ನಸುಕಿನ ನಗುವು..
ನಸುಗತ್ತಲ ನೀರವದಲಿ
ಎದೆಯಾಳದಲಿ ಹುದುಗಿ
ಎಂದೋ ಕಾಡಿದ್ದ ದನಿಯೊಂದು
ಸುಪ್ತವಾಗಿ ಮೇಲೆದ್ದು
ನಿದ್ದೆಯ ಕಣ್ಗಳು
ದನಿಯ ರೂಪವನು
ಕತ್ತಲಲಿ ಹುಡುಕಿ
ಹುಡುಕಿ ಸೋಲುವವು!
ಒಮ್ಮೆಗೆ ಬೇಸೆತ್ತು, ಆರಿದ
ನಿದ್ದೆಯ ಬಾ ಎಂದು ಜಪಿಸಲು
ಬೇಡದ ತುಮುಲ,ತಳಮಳಗಳ
ಜಾಗಟೆ ಮನದಲಿ
ಕತ್ತಲ ಸೌಖ್ಯವು ಸಿಗದೇ
ಕಣ್ಣಲ್ಲೇ ನರಳುವ ಕನಸುಗಳು
ಭಯವ ಹುಟ್ಟಿಸುವವು
ನೀರವದ ಜೊತೆಗೂಡಿ
ಸಲ್ಲಾಪದ ಪಿಸುದನಿ ಒಳಕಿವಿಗೆ
ರಾಚಿ ಸರಿಹೊತ್ತಲಿ ಬೇಡವೆಂದರೂ
ಬಿಡದೇ ಕಾಡಿ ಕಂಗೆಡಿಸುವ
ಬಿಸಿಯುಸಿರಿನ ಮೋಹ
ದೂಡಿ ದೂರ ಸರಿಸಿದರು
ಮನ ಬಯಸುವುದು ಸುಡುವ ತಾಪವ
ಸರಿಹೊತ್ತಲಿ ಕೂಪಕೆ
ದೂಡಿ ನಸುನಗುವ ನೆನಪುಗಳ
ಮಾರಣಹೋಮ
ಧಗಧಗಿಸುತಿರುವ ಮನ
ಮುಂಜಾವಿನ ನಸುಕಿಗೆ ಮಾತ್ರ
ಉಳಿದಿಹ ನಗುವು!