Sunday, January 31, 2010

ಸಾರ್ವಭೌಮ...ಗಣತಂತ್ರ

ಸಾರ್ವಭೌಮ...ಗಣತಂತ್ರ

ಸಾರ್ವಭೌಮ ಸ್ವತಂತ್ರ ಗಣರಾಜ್ಯ
'ಭಾರತ'ದಲಿಂದು ಪ್ರಜೆಯ ಅಳಲು
ಕೇಳಲು ಕಿವಿಯಲಿ ಡಮ ಡಮ ಡಂಗುರ.
ಸರ್ವ ಸ್ವತಂತ್ರ ಬರಿಯ ಕನಸು,
ಆಲಿಸಲಷ್ಟೆ 'ಸ್ವತಂತ್ರ'ವೆನುವ ಮಾತು
ಕಲ್ಪನೆಗೂ ಸಿಗದು, ಕನಸಿಗೂ ಬಾರದೂ
ಸ್ವತಂತ್ರದ ಸವಿಯ ಮುಕ್ತ ಭಾವವೂ.

ಕೋಟಿ ಕೋಟಿ ಮಾತುಗಳ ಸುರಿಮಳೆಯು
ಕೆಂಪು ಕೋಟೆಯ ಮೇಲೆ,ಸ್ವಚ್ಛಂದ ಚಂದದ
ತಿರಂಗದ ಬುಡದಲಿ 'ಗುಂಡಿನ ಭಯಕೆ'
ಗಾಜಿನ ತಡೆಗೋಡೆ ಯೊಳಗೆ ಮೊರೆವುದು
ಸರ್ವ ಸ್ವಂತಂತ್ರ ರಾಷ್ಟ್ರದ ಅಧಿಪತಿಯ
ಭಾಷಣವು, ಮತ್ತೆ ಮತ್ತದೇ ಘನ ಸರ್ಕಾರದ
ಒಣ ಮಾತಿನ ಪಲ್ಲವಿ ಮೊಳಗುವುದು
ಉದ್ದಕೂ, ಗತ -ವಾಸ್ತವಗಳು ಮೇಳೈಸಿದ
ವೈಭವೊತ್ಪ್ರೆಕ್ಷೆಗಳ ಕೇಳುವ ಸೋಜಿಗ
ಹರಸಿ ಬರುವುದು ವರುಷ ವರುಷಗಳ
ಲೆಕ್ಕವನಿಡುತ ದೇಶದ ಹರುಷ.
ಆ ಕಿಚ್ಚಲಿ ಮರೆವೆನು
ಕೋಟೆ-ಕೊತ್ತಲೆಗಳ
ಎಲ್ಲೆಯ ಮೀರಿ ಹಾರುವ
ಹಕ್ಕಿಯ ಸ್ವಚ್ಛಂದ ಸ್ವಾತಂತ್ರವ...

Thursday, January 21, 2010

ನಿಮಿತ್ತ...
ನಿಮಿತ್ತ...ಬಿಡಿ
ಬಿಡಿ ಚಿತ್ರಗಳ ಹೂರಣ
ಕಾಣುವ ಕನಸುಗಳ ಹಿಂದೆ
ಅಸ್ಪಷ್ಟ ಹೆಜ್ಜೆಗಳನಿಡುತ ನೆರೆ ಹೊರಟ
ಭಾವಗಳ ಹರಿವು ವಯ್ಯಾರ...
ಕನಸು-ನನಸುಗಳ ನಡುವಿನ್ನು
ಸವೆಯದ ಸುಮಧುರ ಸಂಭಂದ ಮಾಲೆ

ಕಂಡರೂ ಕಾಣದು ಒಲವಿನ
ನಿಲುವುಗನ್ನಡಿಯಲಿ ನಿನ್ನ ರೂಪ
ಅರಿವಿಗೆ ಬಂದರು ಬಾರದು ಬದುಕಿನ
ನಾನಾ ರೂಪ ನನ್ನದೇ ಅನುಭವದ ನಿಲುವಲ್ಲಿ.
ಮೋಹನ ಮುರಳಿಯ ಕರೆಗೆ ಕಾದೆ
ಕಾದುದಷ್ಟೆ ಬದುಕು, ಅರಿವಾಗದು
ತೀರ-ತೀರಗಳ ನಡುವಿನ ದೂರದಯಾನ.

ಯಾತಕೋ ಚಿಂತಾಕ್ರಾಂತ, ಮತ್ತ್ಯಾಕೋ
ಮಮ್ಮಲ ಮರುಕ, ಅದೇಕೋ ಆತಂಕ
ಮತ್ತೊಮ್ಮೆ ನಿರಾಳ, ಅನುದಿನದ ಅನುಭವಗಳ
ನದಿಯ ಹರಿವಿಗೆ ಒಡಲೊಡ್ಡುವ
ಮಹಾಶರಧಿ ನೀನು, ನಿನ್ನೆಡೆಗಿನ ಮೋಹಕೆ
ಮರುಳಾಗಿ ನನ್ನ ಬದುಕನ್ನೇ ನೀಗಿಕೊಳ್ಳುವ
ನಿಮಿತ್ತ ಸಾಗಿಹ ಚರವೂ ನಾ....

Saturday, January 9, 2010

ಅಲೆಮಾರಿಯ ಚಿತ್ತ...


ದಾರಿ,ಹೆದ್ದಾರಿ,ಕಾಡುಡಾರಿ
ಕಾಲುದಾರಿ;ಗಮ್ಯ ಅಗಮ್ಯ
ಅರಿವಿಲ್ಲದ ಜೀವನದ ದಾರಿ
ಹುಟ್ಟು ಸಾವಿನ ನಡುವೆ
ನಡುದಾರಿಯಲಿ ಅಲೆವ
ಅಲೆಮಾರಿಯು ನಾ...
ದಿನದ ದಿನಚರಿಯಲಿ ಮತ್ತೆ ಮತ್ತೆ ಮೂಡಿಬರುವ ಕ್ಯಾಸೆಟ್ಟಿನ ಅದೇ ಹಾಡಿನಂತೆ,ಮನಸು ಕಡು ಬೇಸಿಗೆ ಕಾಲದ ಮರುಭೂಮಿಯ ನೀರವ ಜಾಡಿನಂತಾಗಿತ್ತು. ಹಾಳು ಹಂಪೆಯನು ಕಂಡು ಮನ ಮರುಭೂಮಿಯ ಅಂತರಾಳದಿಂದ ಚಿಮ್ಮುವ ನೀರಿನ ಸಿಂಚನವಾದಂತಾಯಿತು. ದಿನ ಕಳೆದಂತೆ ಜೀವನ ಸುಬ್ಬಲಕ್ಷ್ಮಿಯ ಬೆಳಗಿನ ಜಾವದ ಸುಪ್ರಭಾತದಂತೆ, ಒಂದೇ ರಾಗದಂತೆ, ಏಕಾಂಗಿತನ ಕಾಡುತ್ತವೆ. ಎಲ್ಲಾದರೂ ಕಳೆದು ಹೋಗಬೇಕು,ದಿನದ ಮಾಮೂಲು ಕೆಲಸಗಳು ನೆನಪಿಗೆ ಬರಬಾರದು ಅಂತಕಡೆಗೆ, ಕಾಣದ ಊರಿಗೆ, ಕಾಣದ ಜನರೊಂದಿಗೆ ಬೆರೆತು ಕೆಲದಿನಗಳು ಕಳೆದು ಹೋಗಬೇಕು. ಮೊದಲ ಬಾರಿಗೆ ಆಕಳನ್ನು ಬಿಟ್ಟು ಜಿಗಿಯುತ್ತ ಮೇವನ್ನು ಹುಡುಕಿಕೊಂಡು ಹೋದ ಕರು ಹೊಟ್ಟೆ ತುಂಬಿದ ನಂತರ ತಾಯಿಹಸುವನು ಹೊಸದಾರಿಯಲಿ ಹುಡುಕುತ ಬರುವಂತೆ, ತನ್ನದೇ ಊರನ್ನು,ಕೆಲಸವನು ಮತ್ತೆ ಹೊಸದಾಗಿ ಹುಡುಕಿಕೊಂಡು ಬಂದನೇನೋ ಎಂದೆನಿಸುವಂತೆ ಮನ ಮತ್ತಾವುದೋ ಅರಿವಿಲ್ಲದ ಊರಲ್ಲಿ ಕಾಲಹರಣ ಮಾಡಬೇಕು. ಎಂಬಿಡದೆ, ರಣರಂಗದಲ್ಲಿ ತನ್ನ ಜೀವಿತ ಅವಧಿಯ ಬಹುಕಾಲವನು ಕಳೆದ ವೀರ, ಜೀವನದ ಯಾವುದೋ ಘಳಿಗೆಯಲಿ ಆ ಜಂಜಾಟಗಳಿಂದ ಮೈಮರೆಸಿಕೊಂಡು ದಟ್ಟ ಅರಣ್ಯದ ಗರ್ಭಬೊಳಗೆ ಏಕಾಂತವ ಅನುಭವಿಸಬೇಕು ಎಂದುಕೊಳ್ಳುವಂತೆ, ಸಂಸಾರದ ದೀರ್ಘಯಾನದಲಿ ನರಳಿ ನರಳಿ ಬೇಸೆತ್ತು ಹಿಮಾಲಯದ ಶಿಖರವನೇರಿ ಸನ್ಯಾಸತ್ವವನು ಅನುಸರಿಸತೊಡಗುವಂತೆ, ಋತುಚಕ್ರವೆಲ್ಲವೂ ಸಾಗಿದ ಪಾತ್ರವು ಬೇಸರ ಮೂಡಿ ನದಿ ತನ್ನ ಪಾತ್ರವನು ಬದಲಿಸುವಂತೆ, ತಾಯಿಯ ಪಾಲನೆಯಲಿ ಬೆಸೆತ್ತ ಮರಿಹಕ್ಕಿ, ತಾಯಿ ಹಾಗೂ ಗೂಡನು ತೊರೆದು ತನ್ನ ಜೀವನವನು ಹರಸುತ ಸಾಗುವಂತೆ, ಏಕತಾನತೆಯ ಜೀವನ ಬದಲಾವಣೆಯನು ಬಯಸುತ್ತದೆ. ನಮ್ಮ ಮನಸು ಕೆಲವೊಮ್ಮೆ ಕೆಲ ದಿನಗಳ ಮಟ್ಟಿಗೆ ಬದಲಾವಣೆಯನು, ಕೆಲವು ಶಾಶ್ವತ ಬದಲಾವಣೆಯನು ಬಯಸುತ್ತದೆ.ಬದಲಾವಣೆಯಾ ಹಂಬಲವು ಮನದಲಿ ಮೊಳೆತು ಬೇರೂರ ತೊಡಗುತ್ತದೆ. ಆ ಬದಲಾವಣೆಗಳು ಆ ಕ್ಷಣದ, ಪರಿಸ್ಥಿತಿಗೆ ತಕ್ಕಂತೆ ಮೂಡುತ್ತದೆ. ಅಂತ ಬದಲಾವಣೆಗಳು ಜೀವನದ ಏಕೋಪಾಸನೆಯನು ತಣಿಸುತ್ತ,ಹೊಸತರವಾದ ಅನುಭವಗಳೊಂದಿಗೆ ಮನವನು ಆಹ್ಲಾದಕರವಾದ ಸ್ಥಿತಿಗೆ ಮರಳಿಸುತ್ತದೆ. ಅಪಾರ ದಿನಗಳ ನಂತರ ಬಂದ ಮಳೆಗೆ ಚಿಗಿತು ಕೊಳ್ಳುವ ಗರಿಕೆಯಂತೆ, ಮನ ನವ ಉಲ್ಲಾಸದಲಿ ಚಿಗಿಯ ತೊಡಗುತ್ತದೆ.

ಅಲೆಮಾರಿಯಂತೆ ಅಲೆಯುವುದರಲ್ಲೂ ಒಂದು ರೀತಿಯ ವಿಚಿತ್ರ ಸುಖ ತನ್ನ ಮೂಲ ಸ್ಥಳವನ್ನು ಮರೆತು ಅಲೆವ ದುಂಬಿಯಂತೆ, ಹಕ್ಕಿಯಂತೆ ಅಪರಿಚಿತ ಸ್ಥಳದಲ್ಲಿ ನನ್ನನೇ ನಾನು ಕಳೆದುಕೊಂಡು ಅಲ್ಲಿ ಕಣ್ಣಿಗೆ, ಮನಸಿಗೆ ಸಿಗುವ ಹೊಸತನು ಹುಡುಕಾಡುತ, ಮತಿಯ ಸೂಕ್ಷ್ಮಕೆ ದೊರಕಿದೆಲ್ಲವನು ಪರಿಚಯಿಸಿಕೊಂಡು ಅದರೊಂದಿಗೆ ನೆನಪಿನ ಬುತ್ತಿಯನು ಕಟ್ಟಿಕೊಂಡು ಜೀವಮಾನದಲಿ ಉಳಿದ ಪಯಣವನು ಅಪರಿಮಿತವಾದ ಬಯಕೆಗಳೊಂದಿಗೆ ಕ್ರಮಿಸುತ್ತ ಸಾಗುತ್ತಲೇ ಇರಬೇಕು. ಹಿಂದಿನ ಅನುಭವಗಳು ಮುಂದಿನ ಪಯಣಕೆ ಸ್ಪೂರ್ತಿಯ ತುಂಬಿ ಮುನ್ನಡೆಸುತ್ತಲೇ ಇರಬೇಕು. ಹುಡುಕಾಟದ ತೀವ್ರತೆ ನಮ್ಮನ್ನು ಎತ್ತಲಿಂದ ಎತ್ತಲೋ ಕರೆದೊಯ್ಯುತ್ತಿದ್ದರೆ ಆ ಅಪಾರ ಜನಸಾಗರದಲು
ತಾ ಒಂಟಿ,ತನ್ನದೇ ಬೇರೆ ದಾರಿ,ತನ್ನದೇ ಬೇರೆ ಗುರಿ,ಬೇರೆ ಆಶಯ. ಜೀವನದ ಯಾವ ಗುರಿ ಯಾವ ಆಶಯ ಪೂರ್ಣವಾಗುವುದೋ ಅರಿವಿರದ ಅಲೆಮಾರಿಯ ಅಲೆದಾಟದಲಿ.