Monday, August 31, 2009

ಪ್ರೀತಿ ಮತ್ತು ಒಂಟಿ ಹಕ್ಕಿ....







ಸಹಯಾತ್ರಿಗಳೇ 'ಕವಿತಾ ಗುಚ್ಛದ' ಕವನಗಳಿಗೆ ನಿಮ್ಮಿಂದ ಸಿಕ್ಕಿದ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.ಪ್ರತಿಕ್ರಿಯಿಸಿದ ಪ್ರತಿಯೊಬ್ಬರು ಒಂದಲ್ಲ ಒಂದು ಕವಿತೆಯನ್ನ ಮೆಚ್ಚಿ ಮಾತನಾಡಿದ್ದಾರೆ. ಕವನ ಬರೆಯುವುದಕ್ಕಿಂತ ನಿಮ್ಮ ಮೆಚ್ಚುಗೆಯ,
ವಿಶ್ವಾಸದ ನುಡಿಗಳು ನೀಡುವ ಸಂತಸ ಅಪಾರ. ನಿಮ್ಮೆಲ್ಲರ ವಿಶ್ವಾಸದಿಂದ ನನ್ನ ಆತ್ಮವಿಶ್ವಾಸ ಅಧಿಕವಾಗಿ ನನ್ನ ಮತ್ತೊಂದು ಕವನವನ್ನು ನಿಮ್ಮ ಓದಿಗೆ, ಪ್ರತಿಕ್ರಿಯೆಗೆ, ವಿಮರ್ಶೆಗೆ ನೀಡುತ್ತಿದ್ದೇನೆ. ಪ್ರೀತಿಯ ನಲುಮೆಯ ಭಾವದಲಿ ಮಿಂದು ತನ್ನ ಮನದನ್ನೆಯಿಂದ ದೂರಾದ ಹಕ್ಕಿಗೆ ಕಾಡುವ ನೆನಪುಗಳು. ಆ ನೆನಪಿನಲೇ ಕಾಲದೂಡುತ 'ಪರ್ಯಟನೆಯ ಬದುಕ' ಅರಸುವ ಒಂಟಿಹಕ್ಕಿಯ ಮನದ ತುಮುಲ,ತಳಮಳಗಳು ಒಂದು ಕ್ಷಣ ನಿಮ್ಮದಾಗುವಂತೆ ಮಗ್ನರಾಗಿ....

ಪ್ರೀತಿ ಮತ್ತು ಒಂಟಿ ಹಕ್ಕಿ....

ಎಲ್ಲೋ ಬೆಟ್ಟದ ತಪ್ಪಲಿಂದ ನುಸುಳಿಬಂದ

ತಿಳಿಗಾಳಿ ಸುಯ್ಯೆಂದು ಮರೆತ ಮಧುರತೆಯ
ಮನದಲಿ ತುಳುಕಿಸಲು ಬೆಟ್ಟದ
ತುದಿಯಲಿ ಒಂಟಿಹಕ್ಕಿಗೆ ಮುಸ್ಸಂಜೆಯ
ಮಬ್ಬಿನಲಿ ತನ್ನ ಸಂಗಾತಿಯ
ಬಿಸಿಯುಸಿರಿನ ಉನ್ಮಾದದ ನೆನಪು ಕಾಡಲು
ತಂಗಾಳಿಯ ತಂಪಲು ಹಕ್ಕಿಗೆ ಕಣ್ಣಿರ ಒರತೆ.


ಬೆಚ್ಚನೆ ಭಾವದ ಮೋಹದ ಕಿಚ್ಚಲಿ
ಒಂದೇ ಗೂಡಿನ ನಂಟಿನರಮನೆಯಲಿ
ಜಗದ ಆಗು-ಹೋಗುಗಳಿಗೆ ಕದವ ಮುಚ್ಚಿ
ಉಸಿರು-ಉಸಿರಲೆ ಪ್ರೀತಿಯ ಉಂಡು
ಕಾಲವ ಮರೆತ ಹಕ್ಕಿಗಳ ನಡುವಿಂದು
"ವಿಷಾದ"
ಬರಡು ಬರಡಾದ ಎದೆಯ ಹಂದರದ
ತುಂಬೆಲ್ಲ ವಿಷಾದದಲೆಗಳು
ಸುಳಿದಾಡುತಿರಲು ಒಂಟಿಹಕ್ಕಿಗೆ
ಹಸಿರೆಲೆಗಳ ಬನವೇ ಬೆಂಗಾಡು.

ಹಲವು ಆರಂಭ-ಅಂತ್ಯಗಳ
ತೊರೆಗಳೋಳಗೊಂಡ ಅನಂತತೆಯ
ನದಿಯೊಡಲು 'ಜೀವನ'.
ಹಕ್ಕಿಗದೋ ಭಾವ-ಭಾವಗಳು ಮಿಂದು
ಜೀವಮಿಡಿದ ಸಾಂಗತ್ಯದ ಅಂತ್ಯವು.

ಮನದ ತುಂಬೆಲ್ಲ ಪ್ರೀತಿ ಪ್ರೇಮದ ಹುಚ್ಚು ಹೊಳೆಯ
ನವೋನ್ವೇಷಣೆಯ ಹಾದಿಯಲಿ ಪೇರಿಸಿಕೊಂಡ
ಸವಿನೆನಪುಗಳ ಸರಮಾಲೆ ಸಾಲದೇನು?
ಕಾಲನ ಜೋಳಿಗೆಯಲಿ ಅಳಿದುಳಿದ
ಜೀವಮಾನವ ಸವೆಸಲು ಹಕ್ಕಿಗೆ;
ಹೊರಡಲು ಪರ್ಯಟನೆಯ ಬದುಕ ದಾರಿಯಲಿ.....?
ಎಚ್.ಎನ್.ಈಶಕುಮಾರ್

10 comments:

ರೂpaश्री said...

ಕವನ ಗುಚ್ಛದಲ್ಲಿರುವ ಎಲ್ಲ ಕವನ ಚೆನ್ನಾಗಿದೆ.
"ಹಲವು ಆರಂಭ-ಅಂತ್ಯಗಳ
ತೊರೆಗಳೋಳಗೊಂಡ ಅನಂತತೆಯ
ನದಿಯೊಡಲು 'ಜೀವನ'."
ಈ ಸಾಲುಗಳು ಬಹಲ ಇಷ್ಟವಾಯಿತು:)
ಹೀಗೆ ಬರಿತಾಯಿರಿ...

ಸೀತಾರಾಮ. ಕೆ. / SITARAM.K said...

"ತಂಗಾಳಿಯ ತಂಪಲು ಹಕ್ಕಿಗೆ ಕಣ್ಣಿರ ಒರತೆ", "ಹಸಿರೆಲೆಗಳ ಬನವೇ ಬೆಂಗಾಡು", "ಹಲವು ಆರಂಭ-ಅಂತ್ಯಗಳತೊರೆಗಳೋಳಗೊಂಡ ಅನಂತತೆಯ ನದಿಯೊಡಲು 'ಜೀವನ'" -ಅದ್ಭುತ ಉಪಮೇಯಗಳು. ಬಹಳ ಸೊಗಸಾಗಿ ಮೂಡಿದೆ ತಮ್ಮ ಈ ಕವನ.
ಸವಿನೆನಪುಗಳ ಸರಮಾಲೆ ಸಾಲದೇನು?ಕಾಲನ ಜೋಳಿಗೆಯಲಿ ಅಳಿದುಳಿದ ಜೀವಮಾನವ ಸವೆಸಲು ಹಕ್ಕಿಗ -ಇದರೊ೦ದಿಗಿನ ಮುಕ್ತಾಯ ನೈಜ್ಯ ಪ್ರೇಮದ ಪರಾಕಾಷ್ಠೆ ತೋರುತ್ತಿದೆ.
ಹೀಗೆ ಬರೆಯುತ್ತಾ ಇರಿ.

udaya said...

ಬರಡು ಬರಡಾದ ಎದೆಯ ಹಂದರದ
ತುಂಬೆಲ್ಲ ವಿಷಾದದಲೆಗಳು


ಹಲವು ಆರಂಭ-ಅಂತ್ಯಗಳ
ತೊರೆಗಳೋಳಗೊಂಡ ಅನಂತತೆಯ

ಅದ್ಬುತವಾಗಿದೇ..ಈ ಸಾಲುಗಳು
ಒಂಟಿ ಜೀವಿ ಸಂಗಾತಿಯ ಸಾಂಗತ್ಯ ಬೇಡುವುದು..

bilimugilu said...

Esha,
kavana ishtavaayitu.... painfulllll... still, enjoyed reading it.

Anonymous said...

ಈಶಕುಮಾರ್,

ಕವನ ತುಂಬ ಚೆನ್ನಾಗಿದೆ. ಕವನದ ಎಲ್ಲಾ ಸಾಲುಗಳು ಸೊಗಸಾಗಿವೆ. ಅದರಲ್ಲಿ ಹಲವು ಆರಂಭ-ಅಂತ್ಯಗಳ
ತೊರೆಗಳೋಳಗೊಂಡ ಅನಂತತೆಯ
ನದಿಯೊಡಲು 'ಜೀವನ'.

ಎನೋ ಒಂಥರ ಇಷ್ಟವಾಯಿತು.

ಚಿತ್ರ

kavya H S said...

prithi mattu onti hakki anubhavavalladiddaru anubhavavaada bhavane odidaaga, mana seleyuva barahagale haage. vaastavadalli sigada esto anubhavagalannu, sihi-kahi,novu-nalivugalannu barahagaarara barahagalinda padeyabahudu. Greatful thanks to all the writers

Umesh Balikai said...

ಈಶಕುಮಾರ್,

ಒಂಟಿ ಹಕ್ಕಿಯ ವಿರಹ ಗೀತೆ ಚೆನ್ನಾಗಿದೆ. ಒಂಟಿ ಹಕ್ಕಿಗೆ ಹಸಿರೆಲೆಗಳ ಬನವೂ ಬೆಂಗಾಡಿನಂತೆ ಗೋಚರಿಸುವುದು ಜೋಡಿ ಹಕ್ಕಿಯ ಕೊರತೆಯ ತೀವ್ರತೆಯನ್ನು ಸೂಚಿಸುತ್ತದೆ. ಕವನ ಮತ್ತು ಕವನಕ್ಕೊಪ್ಪುವ ಚಿತ್ರ; ಎರಡೂ ಇಷ್ಟವಾದವು. ಅಭಿನಂದನೆಗಳು.

- ಉಮೇಶ್

ಜಲನಯನ said...

ಈಶ್ ಚನ್ನಾಗಿ ಮೂಡಿವೆ ಸಾಲುಗಳು...ಹಕ್ಕಿಗಳು ಅದರಲ್ಲೂ ಪುಟ್ಟ ಹಕ್ಕಿಗಳು ಸಂಘ ಜೀವಿಗಳು, ಒಟ್ಟಿಗೇ ಇರಲು ಇಷ್ಟಪಡುತ್ತವೆ. ಒಂಟಿ ಹೇಗೆ ವ್ಯಥೆ ಪಡುತ್ತೆ ಅನ್ನೋದನ್ನು ಮನಮುಟ್ಟುವಂತೆ ಕವನಿಸಿದ್ದೀರಿ, ಅಭಿನಂದನೆಗಳು.

ALL IN THE GAME said...
This comment has been removed by the author.
ALL IN THE GAME said...

ಒಳ್ಳೆ ಕವನ ವಿರಹವನು ಚೆನ್ನಗಿ ಬಿ೦ಬಿಸಿದೆ (ನನಗೆತಿಳಿದಮಟ್ಟಕೆ)ಕೊನೆಯಸಾಲುಗಳು ಕೊ೦ಚ ವಿಚಲಿತ ಓದಿನ ಧಾಟಿಗೆ,