ಕಣ್ಣ ಆಳದಲಿ...ಬಾಯಾರಿದ ಬದುಕು!
ಬೊಗಸೆಯೊಡ್ಡಿ ಬೇಡಿ
ದಣಿವಾರಿಸುವ ನೀರಿಗೆ
ಸಾಕೇನು ಬೊಗಸೆಯ
ಆಳ-ವಿಶಾಲ.
ಸಾಕೇನಿಸದಿರಲು ಅದು 'ಪ್ರೀತಿಯೇ'
ದಣಿವಾರುವುದು ಕ್ಷಣದಲಿ
ಬೊಗಸೆಯಲಿ ಆನಿಸಿ
ಕುಡಿದ ನೀರಿಗೆ.
ಹೊಟ್ಟೆ ಹೊರೆಯುವ
ಜೀತದ ಪರಿ,ದಣಿವುದು
ದೇಹ ಅನುಗಾಲವು
ಹಿಡಿ ಅನ್ನಕ್ಕಾಗಿ.
ಆದರೂ ಆವರಿಸಿಹುದು
ನನ್ನನು-ನಿನ್ನನು ಬಿಡಿಸಲಾಗದ
ಮೋಹ.
ಮೋಹದೊಡಲ ಕಿಚ್ಚನು
ತಣಿಸಲೇ ಸೋತು ಸೋತು
ಬಟಾ ಬಯಲಿನ ದಾರಿ ಬದಿಯ
ನೆಳಲಲಿ ಕೂತು
ದಿಗಂತದೆಡೆಗೆ ದಿಟ್ಟಿ ಬೀರಲು
ಬರಿದೇ ಬದುಕಿನ ಬರ್ಬರತೆಯ
ರಾಡಿ ರಾಚಲು ಕಣ್ಣ ಆಳದಲಿ
ಮಿರುಗುವುದು 'ನಶ್ವರತೆಯ ಹೊನಲು'
ಜೀವನ ಶೂನ್ಯವು...










