶೋಕಿಗಾಗಿ ಊರು ಸುತ್ತುವವರು ಹೀಗೆ ಯಾರು-ಯಾರೋ ರೈಲಿನ ಬೋಗಿಯೊಳಗೆ ಸೇರಿ ತಮ್ಮ ನೀವೆದನೆಗಳೊಂದಿಗೆ ಎದುರಿಗಿರುವವರನ್ನು ಮಾತಿಗೆಳೆಯುತ್ತ ಪಯಣವನು ಹಗುರಗೊಳಿಸಿಕೊಳ್ಳುತ್ತ ಸಾಗುವ ಅವರ ಅನುದಿನದ ಪಯಣ, ಅಂಟುರೋಗವೆಂಬಂತೆ ದಿನವೂ ಒಬ್ಬ ಅಪರಿಚಿತನನ್ನಾದರು ಮಾತಿಗೆಳೆಯುತ್ತದೆ. ಆ ಕ್ಷಣದ ಮಾತಿಗಸ್ಟೇ ಸ್ಪಂಧಿಸುವ ಅವರ ಮಾತುಗಳು,ಆಪ್ತತೆಗೆ ನಮಗಾಗೋ ಅ ಅನುಭವವೇ ಅಭೂತವೆನಿಸುವುದು.
ಎಲ್ಲರು ಯಾವುದೋ ಅವಸರಕ್ಕೆಬಿದ್ದವರಂತೆ,ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಅವರ ಬಾಳಿನಲಿ ಹಾಸುಹೊಕ್ಕಿರುವ ರೈಲು ಬಂಡಿಯ ಒಡನಾಟ ನಮ್ಮನ್ನ ಚಕಿತಗೊಳಿಸುತ್ತದೆ. ರೈಲು ಬರೋದು ಒಂದು ನಿಮಿಷ ತಡವಾದರೂ ಫ್ಲಾಟ್ಫಾರಂ ಮೇಲೆ ನಿಂತು ಚಡಪಡಿಸೋ ಪಯಣಿಗರ ಕಣ್ಣುಗಳು ಹಳಿಗಳೆಡೆಗೆ ಹೊರಳಿ ಕಾತರಿಸುವುದು. ಹಳಿಗಳ ಮೇಲೆ ತ್ರಿವಿಕ್ರಮನಂತೆ ಸಾಗಿ ಬರುವ ರೈಲು, ನಿಲ್ಲುವ ಕೆಲವೇ ಕ್ಷಣಗಳಲ್ಲಿ ಇಳಿಯುವವರೆಷ್ಟೋ,ಹತ್ತುವವರೆಷ್ಟೋ ಕ್ಷಣ ಮಾತ್ರದಲಿ ಎಲ್ಲವೂ ಆಗಿ ಮುಗಿದಂತೆ. ಆಗತಾನೇ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ನಿಲ್ದಾಣ ನಿಮಿಷದಲ್ಲಿಯೇ ಖಾಲಿ ಖಾಲಿ.ಎಲ್ಲರಿಗೂ ಅವರದೇ ಆದ ಅನಿವಾರ್ಯತೆಗಳ ಅರಿವಾಗಿದೆಯೇನೋ ಎನುವಂತೆ ಸುಮ್ಮನಿದೆ ನಿಲ್ದಾಣ.
ಬೆಳಗಿನ ಜಾವದ 6 ರೈಲೋ, ಆಫೀಸಿನ ಸಮಯಕೆ ಹಿಡಿಯಬೇಕಾದ 8 ರೈಲೋ,ಅವಳತ್ತುವ ರೈಲಿಗೆ ಕಾಯುವ ಪುಂಡನ ರೈಲು,ಶಾಲಾ-ಕಾಲೇಜುಗಳಿಗಾಗೆ ವಿದ್ಯಾರ್ಥಿಗಳು ಕಾಯುವ ರೈಲು,ಹೀಗೆ ಯಾವುದಾದರೊಂದು ರೈಲಿನ ಚಲನೆಯೊಂದಿಗೆ ಮುಂಬೈ ವಾಸಿಗಳ ನಿರಂತರ ಯಾನ ಬೆಸೆದುಕೊಂಡಿದೆ. ಸಿಕ್ಕ ಸೀಟಿನ ಮೇಲೆ ಕೂತು ಪೇಪರ್ ಓದುವವರು,ರೇಡಿಯೋ ಆಲಿಸುತ ತಲೆಯಾಡಿಸುವವರು,ಬೆಳಗಿನ ನಿದ್ದೆ ಹರಿಯದೇ ತೂಕಡಿಸುವವರು,ಪ್ರೇಯಸಿಯೋಟ್ಟಿಗೆ ಫೋನ್ ನಲಿ ಹರಟುತ ಸಾಗುವವರು,ಕೆಲಸದ ತೀವ್ರತೆಯನು ಕಡಿಮೆ ಮಾಡಿಕೊಳ್ಳಲು ಅಲ್ಲೇ ತಯಾರಿ ನಡೆಸುವವರು,ಊರ ಸುತ್ತಲು ಹೋರಾಟ ಅನಾಮಿಕರ ಪರಿಪಾಟಲುಗಳು ಹೀಗೆ ಸೀಮೆ ಸೀಮೆಯ ಜನರನೋಳಗೊಂಡ ಸೀಮಾತೀತವೆನಿಸಿದ ಬೋಗಿಗಳ ರೈಲಿಗೆ ಇದೆಲ್ಲ ಮಾಮೂಲಿ ಎನಿಸಿ, ಯಾವುದೇ ಭೇದವಿಲ್ಲದೆ ತನ್ನ ಪಾಡು ತನಗೆಂದು ಸೈರನ್ ಕೂಗುತ ಅಳಿಗಳ ಮೇಲೆ ಚಕ್ರ ಉರುಳಿಸುತ್ತದೆ.
ಒಂದಿಲ್ಲೊಂದು ಕಾರಣಕ್ಕೆ,ವಿಷಯಕ್ಕೆ,ಪಯಣಕೆ, ವಿಶ್ರಾಂತಿಗೆ,ಮಾತಿಗೆ, ಪ್ರೇಮಕೆ, ಸಂಬಂಧಕೆ ಅಲ್ಲಿಯವರ ಮತ್ತ್ಯಾವುದೋ ಅನಿವಾರ್ಯತೆಗೆ Local ಟ್ರೈನ್ ಅವಲಂಬಿಯಾಗಿ ಸಾಥ್ ನೀಡಿವೆ. ಅವರ ಅವಶ್ಯಕೆ ತಕ್ಕಂತೆ ಈ ರೈಲುಗಳು ಅವರೊಂದಿಗೆ ಸಂಬಂಧವನ್ನು ಬೆಳೆಸಿಬಿಟ್ಟಿವೆ. ಆ ಪ್ರಯಾಣಿಕರ ಸ್ಪರ್ಶ,ಅವರ ಉಸಿರು,ಮಾತು, ಅವರ ತುಳಿತ ಎಲ್ಲವನು ತಕರಾರಿಲ್ಲದೆ ಸ್ವೀಕರಿಸುವ, ದಿನಕ್ಕೆ ಒಮ್ಮೆಯಾದರು ಭೇಟಿಯಾಗುವ 'ಪ್ರೇಯಸಿಯಾಗಿ' ಆ ಜನರ,ನಗರದ 'ಚಲನೆಯಜೀವಾಳವಾಗಿ' ರಾರಾಜಿಸುತ್ತಿರುವ ಅಮಾಯಕ ರೈಲುಗಳಿಗೆ ಮನದ ಒಂದು ಸಲಾಂ .ಈ ಎಲ್ಲ ಅನುಭವಗಳು ನಿಮಗೂ ಆಗಲಿ ಮುಂಬಯಿಯ ಒಂದು ಲೋಕಲ್ ಯಾನದಲ್ಲಿ...

Saturday, July 25, 2009

ಬಾ,ಬಾರೆನ್ನ ಬಾಳಿಗೆ...

ಒಮ್ಮೆ ಆಲಿಸಿ ನಿಮ್ಮ ಮನದ ಮಾತನು...
ಮೊನ್ನೆ ಹಾಗೆ ಸುಮ್ಮನೆ ಮಾತನಾಡುತ್ತ ಅಮ್ಮ 'ಆಷಾಢ ಕಳೆಯಿತು' ಅಂದಳು, ಯಾವುದೋ ಅನಿಷ್ಟ ತೊಲಗಿದಾಗ ಹೇಳುವ ರೀತಿ ಇತ್ತು ಅವಳ ಮುಖಭಾವ.ನಮ್ಮ ಜನಗಳದ್ದು ಒಂದು ರೀತಿಯ ಮಲತಾಯಿಧೋರಣೆ ಆಷಾಢದ ಬಗ್ಗೆ ಅದೇಕೋ ಏನೋ ನನಗಂತೂ ತಿಳಿಯದು? ಜನ್ಮ ಜನ್ಮಾಂತರದ ಯಾವುದೋ ಹಳೆ ವೈಷಮ್ಯವೇನೋ ಎಂಬಂತೆ ಯಾವುದೇ ಶುಭ ಕಾರ್ಯಗಳನ್ನ ಮಾಡೋದೇ ಇಲ್ಲ. ಗಾಳಿ ತನ್ನ ದಿಕ್ಕನ್ನ ಬದಲಿಸಿ ಬರೋದರಿಂದ ಯಾವುದೋ ಅಪಶಕುನ ತಮ್ಮ ಮೈಮೇಲೆ ಎಗರಿಬಿಡುತ್ತದೆ ಎಂಬಂತೆ ಆಷಾಢ ಮಾಸವನ್ನು ಜನಗಳು ದೂಷಿಸುವ ಪರಿಯಂತೂ ನಗು ತರಿಸುವುದು. ಇನ್ನು ಆಷಾಢದಲಿ ಅಗಲಿದ ನವ ದಂಪತಿಗಳ ಪಾಡು ದೇವರೇ ಬಲ್ಲ.
ಆಷಾಢದ ಗಾಳಿ ಎಲ್ಲೆಲ್ಲು ಮಳೆಯ ಸುರಿಸಿ ಮೆಲ್ಲನೆ ಸರಿದಿದೆ. ನವ ದಂಪತಿಗಳ ಮೇಲೇರಿದ್ದ ಸಂಪ್ರದಾಯ ಕಟ್ಟಳೆಯ ತಾತ್ಕಾಲಿಕ ಅಗಲಿಕೆಯ ದಿನಗಳು ತುಂಬಿ, ದಂಪತಿಗಳು ಕೈ ಕೈ ಜೋಡಿಸಿ, ಅಳೆದು ತೂಗಿ ಹೆಜ್ಜೆಗಳನಿಡುತ ಸೊಂಪಾದ ಸಂಜೆಯಲಿ ವಿಹರಿಸುವ ಸುಸಮಯ ಮತ್ತೆ ಅವರ ಹರಸಿ ಬಂದಿದೆ.
ಬಂದಿದೆ ಶ್ರಾವಣ. ಶ್ರಾವಣದ ತಿಳಿಗಾಳಿ ಬುವಿಯಲೆಲ್ಲ ಹರಡಿ, ಸೊಬಗ ಸೂಸುವ ಹೂ, ಬಳ್ಳಿ, ಗಿಡಗಳ ವಯ್ಯಾರಕ್ಕೆ ಮನದಲ್ಲೂ ಕಂಪನ. "ಶ್ರಾವಣ ಬಂತು ಕಾಡಿಗೆ,ಬಂತು ನಾಡಿಗೆ"ಎಂದು ಹಾಡಿದ ಕವಿ ಬೇಂದ್ರೆಯ ಪದ್ಯ ನೆನಪಾಗುವುದು. ಹಸಿರು ಹಸಿರಾಗಿ ಕಂಗೊಳಿಸುವ ಭೂರಮೆ ಪ್ರಣಯ ರಾಗವ ಹಾಡಿ ಕರೆಯುತಿಹುದೇನೋ ಎನ್ನುವಂತೆ ಶ್ರಾವಣ ಮಾಸದ ಸೆಳವು.ಸುತ್ತಲು ಯಾವುದೋ ಆಕರ್ಷಣೆ ನಮ್ಮ ಸೆಳೆದಂತೆ. ಮನದಲ್ಲೂ ಯಾವುದೋ ಮೋಹ ನಿಮ್ಮ ಆವರಿಸುತಿದೆ ಎನುವ ಹಾಗೇ ಭಾಸವಾಗುತ್ತಿಲ್ಲವೇ....ಒಮ್ಮೆ ಆಲಿಸಿ ನಿಮ್ಮ ಮನದ ಮಾತನು...

ಬಾ,ಬಾರೆನ್ನ ಬಾಳಿಗೆ...

ಸಾಕು ಸಾಕೆನಗೆ ಒಮ್ಮೆ
ಮುನಿಸ ಕೊಂಕು ನೋಟದ ಬಿಂಕವ ಬದಿಗಿಟ್ಟು,
ಮಂಜಿನ ಹನಿ ಹಸಿರ ಗರಿಕೆಯ ಮುತ್ತಾಗುವ
ಮುಂಜಾವದಲಿ ಒಲುಮೆ ಲಜ್ಜೆಯ ನಿನ್ನ
ಹಾಲಗೆನ್ನೆಯ ಮೇಲೇರಿಸಿ ಬಂದುಬಿಡೆನ್ನ ಬಾಳಿಗೆ..

ಉದಯ ರವಿಯ ಎಳೆರಶ್ಮಿಗಳು ಎನ್ನ
ಮನೆಯಂಗಳದಲಿ ಬೆಳಕು ಚೆಲ್ಲುವ
ಆ ಸವಿ ಹೊತ್ತಲಿ ಸೋತವನ ಬಾಳ
ದೀವಿಗೆಗೆ ನಲುಮೆಯ ಬತ್ತಿ ಹೊಸೆದು
ಹರುಷದ ಹೊನಲ ಉಣಿಸಿ, ಹರಿಸಬಾರೇ..

ವಿರಹದುರಿಯಲಿ ಬೆಂದ ಮನಕೆ
ಬಿಡದೆ ಸುರಿವ ಶ್ರಾವಣದ ಸಂಜೆ ಮಳೆಯ
ತಂಪ ಹೊತ್ತು ತಾರೆನ್ನ ಬಾಳಿಗೆ,
ಒಮ್ಮೆ ನಿನ್ನ ಒಲವ ಹೂವೊಡಲ
ಚಂದ್ರಿಕೆಯ ಸವಿಯ ಅಮಲಿನಲಿ ತೇಲಾಡಿ,
ನಿನ್ನ ಮಡಿಲಲಿ ಪವಡಿಸಿ ನಾ ಯಾರೆಂಬುದ
ಮರೆತರಸ್ಟೇ ಸಾಕು!ಬಾ ಬಾರೆನ್ನ
ಬಾಳಿಗೆ ಮನದಲಾದ ಗಾಯದ ನೊವೆ
ಮಾಸಿ ಹೋಗುವ ಮುನ್ನ.....


Friday, July 24, 2009

ನಲುಮೆಯ ಭಾವಲೋಕ...


ನಮ್ಮ ನಿಮ್ಮ ನಡುವೆ ನಲುಮೆಯ

ಭಾವ ಲೋಕ ಅರಳಲಿ. . .

ಸಹಯಾತ್ರಿಗಳೇ ಬ್ಲಾಗ್ ಗೆ ನೀವು ನೀಡುತ್ತಿರುವ ಪ್ರೋತ್ಸಾಹ,ನನ್ನ ಮೇಲಿನ ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು.

ಸ್ನೇಹಿತರೇ, ಬರಹವೆಂದರೆ ಮನದಲಿ ಎಸ್ಟೋ ದಿನಗಳಿಂದ ಮಡುಗಟ್ಟಿದ ಭಾವಗಳ ಪ್ರಸವ.ಬರಹ ನೀಡುವ ವೇದನೆ ಸುಮಧುರ.ಈಗೀಗ ಆ ವೇದನೆಯ ಮತ್ತೆ ಮತ್ತೆ ಸವಿಯೋಣ ಎಂದೆನಿಸುತ್ತದೆ.

ಬ್ಲಾಗ್ ಮಾಡಿ ಬರೆದು ಹಾಕಿದರೆ ಓದುವವರು ಯಾರು? ಎಂಬ ಮನಸ್ತ್ತಿತಿಯಲೇ ಹಲವು ದಿನಗಳ ದೂಡಿಬಿಟ್ಟೆ. ಆದರೆ 'ಸಹಯಾತ್ರಿಯ' ಆರಂಭಿಸಿದ ದಿನದಿಂದ ಅದಕ್ಕೆ ನಿಮ್ಮಿಂದ ಸಿಕ್ಕ ಪ್ರತಿಸ್ಪಂಧನಕೆ ಮನದಲೇನೋ ಹೊಸ ಹುರುಪು.
ಅನುದಿನವು ಏನಾದರು ಬರೆಯೋಣ ಎಂದೆನಿಸುತ್ತದೆ. ಓದುಗರಿದ್ದರೆ ಬರೆಯಲು ನಮಗೂ ಸ್ಫೂರ್ತಿ.
ನಿತ್ಯ ನೂತನವ ಹರಸುತ, ನಮ್ಮ ಸಂಬಂಧ ಮತ್ತಷ್ಟು, ಮೊಗದಸ್ಟು ಗಾಢವಾಗಲಿ ಎಂದು ಆಶಿಸುವೆ ಸಹಯಾತ್ರಿಗಳೇ.....ವಂದನೆಗಳು.

Tuesday, July 21, 2009

ಗಾಂಪನ ಓಟ...


"Life is like a box of chocolates...
you never know what you are gonna get."
(FORREST GUMP ನ ತಾಯಿಯ ನುಡಿಗಳು)
ಇನ್ನೇನು ಬದುಕೆಲ್ಲ ಮುಗಿದೇ ಹೋಯಿತ್ತು ಇನ್ನೆನು ಮಿಕ್ಕೇ ಇಲ್ಲ ಅಂತ ಆಗಾಗ ಅನ್ನಿಸೊದು ಉಂಟು, ಸಂಜೆ ಹೊತ್ತಲ್ಲಿ ಆವರಿಸಿಕೊಳ್ಳೊ ಇಂತಹ ಖಿನ್ನತೆಯನ್ನ ಎದುರಿಸೋದು ಆ ದಿನದ ಮಟ್ಟಿಗೆ ಕಷ್ಟ, ಆದರೂ ಏನಾದರೂ ಮಾಡಲೇಬೇಕಲ್ಲಾ ಅದಕ್ಕಂತ ಹಳೇ ಪಿಚ್ಚರ್ ನೋಡೋದು ನಂಗೆ ರೂಡಿ. ಹೊಸದರ ಬಗ್ಗೆ ಎಲ್ಲರು ಚೆಂದಾಗಿದೆ, ಕೆಟ್ಟದಿದೆ ಅಂತ ಹೇಳ್ತಾರೆ. ಆದರೆ ಹಳೇದರ ಬಗ್ಗೆ ಹೇಳಲ್ಲಾ, ಇಲ್ಲೊಂದು ಸಿನಿಮಾದ ಬಗ್ಗೆ ನಾನು ಬರೆದಿದ್ದೇನೆ ನನ್ನನು ಬಹಳ ಕಾಲ ಕಾಡಿದ್ದು, ಸಿಡಿ ಅಂಗಡಿಯಲ್ಲಿ ಆರಾಮಾಗಿ ಸಿಗುತ್ತೆ, ನೆವರ್ ಮಿಸ್ ದಿಸ್ ಫಿಲಂ..
'FORREST GUMP'
"ಹುಟ್ಟಿನಿಂದಲೇ ಊನ, ಸುತ್ತ ಮುತ್ತಲಿನ ಸಂಗತಿಗಳನು ಗುರುತಿಸಲು ಆಗದ ಬುದ್ದಿಮತ್ತೆ, ಮತ್ತೊಬ್ಬರ ನೋವಿಗೆ ಮಿಡಿವ ಮುಗ್ದನೊಬ್ಬ ಬದುಕಿನ ಮಿತಿಗಳನು ಮೀರಿ ಅಸಮಾನ್ಯವೆನ್ನುವಂತೆ ಯಶಗಳ ಮೆಟ್ಟಿಲೇರಿ, ಜನಮಾನಸದ ಅಚ್ಚರಿಯಾದವನ ಕಥೆ 'FORREST GUMP' .ಸಾಮಾನ್ಯ ಜೀವನ ಕಥೆಯನ್ನ ಅಸಾದಾರಣ ವಾಗಿ ಚಿತ್ರಸಿದ್ದೆ ಹೈಲೈಟ್.
ಸ್ನೇಹಿತ ಶ್ರೀನಿವಾಸ ಗೌಡ, ಬಿಡುವಿದ್ದಾಗಲೆಲ್ಲಾ ಯಾವ್ಯಾವುದೋ ಹಾಲಿವುಡ್ ಚಿತ್ರಗಳನು ನೋಡಿ, ಒಮ್ಮೊಮ್ಮೆ ಚಿತ್ರದ ಕಥಾವಸ್ತುಗಳ ಬಗ್ಗೆ ತನಗೂ ತಡೆಯಲಾಗದೇ ಹೇಳುತ್ತಿದ್ದ. ಆ ಸಿನಿಮಾಗಳನು ನೋಡುವಂತೆ ಪ್ರೇರೆಪಿಸಿದ್ದ ,ಮೊನ್ನೆ ಚೀನಾದಿಂದ ಬಂದಿದ್ದ ನನ್ನಕ್ಕ ತಂದ ಕೆಲವು dvd ಗಳಲಿ 'FORREST GUMP'ಎಂಬ ಸಿನಿಮಾ ಇರೋದನ್ನ ಕಂಡು ಗೌಡ ಹೇಳಿದ್ದು ನೆನಪಾಗಿ ಚಿತ್ರ ನೋಡಿದೆ. ಆ ದಿನ ದಿನವಂತೂ ನನ್ನ ಮನ ತಲ್ಲಣ್ಣಿಸಿಬಿಟ್ಟಿತು. ಹೇಗೇಗೊ ಇದ್ದವರು ಹೇಗಾಗಬಹುದು, ಮಾನವನ ಸಾಧನೆಗಳಿಗೆ ಮಿತಿಯೇ ಇಲ್ಲ ಅನ್ನಿಸಿತು. ತನಗಿರುವ ವಿಕಲಾಂಗತೆಯನು ಮೀರಿ ಅಪರಿಮಿತ ಯಶಸ್ಸನ್ನು ಸಾಧಿಸುವ ಮುಗ್ದ ಹುಡುಗನೊಬ್ಬನ ಬದುಕಿನ ಕಥೆ ಅದು, ನೋಡುಗನ ಮೇಲೆ ಬೀರುವ ಪ್ರಭಾವ ಅನನ್ಯ.
ಒಂದೇ ಪದದಲಿ ಹೇಳಬೇಕೆಂದರೆ ಚಿತ್ರದಲ್ಲಿರುವುದು "ಓಡು ಓಡು ಗುರಿಮುಟ್ಟುವ ವರೆಗೆ ನಿಲ್ಲದಿರು ಎಂಬ ಚಲನ ಶೀಲ ಸಂದೇಶ". ಮುಗ್ದ ಹುಡುಗನ ಅಂಗ ವೈಕಲ್ಯತೆಯನ್ನು ಹೀನಾಯವಾಗಿ ಅಣಕಿಸುವ ಕಿಡಿಗೇಡಿ ಹುಡುಗರ ಹಿಂಸೆಯಿಂದ ತಪ್ಪಿಸಿಕೊಳ್ಳಲು gumpನ ಸ್ನೇಹಿತೆ ಅವನಿಗೆ ನೀಡೋ ಸಲಹೆ 'Don'tstop,run Forrest,run ಅವನ ಜೀವನವನ್ನೇ ಬದಲಿಸುತ್ತದೆ. ಆತ ಆಮೇಲೆ ನಿಲ್ಲೋದೇ ಇಲ್ಲ ಓಡುತ್ತಲೇ ಇರುತ್ತಾನೆ, ತನ್ನ ಮಿತಿಯನು ಮೀರುವವರೆಗೂ. ತನ್ನ ಗೆಳತಿಯ ಪ್ರೋತ್ಸಾಹ ದಿಂದ ಭಾರದ ತನ್ನ ಕಾಲುಗಳನು ಎಳೆದುಕೊಂಡು ಓಡಲು ಹೆಜ್ಜೆ ಹಾಕುವ gump ಓಡಿ,ಓಡಿ ವಿಕಲತೆಯನ್ನ ಮೀರುತ್ತಾನೆ .ತನ್ನ ಬೆಂಗಾವಲಿಗೆ ನಿಂತ ತಾಯಿ ಹಾಗೂ ಗೆಳತಿಯ( ಜೋರಾ) ಪ್ರೋತ್ಸಾಹದಿಂದ ಪೆದ್ದ ಹುಡುಗ ಸ್ಕೂಲು,ಕಾಲೇಜುಗಳಲಿ ಉತ್ತಮ ಕ್ರೀಡಾಪಟುವಾಗುತ್ತಾನೆ. ಆದರೂ ಮುಜುಗರ ಸೊಪ್ಪೆಯಾದ ಆತ ಬೇರೆ ಸ್ನೇಹಿತರಿಂದ ದೂರವೇ ಉಳಿಯುತ್ತಾನೆ.
ಏನೂ ತಿಳಿಯದ ದಡ್ಡ ಮಿಲಿಟರಿಗೆ ಸೇರುತ್ತಾನೆ, ಆಗ ಆತನ ಗೆಳತಿ ಕೊಡೋ ಸಲಹೆ ಆತನಲ್ಲ ಕಾಪಾಡುತ್ತೆ, ನಿನಗೆ ಯಾವುದೇ ಸಂಕಟ ಎದುರಾದರೂ 'ಓಡುವುದನ್ನ ಮರೆಯಬೇಡ Gump' . ಮಿಲಿಟರಿ ಸೇವೆಗೆ ಸೇರಿದ ಕೆಲವೇ ದಿನದಲಿ ಎದುರಾದ ಯುದ್ಧದ ಭೀಕರ ಸನ್ನಿವೇಶದಲ್ಲಿ,ಎಲ್ಲಾರು ಹೆಣವಾಗುತ್ತಿರುತ್ತಾರೆ, ಆದರೆ ಓಡುತ್ತಲೇ ಇರೋ ಗಾಂಪ್ ಗೆ ಗುಂಡುಗಳು ತಾಕೋಲ್ಲ , ಗಾಯಗೊಂಡ ಸೈನಿಕರನೆಲ್ಲ ಹೊತ್ತು ತಂದು ಆಸ್ಪತ್ರೆ ತರುತ್ತಾನೆ, ಸಾವಿನ ಬೀತಿ ದಿಕ್ಕರಿಸಿ ಮಾನವೀಯ ಮೌಲ್ಯ ಮೆರೆವ Gump, ತನ್ನ ಜೊತೆಗಾರ ಮೆಕ್ಸಿಕೋದ ಗೆಳೆಯನ ಸಾವಿಗೂ ಸಾಕ್ಷಿಯಾಗುತ್ತಾನೆ.

ಸೈನಿಕ ವೃತ್ತಿಯಿಂದ ನಿವೃತ್ತನಾದ ಮೇಲೆ, ಅವನ ದೇಶ ಸೇವೆಗೆ ಸರಕಾರ ನೀಡುವ ಪ್ರಶಸ್ತಿಯ ಹಣ ಪಡೆದು , ಸಾವಿಗೀಡಾದ ಸ್ನೇಹಿತನ ತಂದೆ-ತಾಯಿಗಳೊಂದಿಗೆ ಕೂಡಿ ಅವರ ಊರಿನಲ್ಲೇ ಮತ್ಸ್ಯ ಉದ್ಯಮದಲಿ ತೊಡಗಿ, ದೇಶವೇ ಪ್ರಶಂಸಿಸುವಸ್ತ್ಟು ಎತ್ತರಕ್ಕೆ ಬೆಳೆಯುತ್ತಾನೆ, ಕಡೆಯಲ್ಲಿ ಆ ಉದ್ಯಮವನ್ನೂ, ಆತನ ಸ್ನೇಹಿತನ ಸುಪರ್ದಿಗೆ ಬಿಟ್ಟು ಮತ್ತೆ ತನ್ನ ಗೆಳತಿಗಾಗಿ ತಡಕಾಡುತ್ತಾನೆ.. ಅವಳ ಆತ್ಮ ಸಾಂಗತ್ಯಕ್ಕೆ ಹಾತೊರೆದು, ತನ್ನ ಪ್ರೀತಿಯನ್ನ ಅವಳಿಗೆನೀವೆದಿಸುತ್ತಾನೆ. ಹುಟ್ಟು ಚಂಚಲೆಯಾದ ಬಾಲ್ಯದ ಗೆಳತಿ ಜೋರಾ ಒಮ್ಮೆ ಅವನನ್ನು ಸಂಧಿಸಿ ಅವನಿಂದ ದೂರಾಗುತ್ತಾಳೆ. Gumpನ ತಾಯಿ ಅದೇ ಸಮಯಕ್ಕೆ ಇಹಲೋಕ ತ್ಯಜಿಸುತ್ತಾಳೆ.

ಬದುಕಿನ ಏಕಾಂಗಿತನವನು ಮೀರಲು, ಮತ್ತೆ ಓಡಲು ಪ್ರಾರಂಭಿಸುತ್ತಾನೆ. ದಿನಗಟ್ಟಲೇ, ತಿಂಗಳುಗಟ್ಟಲೆ ಓಡಿ,ಓಡಿ ಅಮೇರಿಕಾದ ಉದ್ದಗಲಗಳನು ಕ್ರಮಿಸುತ್ತಾ ಸಾಗುವ Gumpನ ಸಾಹಸಗಾಥೆಯನು ಮಾಧ್ಯಮಗಳು ಗುರುತಿಸಿ ಪ್ರಶಂಸೆಯ ಮಳೆಗರೆಯುವ ಹೊತ್ತಲ್ಲೇ ತನ್ನ ಓಟವನ್ನ ನಿಲ್ಲಿಸಿ ಮನೆಗೆ ಮರಳುತ್ತಾನೆ.
ಎಲ್ಲಿಯೂ ಮನಶಾಂತಿ ಸಿಗದೇ ಒಂಟಿತನದ ಬೇಗೆಯಲಿ ಇರುವ Gumpನ ಬಳಿಗೆ ಹಿಂದೊಮ್ಮೆ ಕೂಡಿದ್ದ ತನ್ನ ಜೀವದ ಗೆಳತಿ ತಮ್ಮ ಕುಡಿಯೊಂದಿಗೆ ಮತ್ತೆ ಬಂದಾಗ ಆತ ಕೇಳುವ ಮೊದಲ ಪ್ರಶ್ನೆ 'HAS HE SMART LIKE YOU?' ಮೂವರು ಒಟ್ಟಿಗೆ ಸೇರಿದ ಕೆಲದಿನಗಳಲ್ಲೇ ಕಾಯಿಲೆಯಿಂದಾಗಿ ಸಂಗಾತಿಯು ಸಾವನಪ್ಪುತ್ತಾಳೆ. ತನ್ನ ಹಾಗೇ ಪೆದ್ದನಲ್ಲದ ಮಗನೊಂದಿಗೆ ಬಾಳಿನ ಹೊಸದಾರಿಯೆಡೆಗೆ ಹೆಜ್ಜೆಯನಿಡುವ ದೃಶ್ಯದೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ.
ಪೆದ್ದುತನ, ಮುಗ್ದತೆ , ಪರರ ಸೇವೆ ಮತ್ತು ಗುರಿ ಹಿಡಿವ ಚಲದ ಪೆದ್ದು ಹುಡುಗನ ಪಾತ್ರದಲ್ಲಿ ನಟ Tom Hanks ಮನೋಜ್ಞವಾಗಿ ಅಭಿನಯಿಸಿದ್ದಾರೆ.

ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರೂ ಅನ್ನೊ ಕುವೆಂಪು ಅವರ ಪದ್ಯ ನಿಮಗೆ ನೆನಪಾಗದೇ ಇರದು, ಚಿತ್ರ ನೋಡಿದ ಮೇಲೆ ಅದರ ಗುಂಗು ಒಂದು ವಾರಕ್ಕಾದರೂ ಸಾಕು ಬೇಕಾದಷ್ಠು....
ಅವಕಾಶ ಸಿಕ್ಕರೆ ಒಮ್ಮೆ ನೋಡಿ ಸಹಯಾತ್ರಿಗಳೇ ಮರೆಯದೆ.Friday, July 17, 2009

ಮಳೆ ಬರುವ ಹೊತ್ತಲಿ...

ಕಾದೆ ನಾನು, ಮಳೆಯ ಹನಿಗೆ
ಕಾಯುವ ಬುವಿಯಂತೆ,
ಅವಳದೊಂದು ಮಂದನಗೆಗೆ
ಮೊಗವ ತೋರಿ ಮರೆಯಾದಳು
ಕಪ್ಪನೆ ಮೋಡದಂತೆ
ಬೀಸುವ ಬಿರುಗಾಳಿಗೆ.


ಮೋಡದ ಕಣ್ಣಾ ಮುಚ್ಚಾಲೆ ಆಟ ಮುಗಿದು ಎಲ್ಲೆಲ್ಲು ಮಳೆ,ಮಳೆ,ಮಳೆ. ಸುರಿವ ಮಳೆ ಹೊತ್ತು ತರುವ ನೆನಪುಗಳು ಅಪಾರ. ಬಹಳ ದಿನಗಳಿಂದ ಯಾವುದೋ ಚುಂಬಕ ಪ್ರೀತಿಗೆ ಕಾದು ಬಯಲಾಗಿ ನಿಂತ ಇಳೆ ಪ್ರತಿ ಹನಿಯ ಸ್ಪರ್ಶಕೂ ಪುಳಕಗೊಂಡು ಮತ್ತೆ ಮೆದುವಾಗಿ ಅರಳುವ ಬಗೆಯಂತು ಮೋಹಕ. ಮೊದಲ ಮಳೆಗೆ ಗಮ್ಮಗೆ ಹೊಮ್ಮುವ ಮಣ್ಣಿನ ಕಂಪಿನಲ್ಲಿರುವ ಆಹ್ಲಾದತೆಗೆ ಸಾಟಿ ಯಾವುದಲ್ಲವೇ!ವಸಂತಕೆ ಚಿಗುರಿದ ಹೂ ಬನ,ವನವೆಲ್ಲ,ಮೊದಲ ಮುಂಗಾರಿಗೆ ನಾಟಿಮಾಡಿದ ಹೊಲ ಗದ್ದೆಗಳೆಲ್ಲ ಮಳೆಯ ಜೀವ ಸ್ಪರ್ಶಕೆ ನಳನಳಿಸುತ ತೊನೆದಾಡುವ ಬಗೆಯೇ ವಿಸ್ಮಯ. ಎಲ್ಲೆಂದರೆಲ್ಲಿ ಹಸಿರ ಹೊದ್ದು ತುಂತುರು ಹನಿಗೆ ಜೀವರಾಗ ಮಿಡಿವ ಭೂರಮೆಯ ವಯ್ಯಾರಕೆ,ಸೋತು ಸುಣ್ಣಾದ ಮನವು ಮರುಗದಿರದು.ಮಳೆ ತರುವ ನೆನಪುಗಳು ಅಸ್ಟೆ,ಮನವ ತಣಿಸುತ್ತವೆ.ಬಾಲ್ಯದಲೆಲ್ಲೋ ಮಳೆಯಲಿ ನೆಂದು ಸಂತಸದಿ ತೊಯ್ದಾಡಿದ ದಿನಗಳು,ಮೊದಲ ಭಾರಿ ಒಟ್ಟಿಗೆ ಮಳೆಯಲಿ ನೆನೆದ ಪ್ರೇಮಿಗಳ ಆ ಮಧುರ ಕ್ಷಣಗಳು,ಜಡಿ ಮಳೆಯಲಿ ಕೊಚ್ಚಿ ಹೋದ ರೈತನ ಪಸಲು, ಬಿರುಮಳೆಯಲಿ ಕುಸಿದು ಬಿದ್ದ ಬಡವನ ಮನೆಯ ಛಾವಣಿ ಹೀಗೆ ಯಾವುದಾದರೊಂದು ನೆನಪಿನೊಂದಿಗೆ ಜಂಟಿಯಾಗಿರುವ ಮಳೆ, ವರುಷ ವರುಷವು ನೋವಿನ-ನಲಿವಿನ ನೆನಪಿನ ಹೊಳೆಯ ಹರಿಸದೇ ಬಿಡದು.ಕೇರಳದ ಗಡಿಗೆ ಅಂಟಿಕೊಂಡಿರುವ H.D.ಕೋಟೆಯಲಿರುವ ದಿನಗಳಲಿ ನಮ್ಮ ಸಮಯವನೆಲ್ಲ ನೀರಸವಾಗಿ ನೀರಿನಲಿ ತೊಯ್ದಂತೆ ಎಡಬಿಡದೆ ಸುರಿಯುತ್ತಿದ್ದ ಮಳೆಯನು ಶಪಿಸಿದ್ದು ಇದೆಯಾದರೂ ಸ್ನೇಹಿತರೆ, ಎಲ್ಲ ಎಲ್ಲೆಯನು ಮೀರಿ ತನ್ನ ಪಾಡಿಗೆ ತಾನು ಸುರಿದು ಸರಿವ ಮಳೆಯ ಲಕ್ಷಣವೇ ನನಗಿಸ್ಟ್ಟವಾಗಿ ಕಾಡೋದು. ನಮ್ಮ ನಮ್ಮ ನಡುವಿನ ಅಂತಹ ಎಲ್ಲೆಗಳನು ಮೀರಿ, ಸುರಿವ ಜಡಿಮಳೆಯಲೊಮ್ಮೆ,ಮತ್ತೊಮ್ಮೆ ನೆನೆದು ನೆಲ್ಮೆಯ ಸಂಗಾತಿಯೊಡನೆ ಪಿಸುಗುಡುತ್ತಾ...ಭಾವಲೋಕದಲಿ ಮೆಲ್ಲ ಮೆಲ್ಲನೆ ವಿರಮಿಸೋಣ ಬನ್ನಿ..
ಮಳೆಯ ಪುಳಕ...

ಮೋಡದ ಒಡಲು ಹೊಡೆಯಿತು ಹನಿಗಳ
ಭಾರವ ತಾಳದೇ; ಹನಿಯು ಕೆಳಗಿಳಿಯಿತು
ಬುವಿಯ ಪ್ರೇಮ ಗುರುತ್ವಕೆ ಸೋತು.

ಕಾದ ಬುವಿಯು ಪುಳಕಿತು
ಹನಿಯ ಅಮೃತ ಸ್ಪರ್ಶದಿ
ಜೀವ ಪಡೆದು ಚಿಗುರೊಡೆಯಿತು
ಭುವನದ ವನರಾಶಿ ಹಸಿರ ಚಿಗುರ
ವನರಾಶಿ ಮತ್ತೆ ಕರೆಯಿತು ಮಳೆಯ
ಪ್ರೇಮದಿ ಹನಿಯಾಗಿ ಧರೆಗೆ ಇಳೆಯೆಂದು.


ಇಳಿಯಿತು ಮಳೆಯೂ,
ಹರಿಯಿತು ಪಸರಿಸಿತು ಜೀವಕಳೆಯ
ಸೊಬಗ ಧರೆಯ ತುಂಬೆಲ್ಲ:
ಹಸುರಾಯಿತು ಹೊಲ,ಗದ್ದೆ,
ಬನವೆಲ್ಲ ಮಳೆಯ
ಜೀವಸ್ಪರ್ಶದಿ.....

Wednesday, July 15, 2009

ತುಂಬಿ ತುಳುಕುವ ನರುಗಂಪ....


ಕಂಡಿಹೇನು ನಾ ಆ ಕಂಗಳಲಿ
ತುಂಬಿ ತುಳುಕುವ ನರುಗಂಪ
ಸೋತು ಸೊಕಲು ಕೈಗಳು
ಆ ಕಣ್ಣ ಸಂಭಂದದ
ಆಪಾದನೆ ಮಾಡದಿರಿ,
ಅರಿಯಲಷ್ಟೆ ಆತ್ಮವು
ಅನುಭವದ ಸಂತುಷ್ಟವ,
ಉಳಿಸಿ ಪ್ರೀತಿಯ ಪ್ರೀತಿಯಾಗೇ
ಆಪಾದಿಸದಿರಿ ಸಂಭಂದದ
ಲೇಪವ ಪ್ರೀತಿಗೆ....(ಗುಲ್ಜ್ಯಾರ್ )


ಕಳೆದ ವಾರ ಹೀಗೆ ಇಂಗ್ಲಿಷ್ ಪತ್ರಿಕೆ ಓದುತ್ತಿದ್ದವನ ಕಣ್ಣಿಗೆ ಬಿದ್ದದ್ದು ಗುಲ್ಜ್ಯಾರ್ ಕವಿಯ ಯಾವುದೋ ಹಳೆಯ ಹಿಂದಿ ಚಿತ್ರದ ಹಾಡಿನ ಕೆಲ ಸಾಲುಗಳು. ಪ್ರೇಯಸಿಯಡೆಗೆ ತನ್ನೆದೆಯಲಿ ಹುದುಗಿರುವ ತಿಳಿ ಪ್ರೇಮದ ಭಾವವನು ನಿವೇದಿಸುವ ಸಾಲುಗಳಲಿನ ಚಮತ್ಕಾರಕೆ ಸೋತು,ಆ ಕ್ಷಣದಲೇ ನನ್ನ ಅರಿವಿಗೆ ಬಂದಂತೆ ಆ ಸಾಲುಗಳನು ಕನ್ನಡಕೆ ಭಾಷಾಂತರಿಸಿದೆ.
ನನಗೆ ಆಪ್ತವಾದದೆ ಆ ಭಾವಲಹರಿಯನು ಹರಿಯ ಬಿಟ್ಟ ಕವಿಯ ಭಾಷೆಯ ಹಸಿ ಹಸಿ ನವಿರುತನ. ಬಹುಶಃ ನಲವತ್ತು ವರುಷಗಳ ಹಳೆಯ ಹಾಡಿನಲ್ಲಿ ಇಂದಿಗೂ ನನ್ನಂತವನಿಗೆ ಸಿಗುವ ಮನವನು ತಣಿಸುವ ಆ ಲಯ ಸಂಚಲನಕೆ ಕವಿಗೆ ವಂದಿಸಬೇಕೆನಿಸುತ್ತದೆ.


ಕಳೆದ ಕೆಲದಿನಗಳಿಂದ ಹಾಗೇ ಮನಸಿಗೆ ಹತ್ತಿರವಾದ ಕೆಲವು ಹಿಂದಿ ಶಾಯರಿಗಳನು ಸುಮ್ಮನೆ ಕುಳಿತಾಗಲೆಲ್ಲ ಕನ್ನಡದ ಭಾವರೂಪ ಕೊಟ್ಟಿದ್ದೇನೆ. ಹಿಂದಿ ಭಾಷೆಯ ಸುಲಲಿತತೆಗೆ ಒಗ್ಗಿದಸ್ತ್ಟು ನರಗಂಪುತನ ಕನ್ನಡದ ಗಜಲ್,ಶಾಯರಿಗಳಿಗೆ ಒದಗಿಲ್ಲವಾದರು, ಶಾಂತರಸ ಹಾಗೂ ಇತ್ತೀಚಿನ ಚಿದಾನಂದ ಸಾಲಿಯವರ ಗಜಲುಗಳಲಿ ನೀವು ಆ ತೀವ್ರತೆಯನು ಕಾಣಬಹುದು.ಪ್ರೀತಿ,ಪ್ರೇಮ ವಿರಹವನು ನಮ್ಮಯ ಭಾವಲೋಕದಲಿ ಅನುರಣಿಸುವ ಗಜಲ್, ಶಾಯರಿಗಳ ಗಮ್ಮತ್ತು ಅರಿತವರಿಗೆ ಅವು ನೀಡುವ ಮುದವನು ಮರೆಯಲು ಸಾದ್ಯವೇ ಇಲ್ಲ....ನಾನು ಭಾವರೂಪ ಕೊಟ್ಟಿರುವ ಈ ಸಾಲುಗಳು ನಿಮ್ಮ ಮನವನು ತಣಿಸಿದರೆ ಸಾಕಲ್ಲವೇ....

1
ಸಾಗರದ ತಳಮಳ ನಿನ್ನ ಕಣ್ಣೋಟ;
ಉಲ್ಲಾಸದ ಓಲಗ ನಿನ್ನ ಕಣ್ಣೋಟ;
ವಯ್ಯಾರ ತುಂಬಿದ ನೇರಳೆ ಹಣ್ಣು
ನಿನ್ನ ಕಣ್ಣೋಟ;
ಕಸಿದುಕೊಳ್ಳಲಿ ನನ್ನ ಪ್ರಾಣವ
ನಿನ್ನ ಕಣ್ಣೋಟ!

2
ಮುಸ್ಸಂಜೆಯ ತೇವ ಕಂಗಳಲಿ,
ಜಾರುತಿಹುದು ಇರುಳ ಕ್ಷಣ ಕ್ಷಣವೂ
ಆ ಕಂಗಳಲಿ,
ಮೋಸದ ಮೋಹಗೊಳಿಸಿ
ತೊರೆದು ಹೋದಳು
ಆದರೂ ಅವಳ ಚಿತ್ರಪಟವಿದೆ
ನನ್ನ ಕಂಗಳಲಿ.

Monday, July 13, 2009


ಕರೆದದ್ದು ಮದುವೆಗೆ, ನಾ ಹೋದದ್ದು ಶವಯಾತ್ರೆಗೆ.......


ಬದುಕಲಿ ಜರುಗುವ ಆಕಸ್ಮಿಕ ಘಟನೆಗಳು ಕೆಲವೊಮ್ಮೆ ಜೀವನವಿಡಿ ಕಹಿ ನೆನಪಾಗಿ ಉಳಿದುಬಿಡುತ್ತವೆ. ಹೆಚ್. ಡಿ.ಕೋಟೆಯಲಿ ಉಪನ್ಯಾಸಕನಾಗಿದ್ದಾಗ ನನ್ನ ರೂಮ್ನಲ್ಲಿ ಜೊತೆಗಿದ್ದ p t teacher ದೀನೇಶ ವಯೋಮಾನದಲಿ ನನಗಿಂತ ಹಿರಿಯನಾದರೂ,ಭಿನ್ನಾಭಿಪ್ರಯವಿಲ್ಲದೆ ಯಾವುದೇ ರೀತಿಯ ಇರಸು-ಮುರುಸಿಲ್ಲದೆ ನಮ್ಮ ಕೆಲಸಗಳನ್ನು ತಾನೇ ಮಾಡುತ್ತ,ಸುಮ್ಮನೆ ಬಿಟ್ಟರೆ ತೋಚಿದ್ದು ಹರಟುತ್ತ ಕಾಲ ಕಳೆಯುತ್ತಿದ್ದ ಗೆಳೆಯ.

ಹಾಗೆಯೇ ಏಳೆಂಟು ತಿಂಗಳುಗಳು ಕಳೆದ ನಂತರ ಅವನ ಮದುವೆ ಗೊತ್ತಾಗಿ ನಮ್ಮನೆಲ್ಲ ಆಹ್ವಾನಿಸಿದ.೩೨ ವರುಷದವನಾಗಿದ್ದ ದಿನೇಶನ ಜೀವನದಲಿ ಜರುಗಬೇಕಾದದ್ದು ಅದೊಂದ್ದೆ ಸಂಭ್ರಮ. ಮೈಸೂರಿನಿಂದ ಹೊರಗಡೆ ಉರಿನಲ್ಲಿ ಮದುವೆಯಾದುದರಿಂದ
ಯಾವುದೋ ಕುಂಟು ನೆಪ ಹೇಳಿ ಮದುವೆಗೆ ಹೋಗದೆ ಉಳಿದೆ. ಹಾಗಾಗಿ ಸಮಯ ಸಿಕ್ಕಾಗಲೆಲ್ಲ 'ನನ್ನ ಮದುವೆಗೆ ಬರದವರು ನೀವೆಂತ ಸ್ನೇಹಿತರು' ಎಂದು ಚೆಡುಸುತ್ತಲೇ ಇದ್ದ.

ಮದುವೆಯ ಓಡಾಟಗಳೆಲ್ಲ ಮುಗಿದು ಮತ್ತೆ ನಮ್ಮೊಂದಿಗೆ ಇರುವ ದಿನಗಳಲಿ ವಾರಕೊಮ್ಮೆ ಊರಿಗೆ ಹೋಗಿಬರುತ್ತಿದ್ದ ಅವನಲ್ಲಿ ನಡೆದಿರಬಹುದಾದ ರಾಸಲೀಲೆಗಳ ಬಗ್ಗೆ ಕುಚೋದ್ಯ ಮಾಡುತ್ತಿದ್ದೆವು.ದಾಂಪತ್ಯದ ಸಹಜಕ್ರಿಯೆಯಂತೆ ತಾನು ತಂದೆಯಾಗುತ್ತಿದ್ದುದನ್ನು ಗರ್ವದಿಂದ ವಿವರಿಸುತ್ತ, ತನಗೆ ತನ್ನಂತಹದ್ದೇ ಗಂಡುಮಗುವೇ ಆಗುತ್ತದೆಂದು ಎಲ್ಲರೆದುರು ಭವಿಷ್ಯ ನುಡಿಯುತ್ತಿದ್ದ.

ಆದರೆ ಅದ್ಯಾವ ದುರ್ವಿಧಿಯೋ ಆ ತಾಯಿಯದು, ಏಳು ತಿಂಗಳಿನ ತುಂಬು ಗರ್ಭಿಣಿಯ ಹೊಟ್ಟೆಯಲಿ ಮಗು ಅಡ್ಡಡ್ಡ ತಿರುಗಿ ಉಸಿರುಗಟ್ಟಿದಂತಾಗಿ ಆಕೆ ತೀರಿಕೊಂಡಳೆಂಬ ಸುದ್ದಿ ಕೇಳಿ ತಡೆಯಲಾಗದ ವೇದನೆ ಆವರಿಸಿತು.
ನೆವ ಹೂಡಿ ಸಂತಸದ ಕ್ಷಣಗಳಿಂದ ದೂರ ಉಳಿದಿದ್ದ ನಾನು ಆಕೆಯ ಶವಯಾತ್ರೆಯಲಿ ದುಖತಪ್ತನಾಗಿ,ನೋವಿನಲಿ ಕಂಬನಿಗರೆದು ಬಂದಿದ್ದೆ. ಅದಾದ ಕೆಲದಿನ ಬದುಕಿನ ಒಂಟಿತನ ಎಡಬಿಡದೆ ನನ್ನನ್ನು ಕಾಡಿತ್ತು.


ಬದುಕೆಂಬ ಒಂಟಿತನ


ಜೀವನ ಪಯಣದಲಿ ಸಾಂಗತ್ಯದ ಅರಿವಾಗಿ,
ಏಕಾಂತದ ಬದುಕು ಸಂಗಾತಿಯ ಬೆಚ್ಚನೆ
ಪ್ರೀತಿಯಲಿ ಅಸುನೀಗಿತ್ತು.ಭಾವನೆಗಳ ಅನುರಾಗ ಮೂಡಿ
ಜೀವನ ಒಲವ ಉಯ್ಯಾಲೆಯ ಜೋಕಾಲಿ.


ಪಯಣದ ಏರಿಳಿತಗಳಲಿ ಸಹಧರ್ಮಿಣಿಯಾಗಿ
ಜೊತೆಗಿರುವೆನು ಅನಂತಯಾನದ ದಿಗಂತದ
ವರಗೆ ಎನುವ ನಿನ್ನ ಭರವಸೆಗಳೇ ನವಚೇತನದ
ಹುರುಪನು ತುಂಬಿ ಜೀವನರಥದ ಗಾಲಿಯನು
ಮುನ್ನಡೆಸುತ್ತಿತ್ತು.


ಹೊಸ ತಿರುವಿನ ಆ ಪಯಣಕೆ ನಾಂದಿಯ ಹಾಡಿ
ಸಹಬಾಳ್ವೆಯ ರುಚಿಯನು ಉಣಿಸಿ ಪ್ರೀತಿ,
ಪ್ರೇಮದ ಕಡಲಲಿ ನನ್ನ ದಾಹವನು ನೀಗಿಸುತ್ತ
ನೀ, ನಮ್ಮ ಪ್ರೇಮದ ಕುರುಹನು ನನಗೆ ಜೀವಮಾನದ
ಕೊಡುಗೆಯಾಗಿ ನೀಡುತ್ತೇನೆಂದು ತರ
ಹೋದವಳು ಹಿಂತಿರುಗಿ ಬರಲೇ ಇಲ್ಲವಲ್ಲೇ?


ಅರಿವಾಹಿತು ಎಲ್ಲವು ಯಕಶ್ಚಿತವೆಂದು,
ಆದರೂ ನಿನ್ನ ನೆನಪನು ಹೊತ್ತುಕೊಂಡು ಬಾನಂಗಳದ
ನೀರವತೆಯಲಿ ಹಾರಡುತಿರುವೆನು
ವಲಸೆ ಹೋಗುವ ಹಕ್ಕಿಯಂತೆ
ಕಾಣದ ನಿನ್ನ ನಿಕ್ಷೇಪವನು ಹುಡುಕುತ..

Friday, July 10, 2009
ಮೈಸೂರಿನಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ಕೋಮು ಗಲಭೆ ಎಂತವರನ್ನೂ ಕಲಕದೇ ಇರಲಾರದು.

"ಧರ್ಮ ಅಫೀಮು ಇದ್ದಂತೆ"ಎಂದಿದ್ದ ಕಾರ್ಲ್ ಮಾರ್ಕ್ಸ್. ಧರ್ಮಾಂದತೆ ಅಫಿಮಿಗಿಂತಲೂ ಭೀಕರವಾದ ಪರಿಣಾಮ ಬೀರುತ್ತಿದೆ. ಧರ್ಮಾಂದತೆಅಮಲಿನಲಿ, 'ಮಾನವೀಯತೆಯನು' ಬೂದಿಯಾಗಿಸುತಿಹ ಜನರೇ ತಮ್ಮ ತಮ್ಮ ದಾರುಣ ಕಥೆಯ ಸಾವು -ನೋವು ಬಿಂಬಿಸುವ ಪಾತ್ರಧಾರಿಗಳಾಗುತ್ತಿದ್ದಾರೆ. ಮಾನವ ಮಾನವನ ಜೀವವನೆ ಆಹುತಿ ಪಡೆಯುತಿಹ ಧರ್ಮವಿಂದು ಮನುಜ ಮತವನ್ನೇ ಮರೆಮಾಸುತ್ತಿದೆ. ಇಂತಹ ಯೋಚನಾ ಲಹರಿಯಲಿ ಮೂಡಿಬಂದ ಕವನವಿದು ; "ಮನುಜನಿಲ್ಲ".


ಮನುಜನಿಲ್ಲ!!

ಕಳೆದು ಹೋಗಿದ್ದಾನೆ
ಮನುಜ ಜಗದಲಿಂದು
ಸಿಗುವರು ಕೇವಲ ಹಿಂದೂ,
ಕ್ರೈಸ್ತ,ಮುಸಲ್ಮಾನ ರಸ್ಟ್ಟೆ
ನಮ್ಮೊಳಗಿಂದು.


ಪ್ರೀತಿ,ಪ್ರೇಮ,ಸಹಕಾರದ
ಸಹಬಾಳ್ವೆ ಇಲ್ಲ!
ಇಹುದು ಕೇವಲ
ಗುಡಿ,ಚರ್ಚು,ಮಸೀದಿಗಳು
ನಮ್ಮೊಡನೆ ಇಂದು.


ಗಂಟೆ, ಗೋಪುರ, ಗುಂಬಜ,
ಶಿಲುಬೆಗಳ ನಾಡಿನಲಿ
ಉಸಿರುಗಟ್ಟಿ ಪರಿತಪಿಸಿ
ಸತ್ಹಿದೆ ಮಾನವತೆಯು!
ಗುಡಿ,ಚರ್ಚು, ಮಸಿದಿಗಳಲಿ
ಮನಃ ಶಾಂತಿಗೆ ಪ್ರಾರ್ಥಿಸಿ
ಫಲವೇನು? ಹತವಾಗಿದೆ
ಮಾನವೀಯ ಧರ್ಮವಿಂದು
ಓ ಧರ್ಮಾಂದರೆ!!

ಎಚ್.ಎನ್.ಈಶಕುಮಾರ್

Thursday, July 9, 2009

ಪ್ರೀತಿ ಮತ್ತು ಒಂಟಿ ಹಕ್ಕಿ....


ಎಲ್ಲೋ ಬೆಟ್ಟದ ತಪ್ಪಲಿಂದ ನುಸುಳಿಬಂದ
ತಿಳಿಗಾಳಿ ಸುಯ್ಯೆಂದು ಮರೆತ ಮಧುರತೆಯ
ಮನದಲಿ ತುಳುಕಿಸಲುಬೆಟ್ಟದ
ತುದಿಯಲಿ ಒಂಟಿಹಕ್ಕಿಗೆಮುಸ್ಸಂಜೆಯ
ಮಬ್ಬಿನಲಿ ತನ್ನ ಸಂಗಾತಿಯ
ಬಿಸಿಯುಸಿರಿನ ಉನ್ಮಾದದ ನೆನಪು ಕಾಡಲು
ತಂಗಾಳಿಯ ತಂಪಲು ಹಕ್ಕಿಗೆ
ಕಣ್ಣಿರ ಒರತೆ.ಬೆಚ್ಚನೆ ಭಾವದಮೋಹದ ಕಿಚ್ಚಲಿ
ಒಂದೇ ಗೂಡಿನ ನಂಟಿನರಮನೆಯಲಿ
ಜಗದ ಆಗು-ಹೋಗುಗಳಿಗೆ ಕದವ ಮುಚ್ಚಿ
ಉಸಿರು-ಉಸಿರಲೆಪ್ರೀತಿಯ ಉಂಡು
ಕಾಲವ ಮರೆತ ಹಕ್ಕಿಗಳ ನಡುವಿಂದು
'ವಿಷಾದ'
ಬರಡು ಬರಡಾದ ಎದೆಯ ಹಂದರದ
ತುಂಬೆಲ್ಲ ವಿಷಾದದಲೆಗಳು
ಸುಳಿದಾಡುತಿರಲು ಒಂಟಿಹಕ್ಕಿಗೆ
ಹಸಿರೆಲೆಗಳ ಬನವೇ ಬೆಂಗಾಡು.ಹಲವು ಆರಂಭ-ಅಂತ್ಯಗಳ
ತೊರೆಗಳೋಳಗೊಂಡ ಅನಂತತೆಯ
ನದಿಯೊಡಲು 'ಜೀವನ'.
ಹಕ್ಕಿಗದೋ ಭಾವ-ಭಾವಗಳುಮಿಂದು
ಜೀವಮಿಡಿದ ಸಾಂಗತ್ಯದ ಅಂತ್ಯವು.
ಮನದ ತುಂಬೆಲ್ಲ ಪ್ರೀತಿ ಪ್ರೇಮದ ಹುಚ್ಚು ಹೊಳೆಯ
ನವೋನ್ವೇಷಣೆಯ ಹಾದಿಯಲಿ ಪೆರಿಸಿಕೊಂಡ
ಸವಿನೆನಪುಗಳ ಸರಮಾಲೆ ಸಾಲದೇನು?
ಕಾಲನ ಜೋಳಿಗೆಯಲಿ ಅಳಿದುಳಿದ
ಜೀವಮಾನವ ಸವೆಸಲು ಹಕ್ಕಿಗೆ;
ಹೊರಡಲು ಪರ್ಯಟನೆಯ ಬದುಕ ದಾರಿಯಲಿ.....?

Tuesday, July 7, 2009

ತೀರವು ನಾ...ತೀರವು ನಾ...

ನದಿಯೊಡಲ ವಿಕ್ಷಿಪ್ತ ನಿನ್ನ ಅಂತರಾಳವು

ನಿಗೂಡ ಒಡಲಿಂದ ಚಿಮ್ಮಿ ಬರುವ

ಒಲವಿನ ಅಲೆಯ ಜೀವಸ್ಪರ್ಷದಲಿ

ರೋಮಾಂಚನವಾಗುತಿಹ ತೀರವು ನಾ.....

ಅಪರಿಮಿತ ಅಲೆಗಳ ಬಡಿತದಲಿ

ನದಿಯೊಡಲತುಮುಲವರಿವ ತವಕದಲಿ ಮೂಡಿದ

ಅವಿನಾಭಾವ ಸಂಭಂದದಲಿ

ಪುಳಕಿತವಾಗುತಿಹ ತೀರವು ನಾ....

ಅಲೆಮಾರಿ

ಪಯಣಿಗನ ಆಲಂಗಿಸುವ
ತವಕದಿ ಮೈಚೆಲ್ಲಿರುವ
ಅಂತ್ಯವಿಲ್ಲದ ಹಾದಿ
ತಬ್ಬುವ ನೆಲೆಯ
ಹುಡುಕಾಟದಲಿ ಕಳೆದುಹೋಗಿರುವ
ಅಲೆಮಾರಿಯು ನಾ........

ದಾರಿ,ಹೆದ್ದಾರಿ,ಕಾಡುಡಾರಿ
ಕಾಲುದಾರಿ;ಗಮ್ಯ ಅಗಮ್ಯ
ಅರಿವಿಲ್ಲದ ಜೀವನದ ದಾರಿ
ಹುಟ್ಟು ಸಾವಿನ ನಡುವೆ
ನಡುದಾರಿಯಲಿ ಅಲೆವ
ಅಲೆಮಾರಿಯು ನಾ...

ಪಥಪಥವೂ ಅನೂಹ್ಯ
ಪಥದಲಿನ ಮತವು ನಿಸ್ಪ್ರುಯ್ಯ
ಯಕಶ್ಚಿತ್ ಜೀವನಪಥದ
ಯಗ್ನಮಾರ್ಗದಲಿ ಅಲೆದು
ಸಾವನು ಆಲಂಗಿಸಿ,ನಿಶ್ಚಲವಾಗಿ
ಕಳೆದುಹೋಗುವ
ಪಯಣಿಗನು ನಾ....

ಈಶಕುಮಾರ್