Saturday, April 23, 2011

ಹೊತ್ತಲ್ಲದ ಹೊತ್ತಿನಲ್ಲಿ...ಕಲಾಂ.

ಯಾವ ಮೌಲ್ಯಯುತ ಹೊಣೆಗಾರಿಕೆಯು ಇಲ್ಲದೆ, ಎಂತಹವರಿಗೂ ಸಹ ಹೊಲಸು ಎನಿಸುವಂತೆ ಸಾಗುತಿದೆ ನಮ್ಮ ಸುತ್ತಲಿನ ರಾಜಕೀಯ ಸನ್ನಿವೇಶಗಳು. ಯಾರಿಗೆ ಯಾರು ಜಾವಬ್ದಾರರಲ್ಲ, ತಮ್ಮ ತಮ್ಮ ಸ್ವಾರ್ಥ ಸಾಧನೆಯೇ ಸಾರ್ವಜನಿಕ ಬದುಕಿನ ಇಂದಿನ ನಾಯಕರ ಒಂದಂಶದ ಕಾರ್ಯಕ್ರಮವಾಗಿದೆ. ರಾಜಕೀಯದ ದೊಂಬರಾಟದ ವಿಪ್ಲವ ನಡೆಯುತಿಹ ಈ ಸಮಯದಲಿ ಓಟು ಕೊಟ್ಟ ಮತದಾರ ತನಗೆ ತಾನು 'ಯಾವುದರಲ್ಲಿ ಹೊಡ್ಕೊಬೇಕೋ' ಅಂತ ಶಪಿಸಿಕೊಂಡು ನೋಡುತ್ತಿದ್ದ ಟಿವಿ ಯನ್ನು ಬಂದ್ ಮಾಡಿ ಅಸಾಹಯಕನಂತೆ ಎದ್ದು ಹೊರಗೆ ಹೋಗುವುದಷ್ಟೇ ಅವನಿಗೆ ಉಳಿದಿರುವ ಏಕ ಮಾತ್ರ ಮಾರ್ಗ.
ಎಲ್ಲ ರಾಜಕೀಯ ಪಕ್ಷದ ವಕ್ತಾರರು ತಮ್ಮಪಕ್ಷ ಮತ್ತು ಪಕ್ಷದ ನಾಯಕರು ನಡೆಸಿದ (ಅ)ನೈತಿಕ ಕಾರ್ಯಗಳನು ಶ್ಲಾಘಿಸುತ, ಟಿವಿ ಚಾನೆಲ್ ಗಳು ಕೊಟ್ಟ ಕಾಲಾವಕಾಶವನ್ನು ಬಳಸಿಕೊಂಡು ಅವರು ಮಾಡಿದ ತಪ್ಪನೆಲ್ಲ ಮುಚ್ಚಿಹಾಕುವ ಸೊಗಲಾಡಿತನದ ಪ್ರಯತ್ನದಲಿ, ಸುಳ್ಳಿನ ಸರಮಾಲೆಯನು ಸತ್ಯವೆನುವಂತೆ ಜನತೆಯ ಮುಂದಿಡುವ ಮಾತಿನ ಚಕಮಕಿಯ ಕಾರ್ಯಕ್ರಮವನು ನೋಡುತ ತಲೆ ಕೆಡಿಸಿಕೊಂಡ ಓಟು ಕೊಟ್ಟ ಪ್ರೇಕ್ಷಕ ಈ ಎಲ್ಲ ಬೆಳವಣಿಗೆಗಳೆಡೆಗೆ ವ್ಯಂಗದ ನಗೆ ನಕ್ಕು, ರಾಜ್ಯದ ನಾಯಕರ ದೊಂಬರಾಟ ನೋಡಿ ಕೆಲಕಾಲ ಯಾರಿಗೂ ಹೇಳಲಾಗದಂತೆ ತಮ್ಮಷ್ಟಕೆ ತಾವೇ ಖುಷಿ ಪಟ್ಟಿದಷ್ಟೇ ಅವರಿಗೆ ಸಿಕ್ಕ ಬಳುವಳಿ ಎಂದು ತಮ್ಮ ನಿತ್ಯದ ಜಂಜಡದಲಿ ಎಲ್ಲವು ಸಾಮಾನ್ಯ ಎನುವಂತೆ ನಿರ್ಲಿಪ್ತತೆ.
ಇವೆಲ್ಲ ಬೇಕು ಬೇಡದ, ಆಗು-ಹೋಗುಗಳ ನಡುವಲ್ಲೇ ಈ ಎಲ್ಲ ರಾಜಕೀಯ ಮೇಲಾಟವನ್ನು ಮರೆಸಿ ನಮ್ಮ ರಾಜಕೀಯ ನಾಯಕರ ನಡುವಳಿಕೆಯನು ಕಡೆಗಣಿಸಿ ನನ್ನ ಆವರಿಸಿದ್ದು ಆ ಮಹಾನ್ ಚೇತನದ ಅಂತಃಶಕ್ತಿ. ಅವರಲ್ಲಿನ ನಿಸ್ವಾರ್ಥ ಸೇವಾ ಮನೋಭಾವ, ದೇಶದ ಬಗ್ಗೆ,ಅವರಲ್ಲಿರುವ ದೂರ ದೃಷ್ಟಿಯ ಆಶಯಗಳು.

ಆ ಪುಸ್ತಕದ ಮುನ್ನುಡಿ- ಹಿನ್ನುಡಿಯಲ್ಲಿರುವ ಸಾಮಾನ್ಯ ವಿಚಾರಗಳು ಸಹ ಇಂದಿನ ರಾಜಕಾರಣಿಗಳೊಂದಿಗೆ ಹೋಲಿಸಿ ನೋಡಲು ಯೋಗ್ಯರಲ್ಲದ ಜನನಾಯಕರ ನಡುವೆಯೇ ಆರು ವರುಷಗಳ ಕಾಲ ದೇಶದ ಪುಟಾಣಿಯಿಂದ ಪ್ರತಿಯೊಬ್ಬನಿಗೂ 'ಮಾದರಿ' ಎನುವಂತೆ ರಾಷ್ಟ್ರದ ಅತ್ಯುನತ್ತ ಹುದ್ದೆಯಲಿದ್ದು ಎಲ್ಲರು ಮೆಚ್ಚುವಂತೆ ಅಧಿಕಾರ ನಡೆಸಿ ಸಾಗಿದ ವಿನಯತೆಯ ಪ್ರತಿರೂಪಕೆ ಸಾಕ್ಷಿಯಾಗಿಹ ಅಸಮಾನ್ಯ ಪುರುಷ ಅಬ್ಧುಲ್ ಕಲಾಂ ರ ಬಗ್ಗೆ ಅವರ ಆಪ್ತ ಕಾರ್ಯದರ್ಶಿ ಯಾಗಿದ್ದ P. M.ನಾಯರ್ ಬರೆದ " ಕಲಾಂ ಎಫೆಕ್ಟ್" KALAAM EFFECT. ಅನ್ನೋ ಪುಸ್ತಕ ನಮ್ಮನ್ನು ಆಲೋಚನೆಗೆ ಹಚ್ಚಿ, ಅವರ ವ್ಯಕ್ತಿತ್ವ ನಮ್ಮ ಆವರಿಸಿದ ಬಗೆಯಂತು ಅಪಾರ.

ರಾಜಕಾರಣದ ಬಗೆಗೆ ಜೀವನದಲ್ಲಿ ತೀವ್ರವಾಗಿ ಯೋಚಿಸದ, ಅದರ ಬಗೆಗೆ ತಮ್ಮ ಕನಿಷ್ಠ ಸಮಯವನು ವ್ಯಹಿಸದ ದೇಶ ಕಂಡ ಸಾಧಕ ವಿಜ್ಞಾನಿಯೊಬ್ಬ ಹುಟ್ಟು ರಾಜಕೀಯ ವ್ಯಕ್ತಿಯು ಬೆರಗಾಗಿ ಮೆಚ್ಚುವಂತೆ ದೇಶದ ಪ್ರಥಮ ಪ್ರಜೆಯಾಗಿ ಅವರು ನಡೆದುಕೊಂಡ ರೀತಿಯೇ ಆಧರಣೀಯ. ರಾಷ್ಟ್ರಪತಿಗಳಿಗೆ ರಾಷ್ಟ್ರಪತಿ ಭವನದಲಿ ಅವರ ದೈನಂದಿನ ಚಟುವಟಿಕೆಗೆ ನೆರವಾಗಲು ಇದ್ದ ಸುಮಾರು ೫೦ ಕ್ಕೂ ಹೆಚ್ಚು ಸಿಬ್ಬಂದ್ದಿ ವರ್ಗದ ಸಂಖ್ಯೆಯನ್ನು ಕೇವಲ ಇಬ್ಬರಿಗೆ ಇಳಿಸಿ ದಶಕಗಳಿಂದ ರೂಢಿಗತವಾಗಿದ್ದ ಶಿಷ್ಟಾಚಾರವನ್ನು ಮುರಿದ ಅವರು ತನಗಾಗಿ ವಿನಾಕಾರಣ 'ಮಾನವ ಸಂಪನ್ಮೂಲ' ದುರ್ಬಳಕೆಯಾಗುವುದು ಉಚಿತವಲ್ಲ ಎಂದು ಸರಳತೆಯ ಮೌಲ್ಯ ಮೆರೆದವರು.
ಬಕ್ರಿದ್ ಹಬ್ಬದ ಸಂಜೆ ರಾಷ್ಟ್ರಪತಿ ಭವನದಲಿ ಇಫ್ತಿಯಾರ್ ಕೂಟವನ್ನು ಏರ್ಪಡಿಸಿ, ಸರ್ಕಾರದ ಮಂತ್ರಿಗಳು, ಅಧಿಕಾರಿಗಳು, ಸಾಧಕರು, ಮೇಲ್ವರ್ಗದ ಪ್ರಜೆಗಳನ್ನು ಕೂಟಕ್ಕೆ ಆಹ್ವಾನಿಸಿ ಅವರಿಗೆ ಔತಣವನ್ನು ನೀಡುವುದು ಭವನದಲಿ ಜರುಗುವ ಎಂದಿನ ಆಚರಣೆ. ಅಂದು ತನ್ನ ಕಾರ್ಯದರ್ಶಿಯಾದ ನಾಯರ್ ನೊಂದಿಗೆ ಚರ್ಚೆ ಮಾಡಿ ಕಾಲಂ ರವರು ' ನೋಡಿ ನಾಯರ್ ಕೂಟಕ್ಕೆ ಆಗಮಿಸುವ ಗೌರವಯುತರೆಲ್ಲ ಮೇಲ್ದರ್ಜೆಯವರಾಗಿದ್ದು ಅವರಿಗೇನು ನಮ್ಮ ಔಪಚಾರಿಕ ಕಾರ್ಯಕ್ರಮದಲ್ಲಿ ಊಟದ ಅವಶ್ಯಕತೆ ಮುಖ್ಯ ಎನಿಸುವುದಿಲ್ಲ, ಆಗಾಗಿ ಔತಣ ಕೂಟಕ್ಕೆ ವಿನಿಯೋಗವಾಗುವ ಮೊತ್ತವನ್ನು ಮತ್ತು ನನ್ನ ವೈಯಕ್ತಿಕ ಖಾತೆಯಿಂದ ಒಂದು ಲಕ್ಷ ರೂಪಾಯಿಯನು ಸೇರಿಸಿ, ಯಾವುದಾದರು ಅನಾಥಾಲಯದ ಮಕ್ಕಳಿಗೆ ಅನುಕೂಲವಾಗುವ ಸಲಕರಣೆಗಳನು ನೀಡಿ' ಎಂದು ಆದೇಶಿಸುತ್ತಾರೆ. ದೀನರ ಬಗ್ಗೆ ಅವರಿಗೆ ಇರುವ ಕಾಳಜಿ ಅವರ ಆದೇಶದ ಹಿಂದಿರುವ ಸಾಮಾಜಿಕ ಕಾಳಜಿಗೆ ಸಾಕ್ಷಿ.

ಗುಲಗಂಜಿಯಷ್ಟು ಪ್ರಾಮಾಣಿಕತೆಯ ಗುಣವನ್ನು ಇಂದಿನ ರಾಜಕಾರಣಿಗಳಲ್ಲಿ ಹುಡುಕಬೇಕಾದ ಸಂದರ್ಭದ ಕಾಲದಲ್ಲಿ ನಾವಿದ್ದೇವೆ. ಸರ್ಕಾರದಲ್ಲಿ ಸಿಕ್ಕುವ ಯಾವುದೇ ಅಡಬಿಟ್ಟಿ ಸೌಲಭ್ಯವನ್ನು ತಮಗೆ ಮಾತ್ರವಲ್ಲ ತಮ್ಮ ಪಿಳಿಗೆಯವಾರಿಗೆಲ್ಲ ಧಾರೆಯೆರೆಯುವ ನಮ್ಮ ಮಂತ್ರಿ ಮಹೋದಯರುಗಳು ತಾನು ಮಾಡುತ್ತಿರುವುದು ದೇಶ ಸೇವೆ ಅದಕ್ಕಾಗಿ ನನಗೆ ನನ್ನ ಮನೆಯವರಿಗೆಲ್ಲ ಈ ಸವಲತ್ತು ಎಂದು ಕೊಂಡು ಮೆರೆಯುವ ನಮ್ಮ ರಾಜಕಾರಣಿಗಳಿಗೆಲ್ಲಿಂದ ಬರಬೇಕು ವಿನಯತೆಯ ವಿವೇಕ. ಕಲಾಂ ರವರು ರಾಷ್ಟ್ರ ಪತಿಗಳಾದ ಕೆಲವು ವರುಷಗಳ ನಂತರ ಅವರ ಸಂಭಂದಿಗಳೆಲ್ಲ ದೆಹಲಿಯ ಪ್ರವಾಸಕ್ಕೆ ಬಂದು ೧೦ ದಿವಸಗಳ ಕಾಲ ರಾಷ್ಟ್ರಪತಿ ಭವನದಲ್ಲೇ ಉಳಿಯುತ್ತಾರೆ. ರಾಷ್ಟ್ರದ ಅಧ್ಯಕ್ಷರ ಸಂಭಂದಿಗಳು ಅಂದ ಮೇಲೆ ಅವರಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬೇಕಾದದ್ದು ರಾಷ್ಟ್ರಪತಿ ಭವನದ ನಿರ್ವಾಹಕ ಮಂಡಳಿಯ ಕರ್ತವ್ಯವೇ ಸರಿ. ಕಲಾಂ ರ ಸಂಭಂದಿಗಳು ತಮ್ಮ ಎಲ್ಲ ಪ್ರವಾಸವನ್ನು ಮುಗಿಸಿ ತಮ್ಮ ಊರಿಗೆ ತೆರಳಿದ ಮೇಲೆ ಅವರುಗಳ ಓಡಾಟಕ್ಕೆ, ಊಟೋಪಚಾರಕ್ಕೆ ಹಾಗೇ ಮತ್ತಿತರ ಸಲಕರಣೆಗಳ ವೆಚ್ಚದ ಲೆಕ್ಕವನ್ನು ಕೇಳಿ ಪಡೆದು ಆರೂವರೆ ಲಕ್ಷ ಮೊತ್ತವನ್ನು ರಾಷ್ಟ್ರಪತಿ ಭವನದ
ನಿರ್ವಾಹಕ ಮಂಡಳಿಗೆ ಭರಿಸುತ್ತಾರೆ. ಅವರ ಈ ನಡುವಳಿಕೆ ಮೈಸೂರು
ದಿವಾನರಾಗಿದ್ದಾಗ ವಿಶ್ವೇಶ್ವರಯ್ಯನವರು ನಡೆಸಿದ ಮಾದರಿಯುತ ಆಡಳಿತದ ವೈಖರಿಯನ್ನು ನೆನೆಸುತ್ತದೆ.

ಶಿಷ್ತಾಚರಕ್ಕಾಗಿಯೇ ಅಲ್ಲದೆ ಬೇರೆ ಯಾವ ಕಾರಣಗಳಿಗೂ ಪಾಲಿಸ ಬೇಕಾದ ಹಲವಾರು ಶಿಸ್ತು ಪಾಲನೆಗಳನು ಮೀರಿ ಮಾನವೀಯತೆಯಾ ಅಂತಃಕರಣ ಮೆರೆಯುವ ಇಂತಹ ಅನೇಕ ಕಲಾಂರ ಗುಣಾವಳಿಗಳಿಗೆ ಸಾಕ್ಷಿಯಾಗಿ, ಅವರ ಆದರ್ಶ ಬದುಕನು ಮೆಚ್ಚಿ ಕಲಾಂರ ಅಪರೂಪದ ವ್ಯಕ್ತಿತ್ವಕ್ಕೆ ವಂದನೆಗೆ ಸಲ್ಲಿಸುವ ರೀತಿಯಲ್ಲಿದೆ, P. M ನಾಯರ್ ಅವರು ಬರೆದ KAALAM EFFECT ಪುಸ್ತಕ ಸಿಕ್ಕಾಗ ಒಮ್ಮೆ ಮನಸೋ ಇಚ್ಚೆ ಓದಿ.