Wednesday, August 19, 2009

ಇಟ್ ಯಾಪೆನ್ಸ್ ಓನ್ಲಿ ಇನ್ ಇಂಡಿಯಾ...







"ಯಾರು ಹೆದರೋದು ಬೇಡ,ನಮ್ಮ ರಾಜ್ಯದಲ್ಲಿ ಇನ್ನು ಸೋಂಕು ಜಾಸ್ತಿ ಹರಡಿಲ್ಲ, ನಮ್ಮಲ್ಲಿ ಸತ್ತವರ ಸಂಖ್ಯೆ ಕಡಿಮೆ,ನಾನು ಬಳ್ಳಾರಿಯಿಂದಲೇ ದಿನವೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇನೆ, ನಮ್ಮಲ್ಲಿ ಯಾವ ತೊಂದರೆಯೂ ಆಗೋಲ್ಲ, ಸರ್ಕಾರ ಅದಕ್ಕೆ ಬೇಕಾದ ರೀತಿಯಲ್ಲಿ ಜನರಿಗೆ ನೆರವು ನೀಡುತ್ತದೆ"
ಹೀಗೆ ರಾಜ್ಯದ ಆರೋಗ್ಯ ಮಂತ್ರಿ ಹೇಳಿದ್ದನ್ನೇ ಹೇಳುತ್ತ,H1N1 ತಡೆಗೆ ತಾನು ಕೈಗೊಂಡ ಒಂದೇ ಒಂದು ಕ್ರಮದ ಬಗ್ಗೆಯೂ ಸರಿಯಾದ ವಿವರಣೆ ನೀಡದೆ ರಾಜಕಾರಣಿಗಳು ಹೇಳುವ ಮಾಮೂಲು ಶೈಲಿಯಲ್ಲೇ,ಮಾತನಾಡುತ ಉದಾಸೀನತೆಯ ಪರಾಕಾಷ್ಟೆ ಮೆರೆಯುವ ಇಂತವರನ್ನ ನೋಡಿದರೆ ಇವೆಲ್ಲ ನಡೆಯೋದು ಭಾರತದಲಿ ಮಾತ್ರವೇನೋ ಅನಿಸುತ್ತದೆ ನನಗೆ.ಹೇಳಿಕೊಳ್ಳಲು ಮಾತ್ರ ನಮ್ಮದು ಪ್ರಪಂಚದ ಸರ್ವಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ಆದರೇ ಅದರ ಒಳಗಿರುವುದೆಲ್ಲ ಟೊಳ್ಳು ಭರವಸೆಗಳ ಜಾಡು.ಕೆಟ್ಟ ರಾಜಕೀಯ ವ್ಯವಸ್ಥೆ ದೇಶದ ಎಲ್ಲ ಆಯಾಮಗಳನು ತನ್ನ ಭದ್ರಬಾಹುವಿನೊಂದಿಗೆ ಹಾಳುಗೆಡುವುತ್ತಲೇ ಸಾಗುತ್ತಿದೆ.ಜನ ನಾವುಗಳು ಮಾತ್ರ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ ಎಚ್ಚರದಲ್ಲೂ ಪ್ರಜ್ಞಾಹೀನರಂತೆ ಇದಾವುದು ನಮಗೆ ಸಂಭಂದಿಸಿದ ವಿಷಯವಲ್ಲ ಎಂದು ಜಾಣಕುರುಡುತನ ಪ್ರದರ್ಶಿಸುತ, ಸ್ವಕಾರ್ಯದಲಿ ಮುಳುಗಿ ಹೋಗಿದ್ದೇವೆ.


ನಮ್ಮ ಜನಗಳಿಂದ ಚುನಾಯಿತವಾದ ಸರ್ಕಾರ ಅರ್ಥಾತ್ ಈ ಜನಪ್ರತಿನಿಧಿಗಳಿಗೆ,ಸಾಮಾಜಿಕ ಜವಬ್ದಾರಿ ಎಂಬುದು ಏನು? ಸಾಮಾಜಿಕ ಕಾಳಜಿ ಎಂದರೆ ತಿಳಿದಿದೆಯೇ ನಿಮಗೆ ಮಹಾನುಭಾವರೇ? ಎಂದು ಮೊದಲು ಕೇಳಿ ತಿಳಿಯಬೇಕು.ಅವರ ಪ್ರಕಾರ ಸಮಾಜದಲ್ಲಿ ಸಮಸ್ಯೆಗಳು ಇದ್ದೆ ಇರುತ್ತವೆ,ಸಮಾಜಕ್ಕೆ ಸಮಸ್ಯೆಗಳ ಬರವೇ? ಅವುಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ ಎಂಬಸ್ವಭಾವದ,ದಪ್ಪ ಚರ್ಮದ ರಾಜಕಾರಣಿ,ಮಂತ್ರಿ ಮಹೋದಯರಿಗೆಂದು ತಿಳಿಯದು ಜನ ಸಾಮಾನ್ಯನ ಕಷ್ಟ ಕಾರ್ಪಣ್ಯಗಳು.ರಾಜ್ಯದ ಒಬ್ಬ ಆರೋಗ್ಯ ಮಂತ್ರಿ "ನಮ್ಮ ರಾಜ್ಯದಲ್ಲಿ ಇನ್ನು ಹೆಚ್ಚು ಜನ ಸತ್ತಿಲ್ಲ,ಪಕ್ಕದ ಪುಣೆಯಲ್ಲಿ ಹರಡಿರೋವಷ್ಟು ತೀವ್ರವಾಗಿ ರೋಗ ನಮ್ಮ ರಾಜ್ಯದಲ್ಲಿ ಹರಡಿಲ್ಲ"ಅಂದರೆ ಜನರೆಲ್ಲ ರೋಗದಿಂದ ನರಳಿ ಸಾಯಬೇಕು,ಇವರು ಸಾಂಕ್ರಾಮಿಕ ರೋಗವನ್ನು ತಡೆಯುವ ಕ್ರಮ ಕೈಗೊಳ್ಳಲು ಅನ್ನೋದು ಇವರ ಮಾತಿನ ಅರ್ಥವೇನೋ,ಸುಮ್ಮ ಸುಮ್ಮನೆ ಮುಂಜಾಗ್ರತ ಕ್ರಮ ಕೈಗೊಂಡು ರೋಗ ಹರಡದಿದ್ದರೆ ಅವರ ಶ್ರಮವೆಲ್ಲ ವ್ಯರ್ಥವಾಗುತ್ತೆ,ಅನ್ನೋದು ಮಂತ್ರಿಗಳ ಯೋಚನೆ ಇರಬೇಕು.ಅವರ ಬುದ್ದಿವಂತಿಕೆಯನ್ನ ಮೆಚ್ಚಲೇ ಬೇಕು ಬಿಡಿ.


ನಾವು ರೋಗ ನಿಯಂತ್ರಿಸಲು ಎಷ್ಟು ಸಾದ್ಯವೋ ಅಷ್ಟು ಮುಂಜಾಗ್ರತ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದೇವೆ ಎಂದು H1N1 ರೋಗದ ಬಗ್ಗೆ ಭಾಷಣ ಮುಂದುವರಿಸುತ್ತಲೇ 'ಅಗತ್ಯವಿರುವ ಹೆಚ್ಚುವರಿ ಸಿಬ್ಬಂಧಿಯನ್ನು ನೇಮಿಸಿಕೊಳ್ಳಲು ಕ್ರಮ ಜರುಗಿಸಲಾಗುವುದು, ಕೇಂದ್ರದಿಂದಲೂ ಇನ್ನು ಹೆಚ್ಚಿನ ಔಷಧ ಸವಲತ್ತನ್ನು ಪಡೆಯಲಾಗುವುದು'.ಎಂಬ ಆರಿಕೆಯ ಉತ್ತರಗಳನ್ನು ನೀಡುತ್ತಲೇ ಸಾಗುವವನು ನಮ್ಮ ಘನ ಸರ್ಕಾರದ ಆರೋಗ್ಯ ಮಂತ್ರಿಯೂ,ಅವನ ಕಾರ್ಯ ವೈಕರಿಯೂ ಅದ್ಭುತವಾದುದ್ದೆ ಅಲ್ಲವೇ.


ನೂರಾರು ಸಾಮನ್ಯ ಜನರು H1N1 ರೋಗದಿಂದ ಸತ್ತರೆ ಮಾತ್ರ ಅದನ್ನು ತಡೆಯುವ ಗಂಭೀರ ಕ್ರಮ ಜರುಗಿಸೋದು, ಒಬ್ಬ ಸತ್ತರೆ ಪಾಪ!ಅದು ಸಾವಲ್ಲ.ಹೇಳಿಕೊಳ್ಳಲು ಸಂಖ್ಯೆಯು ಅಲ್ಲ.ಲಕ್ಷ,ಸಾವಿರಗಟ್ಟಲೆ ವೋಟ್ ಬ್ಯಾಂಕಿನ ರೀತಿ ಸಾವು ಸಹ ಸಂಖ್ಯಾ ಬಲವನ್ನು ಪ್ರದರ್ಶಿಸಿದರೆ ಮಾತ್ರ ಅವರಿಗೆ ಅರಿವಾಗುವುದು,ರೋಗ ಯಾಗೆ ತೀವ್ರ ತರವಾಗಿ ಸಾಮನ್ಯ ಜನರ ಜೀವವನ್ನು ಬಲಿತೆದುಕೊಳ್ಳುತ್ತಿದೆ ಎಂದು.ಇಲ್ಲವಾದರೇ ಮಂತ್ರಿಗಳ ಪ್ರಕಾರ ಸಮಾಜದಲ್ಲಿ ಇವೆಲ್ಲ ಮಾಮೂಲು ಘಟನೆ.ಸಾಮನ್ಯನೊಬ್ಬನ 'ನೋವು''ಸಾವು' ಅದರ ವೇದನೆ ಎಲ್ಲ ಅವರಿಗೆ ಹೇಗೆ ತಿಳಿಯಬೇಕು.ಅವರೇನು 'ಸಾಮನ್ಯಜೀವೆಗಳೇ' ಅವೆಲ್ಲ ಅವರಿಗೆ ಅರ್ಥವಾಗೋಕೆ, ಅಸಮಾನ್ಯರು ಅವರು "ರಾಜ್ಯದ ಮಂತ್ರಿಗಳು"ಪ್ರಜೆಯಲ್ಲ, ಪ್ರಜೆಯಾಗಿದ್ದರೆ ಅವರೇಕೆ ಹೀಗೆ ವರ್ತಿಸುತ್ತಿದ್ದರು.ಅವರನ್ನು ದೂಷಿಸುವುದು ಸರಿಯಲ್ಲ ನಮ್ಮದೇ ತಪ್ಪು,ನಮ್ಮ ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳದೆ,ರಾಜ್ಯದ ಆರೋಗ್ಯ ಮಂತ್ರಿಗಳನು ದೂಷಿಸುವುದು ಯಾವ ನ್ಯಾಯ ಅಲ್ಲವೇ? ಸಾಮಾನ್ಯರು ನಾವುಗಳು ನಮ್ಮ ಇತಿ-ಮಿತಿಗಳನು ಅರಿತು ಮಾತನಾಡುವುದ ಕಲಿಯಬೇಕು ಮೊದಲು.



ಬಾಬ ಆಮ್ಟೆಯಂಥ ಮಹಾನ್ ಜೀವಿಗಳು ಬೀದಿಯಲಿ ಬಿದ್ದು ನರಳಾಡುತ್ತಿದ್ದ 'ಕುಷ್ಟ ರೋಗಿಯ'ವೇದನೆಯನ್ನು ಕಂಡು,ಅಂದಿನಿಂದಲೇ ತನ್ನ ಜೀವಮಾನವಿಡಿ ಕುಷ್ಟರೋಗಿಗಳ 'ಕಲ್ಯಾಣಕ್ಕಾಗಿಯೇ' ದುಡಿದು,ಪರರ ಸೇವೆಯೇ ದೇವರ ಕಾರ್ಯವೆಂಬಂತೆ ಬದುಕಿ ಸಾವಿರಾರು ನಿರ್ದಯಿ,ನಿರ್ಗತಿಕರಿಗೆ ಸ್ವಾವಲಂಬನೆಯ ಬದುಕ ದಾರಿ ತೋರಿಸಿ,"ಆನಂದವನ"ಎಂಬ ಸ್ವಯಂ ಸೇವಾ ಶಿಬಿರವನು ಕಟ್ಟಿ ಬೆಳಸಿ,ಅಲ್ಲಿ ಬಂದ ವಿಕಲಚೇತನರೆಲ್ಲ ಸ್ವಾಭಿಮಾನಿಗಳಾಗಿ ಬದುಕುವಂತೆ,ಸಾವಿರಾರು ಅನಾಥರಿಗೆ ಪೋಷಕರಾಗಿ ಅವರ ಬಾಳನು ಹಸನಾಗಿಸಿ,ಕೊನೆಯವರೆಗೂ ತನ್ನಲ್ಲಿಗೆ ಬಂದವರ ನೋವಿಗೆ ಸ್ಪಂಧಿಸಿದ ಜೀವಾತ್ಮರಿದ್ದ ನಾಡಿನಲ್ಲಿ ಇಂತಹ 'ಆರೋಗ್ಯ ಮಂತ್ರಿ' ಇದ್ದಾರೆ ಎಂಬುದು ಇಂದಿನ ವಾಸ್ತವದ ವಿಪರ್ಯಾಸವಷ್ಟೆ.


ಅವರುತಾನೇ ಏನ ಮಾಡಿಯಾರು ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದಾರೆ,ಅದು ಅಲ್ಲದೆ ಬಳ್ಳಾರಿಯ ಕೋಟ್ಯಾಂತರ ರೂಪಾಯಿಯ ಅವರ ವ್ಯವಹಾರವ ಬಿಟ್ಟು ಇಲ್ಲಿ ಯಾರೋ ಒಬ್ಬ ಸಾಮಾನ್ಯನ ಬಗ್ಗೆ ತಲೆಕೆಡಿಸಿಕೊಳ್ಳಲು ಅವರಿಂದ ಸಾಧ್ಯವಿಲ್ಲ.ಹಾಗಾಗಿ ಸಾಮಾನ್ಯರೇ ನೀವುಗಳೇ ಸ್ವಲ್ಪ ಸಹಿಸಿಕೊಂಡು,ಅವರೊಂದಿಗೆ ಸಹಕರಿಸಿ ಅನ್ನೋದು ನಾನೊಬ್ಬ ಭವ್ಯ ಭಾರತದ ಮತದಾರನಾಗಿ ನಿಮ್ಮಲ್ಲಿ ಮಾಡುವ ವಿಜ್ಞಾಪನೆ.

Friday, August 14, 2009

ತೀರವು ನಾ...





ತೀರವು ನಾ...

ನದಿಯೊಡಲ ವಿಕ್ಷಿಪ್ತ
ನಿನ್ನ ಅಂತರಾಳವು
ನಿಗೂಡ ಒಡಲಿಂದ
ಚಿಮ್ಮಿ ಬರುವ
ಒಲವಿನ ಅಲೆಯ
ಜೀವಸ್ಪರ್ಷದಲಿ
ರೋಮಾಂಚನವಾಗುತಿಹ
ತೀರವು ನಾ.....


ಅಪರಿಮಿತ

ಅಲೆಗಳ ಬಡಿತದಲಿ
ನದಿಯೊಡಲ
ತುಮುಲವರಿವ ತವಕದಲಿ
ಮೂಡಿದ ಅವಿನಾಭಾವ
ಸಂಭಂದದಲಿ
ಪುಳಕಿತವಾಗುತಿಹ
ತೀರವು ನಾ....


ನನಗೇಕೆ ಹೀಗನಿಸುತ್ತದೆ ಎಂಬುದನ್ನು ನಾನೇ ಪುನಃ ಪುನಃ ಪ್ರಶ್ನಿಸಿಕೊಂಡು ಉತ್ತರ ಹುಡುಕಲು ಪ್ರಯತ್ನಿಸಿದ್ದೇನೆ. ಆದರೇ ಉತ್ತರ ಸಿಗದೇ ಮತ್ತೆ ಮತ್ತೆ ಅದೇ ಗೊಂದಲಕ್ಕೆ,ಜಿಗ್ಜ್ಞಾಸೆಗೆ ಒಳಗಾಗಿದ್ದೇನೆ, ಆಗುತ್ತಲೇ ಇದ್ದೇನೆ . ಅದೇನೋ ತಿಳಿಯದು ನನಗಂತು ಪ್ರೇಮ, ಪ್ರೀತಿ, ವಿರಹ,ಏಕಾಂಗಿತನದ ತೀವ್ರ ತರವಾದ ಯಾವ ಅನುಭವ ಇಲ್ಲದೇ ಕೇವಲ ಕಲ್ಪನೆಯ ವಿಹಂಗಮ ಲೋಕದಲಿ ಹಕ್ಕಿಯ ಸ್ವಚಂದತೆಯಲಿ ಮೂಡಿಬರುವ ಪದಲಾಲಿತ್ಯದಲಿ ಇಂತಹ ಕವನಗಳ ಬರೆದು ಬಿಡುತ್ತೇನೆ.ಯಾವಾಗಲೋ ತುಂಬಾ ದಿನಗಳ ಹಿಂದೇ ಬರೆದ, ಪ್ರೇಮ ಕವನದಂತಿರುವ ಈ ಪುಟ್ಟ ಕವನ ಕಣ್ಣಿಗೆ ಬಿದ್ದಿತ್ತು, ಹಾಗೇ ಕಣ್ಣಾಡಿಸಲು,ಕಲ್ಪನೆಯಲಿ ಅವಳ ಮನದಲಿನ ಭಾವಗಳ,ವಿಕ್ಷಿಪ್ತತೆಗಳ ತಾಕಲಾಟಗಳನು ನದಿಯ ಅಂತರಾಳದ ತಳಮಳಕ್ಕೆ ಹೋಲಿಸಿ ಒಂದು ರೂಪಕವಾಗಿ, ಹೆಣ್ಣಿನ ಮನವನು ಕವನದಲಿ ಏಕೆ ಚಿತ್ರಿಸಿದೇ ಎಂದು ನಾನೇ ಮತ್ತೆ ಮರು ಪ್ರಶ್ನಿಸಿಕೊಂಡರೆ ಉತ್ತರ ಸಿಗದಾಯಿತು.ಇಂತಹ ಪ್ರತಿಮಾ ರೂಪಕಗಳು ನಿಮ್ಮನ್ನು ಕಾಡಿರುವುದು ಸಾಮಾನ್ಯ ಅಲ್ಲವೇ, ಆಗಾಗ್ಗಿ ಕವನವ ಓದಿ ನಿಮ್ಮ ಅನಿಸಿಕೆಯನ್ನ ಬರೆಯಿರಿ,ನನ್ನ ನಿಮ್ಮ ಮನದ ತಾಕಲಾಟಗಳನು ಒಮ್ಮೆ ಒಂದು ಸಪಾಟಿನಲ್ಲಿಟ್ಟು ಪರಾಮರ್ಶಿಸೋಣ ಸ್ನೇಹಿತರೆ.

Sunday, August 9, 2009

ಸತ್ಯ ಮಾರಾಟಕ್ಕಿದೆ ಕೊಂಡುಕೊಳ್ಳಿ..


ನಿನ್ನ ಗಂಡನೊಂದಿಗೆ ದಾಂಪತ್ಯದ ಸಖಿಗೀತವನು ಅನ್ಯೋನ್ಯವಾಗಿ ಮದುವೆಯಾದಾಗಿನಿಂದ ಹಾಡುತಲಿದ್ದರು, ಒಮ್ಮೆಯಾದರೂ ಪರಪುರುಷನ ಸಾಂಗತ್ಯದ ಸುಖವನು ನೀನು ಬಯಸಿಲ್ಲವೇ? ಅಯ್ಯೋ! ಶಿವನೆ ಇವನಿಗೆನಾಯಿತು ಎಂದು ಗಾಬರಿಯಾಗಬೇಡಿ,ಎದುರಿಗೆ ಕೂತವಳ ಕಣ್ಣಲ್ಲೆ ಕಣ್ಣಿಟ್ಟು ಪ್ರಶ್ನೆ ಕೇಳಿದವನಿಗೆ ಎದ್ದು ಒದೆಯಲಿಲ್ಲ ಅಷ್ಟೆ.ದಂಗುಬಡಿದಂತಾಗಿ ಏನು ಹೇಳಬೇಕೋ ತಿಳಿಯದೆ ಸುಮ್ಮನೆ ಮೌನಕೆ ಶರಣಾದಳು. ಇಂತಹ ಪ್ರಶ್ನೆಗಳ ಕಾರಣಕ್ಕಾಗಿಯೇ ಇತ್ತೀಚಿಗೆ ವಿವಾದಕ್ಕೆ ಈಡಾಗಿರುವ ಸ್ಟಾರ್ ವಾಹಿನಿಯು 'ಸಚ್ ಕಾ ಸಾಮ್ನ' ಕಾರ್ಯಕ್ರಮದಲಿ ಕೇಳುವ ಪ್ರಶ್ನೆಯ ಪರಿ ಇದು.

ಇಂತಹ ವಿಭಿನ್ನ ಕಾರ್ಯಕ್ರಮಗಳನು ರೂಪಿಸುತ ಆಧುನಿಕತೆಯ ಅರ್ಥಹೀನ ನಾವಿನ್ಯತೆಯನು ಮೆರೆಯುವ ಅಮೇರಿಕಾದ ಒಂದು ರಿಯಾಲಿಟಿ ಷೋನ ಹಿಂದಿ ಅವತರಣಿಕೆಯೇ 'ಸಚ್ ಕಾ ಸಾಮ್ನ'.ಸತ್ಯವೇ ಜೀವನ ದರ್ಶನ ಎಂದ ಭಾರತೀಯರ ಸತ್ಯಕ್ಕಿಂದು 'ಮಾರುಕಟ್ಟೆ ಸಿಕ್ಕಿದೆ'.ನಮ್ಮೊಳಗಿನ ಸತ್ಯವನು ಮಾರ್ಕೆಟಿಂಗ್ ಮಾಡಿ ಹಣ ಮಾಡುವ ಸಾವಕಾಶ ನಮ್ಮನ್ನರಸಿ ಬಂದಿದೆ. ನಮ್ಮಯ ಸತ್ಯ ಪರತೆಯು ಜಾಗತಿಕ ಮಾರುಕಟ್ಟೆಯಲಿ ಬಿಕರಿಗಿರುವ ವಸ್ತುವಾಗಿರುವುದು, ವಿಪರ್ಯಾಸವೋ? ವಿಚಿತ್ರವೋ? ಸಂತಸದ ಸಂಗತಿಯೋ ನನಗಂತು ತಿಳಿಯದಾಗಿದೆ.

ಮಾನವನ ಭಾಷ ಸಾಮರ್ಥ್ಯದ ನಿಲುಕುಗಳ ಬಗ್ಗೆಯೇ ಸೋಜಿಗವೆನಿಸುವುದು.ಇಂದಿನ ಪರಮ ಪಾಪಿಗಳ ಲೋಕದಲ್ಲಿ ನಿಷ್ಠಾವಂತ ಮುಕ್ತ ಮನಸಿನ ಸಾಧುವು ಸಹ ತನ್ನ ತೀರ ಖಾಸಗಿ ಎನಿಸುವ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನು ಜಗಕೆ ತಿಲಿಸಲಿಚ್ಚಿಸುವುದಿಲ್ಲ.ಪ್ರತಿಯೊಬ್ಬನು ತನ್ನಯ ಒಂದಾದರೂ ವ್ಯಕ್ತಿತ್ವವನು ಸಾರ್ವಜನಿಕ ದೃಷ್ಟಿಯಿಂದ ದೂರವಿರಿಸುತ್ತಾನೆ.ಮಾತಿನ ಚತುರತೆಯಲ್ಲೇ ಆ ದ್ವಂದ್ವತೆಯ ಸಂಕಿರ್ಣತೆಯನ್ನು ಜೀವನವಿಡಿ ನಿಭಾಯಿಸಿಕೊಂಡು ಕಾಪಾಡಿಕೊಳ್ಳಬಲ್ಲ ಚತುರನಿಗಿಂದು ಸತ್ಯವನು ಹೇಳುವುದೇ ಒಂದು ಸಾವಲು.

ಅರೇ ಸತ್ಯವನು ಹೇಳೋದು ಅಷ್ಟು ಕಷ್ಟವೇ,ಎಂತಹ ಹೀನಾಯ ಸ್ಥಿತಿಗೆ ತಲುಪಿದೆವು ನಾವೆಲ್ಲಾ ಅನ್ನೋ ಮರುಕ ಹುಟ್ಟುವ ಸಂಧಿಗ್ಧತೆಯಲಿದ್ದೇವೆ ನಾವೆಲ್ಲಾ. ತನ್ನ ಮನದ ಉಗ್ರಾಣದಲಿ ಅವಿತಿರುವ ಕಳ್ಳಸತ್ಯವನು ಸಾರ್ವಜನಿಕಗೊಳಿಸಲು ಇಂದು ಎದೆಯಲಿ ಕಲ್ಲಿನಂತ ಗುಂಡಿಗೆಯೇ ಇರಬೇಕು.ಪ್ರತಿ ಸತ್ಯಕು ಮಾರುಕಟ್ಟೆಯಲಿ ಮೌಲ್ಯವಿರುವುದರಿಂದ,ಸತ್ಯ, ವಸ್ತುನಿಷ್ಟವಾಗಿರಬೇಕು,ಜಗಕಲ್ಲ ಅಲ್ಲಿ ಕಾರ್ಯಕ್ರಮದಲಿ ಅಳವಡಿಸಿರುವ ತಂತ್ರಜ್ಞಾನಕೆ.ಏಕೆಂದರೆ ನಿಮ್ಮ ಉತ್ತರದಲ್ಲಿ ಅಡಗಿರುವ ಸತ್ಯ ಸುಳ್ಳುಗಳ ಪಾರಮರ್ಶೆ ಇಲ್ಲಿ ನಿಮ್ಮ ಅಂತರಾತ್ಮ,ದೇವರುಗಳ ಮೆಲೆ ಅವಲಂಬಿತವಾಗಿಲ್ಲ ಬದಲಿಗೆ ನಿಮಗೆ ಅಳವಡಿಸಿದ ತಂತ್ರತೆ ಮೇಲಿದೆ. ಯಂತ್ರ ಅನುಮೊದಿಸಿದರಷ್ಟೇ ನಿಮ್ಮ ಮಾತು ಸತ್ಯವಾಗುವುದು, ಇಲ್ಲವಾದಲ್ಲಿ ನೀವು ಹೇಳಿದ ಸತ್ಯವು ಸುಳ್ಳೇ. ಹಣ ಬೇಕಾದರೆ ಯಂತ್ರ ಸರಿ ಎನುವ ಸತ್ಯ ಹೇಳಬೇಕಾಗಿದೆ. ಕಾರಣ ಇದು;

"ಸತ್ಯ ಮೇವ ಜಯತೆಯ ಕಾಲವಲ್ಲ,
ಸತ್ಯ ಮಾರುವ ಜನತೆಯ ಕಾಲ".

ನಾನು ಸತ್ಯವನ್ನೇ ಹೇಳುತ್ತೇನೆ,ಸತ್ಯವನಲ್ಲದೆ ಬೇರೇನನ್ನು ಹೇಳುವುದಿಲ್ಲ .......ನಗು ಬಂದರೆ ನಕ್ಕು ಸುಮ್ಮನಾಗಿಬಿಡಿ.

ನನ್ನ-ನಿನ್ನ ನಡುವಿನ(ಅರ್ಧ)ಸತ್ಯ

ದಿಟ್ಟಿಸುವ ಕಣ್ಣಿನಲ್ಲಿನ ಸೂಜಿಮನೆಯ
ಹರಿತಕೆ ಮನದಲೇನೋ ದಡಗುಡಿಸಿ
ಮುಚ್ಚಿದ ಕಣ್ಣರೆಪ್ಪೆಗೆ ಅರಿವಾಗಿ ಪ್ರಶ್ನೆಯ
ಮೊನಚು ಮರೆಮಾಚಿಸಲೊಮ್ಮೆ
ಸುತ್ತಲಿನ 'ಬೆಳಕ'
ಒಳಗಿನ ಅಳುಕು, ಕಣ್ಣ ಭಾಷೆಯಲು
ಹರಿಯದಿರಲಿ ರೆಪ್ಪೆಯ ಎಲ್ಲೇ ಮೀರಿ
ಎಂಬ ಮತಿಯ ಲೆಕ್ಕಚಾರವನು
ಗುಣಿಸುವಲಿ ಸೋತು ಕಂಗಳಲಿ
ಹೊಮ್ಮುವ ತೆರೆ
'ಅರ್ಧಸತ್ಯ'.


ಇದು ರಾಮ,ಕೃಷ್ಣರ ಧರ್ಮ ಸೆರೆಯಲ್ಲ
ಹರಿಶ್ಚಂದ್ರನ ಸತ್ಯ ಪರಿಪಾಲನ ಪ್ರಜ್ಞಾವಿಧಿಯಲ್ಲ
ಗಾಂಧೀ,ಪರಮಹಂಸರ ಸತ್ಯಾನ್ವೇಷಣೆಯ
ಪರಿಯೂ ಅಲ್ಲ, ಸತ್ಯವೇ ನಮ್ಮ ತಂದೆ-ತಾಯಿ
ಎಂದ ಪುಣ್ಯಕೋಟಿಯ ನೀವೆದನೆಯಲ್ಲ,
ಇದು ನನ್ನ-ನಿನ್ನ, ಆತ್ಮ-ಪರಮಾತ್ಮನ ನಡುವಿನ
ಬಿಂದುವಿನಂತರ
"ಸತ್ಯವೇ".
ಎಚ್.ಎನ್.ಈಶಕುಮಾರ್.

Wednesday, August 5, 2009

ಹೀಗೊಂದು ಹನಿಗವನ


ಕೆಲದಿನಗಳ ಹಿಂದೆ ನಾ ಹೋಗುವ ದಾರಿಯಲಿ

ನಡೆದ ಒಂದುಚಿಕ್ಕ ಮತ್ತು ಮನಸಿಗೆ ಯಾಕೋ ಮಾಮೂಲಿ ಎನಿಸದ,ನಮ್ಮ ಬುದ್ದಿಮತೆ ಗ್ರಹಿಸುವ ನಡೆಗೆ ವಿರೋಧವಾಗಿ ಕಂಡಿದ್ದರಿಂದಲೋ ಏನೋ ನನಗೆ ಇಂತಹ ವಿಡಂಬನೆಯ ಕವನದ ಸಾಲುಗಳು ಮೂಡಿದವೆನ್ನಿ. ಹೀಗೆ ಹೇಳಿ ಕವನದ ವಿಷಯ ಅಭೂತವದುದು ಎಂದು ತಿಳಿಸುವುದು ನನ್ನ ಮಾತಿನ ಉದ್ದೇಶವಲ್ಲ. ಅದೊಂದು ಸರ್ವೇ ಸಾಮನ್ಯವಾಗಿ ನಮ್ಮ ಕಣ್ಣೆದುರಿಗೆ ಜರುಗುವ ಸಂಗತಿ ಅಂದು,'ನನಗೆ ವಿಚಿತ್ರ 'ಎನಿಸುವ ಹಾಗೆ ಆ ಕ್ಷಣಕೆ ಜರುಗಿತು ಅಷ್ಟೆ.




ನಾಸ್ತಿಕತೆ ಮನದಲಿ ಅಂಕುರವಾಗಿ ದಶಕಗಳೇ ಕಳೆದಿದ್ದರೂ,ನಮ್ಮ ಆಚಾರ ವಿಚಾರಗಳ ಭಾವವೋ, ನಮ್ಮ ಸಂಸ್ಕೃತಿಯನಿಮಿತ್ತ ಸಾಗಿ ಬಂದ ಪರಂಪರತೆಯ ವಿಧಾನವೋ, ನಮ್ಮಸುತ್ತಲಿನ  ಅದರಲೂ ಪೂಜೆ,ದೇವರು,ದೇವಸ್ಥಾನಗಳ ವಿಚಾರಗಳು ಒಂದು ನಮೂನೆಗೆ ಹೊಂದಿಕೊಂಡಿರುತ್ತವೆ ಎಂಬುದು ನಮ್ಮ ಮನದ ಒಪ್ಪಿತ ಮುದ್ರೆಯಾದುದರಿಂದಲೋ ಈ ಹನಿಗವನ ಮೂಡಿದೆ ಅಷ್ಟೆ.


ಅಲೌಕಿಕತೆಯ ಭಕ್ತಿ-ಭಾವದ ವ್ಯಕ್ತತೆ ಹೀಗೆ ಆಗಬೇಕ? ಆಗಬಾರದ? ಅಥವಾ ಸರಿ ಯಾವುದು,ತಪ್ಪಾವುದು ಎಂದು ವಿಶ್ಲೇಷಿಸುವ ಧೋರಣೆಯು ನನ್ನದಲ್ಲ.


ಮನದಲಿನ ಭಕಿಭಾವವೇ ಮುಖ್ಯವಾದರು ಆ ವ್ಯಕ್ತತೆಯಲಿ ನಾ ಕಂಡ ನವ್ಯತೆ ಈ ಹನಿಗವನದಲ್ಲಿದೆ ಅಷ್ಟೆ.ಕವನ ಓದಿದ ನಂತರ ಏನೇ ಅನಿಸಿದರೂ ಮುನಿಸು, ಮುಜುಗರವನು ಪಕ್ಕಕಿಟ್ಟು ನಿಮ್ಮ ಅಭಿಪ್ರಾಯ,  ವಿಮರ್ಶೆಯನ್ನ ಬರೆಯಿರಿ ಸ್ನೇಹಿತರೆ..



ಮಾಡ್ರನ್ ಭಕ್ತೆ

ತೆಳ್ಳಗೆ ಬಳುಕುತಿರುವ ದೇಹ
ಚರ್ಮ ಕಂಟಿರುವ ಟೈಟ್ ಜೀನ್ಸು
ಬಿಗಿದುಕೊಂಡಿರುವ ಬ್ರಾಂಡೆಡ್
ಟಾಪ್ ನ ಹುಡುಗಿ
ತನ್ನ ಬಾಯ್ ಫ್ರೆಂಡ್ ನ
ಸೊಂಟವನುಬಳಸಿ
ಬಿಗಿದಿಡಿದು,

ಸರ್ರನೆ ನುಗ್ಗುವ ಬೈಕಿನ
ಓಟಕೆ ಅವಳ ನೀಳಕೇಶ
ಗಾಳಿಯಲಿ ತೂರಾಡಲು
ಕಪ್ಪು ಕೂಲಿಂಗ್ ಗ್ಲಾಸ್
ಒಳಗಿನ ಅವಳ ಮಾದಕ
ಕಣ್ಣುಗಳು ದಾರಿ ಬದಿಯ
ದೇವರ ಗುಡಿಯ ಕಂಡೊಡನೆ
ಮನ ಶ್ರದ್ದ ಭಕ್ತಿಯಲೇ
ನಮಿಸಿತು.



Friday, July 31, 2009

ಗಾಡಿ ಬುಲಾರಹೀ ಹೇ..ಸೀಟಿ ಬಜಾರಹೀ ಹೇ..










ನಮ್ಮ ಊರಿನಲ್ಲಿ ಅಂತಹ ರೈಲುಗಾಡಿಗಳಿಲ್ಲವಲ್ಲ ಎಂಬ ಬೇಸರ, ಅಲ್ಲಿಯ ಜನರ ವಿಭಿನ್ನ ಅನುಭವಗಳೆಡೆಗೆ ಹೊಟ್ಟೆ ಬುರುಕುತನ ನನ್ನಲಿನ್ನು ಏಕೋ ಹಾಗೇ ಉಳಿದುಬಿಟ್ಟಿದೆ. ದೇಶದ ಉದ್ದಗಲದಿಂದಲೂ ಬಂದು ಬಂದು ಎಲ್ಲೆಂದರೆಲ್ಲಿ ಬರಿ ಮನುಷ್ಯರೇ ತುಂಬಿ ಹೋಗಿರುವ ಮುಂಬೈ ನಗರಕೆ ನನ್ನ ಭೇಟಿಯೇ ಒಂದು ಆಕಸ್ಮಿಕ.
ಚಿಕ್ಕಂದಿನಿದಲೇ ಅದೊಂದು ನಗರದ ಬಗ್ಗೆ ಸುಮ್ಮಸುಮ್ಮನೆ ಭಾರೀ ದಂತಕಥೆಗಳನ್ನ ಕೇಳಿದ್ದೆ. ನಮ್ಮೂರಿನಲ್ಲಿ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಬಹಳಷ್ಟು ಹುಡುಗರು ಮುಂಬಯಿಗೆ ಹೋಗಿ ಅಲ್ಲಿಯ ಹೋಟೆಲು, ಬಾರುಗಳಲ್ಲಿ ಚಾಕರಿ ಮಾಡಿ ದುಡ್ಡು ದುಡಿದು ಹಬ್ಬ ಹರಿದಿನಕ್ಕೆ ಊರಿಗೆ ಬಂದಾಗ ದಿವಾನರಂತೆ ಓಡಾಡುತಿದ್ದವರ ಬಗ್ಗೆ ಅವ್ವ(ಅಜ್ಜಿ) ಹೇಳುತಿದ್ದುದು 'ಬೊಂಬಾಯಲಿ ಚೆನ್ನಾಗಿ ದುಡ್ಡ್ ಮಾಡ್ಕೊಂಡು ಬಂದವ್ನೇ ತಗೋ ಅವನಿಗೇನು ದೌಲತ್ತಾಗಿ ತಿರುಗುತ್ತಾನೆ ಇಲ್ಲಿ ಅನ್ನೋರು'.
ಹೀಗೆ ಬಾಂಬೆಯ ಬಗ್ಗೆ ತರಾವರಿಯಾಗಿ ಕೇಳಿಯೆ ಕುತೂಹಲಿಯಾಗಿದ್ದ "ಕಾರ್ಮಿಕರ ಕೈಲಾಸವಾದ ಮುಂಬೈ"ನಗರಿಯನು ನೋಡಬೇಕೆಂಬ ಅಲೆಮಾರಿಯ ಹಂಬಲ ಕಳೆದ ವರ್ಷ ಸಾಕಾರವಾಹಿತು.ಹಲವು ವಿಚಿತ್ರ, ವಿಕ್ಷಿಪ್ತ, ವೈಶಿಷ್ಟ್ಯಗಳಿಗೆ ಹೆಸರಾಗಿದ್ದರು ಮುಂಬೈನ 'Local Train' ವ್ಯವಸ್ಥೆಯೇ ನನಗೆ ಅದ್ಭುತವೆನಿಸಿದ್ದು.ಎಡಬಿಡದೇ ಮುಂಬೈ ನಾಗರಿಕರನ್ನು ಹೊತ್ತು ಸಾಗುವ ಸಂವಹನ Local train ಎಂಬ ಗರೀಭಿ ರಥದ ವೈಶಿಷ್ಟ್ಯವನ್ನು ನಾ ಕಂಡಂತೆ ನಿಮಗೆ ಹೇಳಬೇಕೆನಿಸುತ್ತದೆ. ರೈಲು ಲೋಕಲ್ ಆದರೂ, ಅದರ ವೈವಿಧ್ಯತೆ ಮಾತ್ರ 'Local' ಎಂದು ನಿಮಗನಿಸುವುದಿಲ್ಲ ಎಂಬುದು ನನ್ನ ನಂಬಿಕೆ ಸ್ನೇಹಿತರೆ.


ದುಡಿಯುವವರ ನಗರವೆಂದೇ ಖ್ಯಾತಿಯಾದ ಮುಂಬೈಯನ್ನು ಪೂರ್ವ-ಪಶ್ಚಿಮ ಮುಂಬೈ ಎಂದು ಸೀಳು ಮಾಡಿರುವ ಹಳಿಗಳ ಮೇಲೆ ಜಗದ ಪರಿವೇ ಇಲ್ಲದೆ ತನ್ನ ಪಾಡಿಗೆ ತಾನು ದಿನಂಪ್ರತಿ ಸವೆಸಿಯು ಸವೆಸದ ಹಳಿಗಳ ಮೇಲೆ ಅತ್ತಿಂದಿತ್ತ ಅಡ್ಡಾಡುತ 'ಮಾನವ ಸಂಪರ್ಕ ಸೇತುವೆಯಾಗಿರುವ' local train' ಎಂಬ ಆಧುನಿಕ ಅನ್ವೇಷಣೆಯು ನಿಜಕ್ಕೂ "ಮುಂಬೈ ಎಂಬ ದೇಹಕ್ಕೆ ರಕ್ತನಾಳವಿದ್ದಂತೆ".ಒಂದಿಲ್ಲೊಂದು ಕಾರಣಕ್ಕೆ ಮುಂಬೈ ನಿವಾಸಿಗರ ಜೀವನದಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈ ರೈಲು ಬಂಡಿಗಳು,ಪ್ರದೇಶ-ಪ್ರದೇಶಗಳ ಜೊತೆಗೆ ಮಾನವರ ನಡುವೆಯು ಸಂಪರ್ಕ,ಸಂಬಂಧಗಳನು ನಿರ್ಮಿಸುತ್ತಲೇ ಸಾಗಿದೆ.
ಎಲ್ಲಿ ಸಂಪರ್ಕ ಸಂವಹನಗಳ ಸೌಲಭ್ಯ ಉತ್ತಮವಾಗಿರುತ್ತದೋ ಅಲ್ಲಿ ಮಾನವನ ಸಂಬಂಧಗಳು ಉತ್ತಮವಾಗಿ ಬೆಳೆಯುತ್ತವೆ ಅನ್ನೋದಕ್ಕ್ಕೆ ಬಾಂಬೆಯ ಜನ ಜೀವನ ಸ್ವರೂಪವೇ ಸಾಕ್ಷಿ.ಬಡವರು,ಕಾರ್ಮಿಕರು,ಕಾಲೇಜು ಹುಡುಗ ಹುಡುಗಿಯರು, ಶೋಕಿಗಾಗಿ ಊರು ಸುತ್ತುವವರು ಹೀಗೆ ಯಾರು-ಯಾರೋ ರೈಲಿನ ಬೋಗಿಯೊಳಗೆ ಸೇರಿ ತಮ್ಮ ನೀವೆದನೆಗಳೊಂದಿಗೆ ಎದುರಿಗಿರುವವರನ್ನು ಮಾತಿಗೆಳೆಯುತ್ತ ಪಯಣವನು ಹಗುರಗೊಳಿಸಿಕೊಳ್ಳುತ್ತ ಸಾಗುವ ಅವರ ಅನುದಿನದ ಪಯಣ, ಅಂಟುರೋಗವೆಂಬಂತೆ ದಿನವೂ ಒಬ್ಬ ಅಪರಿಚಿತನನ್ನಾದರು ಮಾತಿಗೆಳೆಯುತ್ತದೆ. ಆ ಕ್ಷಣದ ಮಾತಿಗಸ್ಟೇ ಸ್ಪಂಧಿಸುವ ಅವರ ಮಾತುಗಳು,ಆಪ್ತತೆಗೆ ನಮಗಾಗೋ ಅ ಅನುಭವವೇ ಅಭೂತವೆನಿಸುವುದು.
ಎಲ್ಲರು ಯಾವುದೋ ಅವಸರಕ್ಕೆಬಿದ್ದವರಂತೆ,ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಅವರ ಬಾಳಿನಲಿ ಹಾಸುಹೊಕ್ಕಿರುವ ರೈಲು ಬಂಡಿಯ ಒಡನಾಟ ನಮ್ಮನ್ನ ಚಕಿತಗೊಳಿಸುತ್ತದೆ. ರೈಲು ಬರೋದು ಒಂದು ನಿಮಿಷ ತಡವಾದರೂ ಫ್ಲಾಟ್ಫಾರಂ ಮೇಲೆ ನಿಂತು ಚಡಪಡಿಸೋ ಪಯಣಿಗರ ಕಣ್ಣುಗಳು ಹಳಿಗಳೆಡೆಗೆ ಹೊರಳಿ ಕಾತರಿಸುವುದು. ಹಳಿಗಳ ಮೇಲೆ ತ್ರಿವಿಕ್ರಮನಂತೆ ಸಾಗಿ ಬರುವ ರೈಲು, ನಿಲ್ಲುವ ಕೆಲವೇ ಕ್ಷಣಗಳಲ್ಲಿ ಇಳಿಯುವವರೆಷ್ಟೋ,ಹತ್ತುವವರೆಷ್ಟೋ ಕ್ಷಣ ಮಾತ್ರದಲಿ ಎಲ್ಲವೂ ಆಗಿ ಮುಗಿದಂತೆ. ಆಗತಾನೇ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ನಿಲ್ದಾಣ ನಿಮಿಷದಲ್ಲಿಯೇ ಖಾಲಿ ಖಾಲಿ.ಎಲ್ಲರಿಗೂ ಅವರದೇ ಆದ ಅನಿವಾರ್ಯತೆಗಳ ಅರಿವಾಗಿದೆಯೇನೋ ಎನುವಂತೆ ಸುಮ್ಮನಿದೆ ನಿಲ್ದಾಣ.
ಬೆಳಗಿನ ಜಾವದ 6 ರೈಲೋ, ಆಫೀಸಿನ ಸಮಯಕೆ ಹಿಡಿಯಬೇಕಾದ 8 ರೈಲೋ,ಅವಳತ್ತುವ ರೈಲಿಗೆ ಕಾಯುವ ಪುಂಡನ ರೈಲು,ಶಾಲಾ-ಕಾಲೇಜುಗಳಿಗಾಗೆ ವಿದ್ಯಾರ್ಥಿಗಳು ಕಾಯುವ ರೈಲು,ಹೀಗೆ ಯಾವುದಾದರೊಂದು ರೈಲಿನ ಚಲನೆಯೊಂದಿಗೆ ಮುಂಬೈ ವಾಸಿಗಳ ನಿರಂತರ ಯಾನ ಬೆಸೆದುಕೊಂಡಿದೆ. ಸಿಕ್ಕ ಸೀಟಿನ ಮೇಲೆ ಕೂತು ಪೇಪರ್ ಓದುವವರು,ರೇಡಿಯೋ ಆಲಿಸುತ ತಲೆಯಾಡಿಸುವವರು,ಬೆಳಗಿನ ನಿದ್ದೆ ಹರಿಯದೇ ತೂಕಡಿಸುವವರು,ಪ್ರೇಯಸಿಯೋಟ್ಟಿಗೆ ಫೋನ್ ನಲಿ ಹರಟುತ ಸಾಗುವವರು,ಕೆಲಸದ ತೀವ್ರತೆಯನು ಕಡಿಮೆ ಮಾಡಿಕೊಳ್ಳಲು ಅಲ್ಲೇ ತಯಾರಿ ನಡೆಸುವವರು,ಊರ ಸುತ್ತಲು ಹೋರಾಟ ಅನಾಮಿಕರ ಪರಿಪಾಟಲುಗಳು ಹೀಗೆ ಸೀಮೆ ಸೀಮೆಯ ಜನರನೋಳಗೊಂಡ ಸೀಮಾತೀತವೆನಿಸಿದ ಬೋಗಿಗಳ ರೈಲಿಗೆ ಇದೆಲ್ಲ ಮಾಮೂಲಿ ಎನಿಸಿ, ಯಾವುದೇ ಭೇದವಿಲ್ಲದೆ ತನ್ನ ಪಾಡು ತನಗೆಂದು ಸೈರನ್ ಕೂಗುತ ಅಳಿಗಳ ಮೇಲೆ ಚಕ್ರ ಉರುಳಿಸುತ್ತದೆ.
ಒಂದಿಲ್ಲೊಂದು ಕಾರಣಕ್ಕೆ,ವಿಷಯಕ್ಕೆ,ಪಯಣಕೆ, ವಿಶ್ರಾಂತಿಗೆ,ಮಾತಿಗೆ, ಪ್ರೇಮಕೆ, ಸಂಬಂಧಕೆ ಅಲ್ಲಿಯವರ ಮತ್ತ್ಯಾವುದೋ ಅನಿವಾರ್ಯತೆಗೆ Local ಟ್ರೈನ್ ಅವಲಂಬಿಯಾಗಿ ಸಾಥ್ ನೀಡಿವೆ. ಅವರ ಅವಶ್ಯಕೆ ತಕ್ಕಂತೆ ಈ ರೈಲುಗಳು ಅವರೊಂದಿಗೆ ಸಂಬಂಧವನ್ನು ಬೆಳೆಸಿಬಿಟ್ಟಿವೆ. ಆ ಪ್ರಯಾಣಿಕರ ಸ್ಪರ್ಶ,ಅವರ ಉಸಿರು,ಮಾತು, ಅವರ ತುಳಿತ ಎಲ್ಲವನು ತಕರಾರಿಲ್ಲದೆ ಸ್ವೀಕರಿಸುವ, ದಿನಕ್ಕೆ ಒಮ್ಮೆಯಾದರು ಭೇಟಿಯಾಗುವ 'ಪ್ರೇಯಸಿಯಾಗಿ' ಆ ಜನರ,ನಗರದ 'ಚಲನೆಯಜೀವಾಳವಾಗಿ' ರಾರಾಜಿಸುತ್ತಿರುವ ಅಮಾಯಕ ರೈಲುಗಳಿಗೆ ಮನದ ಒಂದು ಸಲಾಂ .ಈ ಎಲ್ಲ ಅನುಭವಗಳು ನಿಮಗೂ ಆಗಲಿ ಮುಂಬಯಿಯ ಒಂದು ಲೋಕಲ್ ಯಾನದಲ್ಲಿ...

Saturday, July 25, 2009

ಬಾ,ಬಾರೆನ್ನ ಬಾಳಿಗೆ...

ಒಮ್ಮೆ ಆಲಿಸಿ ನಿಮ್ಮ ಮನದ ಮಾತನು...
ಮೊನ್ನೆ ಹಾಗೆ ಸುಮ್ಮನೆ ಮಾತನಾಡುತ್ತ ಅಮ್ಮ 'ಆಷಾಢ ಕಳೆಯಿತು' ಅಂದಳು, ಯಾವುದೋ ಅನಿಷ್ಟ ತೊಲಗಿದಾಗ ಹೇಳುವ ರೀತಿ ಇತ್ತು ಅವಳ ಮುಖಭಾವ.ನಮ್ಮ ಜನಗಳದ್ದು ಒಂದು ರೀತಿಯ ಮಲತಾಯಿಧೋರಣೆ ಆಷಾಢದ ಬಗ್ಗೆ ಅದೇಕೋ ಏನೋ ನನಗಂತೂ ತಿಳಿಯದು? ಜನ್ಮ ಜನ್ಮಾಂತರದ ಯಾವುದೋ ಹಳೆ ವೈಷಮ್ಯವೇನೋ ಎಂಬಂತೆ ಯಾವುದೇ ಶುಭ ಕಾರ್ಯಗಳನ್ನ ಮಾಡೋದೇ ಇಲ್ಲ. ಗಾಳಿ ತನ್ನ ದಿಕ್ಕನ್ನ ಬದಲಿಸಿ ಬರೋದರಿಂದ ಯಾವುದೋ ಅಪಶಕುನ ತಮ್ಮ ಮೈಮೇಲೆ ಎಗರಿಬಿಡುತ್ತದೆ ಎಂಬಂತೆ ಆಷಾಢ ಮಾಸವನ್ನು ಜನಗಳು ದೂಷಿಸುವ ಪರಿಯಂತೂ ನಗು ತರಿಸುವುದು. ಇನ್ನು ಆಷಾಢದಲಿ ಅಗಲಿದ ನವ ದಂಪತಿಗಳ ಪಾಡು ದೇವರೇ ಬಲ್ಲ.
ಆಷಾಢದ ಗಾಳಿ ಎಲ್ಲೆಲ್ಲು ಮಳೆಯ ಸುರಿಸಿ ಮೆಲ್ಲನೆ ಸರಿದಿದೆ. ನವ ದಂಪತಿಗಳ ಮೇಲೇರಿದ್ದ ಸಂಪ್ರದಾಯ ಕಟ್ಟಳೆಯ ತಾತ್ಕಾಲಿಕ ಅಗಲಿಕೆಯ ದಿನಗಳು ತುಂಬಿ, ದಂಪತಿಗಳು ಕೈ ಕೈ ಜೋಡಿಸಿ, ಅಳೆದು ತೂಗಿ ಹೆಜ್ಜೆಗಳನಿಡುತ ಸೊಂಪಾದ ಸಂಜೆಯಲಿ ವಿಹರಿಸುವ ಸುಸಮಯ ಮತ್ತೆ ಅವರ ಹರಸಿ ಬಂದಿದೆ.
ಬಂದಿದೆ ಶ್ರಾವಣ. ಶ್ರಾವಣದ ತಿಳಿಗಾಳಿ ಬುವಿಯಲೆಲ್ಲ ಹರಡಿ, ಸೊಬಗ ಸೂಸುವ ಹೂ, ಬಳ್ಳಿ, ಗಿಡಗಳ ವಯ್ಯಾರಕ್ಕೆ ಮನದಲ್ಲೂ ಕಂಪನ. "ಶ್ರಾವಣ ಬಂತು ಕಾಡಿಗೆ,ಬಂತು ನಾಡಿಗೆ"ಎಂದು ಹಾಡಿದ ಕವಿ ಬೇಂದ್ರೆಯ ಪದ್ಯ ನೆನಪಾಗುವುದು. ಹಸಿರು ಹಸಿರಾಗಿ ಕಂಗೊಳಿಸುವ ಭೂರಮೆ ಪ್ರಣಯ ರಾಗವ ಹಾಡಿ ಕರೆಯುತಿಹುದೇನೋ ಎನ್ನುವಂತೆ ಶ್ರಾವಣ ಮಾಸದ ಸೆಳವು.ಸುತ್ತಲು ಯಾವುದೋ ಆಕರ್ಷಣೆ ನಮ್ಮ ಸೆಳೆದಂತೆ. ಮನದಲ್ಲೂ ಯಾವುದೋ ಮೋಹ ನಿಮ್ಮ ಆವರಿಸುತಿದೆ ಎನುವ ಹಾಗೇ ಭಾಸವಾಗುತ್ತಿಲ್ಲವೇ....ಒಮ್ಮೆ ಆಲಿಸಿ ನಿಮ್ಮ ಮನದ ಮಾತನು...

ಬಾ,ಬಾರೆನ್ನ ಬಾಳಿಗೆ...

ಸಾಕು ಸಾಕೆನಗೆ ಒಮ್ಮೆ
ಮುನಿಸ ಕೊಂಕು ನೋಟದ ಬಿಂಕವ ಬದಿಗಿಟ್ಟು,
ಮಂಜಿನ ಹನಿ ಹಸಿರ ಗರಿಕೆಯ ಮುತ್ತಾಗುವ
ಮುಂಜಾವದಲಿ ಒಲುಮೆ ಲಜ್ಜೆಯ ನಿನ್ನ
ಹಾಲಗೆನ್ನೆಯ ಮೇಲೇರಿಸಿ ಬಂದುಬಿಡೆನ್ನ ಬಾಳಿಗೆ..

ಉದಯ ರವಿಯ ಎಳೆರಶ್ಮಿಗಳು ಎನ್ನ
ಮನೆಯಂಗಳದಲಿ ಬೆಳಕು ಚೆಲ್ಲುವ
ಆ ಸವಿ ಹೊತ್ತಲಿ ಸೋತವನ ಬಾಳ
ದೀವಿಗೆಗೆ ನಲುಮೆಯ ಬತ್ತಿ ಹೊಸೆದು
ಹರುಷದ ಹೊನಲ ಉಣಿಸಿ, ಹರಿಸಬಾರೇ..

ವಿರಹದುರಿಯಲಿ ಬೆಂದ ಮನಕೆ
ಬಿಡದೆ ಸುರಿವ ಶ್ರಾವಣದ ಸಂಜೆ ಮಳೆಯ
ತಂಪ ಹೊತ್ತು ತಾರೆನ್ನ ಬಾಳಿಗೆ,
ಒಮ್ಮೆ ನಿನ್ನ ಒಲವ ಹೂವೊಡಲ
ಚಂದ್ರಿಕೆಯ ಸವಿಯ ಅಮಲಿನಲಿ ತೇಲಾಡಿ,
ನಿನ್ನ ಮಡಿಲಲಿ ಪವಡಿಸಿ ನಾ ಯಾರೆಂಬುದ
ಮರೆತರಸ್ಟೇ ಸಾಕು!ಬಾ ಬಾರೆನ್ನ
ಬಾಳಿಗೆ ಮನದಲಾದ ಗಾಯದ ನೊವೆ
ಮಾಸಿ ಹೋಗುವ ಮುನ್ನ.....






Friday, July 24, 2009

ನಲುಮೆಯ ಭಾವಲೋಕ...


ನಮ್ಮ ನಿಮ್ಮ ನಡುವೆ ನಲುಮೆಯ

ಭಾವ ಲೋಕ ಅರಳಲಿ. . .

ಸಹಯಾತ್ರಿಗಳೇ ಬ್ಲಾಗ್ ಗೆ ನೀವು ನೀಡುತ್ತಿರುವ ಪ್ರೋತ್ಸಾಹ,ನನ್ನ ಮೇಲಿನ ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು.

ಸ್ನೇಹಿತರೇ, ಬರಹವೆಂದರೆ ಮನದಲಿ ಎಸ್ಟೋ ದಿನಗಳಿಂದ ಮಡುಗಟ್ಟಿದ ಭಾವಗಳ ಪ್ರಸವ.ಬರಹ ನೀಡುವ ವೇದನೆ ಸುಮಧುರ.ಈಗೀಗ ಆ ವೇದನೆಯ ಮತ್ತೆ ಮತ್ತೆ ಸವಿಯೋಣ ಎಂದೆನಿಸುತ್ತದೆ.

ಬ್ಲಾಗ್ ಮಾಡಿ ಬರೆದು ಹಾಕಿದರೆ ಓದುವವರು ಯಾರು? ಎಂಬ ಮನಸ್ತ್ತಿತಿಯಲೇ ಹಲವು ದಿನಗಳ ದೂಡಿಬಿಟ್ಟೆ. ಆದರೆ 'ಸಹಯಾತ್ರಿಯ' ಆರಂಭಿಸಿದ ದಿನದಿಂದ ಅದಕ್ಕೆ ನಿಮ್ಮಿಂದ ಸಿಕ್ಕ ಪ್ರತಿಸ್ಪಂಧನಕೆ ಮನದಲೇನೋ ಹೊಸ ಹುರುಪು.
ಅನುದಿನವು ಏನಾದರು ಬರೆಯೋಣ ಎಂದೆನಿಸುತ್ತದೆ. ಓದುಗರಿದ್ದರೆ ಬರೆಯಲು ನಮಗೂ ಸ್ಫೂರ್ತಿ.
ನಿತ್ಯ ನೂತನವ ಹರಸುತ, ನಮ್ಮ ಸಂಬಂಧ ಮತ್ತಷ್ಟು, ಮೊಗದಸ್ಟು ಗಾಢವಾಗಲಿ ಎಂದು ಆಶಿಸುವೆ ಸಹಯಾತ್ರಿಗಳೇ.....ವಂದನೆಗಳು.