Saturday, November 26, 2011

ಮೋಹದ ಮರುಕ

ನನ್ನದಲ್ಲದ ಭಾವಕೆ 
ನಿನ್ನದಲ್ಲದ ಮಾತಿಗೆ 
ಸಾಕ್ಷಿ ಮಾತ್ರ  
ನಾನು-ನೀನು.
```````````````````````````

ಕೂತು ತೂಕಡಿಸಲು ಬಿಡದು 
ನಿನ್ನ ನೆನಪು!
ಮಮಕಾರಕು ಮರುಕವುಟ್ಟುವುದು
ನನ್ನ ಕಂಡು!
``````````````````````````

ಸುಡುವ ಬಿಸಿಲು 
ಮೈಮನವ ತರಗುಡಿಸುವ ಶೀತದಲೋ  
ಮುಸಲಧಾರೆಯಲೋ  ಕೊಚ್ಚಿ ಹೋಗದೆ 
ನೀನು ಮಾತ್ರ ಯಾಕೆ ಉಳಿದೆ 'ನೆನಪೇ'
``````````````````````````````````````````` 

ನಿನ್ನ ತನುವಿನ 
ಆಸರೆಗೆ ದೂಡುವ 
ಚಳಿಯನು ದೂಷಿಸದೆ 
ನನ್ನ ತೆಗಳುವ ಜಗದ
ಬಗ್ಗೆ ನನಗೇಕೋ ಮರುಕ!
``````````````````````````````````````



Thursday, November 3, 2011

ಆವರಿಸಿದ ಛಾಯೆ!

ಚೀರುವ ದನಿಯಲಿನ ನಿನ್ನ
ವೇದನೆಯ ಆರದ ಗೊಳು  ಆಲಿಸಲೋ 
ಅಸಾಧ್ಯ ಹಿಂಸೆ, ಒಡಲಾಳದಲಿನ 
ನಿನ್ನ ನೋವು ಬರಿದಾಗದೇ
ಉಮ್ಮಳಿಸುತಿಹ ನಿನ್ನ ರೋದನೆ.

ಮರುಗುವ  ಜೀವಗಳಿಗೋ
ಜಗದ ನೋವಲ್ಲಿ ಮುಳುಗುತಲಿಹ 
ಹೊಸ  ಆಕ್ರಂದನ, ಆಲಿಸಿದಷ್ಟು 
ಇಮ್ಮಡಿಸುವ ಬೇಸರ,
ಇನ್ನಾವುದೋ ನೆವದಲಿ ಪಲಾಯನಕೆ
ದಾರಿ  ಹುಡುಕುವ ಮರುಕ ಮನ!

ನಿನಗಾದರೂ ಸಹ ಮತ್ತೇನೂ 
ಅಸಹಾಯಕತೆಯ ವ್ಯಕ್ತವೊಂದೇ 
ಉಳಿದಿಹುದು ಬದುಕಲಿ ಎನುವ                                     
 ಪರಿಯಲಿ ದನಿ ಸೋತು 
ಕ್ಷೀಣಿಸಲು, ಬತ್ತಿರುವ ಹನಿಯ 
ಕಣ್ಣಲೂ ಜಗಕೆ ಕಂಗೊಳಿಸುತಿಹ 
ಶೂನ್ಯವು! ಕಾರಣವೇ ತಿಳಿಯದೆ 
ನೊಂದ ಮನಕೆ ಆವರಿಸಿದ 
ಛಾಯೆ ದುಗುಡ!

Sunday, October 2, 2011

ಶಿಖರವನೇರುತ...

ಶಿಖರವನೇರುತ...

ತುಂಗ ಉತ್ತುಂಗವ ಆವರಿಸಿ
ಮುಗಿಲ ಮುತ್ತಿಕ್ಕುವ ತವಕದ
ವನಸಿರಿಯ ಹಬ್ಬಿತಬ್ಬಿಹ
ಮುತ್ತ ಹನಿಯ ಚಿರ ಜಳಕದಲಿ
ತೊನೆಯುತ ಹಸಿರ ಚಿಮ್ಮುವ
ಮಬ್ಬು ಕಾನನದ ನೀರವದಲಿ

ಅಲೆಮಾರಿಯ ಅಸ್ಪಸ್ಟ
ಹೆಜ್ಜೆಗುರುತುಗಳು
ಮೆದು ನೆಲದಮೇಲೆ
ಅಸಂಬದ್ದ ಚಿತ್ರವ
ಮೂಡಿಸುತ
ಕವಿದ ಮೋಡದೊಳಗಣ
ಹಾದಿಯ ಹರಸುತ
ಶಿಖರದೆತ್ತರವ ಏರುತ ಏರುತ
ಮನ ನಿರಾಳ,ನಿರ್ಮಲ
ಹಗುರತೆಯ ಧನ್ಯ ಭಾವವ
ಸ್ಪುರಿಸಲು, ನಿಸರ್ಗದೊಡಲ
ಅನಪೇಕ್ಷಿತ ಮಮಕಾರವು
ಎನ್ನ ಸ್ಮೃತಿಯ ಕಾನನವ
ಆವರಿಸಲು;ಜೀವವು
ಗರಿಕೆಯ ಕುಡಿಯಂತೆ ತೃಣವು.


ತನುಮನ ತನ್ಮಯವು
ಪ್ರಕೃತಿ ಸೊಬಗ ರಸಜೇನ
ಸವಿಯಲು;ನನ್ನ ಕಣಕಣವು
ಲೀನವು ಪ್ರಕೃತಿ ಪರಬ್ರಮ್ಹನ
ಸಮಷ್ಟಿಯೋಳು.


ದಿಗಂತ ಮೀರಿದ ಭುವಿಯೊಡಲ
ಹರವನೇರಿ, ನೆಲಮುಗಿಲ
ಸಮಾಸಮದ ಅನನ್ಯ
ವಿಸ್ಮಯದೊಳಗಿನ ಬಿಂದು
ಭವಬಂಧನದೀ ಜೀವವು .
ಎಚ್ .ಎನ್. ಈಶಕುಮಾರ್

Wednesday, August 31, 2011

ಸ್ಪರ್ಶ..ಮೌನ!


ಕಾಯುವ ಹಪಾ ಹಪಿಯಲ್ಲೇ

ದಿನ ದೂಡುವ ಬದುಕಿಗೆ

ಇನ್ನಾವ ಹೊಸ ಅರ್ಥವನ್ನು

ನೀಡುವ ಹುಚ್ಚುತನ ನನ್ನಲ್ಲಿ ಉಳಿದಿಲ್ಲ!
~~~~~~~~~~~~~~~~~~

ನನ್ನವರ ಕಂಡಾಗ

ಅವರ ಮುಖದಲಿ

ಹೊಳೆವ ಸ್ವಚ್ಛಂದ ನಗುವಿನ

ಚೈತನ್ಯ ನನ್ನ ಸ್ವಾತಂತ್ರ.
~~~~~~~~~~~~~~~~~

ನದಿಯ ದಡದಲಿ ನಿಂತ

ಏಕಾಂತದಲಿ ನನ್ನ ಕೂಡಿದ

ಹಕ್ಕಿ ನುಡಿಯಿತು;

ನಿನ್ನ ಹಾಗೇ ನನಗೂ

ಇದುವೇ ಜೀವನ, ಇದರಲ್ಲೇ ಬದುಕು!
~~~~~~~~~~~~~~~~~
ಆವರಿಸಿದ್ದ ಮೌನದ ನಡುವೆ

ಮಾತನಾಡಿದ್ದು ಮಾತ್ರ

ಸ್ಪರ್ಶ!



Monday, August 8, 2011

ಜೀವಕೆ ಭಾವ!

ಜೀವಕೆ ಭಾವ!

ಆ ನದಿ -ದಡದ ನಿರಂತರ
ಸಲ್ಲಾಪದ ನಡುವೆ ನಿನ್ನ ಏಕಾಂತ!
ನಿನ್ನ ಕಾಲ ಬೆರಳ ಸೋಕಿ
ತೆರಳುತಿಹ ಅಲೆಯ ಪುಳಕ
ಕಂಡ ಪ್ರತಿ ಅಲೆಯು
ನಿನ್ನತ್ತ ತೆವಳಲು
ನೀ ನಿಂತ ನೆಲೆ, ನದಿಯ ಸೆಳೆತಕೆ
ಸಿಗದ ದಡದ ಬಿಂದು
ಅಲ್ಲಿ ನೀನಿತ್ತ ಸ್ಪರ್ಶದಲೇ ಉಳಿದಿಹ
ಭೂಮಿ ತೂಕದ ಎದೆಯ ಭಾರ!

ನಿಸರ್ಗದ ಮೃದು ನಿನ್ನ ತನ
ಮೆಲ್ಲಗೆ ಮಂಜು ಹೂವಿನ ಎಳೆಯ ಮೇಲೆ
ಮೂಡಿಸಿದ್ದು ಮಾತ್ರ ಹನಿಯ ಚಿತ್ತಾರ.
ಬಸುವಿನ ಹುಳು ತನ್ನ ದಾರಿಯಲಿ
ಗೆರೆ ಎಳೆದು ಬಿಡಿಸಿದ್ದು ಮಾತ್ರ
ಸರಳಾತಿಸರಳ ರೇಖೆ.
ಆವರಿಸಿಹ ಮೌನದ ನಡುವೆ
ಮಾತನಾಡಿದ್ದು ಮಾತ್ರ ಸ್ಪರ್ಶ!
ಇದೆಲ್ಲದರ ನಡುವೆ ನಿನ್ನಲ್ಲಿ
ಉಳಿದಿಹುದು ಮಾತ್ರ
ಜೀವಕೆ ಭಾವ!
ಭಾವಕೆ ಜೀವ!

ಎಚ್.ಎನ್. ಈಶಕುಮಾರ್

Monday, July 18, 2011

ಹೊಸತು ..!

ಆದರ್ಶ, ಆಧ್ಯಾತ್ಮಗಳೇಕೆ
ನನ್ನ ಅರಿಯಲು
ಈ ಜೀವನ ಸಾಕು!
*************************
ನೀ ನನ್ನ ಮನದ
ಮಾತಾಗು ಮೊದಲು
ಪ್ರೀತಿ-ಪ್ರೇಮದ
ಹುಚ್ಚು ಹೊಳೆಯಲಿ
ಮಾತು ಮರೆತು
ಮೌನಿಯಾಗುವ ಮುನ್ನ.
**********************
ಕಮಲದಂತೆ
ನೀರಿನಲ್ಲಿದ್ದು ಸ್ವಚ್ಛತೆಯ
ಕಾಪಾಡಲಿಚ್ಚಿಸುವ
ಹೆಣ್ಣು ಸಹ
ತನ್ನವನ
ಬಾಹು ಬಂಧನದ
ಪ್ರೇಮಕೆ ಪರಿತಪಿಸುವಳು
**************************

ನಿರ್ದಿಷ್ಟ ರೋಗದ
ಲಕ್ಷಣವಿಲ್ಲದಿದ್ದರು
ಬಗೆಹರಿಯದ
ಮಾರಕ ರೋಗವಿಹುದು
ಮನದಲಿ 'ಅನುಮಾನದ'
ಹೆಸರಿನಲ್ಲಿ...
**************************************************************************

Sunday, July 3, 2011

ದಾರಿ ಹೋಕ


ದಾರಿಯಲಿ ಕೇಳಿದ
ಹಳೆಯ ಹಾಡಿನ
ಗುಂಗಿನಲಿ ಮತ್ತೆ
ಉಮ್ಮಳಿಸಿ ಬರಲು
ನೆನಪು, ದಾರಿಹೋಕ
ಬಿಟ್ಟು ಹೋದ ಹಾಗೇ
ಬಿಮ್ಮನೆ ಬೀರಿದ ನಗೆಯ
ಮನದ ಗೋಡೆಯ ಮೇಲೆ.

ಸ್ಮಶಾನದ ಸಮಾದಿಯ
ಮೇಲೆಲ್ಲ ನಳನಳಿಸುತಿಹ
ತುಂಬೆಯ ಬೇರಿನ
ಆಳದಲಿ ಹುದುಗಿಹ
ಕಳೆಬರಹದ ಛಾಯೆ
ಹೂವಾಗಿ ನಲಿಯುತಿದೆ
ಇಂದು.
ನನ್ನೊಳಗೆ ಬಿತ್ತ
ಬಯಕೆಯ ಬೀಜ
ಮೊಳೆತು ಕನಸ
ಹೆಮ್ಮರವಾಗಲೇ ಇಲ್ಲ.
ಭ್ರಮೆಯ ಕನ್ನಡಿ
ಒಡೆದಾಗ ವಾಸ್ತವವೆಲ್ಲ
ಚಿದ್ರ ಚಿದ್ರಗೊಂಡ
ಬಿಂಬ.

ಅಲ್ಲೆಲ್ಲೋ ಬೆಟ್ಟದ
ಮರೆಯಲ್ಲಿ ತುಂತುರು ಮಳೆ
ಬೇರಿಗೆ ಇಳಿಯುತಿಹ ಹನಿ.