Saturday, January 9, 2010

ಅಲೆಮಾರಿಯ ಚಿತ್ತ...


ದಾರಿ,ಹೆದ್ದಾರಿ,ಕಾಡುಡಾರಿ
ಕಾಲುದಾರಿ;ಗಮ್ಯ ಅಗಮ್ಯ
ಅರಿವಿಲ್ಲದ ಜೀವನದ ದಾರಿ
ಹುಟ್ಟು ಸಾವಿನ ನಡುವೆ
ನಡುದಾರಿಯಲಿ ಅಲೆವ
ಅಲೆಮಾರಿಯು ನಾ...
ದಿನದ ದಿನಚರಿಯಲಿ ಮತ್ತೆ ಮತ್ತೆ ಮೂಡಿಬರುವ ಕ್ಯಾಸೆಟ್ಟಿನ ಅದೇ ಹಾಡಿನಂತೆ,ಮನಸು ಕಡು ಬೇಸಿಗೆ ಕಾಲದ ಮರುಭೂಮಿಯ ನೀರವ ಜಾಡಿನಂತಾಗಿತ್ತು. ಹಾಳು ಹಂಪೆಯನು ಕಂಡು ಮನ ಮರುಭೂಮಿಯ ಅಂತರಾಳದಿಂದ ಚಿಮ್ಮುವ ನೀರಿನ ಸಿಂಚನವಾದಂತಾಯಿತು. ದಿನ ಕಳೆದಂತೆ ಜೀವನ ಸುಬ್ಬಲಕ್ಷ್ಮಿಯ ಬೆಳಗಿನ ಜಾವದ ಸುಪ್ರಭಾತದಂತೆ, ಒಂದೇ ರಾಗದಂತೆ, ಏಕಾಂಗಿತನ ಕಾಡುತ್ತವೆ. ಎಲ್ಲಾದರೂ ಕಳೆದು ಹೋಗಬೇಕು,ದಿನದ ಮಾಮೂಲು ಕೆಲಸಗಳು ನೆನಪಿಗೆ ಬರಬಾರದು ಅಂತಕಡೆಗೆ, ಕಾಣದ ಊರಿಗೆ, ಕಾಣದ ಜನರೊಂದಿಗೆ ಬೆರೆತು ಕೆಲದಿನಗಳು ಕಳೆದು ಹೋಗಬೇಕು. ಮೊದಲ ಬಾರಿಗೆ ಆಕಳನ್ನು ಬಿಟ್ಟು ಜಿಗಿಯುತ್ತ ಮೇವನ್ನು ಹುಡುಕಿಕೊಂಡು ಹೋದ ಕರು ಹೊಟ್ಟೆ ತುಂಬಿದ ನಂತರ ತಾಯಿಹಸುವನು ಹೊಸದಾರಿಯಲಿ ಹುಡುಕುತ ಬರುವಂತೆ, ತನ್ನದೇ ಊರನ್ನು,ಕೆಲಸವನು ಮತ್ತೆ ಹೊಸದಾಗಿ ಹುಡುಕಿಕೊಂಡು ಬಂದನೇನೋ ಎಂದೆನಿಸುವಂತೆ ಮನ ಮತ್ತಾವುದೋ ಅರಿವಿಲ್ಲದ ಊರಲ್ಲಿ ಕಾಲಹರಣ ಮಾಡಬೇಕು. ಎಂಬಿಡದೆ, ರಣರಂಗದಲ್ಲಿ ತನ್ನ ಜೀವಿತ ಅವಧಿಯ ಬಹುಕಾಲವನು ಕಳೆದ ವೀರ, ಜೀವನದ ಯಾವುದೋ ಘಳಿಗೆಯಲಿ ಆ ಜಂಜಾಟಗಳಿಂದ ಮೈಮರೆಸಿಕೊಂಡು ದಟ್ಟ ಅರಣ್ಯದ ಗರ್ಭಬೊಳಗೆ ಏಕಾಂತವ ಅನುಭವಿಸಬೇಕು ಎಂದುಕೊಳ್ಳುವಂತೆ, ಸಂಸಾರದ ದೀರ್ಘಯಾನದಲಿ ನರಳಿ ನರಳಿ ಬೇಸೆತ್ತು ಹಿಮಾಲಯದ ಶಿಖರವನೇರಿ ಸನ್ಯಾಸತ್ವವನು ಅನುಸರಿಸತೊಡಗುವಂತೆ, ಋತುಚಕ್ರವೆಲ್ಲವೂ ಸಾಗಿದ ಪಾತ್ರವು ಬೇಸರ ಮೂಡಿ ನದಿ ತನ್ನ ಪಾತ್ರವನು ಬದಲಿಸುವಂತೆ, ತಾಯಿಯ ಪಾಲನೆಯಲಿ ಬೆಸೆತ್ತ ಮರಿಹಕ್ಕಿ, ತಾಯಿ ಹಾಗೂ ಗೂಡನು ತೊರೆದು ತನ್ನ ಜೀವನವನು ಹರಸುತ ಸಾಗುವಂತೆ, ಏಕತಾನತೆಯ ಜೀವನ ಬದಲಾವಣೆಯನು ಬಯಸುತ್ತದೆ. ನಮ್ಮ ಮನಸು ಕೆಲವೊಮ್ಮೆ ಕೆಲ ದಿನಗಳ ಮಟ್ಟಿಗೆ ಬದಲಾವಣೆಯನು, ಕೆಲವು ಶಾಶ್ವತ ಬದಲಾವಣೆಯನು ಬಯಸುತ್ತದೆ.ಬದಲಾವಣೆಯಾ ಹಂಬಲವು ಮನದಲಿ ಮೊಳೆತು ಬೇರೂರ ತೊಡಗುತ್ತದೆ. ಆ ಬದಲಾವಣೆಗಳು ಆ ಕ್ಷಣದ, ಪರಿಸ್ಥಿತಿಗೆ ತಕ್ಕಂತೆ ಮೂಡುತ್ತದೆ. ಅಂತ ಬದಲಾವಣೆಗಳು ಜೀವನದ ಏಕೋಪಾಸನೆಯನು ತಣಿಸುತ್ತ,ಹೊಸತರವಾದ ಅನುಭವಗಳೊಂದಿಗೆ ಮನವನು ಆಹ್ಲಾದಕರವಾದ ಸ್ಥಿತಿಗೆ ಮರಳಿಸುತ್ತದೆ. ಅಪಾರ ದಿನಗಳ ನಂತರ ಬಂದ ಮಳೆಗೆ ಚಿಗಿತು ಕೊಳ್ಳುವ ಗರಿಕೆಯಂತೆ, ಮನ ನವ ಉಲ್ಲಾಸದಲಿ ಚಿಗಿಯ ತೊಡಗುತ್ತದೆ.

ಅಲೆಮಾರಿಯಂತೆ ಅಲೆಯುವುದರಲ್ಲೂ ಒಂದು ರೀತಿಯ ವಿಚಿತ್ರ ಸುಖ ತನ್ನ ಮೂಲ ಸ್ಥಳವನ್ನು ಮರೆತು ಅಲೆವ ದುಂಬಿಯಂತೆ, ಹಕ್ಕಿಯಂತೆ ಅಪರಿಚಿತ ಸ್ಥಳದಲ್ಲಿ ನನ್ನನೇ ನಾನು ಕಳೆದುಕೊಂಡು ಅಲ್ಲಿ ಕಣ್ಣಿಗೆ, ಮನಸಿಗೆ ಸಿಗುವ ಹೊಸತನು ಹುಡುಕಾಡುತ, ಮತಿಯ ಸೂಕ್ಷ್ಮಕೆ ದೊರಕಿದೆಲ್ಲವನು ಪರಿಚಯಿಸಿಕೊಂಡು ಅದರೊಂದಿಗೆ ನೆನಪಿನ ಬುತ್ತಿಯನು ಕಟ್ಟಿಕೊಂಡು ಜೀವಮಾನದಲಿ ಉಳಿದ ಪಯಣವನು ಅಪರಿಮಿತವಾದ ಬಯಕೆಗಳೊಂದಿಗೆ ಕ್ರಮಿಸುತ್ತ ಸಾಗುತ್ತಲೇ ಇರಬೇಕು. ಹಿಂದಿನ ಅನುಭವಗಳು ಮುಂದಿನ ಪಯಣಕೆ ಸ್ಪೂರ್ತಿಯ ತುಂಬಿ ಮುನ್ನಡೆಸುತ್ತಲೇ ಇರಬೇಕು. ಹುಡುಕಾಟದ ತೀವ್ರತೆ ನಮ್ಮನ್ನು ಎತ್ತಲಿಂದ ಎತ್ತಲೋ ಕರೆದೊಯ್ಯುತ್ತಿದ್ದರೆ ಆ ಅಪಾರ ಜನಸಾಗರದಲು
ತಾ ಒಂಟಿ,ತನ್ನದೇ ಬೇರೆ ದಾರಿ,ತನ್ನದೇ ಬೇರೆ ಗುರಿ,ಬೇರೆ ಆಶಯ. ಜೀವನದ ಯಾವ ಗುರಿ ಯಾವ ಆಶಯ ಪೂರ್ಣವಾಗುವುದೋ ಅರಿವಿರದ ಅಲೆಮಾರಿಯ ಅಲೆದಾಟದಲಿ.

12 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಬದಲಾವಣೆಯ ಬಯಕೆ..ಬದುಕಲ್ಲಿ ಮರೆತವರುಂಟೇ?
ನಿನ್ನಿನಂತಿಲ್ಲ ಇಂದು..
ಇಂದಿನಂತಿಲ್ಲ ನಾಳೆ..
ನಿನ್ನೆ ನಾಳೆಗಳೊಳಗೆ..
ಸಾಮ್ಯತೆಯಷ್ಟೆ..ಇರಲಿ..
ಕಾಣುವ ಕಣ್ಣಿದ್ದರೆ..
ಹೊಸತನವಿರುವುದು..
ಸುಳ್ಳಲ್ಲ..ಸುಳ್ಳಲ್ಲ..

ಜಲನಯನ said...

ಈಶ್, ಅಲೆಮಾರಿತನ ಮಾನವ, ಪ್ರಾಣಿ ಗಳಿಗಷ್ಟೇ ಅಲ್ಲದ ಮನಸ್ಥಿತಿಗೂ ಅನ್ನುವುದು ನನಗೆ ಇತ್ತೀಚಿಗೆ ಹೆಚ್ಚಾಗಿ ಭಾಸವಾಗುತ್ತಿದೆ. ನಾವು ಕೆಲವೊಮ್ಮೆ ಯಾವುದು ಹೇಗೆ ಎಂಬುದರ ಅರಿವಿಲ್ಲದೇ ಬುದ್ಧಿಯನ್ನು ಹರಿಯಬಿಟ್ಟು ಕೊನೆಗೆ ಶೂನ್ಯಸಾಧಕರಾಗಿ ಪ್ರಾರಂಭ ಬಿಂದುವಿನಲ್ಲಿ ಸೇರುತ್ತೇವೆ...ಅಲೆಮಾರಿತನದ ವ್ಯಾಖ್ಯಾನಕ್ಕೆ ಸೀಮೆಯಿರುವುದಿಲ್ಲ...ಅಲ್ಲವೇ..ಸೊಗಸಾಗಿದೆ...ಲೇಖನ

shivu.k said...

ಅಲೆಮಾರಿತನ, ಅಂಥ ಜೀವನ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಲ ಬೇಕೇ ಬೇಕು. ಚೆನ್ನಾಗಿದೆ...

Anonymous said...

ಅಲೆಮಾರಿಯಂತೆ ಅಲೆಯುವುದರಲ್ಲೂ ಒಂದು ರೀತಿಯ ವಿಚಿತ್ರ ಸುಖ ತನ್ನ ಮೂಲ ಸ್ಥಳವನ್ನು ಮರೆತು ಅಲೆವ ದುಂಬಿಯಂತೆ, ಹಕ್ಕಿಯಂತೆ ಅಪರಿಚಿತ ಸ್ಥಳದಲ್ಲಿ ನನ್ನನೇ ನಾನು ಕಳೆದುಕೊಂಡು ಅಲ್ಲಿ ಕಣ್ಣಿಗೆ, ಮನಸಿಗೆ ಸಿಗುವ ಹೊಸತನು ಹುಡುಕಾಡುತ, ಮತಿಯ ಸೂಕ್ಷ್ಮಕೆ ದೊರಕಿದೆಲ್ಲವನು ಪರಿಚಯಿಸಿಕೊಂಡು ಅದರೊಂದಿಗೆ ನೆನಪಿನ ಬುತ್ತಿಯನು ಕಟ್ಟಿಕೊಂಡು ಜೀವಮಾನದಲಿ ಉಳಿದ ಪಯಣವನು ಅಪರಿಮಿತವಾದ ಬಯಕೆಗಳೊಂದಿಗೆ ಕ್ರಮಿಸುತ್ತ ಸಾಗುತ್ತಲೇ ಇರಬೇಕು. ಹಿಂದಿನ ಅನುಭವಗಳು ಮುಂದಿನ ಪಯಣಕೆ ಸ್ಪೂರ್ತಿಯ ತುಂಬಿ ಮುನ್ನಡೆಸುತ್ತಲೇ ಇರಬೇಕು. ಹುಡುಕಾಟದ ತೀವ್ರತೆ ನಮ್ಮನ್ನು ಎತ್ತಲಿಂದ ಎತ್ತಲೋ ಕರೆದೊಯ್ಯುತ್ತಿದ್ದರೆ ಆ ಅಪಾರ ಜನಸಾಗರದಲು
ತಾ ಒಂಟಿ,ತನ್ನದೇ ಬೇರೆ ದಾರಿ,ತನ್ನದೇ ಬೇರೆ ಗುರಿ,ಬೇರೆ ಆಶಯ.

Ee melina padagalu thumba sookthavaagide ellaru hosatannu hudukutta thamma swathantravannu kaaydukollalu ishta paduttare, ellara manassu bayasodu hosataada thamage sari enisuvudannu ellavannu naavu mukthavaagi sweekarisalaaguvudilla adaralli kelavondannu anveshisuttirutteve adanna padeyalu eneno prayathna aa prayathnagala anveshane yalli ellaroo ondu reetiya alremaarigale aaguttare

Lekhana channagide

Subrahmanya said...

ಹಾಸನ ಜಿಲ್ಲೆಯ ’ಹುಲಿಕೆರೆ’ ಅಂದಿದ್ದೀರಿ. ಹತ್ತಿರದಲ್ಲೇ ಇದ್ದೀರಿ ತಾವು. ಸಣ್ಣ ಕವನಕ್ಕೆ ಪೂರಕವಾದ ಲೇಖನ ಚೆನ್ನಾಗಿದೆ. ಹೀಗೇ ಬರೆಯುತ್ತಿರಿ...ಧನ್ಯವಾದಗಳು

ಸೀತಾರಾಮ. ಕೆ. / SITARAM.K said...

nice

ALL IN THE GAME said...

HI just read your article. Its good. I felt as if its my experience while reading this article. Its well illustrated, till last few lines.

AntharangadaMaathugalu said...

ಈ ತರಹದ (ಅಲೆಮಾರಿಯ) ಒಂಟಿ ತನ ಎಲ್ಲರಿಗು ಮಧ್ಯೆ ಮಧ್ಯೆ ಬೇಕಾಗುತ್ತದೆ. ಇದು ಏಕತಾನತೆಯಲ್ಲಿ ಕಳೆದುಹೋಗಿರುವ ನಮ್ಮ ತನವನ್ನು ಮತ್ತೆ ಹಿಂತಿರುಗಿ ಪಡೆಯಲು ಸಹಕಾರಿಯಾಗುತ್ತೆ. ಅಂದರೆ ಒಂಥರಾ recharging our batteries... ಮತ್ತೆ ನಿತ್ಯ ಬದುಕಿನ ಏಕತಾನತೆಯಲ್ಲಿ ಮುಳುಗಲು ಇಂತಹ ಅಲೆದಾಟ ಅತ್ಯುತ್ತಮ ಔಷಧಿ... ಬರಹ ಚೆನ್ನಾಗಿದೆ........

ಶ್ಯಾಮಲ

Anonymous said...

ಹೌದು ಎಷ್ಟೋ ಬಾರಿ ನನಗೂ ಹಾಗೆ ಅನ್ನಿಸಿದುಂಟು. ನಾವು ಅದರಲ್ಲೂ ಬೆಂಗಳೂರಿನ ತಾಂತ್ರಿಕ ಜೀವನವನ್ನು ಬಿಟ್ಟು ಕಳೆದುಹೋಗಬೇಕು ಅಂತ ಪ್ರತಿಬಾರಿಯೂ ಅನ್ನಿಸಿದಾಗ, ಬೆಂಗಳೂರಿನಿಂದ ಹೊರಗೆ ಹೋಗಿ ಅಲೆಮಾರಿಯ ತರಹ ಸುತ್ತಾಡಿ ಬರುವುದುಂಟು. ಚೆನ್ನಾಗಿದೆ ನಿಮ್ಮ ಅಲೆಮಾರಿಯ ಚಿತ್ರ ಕೂಡ.

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ
ಒಳ್ಳೆಯ ಬರಹ

ಮನಮುಕ್ತಾ said...

ಚಿಕ್ಕ ಕವನ, ಅರ್ಥ ಗಹನ.
ವಿವರಣೆ ಚೆನ್ನಾಗಿದೆ.
ವ೦ದನೆಗಳು.

ಚರಿತಾ said...

ಇಂತಹ ಅಲೆಮಾರಿ ಚಹರೆ ಹೊತ್ತು ಹಳ್ಳಿಗಾಡುಗಳಲ್ಲಿ,ಸಿಕ್ಕ ಸಿಕ್ಕ ಕಾಲುದಾರಿಗಳಲ್ಲಿ ನನ್ನ ಸೈಕಲ್ ಜೊತೆ ಅಲೆಯುತ್ತ ಹೊಸಬಳಾಗುತ್ತಿದ್ದ ನನ್ನ ಹುಚ್ಚು ದಿನಚರಿ ನೆನಪಾಯ್ತು. ಈಗಲೂ ಈ ಅಲೆಮಾರಿ ದಿನಚರಿಯೇ ಜೀವನದ ನಿಜರೂಪದಂತೆ ಭಾಸವಾಗುತ್ತದೆ.