Friday, October 15, 2010

ತೀರ್ಪು










ಕರ್ಫ್ಯೂ ವಿಧಿಸಿದ ಬೀದಿ ಬೀದಿಯಲಿ
ಆತಂಕದ ನಡುವೆ
ರಾಮನ ಜಪತಪ
ಪುರಾಣ ಪುಣ್ಯಕತೆಗಳ
ಕೆದಕಿ ಮತ್ತೆ ಮುಂದಿಟ್ಟ
ತ್ರೇತಾ ಯುಗದ
ನಂಬುಕೆಯ ಕಗ್ಗಂಟು.
ಬಿಡಿಸಲಾಗದ ಮಹಾಪುರುಷರದಷ್ಟೇ
ವಾದ ಅಪ್ಪ ಹೇಳಿದ ಕಥೆಯಲಿ
ರಾಮನುಟ್ಟಿದ 'ಅಯೋಧ್ಯೆಯಲಿ'.

ತಂದೆಗೆ ತಕ್ಕ ಮಗ 'ರಾಮ'
ಬಿಟ್ಟು ನಡೆದ ಕಾಡಿಗೆ 'ರಾಜ್ಯವ'
ಮರ್ಯಾದ ಪುರುಷೋತ್ತಮ 'ಶ್ರೀರಾಮ'
ಅಟ್ಟಿದ ಕಾಡಿಗೆ ಮಡದಿಯ
ಒಡ್ಡಿದ ಅಗ್ನಿಗೆ ತನ್ನೊಡತಿಯ
'ನಿಷ್ಕರುಣಿ' ರಾಮ.

ಸೀತೆಯುಂಡ ನೋವಲಿ ಅವನಾದ
ಏಕಪತ್ನಿವ್ರತನು ರಾರಾಜಿಸುತಿಹ
ಇಂದಿಗೂ ಪ್ರತಿ ಪತ್ನಿಯರೆದೆಯಲಿ
ಪತಿಯ ಮೇಲಿಹ ದೈವತ್ವದ
'ಸರ್ವನಾಮ'ವಾಗಿ
ಸರ್ವಾಂತರ್ಯಾಮಿಯಾಗಿಹ ರಾಮನನು
ಪವಿತ್ರ ಜನ್ಮಸ್ಥಳವೆಂಬ
ಕುರುಡು ನಂಬಿಕೆಯಲಿ
ಅಯೋಧ್ಯೆಯ ಗರ್ಭಗುಡಿಯ
ಕತ್ತಲಲಿ ಕೂಡಿಹುದು ದುರ್ದೈವ
'ಭರತಭೂಮಿಯ' ರಾಮನ.

Tuesday, October 5, 2010

ಮಳೆಯ ಮಾತು..



ಬಿದ್ದ ಬಿರುಮಳೆಯ
ಹನಿ ಹನಿಯೂ ಕೂಡಿ
ಸಿಕ್ಕ ಜಾಡ ಹಿಡಿದು ಓಡುವ ಪರಿ
ಬೋರ್ಗರೆದ ಮಳೆಯ ಮಿಳಿತಕೆ
ಹಸಿಯಾದ ನೆಲದ

ಮೆತ್ತನೆ ಸ್ಪರ್ಶ
ತೊಟ್ಟಿದ್ದ ಪಾದಕಷ್ಟೆ,
ಪಚ ಪಚನೆ ತುಳಿದ
ಮೆದುನೆಲದಲಿ
ಕೆಂಪನೆ ನೀರ ಬುಗ್ಗೆ
ಕ್ಷಣಕೆ ಒಡೆಯಲು
ಕಿತ್ತ ಹೆಜ್ಜೆಗುರುತಲಿ
ಮೂಡುವ ಚಿತ್ತಾರ
ಕಣ್ಣಳತೆಗೆ ಸಿಗದೆ ಜಾರಲು
ಹಸಿರೆಲೆಯ ಮೈ ಸೊಕಿಸಿ
ಜೋತು ಬಿದ್ದು ನೆಲಕೆ ಜಾರುವ

ಹನಿಯಲುಳಿವ ನವಿರು
ಮುತ್ತಿಕ್ಕಿ ಮಣ್ಣ ಸುಳಿದಾಡುವ
ಕಂಪು, ಬೆಟ್ಟದ ಒಡಲಲಿಳಿದ

ಮರವೆಲ್ಲ ತೊಳೆದ ಮೈಯ
ಗಾಳಿಗೊಡ್ಡಿ ತೊನೆಯಲು
ಹಸಿರ ಬೆಟ್ಟವೇ ಅತ್ತಿತ್ತ

ಸುಯ್ಯುವ ಹಾಗೇ
ಕಣ್ತುಂಬಿ ಬಂದ ಹೊತ್ತಲಿ
ಉಸಿರ ಎಳೆದು ಬಿಡುವ

ನಿಟ್ಟುಸಿರ ನಡುವಲಿ ಸಾಗುತಲಿತ್ತು
ಭಾರದ ಹೆಜ್ಜೆಯ ಲೆಕ್ಕಾಚಾರ
ಮನದಿ...