Thursday, June 21, 2012

ಉಳಿದಿಹ ...!

ದಾರಿಯಲ್ಲಿ ಉಳಿದಿಹ 
ಒಂಟಿ ಹೂವ  ಮೇಲಿನ 
ಇಬ್ಬನಿಗೆ ನಾಚಿದ 
ಗುಬ್ಬಿ ಮರೆತು ಕೂತಿದೆ
ತನ್ನ ಗೂಡನು...
***************************
ಸೋತರು ಜೀವ ನಿನ್ನ 
ಎದೆಯಲಿ ಉಳಿದಿಹ 
ಮೋಹಕೆ ಬಲೆಯ 
ಬೀಸಿ ಕಾದೆ.
ದಾರಿ ಬದಿಯಲಿ 
ಹೂ ಮಾರುವ ಹುಡುಗನ 
ಕೈಗೆ ಹತ್ತಿದ 
ಪರಿಮಳ ಸೋಕಲು 
ಮನಕೆ ಮತ್ತೆ ನಿನ್ನದೇ 
ಸ್ಪರ್ಶದ ನೆನೆಪು...
*************************
ಭಾವಕೆ ನಿಲುಕಿ 
ಪದಗಳಿಗೆ ಸಿಗದ ಅನನ್ಯೇ
ಕಾಮನಬಿಲ್ಲ ಮೋಹಿಸಿ 
ಸೋತರು ಉಳಿದಿಹ 
ಛಾಯೆಗೆ ನೂರು ಬಣ್ಣ....
***************************

Wednesday, March 21, 2012

ದಾರಿ ಬದಿಯ ಬದುಕು


  ದಾರಿ ಬದಿಯ ಬದುಕು

ಕಾಯುವ ಮನ, ಬಿಸಿಲ ಜಲಪು 
ಬಿರಿದ ಹೂವಿಗೆ ರವಿಯ                                                                        
ಕಾಮನೆ ಅರಿವಾಗದೆ ಮುದುಡಿದೆ
ಸೂರ್ಯನದೋ ಸದಾ ಸಲ್ಲಾಪ!

ಒಂಟಿ ಮನೆಯ ತಾರಸಿಯ ಮೇಲೆ 
ಒಂಟಿ ಹೆಣ್ಣು ನೀರುಣಿಸಿ 
ಕುಂದದಲಿ ಬೆಳೆಸಿದ ಅಡಿ ಎತ್ತರದ 
ಗಿಡದಲೂ ಒಂಟಿ ಹೂವು!

ಬದುಕು ದಾರಿ ಬದಿಯಲಿ 
ಜಡಿ ಮಳೆಯಲಿ ಕೊಚ್ಚಿ ಹೋಗದೆ 
ನಿಂತು ನೆರಳಾಗಿರುವುದ ಕಂಡು 
ನಿಟ್ಟುಸಿರಿಡುವ ಅಜ್ಜನ ಮುಪ್ಪು!

ನಿರಂತರ ಸಲ್ಲಾಪದ ಜೊತೆಯಲೆ
ಸೋತು ಸೊರಗುವ 
ನದಿಯ ವಯ್ಯಾರವ ಅಣಕಿಸುತ 
ನಿಂತಲೇ ನಿಂತ ದಡದ ಹೆಬ್ಬಂಡೆ!

ಅಜ್ಜಿಯ ಮುಖದಲಿ ಮೂಡಿದ 
ಅನುಭವದ ಮುಪ್ಪಿನ ರೇಖೆಗಳ 
ಕಂಡು ಮುಗುಧ ನಗೆ ಚೆಲ್ಲುವ 
ಕಂದನಿಗೆ ಉಳಿದಿಹ ತೀರದ 
ಯಾನ!!



Saturday, February 11, 2012

ನನ್ನದೊಂದು ಹೆಸರಿರಲಿ!

ನೆನಪ ಯಾತ್ರೆಯಲಿ ನಡೆವ
 ಕ್ಷಣ ಮಾತ್ರದ ಜಾತ್ರೆ ನಮ್ಮದಾಗಲಿ!


 ಸೊಬಗ ಸುರಿವ  ಹೂದೋಟದಲಿ 
ನಲಿವ ಒಂದು ಹೂ ನಮ್ಮದಾಗಲಿ!

ದೇವರ ದಯೆ ಇರಲಿ ನೀ ನಿನ್ನವರ
 ನೆನೆವಾಗ ಆ ನೆನಪ ರಸಸಾಗರದಲಿ 
ನನ್ನದೊಂದು ಹೆಸರಿರಲಿ!
~~~~~~~~~~~~~~~~~~~


ಪಕ್ಕದಲಿ ಕೂತು ತೂಕಡಿಸಿದೆ
ಮೌನ ಜಾರಿದೆ ಆ ಪರಿ 
ನೀ ನಕ್ಕ  ರೀತಿಗೆ
ಯಾತಕು ಖಾತರಿ ಇಲ್ಲ ನನ್ನೆದೆಯಲಿ!
ನಿನ್ನ ಹೊರತಾಗಿ 
ಬದುಕುವ  ಬದುಕಿಗೆ 
ನೂರು ವರುಷ ಸರಿದರೂ
ವಸಂತದ ಒಂದು ಸಂತಸವಿಲ್ಲ!





Thursday, January 5, 2012

ನೆನಪ ಅಗ್ನಿಕುಂಡ

ಬದುಕು;       
  ಬೇಕು-ಬೇಡದ 
ನೆನಪುಗಳು  ಹೊಳೆಯ       
 ಸಾಲು ದಂಡೆಗೆ ಬಂದು
 ಅಪ್ಪಳಿಸಿದಂತೆ.

ಎಲ್ಲವನು ನೋಡುತ 
ತುಸು ದೂರದಲೆ
ನಿಂತ ಕಲ್ಲು ಬಂಡೆ.

ಎಂದು ಬರುವುದೋ 
ಬರಲಿ ಆ ಅಲೆಯು 
ಕೊಚ್ಚಿ ಹೋಗಲು 
ಸಿದ್ದ ಬಂಡೆಯು!                                          

ಆದರೂ  ಸದ್ದಿಲದೆ 
ಬರಲಿ ತಂಗಾಳಿಯಂತೆ 
ಅಲೆಯು,
ಮುಗಿದು ಹೋಗಲಿ
ಎಲ್ಲವು ತಿಳಿಯುವಷ್ಟರಲ್ಲೇ 
ಬದುಕು , ಬೇಕು-ಬೇಡದ
ನೆನಪುಗಳ ಅಗ್ನಿಕುಂಡ!

Tuesday, December 13, 2011

ಚಿತ್ರ ಸಂತೆ.



ಹುಡುಕುತ ನಿಂತೆ
ಎದೆಯಾಳದಲಿ ಹುದುಗಿರುವ 
ನೆನಪಿಗೆ ಬಣ್ಣವ 
ಕುಂಚ ಮೂಡಿಸಿದ 
ವಯ್ಯಾರ ಚಿತ್ರಗಳ 
ಹರಾಜಿನಲ್ಲಿಟ್ಟು 
ಬೆಲೆ ಕಟ್ಟುತಿರುವರು
ಸುತ್ತಲು ಭಾವದ ಬಣ್ಣಕ್ಕೆ!

ಬಗೆ ಬಗೆಯ ಬಣ್ಣಗಳ 
ಚಿತ್ರ ರಾಶಿ 
ಸಂಜೆ ಗೋಧೂಳಿಯಲಿ 
ಆವರಿಸಿದ ಮಬ್ಬನು 
ಕಾಯುವ ಕುರಿಗಳಿಗೆ 
ತಿಳಿಸಿ ಹೆಜ್ಜೆ ಕೂಡಿಸಿದ 
ಹಳ್ಳಿ ಹೈದನ ಬಿರುಸಿಗೆ 
ಹೊಂಬಣ್ಣ ಬಳಿದ 
ಪಡುವಣದ ಸೂರ್ಯ.

ಚಿತ್ರಕಾರನ ನೋಟಕೆ ನಾಚಿ
ಬಿರಿದ ಮಾಸಲೊಪ್ಪದ ತುಂಟನಗೆ 
ಬಿಗುವಾದ ಅವಳೆದೆಯಲಿ
ಅರಳಿದ ಕಾಮನೆಗಳಿಗೆ 
ಬಣ್ಣ ರಾಶಿ ಹಾಕಿ 
ಚಿತ್ರ ಸಂತೆಯಲಿ ಹುಡುಕುತಲಿರುವನು
ಕೂತು ಕಾಮನಬಿಲ್ಲ 
ಕನಸುಗಾರ!

Saturday, November 26, 2011

ಮೋಹದ ಮರುಕ

ನನ್ನದಲ್ಲದ ಭಾವಕೆ 
ನಿನ್ನದಲ್ಲದ ಮಾತಿಗೆ 
ಸಾಕ್ಷಿ ಮಾತ್ರ  
ನಾನು-ನೀನು.
```````````````````````````

ಕೂತು ತೂಕಡಿಸಲು ಬಿಡದು 
ನಿನ್ನ ನೆನಪು!
ಮಮಕಾರಕು ಮರುಕವುಟ್ಟುವುದು
ನನ್ನ ಕಂಡು!
``````````````````````````

ಸುಡುವ ಬಿಸಿಲು 
ಮೈಮನವ ತರಗುಡಿಸುವ ಶೀತದಲೋ  
ಮುಸಲಧಾರೆಯಲೋ  ಕೊಚ್ಚಿ ಹೋಗದೆ 
ನೀನು ಮಾತ್ರ ಯಾಕೆ ಉಳಿದೆ 'ನೆನಪೇ'
``````````````````````````````````````````` 

ನಿನ್ನ ತನುವಿನ 
ಆಸರೆಗೆ ದೂಡುವ 
ಚಳಿಯನು ದೂಷಿಸದೆ 
ನನ್ನ ತೆಗಳುವ ಜಗದ
ಬಗ್ಗೆ ನನಗೇಕೋ ಮರುಕ!
``````````````````````````````````````



Thursday, November 3, 2011

ಆವರಿಸಿದ ಛಾಯೆ!

ಚೀರುವ ದನಿಯಲಿನ ನಿನ್ನ
ವೇದನೆಯ ಆರದ ಗೊಳು  ಆಲಿಸಲೋ 
ಅಸಾಧ್ಯ ಹಿಂಸೆ, ಒಡಲಾಳದಲಿನ 
ನಿನ್ನ ನೋವು ಬರಿದಾಗದೇ
ಉಮ್ಮಳಿಸುತಿಹ ನಿನ್ನ ರೋದನೆ.

ಮರುಗುವ  ಜೀವಗಳಿಗೋ
ಜಗದ ನೋವಲ್ಲಿ ಮುಳುಗುತಲಿಹ 
ಹೊಸ  ಆಕ್ರಂದನ, ಆಲಿಸಿದಷ್ಟು 
ಇಮ್ಮಡಿಸುವ ಬೇಸರ,
ಇನ್ನಾವುದೋ ನೆವದಲಿ ಪಲಾಯನಕೆ
ದಾರಿ  ಹುಡುಕುವ ಮರುಕ ಮನ!

ನಿನಗಾದರೂ ಸಹ ಮತ್ತೇನೂ 
ಅಸಹಾಯಕತೆಯ ವ್ಯಕ್ತವೊಂದೇ 
ಉಳಿದಿಹುದು ಬದುಕಲಿ ಎನುವ                                     
 ಪರಿಯಲಿ ದನಿ ಸೋತು 
ಕ್ಷೀಣಿಸಲು, ಬತ್ತಿರುವ ಹನಿಯ 
ಕಣ್ಣಲೂ ಜಗಕೆ ಕಂಗೊಳಿಸುತಿಹ 
ಶೂನ್ಯವು! ಕಾರಣವೇ ತಿಳಿಯದೆ 
ನೊಂದ ಮನಕೆ ಆವರಿಸಿದ 
ಛಾಯೆ ದುಗುಡ!