
ಅಪರಿಚಿತ ಜೀವಾತ್ಮಗಳೆರಡು
ಅನುರಗಾದಿ ಬೆರೆತು ಅವರೊಲವ
ಕುರುಹು ತಾಯಗರ್ಭದಲಿ ಮೂಡಿದ
ಜೀವದ ಆಶಾಕಿರಣದ ಉಸಿರ
ಪ್ರತಿ ಎಳೆತದಲು
ಬಸಿರ ಜೀವದ ಅಂತಃಕರಣ.
ಜೀವ ಚೇತನದ ಚಿಗುರೊಡನೆ
ಗರ್ಭದೊಡಲು ತುಂಬಲು
ಪ್ರತಿದಿನವೂ ತನುವ ಚೈತನ್ಯವು
ಹಿಮ್ಮಡಿಯಾಗಿ ಪ್ರಸವವೇದನೆಯ
ಆ ದಿವ್ಯಘಳಿಗೆಯಲಿ ದೈದಿಪ್ಯಮಾನವು
ಮೂಡಲು ತಾಯಿಯ ಮನದೊಡಲ
ಸಂತುಷ್ಟವು ಆ ಕಂಗಳಲಿ
ಪನ್ನೀರ ಬಿಂದುವಾದವು.
ಪ್ರಕೃತಿಯ ಜಗದಲಿ ಹಸಿರ
ಅಭೂತಪೂರ್ವ ಸಿರಿಯಾ ಹೊಮ್ಮಿಸಿ
ಚಿಮ್ಮಿಸಲು ತಂಗಾಳಿಯ ತಂಪನ್ನ ಹೀರಿ

ಘನಿಗೊಳ್ಳುತ ಮೋಡ ತನ್ನ ಒಡಲನು
ಅಗಾಧವಾಗಿಸುತ ಭುವಿಯ
ಪ್ರೇಮ ಮಂತ್ರಕೆ ಮಾಗಿ ಕಪ್ಪಾಗಿ ಬೀಗಿ
ತನ್ನೊಲವು ಹನಿ ಹನಿಯಾಗಿ
ಭುವಿಯ ಮುತ್ತಲು ಕೂಡಿದ
ಪ್ರತಿ ಹನಿಯ ಹರಿವು ನದಿಯಾಗಿ
ಜೀವಹೊಮ್ಮಲು ತಾಯಗರ್ಭದಂತ
ಸಾಗರದೊಡಲ ಮೋಹದ ಮುರಳಿ
ರಾಗವು ಕರೆಯಲು ಗುರಿಯ ಚಿತ್ತದಿ
ನದಿ ತನ್ನ ಮರೆಯಲು
ಲೀನವು
ಸಾಗರನ ಅನಂತ ಗರ್ಭದೊಳು.
ಎಚ್.ಎನ್.ಈಶಕುಮಾರ