Friday, September 19, 2014

ಮಳೆ ನಿಲ್ಲುವ ಸೂಚನೆಯಿಲ್ಲ...


" ನಿನ್ನ ಕುಂಚಕೆ
 ಮಾತ್ರ ಸಿಗುವ
ಕಾಮನಬಿಲ್ಲು ನಾ.."
&&&&&&&&&&&&&

ನಿನ್ನ ನೆನೆದು
ಕಾಲ ಕಳೆಯುತ ಕೂತೆ
ಹೂ ಅರಳಿ ನಿಂತಿತು
ಹುಸಿ ನಗೆಯ ಸುವಾಸನೆ
ಎಲ್ಲೆಯ ಮೀರಿತ್ತು.
 ##################

ಮುಗಿಲ ಮೇಲೆಲ್ಲಾ ಚೆಲ್ಲಿದೆ
ಗಾಳಿಯಲ್ಲಿ ಹಾಗೆ ತೇಲಿಬಂದ
ಯಾವುದೋ ಹಳೆ ಊರಿನ
ಹೆಸರಿನ ಜೊತೆಗೆ ಜೋತುಬಿದ್ದ
ಸಲ್ಲಾಪದ ನಾಲ್ಕು ಸವೆದ ಪದಗಳು...!
$$$$$$$$$$$$$$$$$$$$$$


ಕವಿದಿದೆ ಮೋಡ ಗೆಳತಿ
ಹೆಸರ ಬರೆದಿಟ್ಟು ಹೋಗು
ಮಳೆ ನಿಲ್ಲುವ ಸೂಚನೆಯಿಲ್ಲ...
                  ಈಶ

Tuesday, June 3, 2014

ನಿನ್ನದೇ ಹುನ್ನಾರ!!

 


 ಅಂತರಂಗದ ಮೌನ ಸರೋವರ 
ನೀನು ಮುಖವಿಟ್ಟು
 ಕಾಣುವ ಬಿಂಬಕೆ ನೂರು ರೂಪ
ಕಾಮನ ಕಲರವಕೆ ಬಯಕೆಯ ನೂರು ಬಣ್ಣ!!

************************ 
ಸುಮ್ಮನೆ ಬಿಂದುವಾದೆ
ಸಾಗುವ ದಾರಿಯಲಿ
ಹೇಳಲಾಗದ ಭಾವಗಳು ಹಾಗೇ ಬಿದ್ದಿವೆ
ಒಮ್ಮೆ ನಿನ್ನ ಸ್ಪರ್ಶಕೆ
ಕಾಯಲು ಜೀವಮಾನದ
ಲೆಕ್ಕವೆಕೆ!!
*******************
ನಿನ್ನೆದೆಯ ಮೇಲೆ ನಲಿಯುವ
ತುಟಿಗಳಿಗೆ ತಾಕುವ ನಿನ್ನ ಬಿಸಿಯುಸಿರಲಿ
ಹಸಿಯಾಗಿದೆ ನಿನ್ನೊಲವ ಭಾವವು
ಬಿಗಿಹಿಡಿದ ಬಾಹುಗಳಿಗೆ ಬಂಧನವೇ
 ಬಿಡುಗಡೆಯ ಹರುಷವು !!
******************** 
 ಮತ್ತೆ  ಮತ್ತೆ ಸಿಗುವ
ಸಂಭ್ರಮ ಸಡಗರಕೆ
ನಿನ್ನದೇ ಹುನ್ನಾರ!!

Saturday, February 15, 2014

ಖಾಲಿ ರಸ್ತೆ...

ಖಾಲಿ ರಸ್ತೆ...


ತಣ್ಣನೆ ಗಾಳಿ ಹರಿದಾಡುತ್ತಿದೆ
ಮಿಲನದ ರಾತ್ರಿಯೆಲ್ಲ ಕಳೆದ
ಖಾಲಿ ಮಂಚದ ಹಾಗೆ ಬಿದ್ದಿಹ
ರಸ್ತೆಯ ಮೇಲೆಲ್ಲ
ತಾಕಿ ನಿಂತು ಪಿಸುಮಾತನಾಡಲು
ಉಳಿದಿಲ್ಲ ಅರೆ ಜೀವವೂ
ಬರಿದಾದ ರಸ್ತೆ ನಿಟ್ಟುಸಿರಿಡುತ್ತಿದೆ
ಹಗಲೆಲ್ಲ ಹರಿದು-ಹಂಚಿ ಹರಿದಾಡಿದ
ಜೀವಗಳು ಹೊತ್ತು ಹೋದ
ನೋವುಗಳ ನೆನೆದು
ಮರುಗುವ ದಾರಿಯ ಮೇಲೆ
ಸುಳಿದಾಡುತ್ತಿದೆ ಗಾಳಿ
ಸೋನೆ ಮಳೆಯ
ಸುಳಿವನು ನೀಡದೆ.

Sunday, March 31, 2013

ಆಗಂತುಕ ಕನಸುಗಳು..




ಬಯಕೆಯ ಕನಸುಗಳು
ಕಾರ್ಮೋಡ ಕವಿದ ಬದುಕಿಗೇಕೆ
ಬಂದವು ಆಗಂತುಕರಂತೆ
ನಿರ್ಭೀಡೆಯಲಿ; ಒಳಬಂದು
ಬೀರುತಿಹ ದೂರ್ತ ನಗೆಗೆ
ಕದಡಿದ ಮನದಲಿ ಅಸಹಾಯಕತೆಯ
ಅನಂತ ಮೌನ.

ನೋಟದಲೆ ನಿಂತಿಹ ಕನಸುಗಳು
ಇಳಿ ಸಂಜೆಯ ಮಬ್ಬಿನಲಿ
ಮಂಪರಿನ ಹಾಳು ನಿದ್ದೆಯ ಕಂಗೆಡಿಸುತಿಹ
ಕನವರಿಕೆಗಳು, ಅಳಿದುಳಿದಿಹ ಮೋಹವು
ಉರುಳುತಿದೆ ಕಣ್ಣ ಹನಿಯಾಗಿ
ಆಸರೆಗಾಗಿ ಕೈ ಚಾಚಿದೆ ಬದುಕು
ಜಾರುತಿಹ ಜೀವನದಲಿ ಮಡುಗಟ್ಟಿದೆ ಮೌನ.

 
ಯಾವುದೋ ಅನುಬಂಧಕೆ ಜೋತುಬಿದ್ದ
ನಂಟಿನಲಿ ಅನುಮಾನದ ಎಳೆಗಳು
ಅನುಸಂಧಾನಗೊಳ್ಳದೆ ಅತಂತ್ರವಾಗಿರುವ
ಭಾವಗಳು ಅಲೆದಲೆದು ನಿಂತ್ರಾಣಗೊಂಡ
ಮನದಲಿನ್ನು ಕೊನೆಗಾಣದ ಮೌನ
ಮುಗಿಯದ ಬದುಕು.

Tuesday, December 18, 2012

ಹಾಯ್ಕು !!!!

ಮಂಜು ಕವಿದ ಮುಸ್ಸಂಜೆ 
ಚಳಿಯ ನಡುಕ 
ದಾರಿ ತಪ್ಪಿಹ ಗುಬ್ಬಿಮರಿ.                                             
********************

ಶರತ್ಕಾಲದ ಚಳಿಯೂ 
ಕತ್ತಲಲೆ ಮುಳುಗಿಹ 
ಮುಂಜಾವು.

*********************

ಸಾಗದ ದಾರಿ
ತಿರುವಿನಲ್ಲಿ ಫಲಕ 
ಸೂಚನೆಗಳ ಗೋಜಲಿಗೆ 
ನಿಲುಕದ ಬದುಕು.
*********************
ಕಾಮನಬಿಲ್ಲ ಮಾತಾಡಿಸಿ 
ಬಂದ ಮೋಡಗಳು 
ಬಣ್ಣದ ಮಾತಾಡುತ್ತಿವೆ.





Wednesday, September 12, 2012

ನಸುಕಿನ ನಗುವು..


ನಸುಕಿನ ನಗುವು..

ಸುಡುವ ನೆನಪುಗಳ ಜಾಡಿನ 
ನಸುಗತ್ತಲ ನೀರವದಲಿ 
ಎದೆಯಾಳದಲಿ ಹುದುಗಿ
ಎಂದೋ ಕಾಡಿದ್ದ ದನಿಯೊಂದು 
ಸುಪ್ತವಾಗಿ ಮೇಲೆದ್ದು 
ನಿದ್ದೆಯ ಕಣ್ಗಳು
ದನಿಯ ರೂಪವನು
ಕತ್ತಲಲಿ ಹುಡುಕಿ 
ಹುಡುಕಿ ಸೋಲುವವು!

ಒಮ್ಮೆಗೆ ಬೇಸೆತ್ತು, ಆರಿದ
 ನಿದ್ದೆಯ ಬಾ ಎಂದು ಜಪಿಸಲು
ಬೇಡದ ತುಮುಲ,ತಳಮಳಗಳ 
ಜಾಗಟೆ ಮನದಲಿ 
ಕತ್ತಲ ಸೌಖ್ಯವು ಸಿಗದೇ
ಕಣ್ಣಲ್ಲೇ ನರಳುವ ಕನಸುಗಳು 
ಭಯವ ಹುಟ್ಟಿಸುವವು

ನೀರವದ ಜೊತೆಗೂಡಿ 
ಸಲ್ಲಾಪದ ಪಿಸುದನಿ ಒಳಕಿವಿಗೆ 
ರಾಚಿ ಸರಿಹೊತ್ತಲಿ ಬೇಡವೆಂದರೂ 
ಬಿಡದೇ ಕಾಡಿ ಕಂಗೆಡಿಸುವ 
ಬಿಸಿಯುಸಿರಿನ ಮೋಹ 
ದೂಡಿ ದೂರ ಸರಿಸಿದರು 
ಮನ ಬಯಸುವುದು ಸುಡುವ ತಾಪವ

ಸರಿಹೊತ್ತಲಿ ಕೂಪಕೆ                                           
ದೂಡಿ ನಸುನಗುವ ನೆನಪುಗಳ 
ಮಾರಣಹೋಮ 
ಧಗಧಗಿಸುತಿರುವ ಮನ 
ಮುಂಜಾವಿನ ನಸುಕಿಗೆ ಮಾತ್ರ 
ಉಳಿದಿಹ ನಗುವು!

Sunday, August 12, 2012

ಅಲೆಯಲಿ ಇರುಳೆಲ್ಲ ಹುಣ್ಣಿಮೆ


ನದಿಯ ಹರಿವು 
ಆ ದಡ ಈ ದಡಗಳ 
ನಡುವೆ ಜೀವಂತ 
ಬದುಕು ಹರಿವ ಪ್ರೀತಿಯಲಿ 
ನಿನ್ನೊಡಲಾಳದ ಎಳೆಯ 
ಸೆಳೆತದಲಿ ಬೆಸೆದ ಮೋಹಕೆ 
ತವಕ ಕೂಡಲು.
ಕೂಡುವ ಬಯಕೆಯ ನಡುವೆ'
'ಚಂದಿರ'ನ ಬಿಂಬ 
ಅಲೆಯಲಿ ಇರುಳೆಲ್ಲ ಹುಣ್ಣಿಮೆ.

ಹಾಯುವ ತಂಗಾಳಿಯ ಮಾತು 
ಆಲಿಸುವ ದಡದ ಹೆಬ್ಬಂಡೆಗೆ
ಮುನಿಸು ನಿಂತ ನಿಲುವಲ್ಲೆ
ತಾಕಿ ಹೋಗುವ ಅಲೆಯ ಸಪ್ಪಳಕೆ
ಕಾಯುವ ದಂಡೆಯ ಹೆಮ್ಮರ
ಮಣ್ಣು ಜಾರಿದ ಬೇರಿನ ನಂಟು
ಅರಸಿ  ಬಂದ ಎಲೆ ಸೋಲುತಿಹುದು 
ಹರಿವ ಮೋಹಕೆ
ನದಿಯ ಸೆಳೆತಕೆ....