Thursday, May 14, 2015

ಉಳಿದ ಮುಸ್ಸಂಜೆಯ ಹಾದಿ..

ಉಳಿದ ಮುಸ್ಸಂಜೆಯ ಹಾದಿ...
ಮುಸ್ಸಂಜೆಯ ಇಬ್ಬಂದಿತನ
ಅರೆ ಬಿರಿದ ಮೊಗ್ಗು
ಕವಿದ ಕಾರ್ಮೋಡವ
ಒಲ್ಲದ ಮನಸಲ್ಲಿ
ಸೀಳುವ ಸೂರ್ಯ

ಕತ್ತಲ ಕೊಲ್ಲದ
ಬೆಳದಿಂಗಳ ಚೆಲುವು
ತನ್ನ ಇರುವ
ಮುಸುಕಲೆ ತೋರುವ
ಚುಕ್ಕೆಗಳ ರಾಶಿ

ಹಡೆದ ದಡವನು
ಮೀರುವ ತವಕದಲೆ
ಸೋಲುವ ತೊರೆಯ ಓಟ
ಗರಿಕೆಯ ದಾಹವನು
ನೀಗದ ಇಬ್ಬನಿಯ ಒರಸೆ

ಯಾರ ನೋವಿಗೂ
ಕೈಗನ್ನಡಿಯಾಗದ
ಸ್ನಿಗ್ಧ ಚೆಲುವೆಯರ ಮುಗುಳ್ನಗೆ
ಹಸಿದೂರಿನ ಬವಣೆ
ಕಳೆಯದ ಕಾಣದ ಕೈಯ
ಮಮಕಾರ
ಭರವಸೆಯ ನಾಳೆಗಳ
ಹುಡುಕಿ ಮಬ್ಬಾಗಿಹ
ಕಂಗಳಲಿ ಉಳಿದ 
ಮುಸ್ಸಂಜೆಯ ಹಾದಿ...
     -ಈಶ



Sunday, March 29, 2015

ಕಾಮನ ಬಿಲ್ಲಾಗುವೆ..!


ಕಾಮನ ಬಿಲ್ಲಾಗುವೆ..!

ಬಂದು ಪಕ್ಕದಲ್ಲಿ ಕುಳಿತೆ
 ಮಾತು ಶುರುವಿಟ್ಟುಕೊಂಡಿತು
ಮನ
ಹುಂಬತನ ನಾಚಿಕೆಯ
ಮುಖವಾಡ ಹೊದ್ದು
ಹುಸಿ ನಕ್ಕಿತು
ಚೆಂದದ ಮೊಗವ
ಮತ್ತೆ ಮತ್ತೆ
ಕದ್ದು ನೋಡುವ
ಕಣ್ಣ ಒಳಗೆ
ಇದ್ದು ಬಿಡಬಾರದೇ ನೀನು
ಒರತೆ ನೀಗದೆ
ನದಿ ಹರಿದಿದೆ
ಮುಳುಗುವ ಮಾತಲ್ಲೆ
ಉಳಿದು ಹೋಗಿದೆ
ನಿನ್ನ ಕುರಿತೆ ಹೇಳಬೇಕಿದ್ದ
ನೂರೇ ನೂರು ಸುಳ್ಳುಗಳು...
ಆ ಒರೆ ನೋಟದಲೆ
ಜೀವ ಮಿಡಿಯುತ್ತಿದೆ
ಕಾಮನ ಬಿಲ್ಲಾಗುವೆ
ನೀ ಅನುಮತಿ ಇತ್ತು
ಮರೆತುಬಿಡು ನನ್ನ..!
     -ಈಶ

Tuesday, February 17, 2015

ಬಯಲ ಕರೆದಿದೆ

ಬಯಲ ಕರೆದಿದೆ

ನೂರು ಕಾಲ ಸವೆದು
ಇಂದಿಗೂ ತಣ್ಣಗೆ
ಹರವಿಕೊಂಡು ಬಯಲೆಡೆಗೆ
ಸಾಗಿಹ ಹಾದಿ
ತಿರುವಲಿ ಏಕಾಂತ ಬಯಸಿ
ನಿಂತ ಬದುಕು
ಸಂಧಿಸುವ ಬಿಂದುಗಳ
ಮೇಲೆ ಬಿದ್ದಿಹ
ಬೆವರ ಹನಿಗೆ
ನೆತ್ತರ ಬಣ್ಣ .

ಹರಿದ ಕನಸುಗಳು
ಚರಿತ್ರೆಯ ಭಾಗವಾಗಿ
ಉಸಿರುಕಟ್ಟಿವೆ   

 ಜೀವವೇ ಇಲ್ಲಿ  ಮೈಲಿಗಲ್ಲು
ಮೊದಲು ಕೊನೆಯಿಲ್ಲದ
ಹುಡುಕಾಟಕೆ.

ಅಂಕೆಗೆ ಸಿಗದ ಹೆಜ್ಜೆಗಳು
ಗುರುತನಿರಿಸಿ ಸರಿದಿವೆ
ಹೇಳಲು ಹೆಸರಿಲ್ಲ
ಶೃತಿ,ತಾಳ, ರಾಗ
ದ್ವೇಷಗಳ ಹಂಗಿಲ್ಲದ
ಹಾದಿ - ಬಯಲ ಕರೆದಿದೆ.

ಈಶ

Tuesday, January 13, 2015

ಜಾರಿದ ಹನಿ

 ಜಾರಿದ ಹನಿ

 ಖಾಸ ಕೋಣೆಯ 
ಇಂಚಿಂಚು ಆವರಿಸಿದ 
ಚಳಿಯ ಪ್ರಲಾಪವನು 
ಬೆಚ್ಚಿಸುವ ಹಾಗೆ 
ಎಲ್ಲೇ ಮೀರಿನಿಂತ 
ಮೋಹ !

ಕತ್ತಲ ಕಣ್ಣಲಿ 
ಉನ್ಮಾದದ ಕಾಮನಬಿಲ್ಲು 
ಸಂಗಾತಿಯ ಬಿಸಿಯುಸಿರಲಿ 
ಗರಿಗೆದರಿದ ದಾಹ 
ಬೆತ್ತಲಾದಷ್ಟು ಬಯಕೆ 
ಬೆವರ ಹನಿಯಾಗಿ 
ಮೈ ಜಾರಿದೆ.

ಸ್ಪರ್ಶದ ಪ್ರತಿ ಗೆರೆಯಲು 
ತನುವರಳಿ ಬೆಸೆಯುವ ತವಕ 
ತನ್ಮಯತೆಯ ಜೋಕಾಲಿ 
ಸುಖಿಸಿ ಸೋತ ಜೀವಗಳಲಿ 
ಬೆಳಕು ಹರಿಯಲು 
ಹಿಮದ ಮರೆಯ ಮುಂಜಾವು 
ಚಾದರದಡಿಯ ಆತ್ಮಗಳಿನ್ನೂ 
ನಿಗಿ ಕೆಂಡ !
      -ಈಶ 

Tuesday, December 9, 2014

ಅರೆ ಜೀವ!!

ಅರೆ ಜೀವ!!

ಮಾಗಿಯಾ ಶೀತಕೆ
ಮೈಒಡ್ಡಿದ ಭುವಿ
ಬರಿದಾಗುತ್ತಿರುವ  ತುಂಬಿದ
ಒಡಲ ರಾಶಿ ರಾಶಿ ಚೆಲುವು
ನೆರಳ ಆಶ್ರಯಿಸಿ ಒರಗಿದ
ಜೀವಕೆ ಬಾಯಾರಿಕೆಯ ಕಸಿವಿಸಿ
ಸಾಗಿಬಂದ ದಾರಿಯಲಿ
ಉಳಿದಿಹ ಅರೆಬರೆ
ಹೆಜ್ಜೆ ಗುರುತು
ಹಿನ್ನೋಟಕೆ ಅಂಕೆ ಮೀರುವ
ಹಂಗಿಲ್ಲ
ಮಂಜು ಮುಸುಕಿದೆ
ನಿತ್ಯದ ಜಗದ ಹಾದಿಗೆ...
ವಸಂತಕೆ ಇನ್ನು ಅರೆ ಜೀವ!!
         

Friday, October 31, 2014

ಮರೆತು ಎಲ್ಲವನು...


ಮರೆತು ಎಲ್ಲವನು...

ಸಾಲು ಸಾವಿರ ಮರದ
ತಂಗಾಳಿ ತಂಪಾಗಿ ನಿನ್ನ
ಸೊಬಗಿಗೆ ಸೋತು ಸುಳಿದಾಡಲು
ನಿನ್ನದೊಂದು ಕೊಂಕು ನೋಟಕೆ
ನಲಿದಾಡಿವೆ ಶರತ್ಕಾಲಕೆ
ಹಸಿರಾಗಿ ಮೈದುಂಬಿಹ
ರಾಶಿ ರಾಶಿ ಎಲೆಗಳು.

ಎಲ್ಲವನು ಮರೆತ ಹಾಗೆ
ಕ್ಷಣದಲಿ ಎಲ್ಲವು ಬದಲಾಗಿ
ಮೈದುಂಬಿಹ ಹೊಳೆಯ ರಭಸಕೆ
ಸಿಕ್ಕ ಎಲ್ಲೊ ಉದುರಿದ ಎಲೆಯೂ
ಮೇಲೇರುವ ಪ್ರತಿ ಅಲೆಯಲು
ಪುಳಕಗೊಂಡು ತನ್ನಿರುವ ಮರೆಯಲು
ಚಲನೆಯೊಂದೆ ಜೀವಂತ ತಾನಿರುವಲ್ಲೇ!

ತಡಕಾಡುತ ಹುಡುಕಾಡುವ ಬದುಕು
ನಿಟ್ಟುಸಿರಿಡುವ ಹೊತ್ತಿಗೆ
ಅರಿವಿರದೆ ಕೂಡುವ ನಂಟಿಗೆ
ಯಾವ ಬಂಧದ ಹೆಸರೋ
ಎಲ್ಲದಕು ಕಾರಣವ ತಿಳಿದು ತಿಳಿದು
ನಿರುತ್ತರವಾಗಿಹ ಜೀವಗಳೇ ಇಲ್ಲಿ
ಉಸಿರಾಡುತಿವೆ ಮರೆತು ಎಲ್ಲವನು...


Friday, September 19, 2014

ಮಳೆ ನಿಲ್ಲುವ ಸೂಚನೆಯಿಲ್ಲ...


" ನಿನ್ನ ಕುಂಚಕೆ
 ಮಾತ್ರ ಸಿಗುವ
ಕಾಮನಬಿಲ್ಲು ನಾ.."
&&&&&&&&&&&&&

ನಿನ್ನ ನೆನೆದು
ಕಾಲ ಕಳೆಯುತ ಕೂತೆ
ಹೂ ಅರಳಿ ನಿಂತಿತು
ಹುಸಿ ನಗೆಯ ಸುವಾಸನೆ
ಎಲ್ಲೆಯ ಮೀರಿತ್ತು.
 ##################

ಮುಗಿಲ ಮೇಲೆಲ್ಲಾ ಚೆಲ್ಲಿದೆ
ಗಾಳಿಯಲ್ಲಿ ಹಾಗೆ ತೇಲಿಬಂದ
ಯಾವುದೋ ಹಳೆ ಊರಿನ
ಹೆಸರಿನ ಜೊತೆಗೆ ಜೋತುಬಿದ್ದ
ಸಲ್ಲಾಪದ ನಾಲ್ಕು ಸವೆದ ಪದಗಳು...!
$$$$$$$$$$$$$$$$$$$$$$


ಕವಿದಿದೆ ಮೋಡ ಗೆಳತಿ
ಹೆಸರ ಬರೆದಿಟ್ಟು ಹೋಗು
ಮಳೆ ನಿಲ್ಲುವ ಸೂಚನೆಯಿಲ್ಲ...
                  ಈಶ