ಸಹಯಾತ್ರಿ
ನಿಮ್ಮೊಂದಿಗಿನ ಹೆಜ್ಜೆ ಗುರುತು.
Sunday, March 31, 2013
ಆಗಂತುಕ ಕನಸುಗಳು..
ಬಯಕೆಯ ಕನಸುಗಳು
ಕಾರ್ಮೋಡ ಕವಿದ ಬದುಕಿಗೇಕೆ
ಬಂದವು ಆಗಂತುಕರಂತೆ
ನಿರ್ಭೀಡೆಯಲಿ; ಒಳಬಂದು
ಬೀರುತಿಹ ದೂರ್ತ ನಗೆಗೆ
ಕದಡಿದ ಮನದಲಿ ಅಸಹಾಯಕತೆಯ
ಅನಂತ ಮೌನ.
ನೋಟದಲೆ ನಿಂತಿಹ ಕನಸುಗಳು
ಇಳಿ ಸಂಜೆಯ ಮಬ್ಬಿನಲಿ
ಮಂಪರಿನ ಹಾಳು ನಿದ್ದೆಯ ಕಂಗೆಡಿಸುತಿಹ
ಕನವರಿಕೆಗಳು, ಅಳಿದುಳಿದಿಹ ಮೋಹವು
ಉರುಳುತಿದೆ ಕಣ್ಣ ಹನಿಯಾಗಿ
ಆಸರೆಗಾಗಿ ಕೈ ಚಾಚಿದೆ ಬದುಕು
ಜಾರುತಿಹ ಜೀವನದಲಿ ಮಡುಗಟ್ಟಿದೆ ಮೌನ.
ಯಾವುದೋ ಅನುಬಂಧಕೆ ಜೋತುಬಿದ್ದ
ನಂಟಿನಲಿ ಅನುಮಾನದ ಎಳೆಗಳು
ಅನುಸಂಧಾನಗೊಳ್ಳದೆ ಅತಂತ್ರವಾಗಿರುವ
ಭಾವಗಳು ಅಲೆದಲೆದು ನಿಂತ್ರಾಣಗೊಂಡ
ಮನದಲಿನ್ನು ಕೊನೆಗಾಣದ ಮೌನ
ಮುಗಿಯದ ಬದುಕು.
Tuesday, December 18, 2012
ಹಾಯ್ಕು !!!!
ಮಂಜು ಕವಿದ ಮುಸ್ಸಂಜೆ
ಚಳಿಯ ನಡುಕ
ದಾರಿ ತಪ್ಪಿಹ ಗುಬ್ಬಿಮರಿ.
********************
ಶರತ್ಕಾಲದ ಚಳಿಯೂ
ಕತ್ತಲಲೆ ಮುಳುಗಿಹ
ಮುಂಜಾವು.
*********************
ಸಾಗದ ದಾರಿ
ತಿರುವಿನಲ್ಲಿ ಫಲಕ
ಸೂಚನೆಗಳ ಗೋಜಲಿಗೆ
ನಿಲುಕದ ಬದುಕು.
*********************
ಕಾಮನಬಿಲ್ಲ ಮಾತಾಡಿಸಿ
ಬಂದ ಮೋಡಗಳು
ಬಣ್ಣದ ಮಾತಾಡುತ್ತಿವೆ.
Wednesday, September 12, 2012
ನಸುಕಿನ ನಗುವು..
ನಸುಕಿನ ನಗುವು..
ಸುಡುವ ನೆನಪುಗಳ ಜಾಡಿನ
ನಸುಗತ್ತಲ ನೀರವದಲಿ
ಎದೆಯಾಳದಲಿ ಹುದುಗಿ
ಎಂದೋ ಕಾಡಿದ್ದ ದನಿಯೊಂದು
ಸುಪ್ತವಾಗಿ ಮೇಲೆದ್ದು
ನಿದ್ದೆಯ ಕಣ್ಗಳು
ದನಿಯ ರೂಪವನು
ಕತ್ತಲಲಿ ಹುಡುಕಿ
ಹುಡುಕಿ ಸೋಲುವವು!
ಒಮ್ಮೆಗೆ ಬೇಸೆತ್ತು, ಆರಿದ
ನಿದ್ದೆಯ
ಬಾ ಎಂದು ಜಪಿಸಲು
ಬೇಡದ ತುಮುಲ,ತಳಮಳಗಳ
ಜಾಗಟೆ ಮನದಲಿ
ಕತ್ತಲ ಸೌಖ್ಯವು ಸಿಗದೇ
ಕಣ್ಣಲ್ಲೇ ನರಳುವ ಕನಸುಗಳು
ಭಯವ ಹುಟ್ಟಿಸುವವು
ನೀರವದ ಜೊತೆಗೂಡಿ
ಸಲ್ಲಾಪದ ಪಿಸುದನಿ ಒಳಕಿವಿಗೆ
ರಾಚಿ ಸರಿಹೊತ್ತಲಿ ಬೇಡವೆಂದರೂ
ಬಿಡದೇ ಕಾಡಿ ಕಂಗೆಡಿಸುವ
ಬಿಸಿಯುಸಿರಿನ ಮೋಹ
ದೂಡಿ ದೂರ ಸರಿಸಿದರು
ಮನ ಬಯಸುವುದು ಸುಡುವ ತಾಪವ
ಸರಿಹೊತ್ತಲಿ ಕೂಪಕೆ
ದೂಡಿ ನಸುನಗುವ ನೆನಪುಗಳ
ಮಾರಣಹೋಮ
ಧಗಧಗಿಸುತಿರುವ ಮನ
ಮುಂಜಾವಿನ ನಸುಕಿಗೆ ಮಾತ್ರ
ಉಳಿದಿಹ ನಗುವು!
Sunday, August 12, 2012
ಅಲೆಯಲಿ ಇರುಳೆಲ್ಲ ಹುಣ್ಣಿಮೆ
ನದಿಯ ಹರಿವು
ಆ ದಡ ಈ ದಡಗಳ
ನಡುವೆ ಜೀವಂತ
ಬದುಕು ಹರಿವ ಪ್ರೀತಿಯಲಿ
ನಿನ್ನೊಡಲಾಳದ ಎಳೆಯ
ಸೆಳೆತದಲಿ ಬೆಸೆದ ಮೋಹಕೆ
ತವಕ ಕೂಡಲು.
ಕೂಡುವ ಬಯಕೆಯ ನಡುವೆ'
'ಚಂದಿರ'ನ ಬಿಂಬ
ಅಲೆಯಲಿ ಇರುಳೆಲ್ಲ ಹುಣ್ಣಿಮೆ.
ಹಾಯುವ ತಂಗಾಳಿಯ ಮಾತು
ಆಲಿಸುವ ದಡದ ಹೆಬ್ಬಂಡೆಗೆ
ಮುನಿಸು ನಿಂತ ನಿಲುವಲ್ಲೆ
ತಾಕಿ ಹೋಗುವ ಅಲೆಯ ಸಪ್ಪಳಕೆ
ಕಾಯುವ ದಂಡೆಯ ಹೆಮ್ಮರ
ಮಣ್ಣು ಜಾರಿದ ಬೇರಿನ ನಂಟು
ಅರಸಿ ಬಂದ ಎಲೆ ಸೋಲುತಿಹುದು
ಹರಿವ ಮೋಹಕೆ
ನದಿಯ ಸೆಳೆತಕೆ....
Sunday, July 8, 2012
ಕವಿದ ಕಾರ್ಮೋಡ!
ಮುಸ್ಸಂಜೆಯ ಸಮಯ ಮಳೆ
ಬರುವ ಹಾಗೇ ಕಾರ್ಮೋಡ
ಯಾಕೋ ನಿನ್ನ ನೆನಪಾಗಿ
ಬರೆಯುತ ಕೂತೆ.
ಎರಡೇ ಸಾಲು; ಧೋ ಎನ್ನುವ
ಮಳೆಯ ಹನಿ
ನೋಡುತ 'ನೆನೆದ' ಮನದ
ತುಂಬೆಲ್ಲ ನಿನ್ನದೇ ರೂಪ.
ಕಾಯುತ ಕೂತ ನಗೆ
ಮೊಗದ ಚೆಲುವೆಗೆ ಮುನಿಸು
ಬರುವುದು ಚೆಲುವನ ಮೇಲಲ್ಲ
'ಸಂಧ್ಯಾ'ಸಮಯಕೆ ಸರಿದಾರಿಯಲಿ
ಕಾರ್ಮೋಡ, ಮಬ್ಬು.
ಹೊತ್ತು ತರುವನು ಇನಿಯ
ಹನಿ ಹನಿಯಲು
ಮೋಹ ತುಂಬಿದ ಒಲವ
ಕಾಯುತ 'ನೆನೆದ' ಮನದ
ತುಂಬೆಲ್ಲ ಪ್ರೀತಿಯದೇ ಕುರುಹು.
ಕಣ್ಣಂಚಿನ ಕಾತುರಕು ಮೆರಗು
ಕವಿದ ಕಾರ್ಮೋಡವ ಸೀಳಿ
ಮಿರುಗುವ ಮಿಂಚಿನಲಿ ಹೊಳೆವ
ಅವಳ ಹಸಿಮೊಗದ ಹುಸಿನಗೆ.
ಕಂಡು ಕಾಣದ ಪ್ರೇಮದ ಲಹರಿಗೆ
ಸೋತು ನಲಿವ 'ನೆನೆದ' ಮನದ
ತುಂಬೆಲ್ಲ ಜೀವದ ಬಯಕೆ.
ಕವಿದ ಕಾರ್ಮೋಡ...
...............ಮಬ್ಬು...
ಸಂಜೆಮಳೆ ಬರುವ
ಹಾಗೇ...
Thursday, June 21, 2012
ಉಳಿದಿಹ ...!
ದಾರಿಯಲ್ಲಿ ಉಳಿದಿಹ
ಒಂಟಿ ಹೂವ ಮೇಲಿನ
ಇಬ್ಬನಿಗೆ ನಾಚಿದ
ಗುಬ್ಬಿ ಮರೆತು ಕೂತಿದೆ
ತನ್ನ ಗೂಡನು...
***************************
ಸೋತರು ಜೀವ ನಿನ್ನ
ಎದೆಯಲಿ ಉಳಿದಿಹ
ಮೋಹಕೆ ಬಲೆಯ
ಬೀಸಿ ಕಾದೆ.
ದಾರಿ ಬದಿಯಲಿ
ಹೂ ಮಾರುವ ಹುಡುಗನ
ಕೈಗೆ ಹತ್ತಿದ
ಪರಿಮಳ ಸೋಕಲು
ಮನಕೆ ಮತ್ತೆ ನಿನ್ನದೇ
ಸ್ಪರ್ಶದ ನೆನೆಪು...
*************************
ಭಾವಕೆ ನಿಲುಕಿ
ಪದಗಳಿಗೆ ಸಿಗದ ಅನನ್ಯೇ
ಕಾಮನಬಿಲ್ಲ ಮೋಹಿಸಿ
ಸೋತರು ಉಳಿದಿಹ
ಛಾಯೆಗೆ ನೂರು ಬಣ್ಣ....
***************************
Wednesday, March 21, 2012
ದಾರಿ ಬದಿಯ ಬದುಕು
ದಾರಿ ಬದಿಯ ಬದುಕು
ಕಾಯುವ ಮನ, ಬಿಸಿಲ ಜಲಪು
ಬಿರಿದ ಹೂವಿಗೆ ರವಿಯ
ಕಾಮನೆ ಅರಿವಾಗದೆ ಮುದುಡಿದೆ
ಸೂರ್ಯನದೋ ಸದಾ ಸಲ್ಲಾಪ!
ಒಂಟಿ ಮನೆಯ ತಾರಸಿಯ ಮೇಲೆ
ಒಂಟಿ ಹೆಣ್ಣು ನೀರುಣಿಸಿ
ಕುಂದದಲಿ ಬೆಳೆಸಿದ ಅಡಿ ಎತ್ತರದ
ಗಿಡದಲೂ ಒಂಟಿ ಹೂವು!
ಬದುಕು ದಾರಿ ಬದಿಯಲಿ
ಜಡಿ ಮಳೆಯಲಿ ಕೊಚ್ಚಿ ಹೋಗದೆ
ನಿಂತು ನೆರಳಾಗಿರುವುದ ಕಂಡು
ನಿಟ್ಟುಸಿರಿಡುವ ಅಜ್ಜನ ಮುಪ್ಪು!
ನಿರಂತರ ಸಲ್ಲಾಪದ ಜೊತೆಯಲೆ
ಸೋತು ಸೊರಗುವ
ನದಿಯ ವಯ್ಯಾರವ ಅಣಕಿಸುತ
ನಿಂತಲೇ ನಿಂತ ದಡದ ಹೆಬ್ಬಂಡೆ!
ಅಜ್ಜಿಯ ಮುಖದಲಿ ಮೂಡಿದ
ಅನುಭವದ ಮುಪ್ಪಿನ ರೇಖೆಗಳ
ಕಂಡು ಮುಗುಧ ನಗೆ ಚೆಲ್ಲುವ
ಕಂದನಿಗೆ ಉಳಿದಿಹ ತೀರದ
ಯಾನ!!
Newer Posts
Older Posts
Home
Subscribe to:
Posts (Atom)