Thursday, December 31, 2009

ಹೊಸ ವರುಷದ ಹಾದಿ..






















ಹಳೆಯ ಕ್ಯಾಲೆಂಡರ್ ಬದಲಿಸಿದಂತೆ,
ನನ್ನ ಹಳೆಯ ಕಹಿ ನೆನಪುಗಳೆಲ್ಲ
ನನ್ನಿಂದ ದೂರಾಗಿ, ಬದುಕಿನ
ಕಷ್ಟಗಳೆಲ್ಲ ಒಮ್ಮೆಗೆ ಮರೆಯಾಗಿ,
ನೋವಿನ ಬವಣೆಗಳೆಲ್ಲ ಅಂದಿನ
ದಿನಕೆ ಕೊನೆಯಾಗಿ,
ಜೀವನದ ಜಂಜಡ ಜಡತೆಗಳೆಲ್ಲ
ಆ ವರುಷದ ಹೊಳೆಯಲಿ
ಕೊಚ್ಚಿ ಹೋಗಿ, ನನ್ನೆಲ್ಲ ಗತ
ಸೋಲುಗಳು ಹೊಸ ಕನಸುಗಳ
ಹುರುಪಿನಲಿ ಸಮಾಧಿಯಾಗಿ
ಹೊಸ ವರುಷದ ದಿನ ರವಿತೇಜ

ನನ್ನ ಬಾಳಲ್ಲಿ ಹಳೆಯ

ದುಗುಡವನೆಲ್ಲ ದೂಡಿ
ಹೊಸ ಕ್ಯಾಲೆಂಡರ್ ನಂತೆ
ನವ್ಯತೆಯ ಅರುಹಿದರಷ್ಟೇ

ಹೊಸವರುಷಕೆ ಸ್ವಾಗತವು,ಸಂಭ್ರಮವು
ಈ ಜೀವಮಾನದಲಿ..ಎಂದಿಗೂ ಎಂದೆಂದಿಗೂ.


ಆದರೂ ಸಹಯಾತ್ರಿಗಳೇ ನಿಮಗೆಲ್ಲ ಹೊಸ ವರುಷ ಸಂತಸ, ಸಂಭ್ರಮ,ನಲುಮೆಯ ತುಂಬಿ ತರಲಿ ವರುಷವೆಲ್ಲ.
ಎಚ್.ಎನ್.ಈಶಕುಮಾರ್.

Saturday, December 26, 2009

ಬಿಡಿ ಬಿಡಿ ಕವಿತೆಗಳು















ನನ್ನ ಪದಗಳಿಗೆ ಮಿಡಿವ
ನಿನ್ನ ಮನದ ಭಾವಗಳೇ
ನನ್ನ ಕವಿತೆಯ ಜೀವಾಳ
ಕವನದ ಸೆಲೆಯೇ ನೀ

ಆಗಿರುವಾಗ ನೀ ಇಲ್ಲದೆ

ಪದಗಳಿಗಾವ ಜೀವ ಗೆಳತಿ..
*********************************
ಅದೆಲ್ಲೋ ಬಾಳೇ ತೋಟದ
ಹಸಿರ ನಡುವೆ ಬಳಕುತ

ನಿಂತ ಚೆಲುವೆ ನೀ
ಕರೆಯಲು ಕಾಡುವ ಕಂಗಳ
ಸನ್ನೆಯಲೇ ಮರುಳಾದೆ
ನಾ ನಿಂತ ನಿಲುವಲೇ...

**************************************
ನಿನ್ನ ಮೌನ ಮಾತಾದಾಗ
ಮಲ್ಲಿಗೆ ಅರಳಿತು ಸಂಜೆಯಲಿ..

ನಿನ್ನ ಕನಸು ನನಸಾದಾಗ
ನನ್ನ ಬದುಕು ಹಿತವೆನಿಸಿತು
ಮುಸಂಜೆಯ ಮಬ್ಬಿನಲಿ.....

******************************************
ನಿ
ನ್ನೊಂದಿಗೆ ದಿನರಾತ್ರಿ ಕಳೆವ
ಕನಸು ನನಸಾದ ದಿನದ
ನೆನಪ ಭಾರ ಹೊತ್ತು ಹೊತ್ತು
ದಿನದೂಡುತ್ತಿರುವ ವಿರಹಿಯ
ಸವಿ ನೋವ ನಿವೆದಿಸುತಲೇ
ಹುಣ್ಣಿಮೆಯ ಚಂದಿರ ಒಮ್ಮೆಗೆ
ಮರೆಯಾದ ಮೋಡದ ಮರೆಯಲಿ..

Wednesday, December 16, 2009

ಒಂದು-ನೂರರ....ಅಂತರ

ಒಂದು-ನೂರರ....ಅಂತರ


ಯಾಕೆಂಬುದೆ ತಿಳಿಯದ ಹಾಗೇ
ಎಚ್ಚರವೆಂಬುದು ನೆಪ ಮಾತ್ರ
ಮತ್ತೆ ಮತ್ತೆ ಮೈ ಮರೆವು
ಸಂಜೆ ಸೂರ್ಯನೊಡನೆ ಕಣ್ಣಾಮುಚ್ಚಾಲೆಯಾಡಲು
ಕಪ್ಪನೆ ಮೋಡ ಬುವಿಯಲೆಲ್ಲ
ಕೆಂಬಣ್ಣದ ತಂಪು,ಮನದಲೋ ಮಂಪರು.

ನೀ ಮೋಡದಂತೆ ಆವರಿಸಿ
ಮಳೆಯಂತೆ ಜಿನುಗಿ ಮರೆಯಾಗಿ
ಮರೆಯಲು, ನನ್ನ ಬದುಕು
ಒಂಟೆತ್ತಿನ ಗಾಡಿಯಾ ಹಾಗೇ
ಸಾಗುತ್ತಲೇ ಇದೆ ಅನವರತ.
ಅದೇನೋ ವಿಪರ್ಯಾಸ! ಅಣಕಿಸಿದೆ
ಹೊಟ್ಟೆಯ ಜೀತದ ಪ್ರತಿದಿನದ ಜೂಟಾಟಿಕೆ.
ಸೋಲು ಸಾವಲ್ಲ! ಜೀವನವೇರಿದ
ಘಟ್ಟವ ಸೂಚಿಸುವ ಮೈಲಿಗಲ್ಲು.

ನಾ ಮರೆಯಲೊಲ್ಲದ ಜೀವಮಾನದ
ಸೋಲು ನೀ, ಅಂದು ದಾರಿ ತಪ್ಪಿದವಗೆ
ಹಾದಿ ತೋರಿದ ಸೂಚನಫಲಕ.
ಸಂಬಂಧಗೂಡದ ಆ ಕಹಿ ಅನುಭವದ
ಶೂನ್ಯಭಾವಕೆ ಕಿಚ್ಚನ್ನ ಹಚ್ಚಿದಲ್ಲವೇ
ನಿನ್ನ ಅಗಲಿಕೆ.ಆ ವಿರಹದ
ಬೇಗೆಯಲಿ ಚಿಗುರೊಡೆದ ನನ್ನ
ಜೀವನ ಸೂಚ್ಯಂಕದ ಮೊದಲಂಕಿ ನೀನು.


ನೀ ಅಗಲಿ ದೂರಾದರೇನು?
ಬದುಕು ಎಲ್ಲಿಂದ ಪ್ರಾರಂಭವಾದರೇನು?
ನನ್ನ ನಿನ್ನ ನಡುವಿರುವುದು
ಒಂದು-ನೂರರ ನಡುವಿನ ಅಂತರ.

ಎಚ್.ಎನ್.ಈಶಕುಮಾರ್

Thursday, December 10, 2009

ಅರಿವಿರದ ಪಯಣವೇ...












ತೀರದ ಮನದ ಬಯಕೆಗಳು
ಕೊನೆಗಾಣದ ಅಪರಿಮಿತ ಬವಣೆಗಳು
ದಣಿವರಿಯದ ಅನಿಶ್ಚಿತಿತ ದಾಹಗಳು
ಕಣ್ಣ ಅಂಚಿನಲೆ ಬಿಂಬವಾಗಿ
ಕೂತು ಕಾಡುವ ಕಾಮನೆಗಳು
ಕೊನೆ ಕ್ಷಣದವರೆಗೂ ಅಂತಿಮ ತಾಣವ
ಕಾಣದ ಅರಿವಿಲ್ಲದ ಸುಧೀರ್ಘ
ಪಯಣವೇ ಜೀವನವ?



ಬದುಕ ದೋಣಿ ನೀರ ಅಲೆಗಳ ಮೇಲೆ ಅತ್ತಿಂದಿತ್ತ-ಇತ್ತಿಂದಿತ್ತ ತೋಯುತ್ತ, ನನ್ನ ಅಂತಿಮ ತಾಣವೆಲ್ಲೋ ಎಂದು ಮನಸಿನಲ್ಲಿ ಹುಟ್ಟಿದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೆಂಬಂತೆ ದೂರದ ದಿಗಂತದತ್ತ ಒಂದು ನೋಟ ಬೀರಿ ಅಲ್ಲಿರಬಹುದೇನೋ ನನ್ನ ಜೀವನದ ವಿಶ್ರಾಂತ, ನೆಮ್ಮದಿಯ ತಾಣ ಎಂದುಕೊಳ್ಳುತ್ತ, ತನ್ನ ಮನಸನ್ನು ತಾನೇ ಸಮಾಧಾನ ಪಡಿಸಿಕೊಳ್ಳುತ್ತ ಸಾಗುತ್ತಿತ್ತು. ಎಲ್ಲಿಯೂ ನಿಲ್ಲಲು ಮನಸಿಲ್ಲ, ಪಯಣದ ದಾರಿಯ ಬಿಟ್ಟು ಅಂತಿಮ ನೆಲೆ ಎಲ್ಲೆಂಬುದು ಸ್ಪಷ್ಟವಿಲ್ಲ, ಎಂದಾದರು ಒಂದು ದಿನ ಸಿಕ್ಕಬಹುದೆಂಬ ಆಶಾಭಾವದ ಭ್ರಮೆಯಲಿ ಸಿಲುಕಿ, ಆಶಾಭಾವವೇ ಜೀವನ ಸೆಲೆಯನು ಹೆಚ್ಚಿಸಿ ತನ್ನ ಪಯಣ ಮುಂದುವರೆಸಿದೆ. ಪಯಣ ಮಾತ್ರ ಸಾಗಿದೆ ಅದರ ಮಹತ್ವದ ಅರಿವಿಲ್ಲ. ತನ್ನ ಚೇತನ ಎಲ್ಲಿಯವರೆಗೂ ಮುನ್ನಡೆಸುತ್ತದೋ ಅಲ್ಲಿಯವರೆಗೂ ಸಾಗುತ್ತೇನೆ ಎಂಬ ಸಂಕಲ್ಪ ದೇಹಕ್ಕೆ.

ದೇಹ-ಮನಸುಗಳ ಸಾಂಗತ್ಯವೇ ವಿಭಿನ್ನ. ದೇಹದ ದಣಿವಿಗೆ ಮನಸಿನ ಸ್ಪೂರ್ತಿಯೇ ಔಷದ. ಮನಸಿನ ಅಭಿಲಾಷೆಗಳಿಗೆ ತಕ್ಕಂತೆ ತನ್ನನು ತಾನೇ ಹುರಿದುಂಬಿಸಿಕೊಳ್ಳುತ್ತ, ದೇಹ ಮನಸಿನ ತಾಣದ ಹುಡುಕಾಟದಲ್ಲಿ ಮುನ್ನಡೆಯುತ್ತದೆ. ದೇಹ-ಮನಸುಗಳ ನಡುವಿನ ಸಂಭಂದವೇ ಅಂತಹುದು. ಒಂದು ರೀತಿಯ ಬಿಟ್ಟು ಬಿಡದ ಅವಿನಾಭಾವ ಸಂಭಂದ. ಆದರೂ ವೈರುದ್ಯವಾಗಿ ಅವುಗಳ ನಡೆ. ತನ್ನದೇ ಆದ ಆಕಾರ, ಮೂರ್ತತೆಯ ದೇಹಕ್ಕೆ ತನ್ನದೇ ಈರ್ಷ್ಯೆ, ಬಯಕೆಗಳು ಕಡಿಮೆ ಆದರೇ ಮನಸಿಗೆ ತನ್ನದೇ ಆದ ಮೂರ್ತ ಅಸ್ಥಿತ್ವ ಇಲ್ಲವಾದರೂ ಅದರ ಬಯಕೆಗಳು ಈರ್ಷ್ಯೆಗಳು ಅಪಾರ. ಮನಸಿನ ವಾಂಛೆಗೆ ಮಿತಿಯೇ ಇಲ್ಲ. ಅಂತಹ ಮನಸನ್ನು ಸಾವಧಾನದ ಸ್ಥಿಥಿಯಲ್ಲಿರಿಸುವುದು ಅಸಾಧ್ಯದ ಸಂಗತಿ ಮತ್ತು ಮಾನವನಿಗಿರುವ ಬದುಕಿನ ಹೋರಾಟ.

ಜೀವನವೆಂಬ ನಿತ್ಯ ಚಲನೆಯಲಿ ದೇಹ-ಮನಸುಗಳ ಮಿಳಿತದ ಸಾಗಾಟವಿದ್ದರು ಮೂರ್ತ ರೂಪದ ದೇಹದ ಚಟುವಟಿಕೆಗಳಿಗೆ ಮನಸಿನ ಅಮೂರ್ತ ಶಕ್ತಿಯ ಬೆಂಬಲ ಅಪಾರ. ಬದುಕಿನ ನಿರಂತರ ಯುದ್ದದಲಿ ಎಂಬಿಡದೆ ಸೈನಿಕರಂತೆ ಕಾದಾಡುತ್ತ ಸಾಗುವ ಮಾನವನ ಎರಡು ಶಕ್ತಿಗಳು ಅವನ ಸೋಲು-ಗೆಲುವು, ಏಳು-ಬಿಳುಗಳಲ್ಲಿ ಮಹತ್ವದ ಪಾತ್ರದಾರಿಗಳು. ದೇಹ-ಮನಸುಗಳು ಎರಡು ನಮ್ಮಯ ಏಳು-ಬಿಳುಗಳಿಗೆ ಕಾರಣವಾದರು ಅವುಗಳಿಂದ ಉಂಟಾಗುವ ಸುಖ-ದುಖಗಳಲ್ಲಿ ಮನಸಿನ ಭಾಗಿತ್ವವೇ ಅಧಿಕ. ನಮ್ಮ ಸೋಲು-ಗೆಳವುಗಳಿಗೆ ಮನ ಸಂವೇದನೆಯಾಗಿ ವರ್ತಿಸುತ್ತದೆ. ಎಲ್ಲ ಫಲಾನುಫಲಗಳನ್ನು ಮನಸು ಅನುಭವಿಸುತ್ತದೆ. ಸಾಂಘಿಕ ಕಾರ್ಯದಲ್ಲಿ ಅಮೂರ್ತ ಚೇತನವಾದ ಮನಸಿನ ಕಾರ್ಯ ಅಧಿಕ. ಮಾನವ ಜೀವನದ ಏಳಿಗೆಯಲ್ಲಿ ಸದೃಢ ಮನಸು ಕೆಲಸ ಮಾಡುತ್ತದೆ. ಅದರಿಂದಾಗಿಯೇ ನಮ್ಮ ಮನಸನ್ನು ಸದೃಢ ಗೊಳಿಸಿಕೊಂಡು, ಉತ್ತಮ ಜೀವನವನ್ನು ಕಟ್ಟಿಕೊಳ್ಳುವತ್ತ ನಮ್ಮಯ ಜೀವನ ಯಾನ ಸಾಗಲಿ...

Thursday, December 3, 2009

ಚುಟುಕ!

ಮನದ ಯೋಚನ ಲಹರಿಯೇ ವಿಚಿತ್ರ. ಅಂತಹ ವಿಚಿತ್ರಕ್ಕೆ ಸಾಕ್ಷಿ ಚುಟುಕ. ಚುಟುಕವನ್ನ ಓದಿ, ಹೊಗಳಿಕೆ,ತೆಗಳಿಕೆಗಳನ್ನ ಕಾಮೆಂಟ್ ಮಾಡಿ ನೇರವಾಗಿ ನನ್ನನ್ನು ದೂಷಿಸಬೇಡಿ ಇದು ನನ್ನ ತಪ್ಪಲ್ಲ ನನ್ನ ಮನದ ತಪ್ಪು.

ಅಪಶಕುನ!!


ಎದುರು ಮನೆಯ
ಬೆಳ್ಳನೆಯ ಹುಡುಗಿ
ತೊನೆದಾಡುತ ಗೇಟಿನ
ಬಳಿ ಬರಲು
ಎದುರಿನ ಎಲೆಕ್ಟ್ರಿಕ್ ತಂತಿಯ
ಮೇಲಿದ್ದ ಕಾಗೆಗೆ
ಅಪಶಕುನದ ಭಾಸವಾಯ್ತು.

Wednesday, November 25, 2009

ಪ್ರತಿಬಾರಿಯೂ ನಾವೇಕೆ ಸೋಲುತ್ತೇವೆ?

ಆಡಳಿತದಲ್ಲಿ ಲೋಪಗಳ ತಡೆಯಲು, ಅಧಿಕಾರದ ವಿಕೇಂದ್ರಿಕರಣದ ಮುಖೇನ ಉತ್ತಮ ಆಡಳಿತ, ಮನೆಯಮುಂದಕ್ಕೆ ಆಡಳಿತ ಎಂಬ ಧೈಯದೊಂದಿಗೆ, ಪ್ರಜಾಪ್ರಭುತ್ವದ ಆಡಳಿತಾಧಿಕಾರವನು ಹಂತ
ಹಂತವಾಗಿ ವಿಂಗಡಿಸಿ ಆಡಳಿತ ಯಂತ್ರವನು ಚುರುಕುಗೊಳಿಸಿ ಬೇಗ ಬೇಗ ಜನರ ಕಷ್ಟಗಳಿಗೆಸ್ಪಂಧಿಸುವ ಧೈಯ ನಮ್ಮ ಸರ್ಕಾರಗಳದ್ದು.
ಜನರ ಕುಂದು-ಕೊರತೆಗಳ ನಿವಾರಿಸುವ, ಅವರ ಕಷ್ಟ-ನಷ್ಟಗಳಿಗೆ ಸ್ಪಂಧಿಸುವ ಸಲುವಾಗಿ ಸರ್ಕಾರ ತನ್ನ ಪುಟ್ಟ ಪುಟ್ಟ ಘಟಕಗಳಂತೆ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತ್,ತಾಲ್ಲೂಕು ಕಛೇರಿ, ಜಿಲ್ಲಾ ಕಛೇರಿಗಳನ್ನ ಸ್ಥಾಪಿಸಿದೆ. ಘಟಕಗಳ ಮೂಲಕ ಜನರ ಕೆಲಸ ನಿರ್ವಹಿಸುತ್ತಿರುವ ಸರ್ಕಾರವಿಂದು ನಿಜಕ್ಕೂ ತಮ್ಮ ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ, ಜನರ ಹಿತವನ್ನು ಕಾಯುವ ಕೆಲಸ ,ಮಾಡುತ್ತಿವೆಯ? ನಮ್ಮ ದೇಶದಲಿಂದು ಅಧಿಕಾರದ ವಿಕೇಂದ್ರಿಕರಣದ ಸಣ್ಣ ಸಣ್ಣ ಘಟಕಗಳು ಜನರ ಕೆಲಸಗಳನು ಮಾಡುತ್ತಿವೆಯ?ಅವುಗಳಿಗೆಲ್ಲ ಅಂತ ಅಧಿಕಾರ ಇದೆಯಾ? ಇಲ್ಲವ? ಯಾವ ಯಾವ ಸಮಯದಲಿ ಯಾವ ಯಾವ ಘಟಕಗಳುಹೇಗೆ ಕೆಲಸ ಕಾರ್ಯಗಳನು ಹಮ್ಮಿಕೊಳ್ಳಬೇಕು, ಏನೇನೂ ಕ್ರಮಗಳನ್ನು ಅನುಸರಿಸಬೇಕುಎಂಬುದು ನಿರ್ದ್ರಿಷ್ಟವಾಗಿ ಇದೆಯಾ? ಇದ್ದರೆ ಅವಗಡಗಳನ್ನು ನಿಭಾಯಿಸುವಲ್ಲಿ ಪ್ರತಿಭಾರಿಯೂ ನಾವೇಕೆ ಸೋಲುತ್ತೇವೆ. ನೋವಿನಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲಲು ನಮ್ಮ ಸರ್ಕಾರಗಳಿಗೆಕೆ ಸಾಧ್ಯವಾಗುವುದಿಲ್ಲ? ಅದು ಅಷ್ಟೆಲ್ಲ ಸರ್ಕಾರದ ಘಟಕಗಳಿದ್ದುಎಂಬುದೇ ನನ್ನ ಪ್ರಶ್ನೆ.

ಇಂದು ಗ್ರಾಮ ಮಟ್ಟದಿಂದ ಹಿಡಿದು ಶಾಸಕರವರೆಗೆ ಜನರ ಪ್ರತಿನಿಧಿಸುವ ಜನಪ್ರತಿನಿಧಿಗಳು,ಗ್ರಾಮಲೆಕ್ಕಿಗರು,ದಂಡಾಧಿಕಾರಿಗಳು,ಜಿಲ್ಲಾಧಿಕಾರಿಗಳು,ಸಚಿವರು ಹೀಗೆ ಆಯಾ ಹಂತವನ್ನು ಪ್ರತಿನಿಧಿಸುವ ನಾಯಕರು ಸರ್ಕಾರಿ ಅಧಿಕಾರಿಗಳು, ನೌಕರರು ಇರುವ ಸುಸಜ್ಜಿತವಾದ ವ್ಯವಸ್ಥೆ ಮಾಡುವುದಾದರೂ ಏನನ್ನ. ಅಧಿಕಾರದ ದುರ್ಬಳಕೆ ಆಗದಿರಲಿ,ಒಂದೇ ಕಡೆ ಕೇಂದ್ರಿತವಾಗದಿರಲಿ ಎಂದು ವಿಘಟನೆ ಗೊಳಿಸಿದ ಆಡಳಿತ ಯಂತ್ರ ಸರಿಯಾಗಿಸಮಯೋಚಿತ ಕಾರ್ಯಗಳನು ನಿರ್ವಹಿಸದೆ ಇದ್ದಲ್ಲಿ ಅವುಗಳಿದ್ದು ಲಾಭವೇನು?
ರೈತರು, ಬಡ ಕೂಲಿಕಾರರು, ಸಣ್ಣ ಸಣ್ಣ ಹಿಡುವಳಿದಾರರೆ ಹೆಚ್ಚಾಗಿರುವ ಕೃಷಿಯನೆ ನಂಬಿಬದುಕುವ ಉತ್ತರದ ಕರ್ನಾಟಕದ ಹಳ್ಳಿಗಲೆಲ್ಲ ನೆರೆ ಹಾವಳಿಗೆ ಸಿಲುಕಿ ಅವರ ' ಬದುಕುಮೂರಾಬಟ್ಟೆಯಾದಸಮಯದಲಿ'ಸರ್ಕಾರದ ಘಟಕಗಳು ಸಂತ್ರಸ್ತರ ನೆರವಿಗೆ ಪರಿಣಾಮಕಾರಿಯಾಗಿ ಸ್ಪಂಧಿಸದೆ ದಿನದೂಡುತ್ತ, ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದುಭರವಸೆಗಳನ್ನ ನೀಡುತ್ತ, ಇಂದು ಬೀದಿ ಪಾಲಾದ ಜನರಿಗೆ ಪರಿಹಾರಗಳನ್ನು ಒದಗಿಸದೆ ಸಭೆನಡೆಸಿ, ಸಮೀಕ್ಷೆ ನಡೆಸಿ, ತಿರ್ಮಾನ ಕೈಗೊಂಡು ವರುಷಗಳು ಕಳೆದ ನಂತರ ಸಂತ್ರಸ್ತತರು ಕಳೆದುಕೊಂಡ ಆಸ್ತಿಯ ನಾಲ್ಕನೇ ಒಂದು ಭಾಗದಷ್ಟೋ ಅಥವಾ ಅವರಿಗೆ ತೋಚಿದಷ್ಟು ಪರಿಹಾರನೀಡಿದರೆ ಅದರಿಂದಾಗುವ ಒಳಿತಾದರು ಏನು?
ತಮ್ಮ ಮನೆ ಮಠ, ಆಸ್ತಿ, ಬೆಳೆ,ದಾಸ್ತಾನು ಎಲ್ಲವು ನೀರು ಪಾಲಾಗಿ ಬದುಕು ಕಳೆದು ಕೊಂಡಜನರ ಬದುಕು ಕಟ್ಟಿಕೊಡುವ ಹೊಣೆಯಾದರು ಯಾರದ್ದು? ಅವರವರ ನೋವಿಗೆ ಅವರವರೆ ಪಾಲುದಾರರು.ಯಾವುದೇ ಪಕ್ಷದ ಸರ್ಕಾರವಿರಲಿ, ಯಾವುದೇ ಸರ್ಕಾರ ಬರಲಿ, ಹೋಗಲಿ ಶ್ರೀ ಸಾಮಾನ್ಯನಬವಣೆ, ಜಂಜಾಟ, ನೋವುಗಳಿಗೆಎಂದಿಗೂ ಪರಿಹಾರ ಅಸಾಧ್ಯ. ಜನ ನಾವುಗಳು ಶಕ್ತರಾಗದಹೊರತು ಯಾರಿಂದಲೂ ಬದಲಾವಣೆ ಎಂಬುದು ಸಾಧ್ಯವಿಲ್ಲ ನಮ್ಮ ನಾಡಿನಲ್ಲಿ ಎಂಬುದುಸರ್ವಕಾಲಿಕ ಸತ್ಯ ಎಂಬುದು ಮತ್ತೆ ಮತ್ತೆ ಸಾಬೀತಾದ ಅಂಶ.
ಜನರ ನೋವಿಗೆ ಸ್ಪಂಧಿಸುವುದೇ ನನ್ನ ಮೊದಲ ಆಶಯ, ಗುರಿ ಎಂದು ಬಡಾಯಿ ಬಾರಿಸುವ ನಾಯಕರೆಲ್ಲ ಅವರಿವರ ಮೇಲೆ ಗೂಬೆ ಕೂರಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವವರೇ. ಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಆರೋಪ ವರಿಸಿದರೆ, ಸಚಿವರುಗಳುಅಧಿಕಾರಿಗಳು ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದರೆ, ಅಧಿಕಾರಿಗಳು ಸರ್ಕಾರದಿಂದ ಸಮರ್ಪಕವಾದ ನೆರವು ಬಂದಿಲ್ಲ ಎಂದು ಆರೋಪಿಸಿ ಒಬ್ಬರನ್ನು ಇನ್ನೊಬ್ಬರು ತೆಗಳುವವರೆ.ಯಾರ ಮಾತು ಸತ್ಯ ಯಾರ ಮಾತು ಸುಳ್ಳು ಎಂಬುದ ತಿಳಿಯದ ಸಾಮಾನ್ಯ ಮಾತ್ರ ಪ್ರತಿಬಾರಿಯೂ ತಾ ಮಾಡಿದ ಮತದಾನವನ್ನೇ ಶಪಿಸುತ್ತ ಸುಮ್ಮನಾಗುತ್ತಲೇ ಇದ್ದಾನೆ. ಇದು
ಅಧಿಕಾರದ ದುರ್ಬಳಕೆಯೋ,
ಕರ್ತವ್ಯದ ಲೋಪವೋ , ಎಂಬ ಗೊಂದಲದಲ್ಲಿ ನಾ ಇದ್ದೇನೆ.

ಲೇಖನ: ಸೃಜನ

Wednesday, November 18, 2009

ವೈದ್ಯೋ ಬರಹಗಾರ!


ಸಾಹಿತ್ಯದ ಸೆಳೆವೆ ಅಂತದ್ದು. ಅರಿತವರೆ ಬಲ್ಲರು ಅದರ ಸಾಂಗತ್ಯದ ಪರಿವನ್ನ. ಮಳೆಯಲಿ ನೆಂದು ಬಂದ ಹಳ್ಳಿಯ ಹುಡುಗ,ಸ್ನಾನದ ಒಲೆಯ ಮುಂದೆ ಕೂತು ಬೆಂಕಿಯ ಕಾಯಿಸುವಾಗಿನ ಬೆಚ್ಚನೆ ಭಾವವ ಅನುಭವಿಸುವಷ್ಟೇ ಸೊಗಸು ಕಥೆ,ಕವನಗಳ ಸಾಂಗತ್ಯ. ಬಿಟ್ಟು ಬಿಡದ ನಂಟು ಅದು. ವೃತ್ತಿಯಲ್ಲಿ ವೈದ್ಯರಾಗಿರುವ ಹಿರಿಯರು, ಸ್ನೇಹಿತರು ಆಗಿರುವ ದೀಪಕ್ ರವರ ಸಾಹಿತ್ಯದ ಬಗೆಗಿನ ಗೀಳನ್ನು ನೋಡಿದರೆ ನನಗೆ ಹೀಗೆ ಅನಿಸುವುದು. ಅವರೊಟ್ಟಿಗೆ ಹರಟುವಾಗಲೆಲ್ಲ ಜೀವನದ ಬಗೆಗೆ, ಸಮಾಜದ ಆಗು-ಹೋಗುಗಳ ಬಗ್ಗೆ,ಅನುಭವಗಳ ಬಗೆಗಿನ ಅವರ ಒಳನೋಟಗಳು ನನಗೆ ವಿಶಿಷ್ಟ ಅನಿಸುತ್ತವೆ. ಅವರೊಂದಿಗೆ ಮಾತನಾಡುವಾಗಲೆಲ್ಲಾ ಇವರು ಅಪ್ಪಿ ತಪ್ಪಿ ವೈದ್ಯರಾಗಿಬಿಟ್ಟಿದ್ದಾರೆ,ಇಲ್ಲವೇ ನಮ್ಮ ಹಾಗೇ ಪಾಠ ಮಾಡಿಕೊಂಡು ಅದು ಇದು ಮನಸಿಗೆ ತೋಚಿದ್ದ ಗೀಚಿಕೊಂಡು ಇರುತ್ತಿದ್ದರೆನೋ? ಎಂದೆನಿಸುವುದು.
ಅವರು ವೈದ್ಯರಾಗಿ ರೋಗಿಗಳಿಗೆ ಗುಳಿಗೆ ನೀಡಿ,ಯಾವ ಯಾವ ರೋಗಗಳ ಗುಣಮುಖ ಮಾಡುತ್ತಾರೋ ನನಗಂತು ತಿಳಿಯದು. ಅವರೊಳಗಿನ ಕವಿ ಮನಸ್ಸು ಮತ್ತೆ ಮತ್ತೆ ನನ್ನ ಚಕಿತ ಗೊಳಿಸುವುದು. ವೃತ್ತಿ ಯಾವುದಾದರೇನು ಪ್ರವೃತ್ತಿಯಲ್ಲಿ ಅವರು ನನ್ನ ಒರಗೆಯವರೇ ಅನ್ನಿಸುವುದೇ ನನಗೆ ತೃಪ್ತಿ. ಅವರು ಬರೆದ ಒಂದು ಪುಟ್ಟ ಕವನವನ್ನು ನಿಮ್ಮ ಓದಿಗೆ ಬಿಡುತ್ತಿದ್ದೇನೆ,ಓದಿ ನಿಮ್ಮ ಅನಿಸಿಕೆಗಳ ತಿಳಿಸಿ....


ನಿನ್ನ ಹುಡುಕಿದೆ


ನಿನ್ನ ಹುಡುಕಿದೆ.... ಪ್ರಿಯಾ
ಹುದುಗಿದ ನೆನಪಿನೊಳಗೆ
ಜೀವನದ ಪುಟದಲಿ,
ಕಳೆದ ಸಮಯದಲಿ,
ನಿಸ್ತಂತು ಪಿಸುಮಾತಲಿ,
ಖಾಲಿ ವಿಸ್ಕಿ ಸೀಸೆಯಲಿ,
ಕಳೆದ ಸಿಗರೇಟು ಧೂಮದಲಿ,
ನೆನಪಿನಲಿ ಇರಿದು ಕೊಯ್ವ ನಿನ್ನ ಸೆಲೆ
ನನ್ನಬದುಕನ್ನೇ
ಅಂತರ್ಮುಖಿಯಾಗಿಸುತ್ತಿರುವುದ
ನಾನೇಕೆ ತಿಳಿಯಲಿಲ್ಲವೇ,
ದ್ವಂದ್ವಗಳ ಗೂಡಾಗಿಸಿ ನೀ ಹೋದುದಾರು
ಎಲ್ಲಿಗೆ ಅರುಹೆ ಗೆಳತಿ?

Tuesday, November 10, 2009

ಕವನ ಮಾಲೆ






ಜೀವನದಲ್ಲಿನ ವೈರುಧ್ಯಗಳು ಅಪಾರ, ನಮ್ಮ ಮನ ಬಯಸುವುದೊಂದು ವಾಸ್ತವದಲಿ ನಡೆಯುವುದೇ ಇನ್ನೊಂದು. ಆದರೂ ಅಂತಹ ಭ್ರಮೆಗಳಲೆ,ಕನಸುಗಳ ಸರಮಾಲೆಯ ಜೊತೆಯೇ ವೈರುಧ್ಯಗಳ ಜೀವನದ ಬಂಡಿ ಸಾಗಿದೆ ಎಡಬಿಡದೆ,ಅಲ್ಲವೇ...ನನ್ನ ಕವನಗಳಲು...




ಒರೆ ನೋಟವ ಬೀರಿ ಹಾಗೆ ನಡೆದೆ
ಹಿಂತಿರುಗಿ ನನ್ನ ದಾರಿಯೆಡೆಗೊಮ್ಮೆ
ನೋಡದೆ ನಡೆದೆ, ಆ ತಿರುವಿನಲಿ
ನೀ ಕಾಣದೆ ಮರೆಯಾದುದಷ್ಟೆ
ದುರಂತವಲ್ಲ ನನ್ನ ಜೀವನದೀ,
ನಾ ಸಾಗಿದ ಹಾದಿಯಲಿ ನನಗೆ
ನನ್ನದೇ ಹೆಜ್ಜೆಯ ಗುರುತು ಸಿಗುತ್ತಿಲ್ಲ..
*************************************

ಅವನ ಕೈ ಸೆರೆಯಲಿ ಬೆಚ್ಚನೆ
ಪ್ರೀತಿಯ ಹವಣಿಸುತ ಬಂದ
ಪ್ರೇಮ ಪಕ್ಷಿಯ ಮುಕ್ತವಾಗಿಸುವ
ಹುಂಬ ತವಕದಲಿ ಹಾರಿಬಿಟ್ಟ ಹಕ್ಕಿಯ
ಸ್ವಚ್ಚಂದ ಹಾರಟವನು ಆನಂದಿಸಲಾಗದೆ
ವಿರಹದ ಬೇಗೆಯಲಿ ಬಳಲಿದನಂತೆ
ಅಮರ ಪ್ರೇಮ ತ್ಯಾಗಿ....
***************************************

ನಿನಗಾಗಿ ಕಾಯುವ ಆ ಸರಿ ಹೊತ್ತಲಿ
ಬದುಕು ಹಾಗೆ ಸ್ಥಂಭವಾಗಲಿ ಗೆಳತಿ
ನಿನಗಾಗಿನ ನಿರೀಕ್ಷೆ, ಕಾಯುವ ಕಾತರಿಕೆಗೆ
ಮುಪ್ಪಡರುವುದಿಲ್ಲ, ನನ್ನ ಭಾವಕು
ಚಿರ ಯೌವ್ವನ, ನಿನಗೋ ಸಂಧಿಸಲವಣಿಸುವ
ಚಿರಂತನ ಯಾನ.....
****************************************

Sunday, November 1, 2009

ಕನ್ನಡ ಉಳಿಸಬೇಕೋ? ಬೆಳೆಸಬೇಕೋ?




ಸರ್ವಜನಾಂಗದ
ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ,...
...............................................
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ! ಕುವೆಂಪು
.

ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳೆಲ್ಲ ಒಟ್ಟಾಗಿ ಕಲೆತು ' ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ, ಬಾರಿಸು ಕನ್ನಡ ಡಿಂಡಿಮವ..' ಎನುವ ರಾಷ್ಟ್ರಕವಿ ಕುವೆಂಪು ರಚಿತ ಗೀತೆಯನ್ನು ಪ್ರಾಥಮಿಕ ಶಾಲಾ ದಿನಗಳಲ್ಲಿ ಹಾಡುತ್ತಿದ್ದರೆ, ಆಗುತ್ತಿದ್ದ ರೋಮಾಂಚನ ಹೇಳತೀರದು. ಅದೇಕೋ ತಿಳಿಯದು, ನಮ್ಮ ನಾಡಿನ ಜನರನ್ನು ನಾಡಿಗಾಗಿ,ನುಡಿಗಾಗಿ, ನಾಡಿನ ಜನರಿಗಾಗಿ ದುಡಿಯಿರೆಂದು ಭಾವನಾತ್ಮಕವಾಗಿ ಬಡಿದೆಬ್ಬಿಸುವ ಧಾಟಿಯ ಕವಿಯ ಗೀತೆಯ ಬಗ್ಗೆ ಚಿಕ್ಕವನಾದ ನನಗೆ ಆಗಲೇ ಏನೋ ವಿಶೇಷ ಆಸಕ್ತಿ. ನಾವೆಲ್ಲ ದೊಡ್ಡವರಾಗಿ ಕನ್ನಡಕ್ಕೆ, ನಾಡಿಗೆ ಏನಾದರೂ ನಮ್ಮ ಕೈಲಾದ ಕೆಲಸವನ್ನ ಮಾಡಬೇಕೆಂಬ ವಾಂಛೆ ಮನದಲಿ ಮೊಳೆತ ಮುಗ್ಧ ಸಮಯವದು. ಆಗ ಏನು ಮಾಡಬೇಕು, ಹೇಗೆ ಮಾಡಬೇಕು ಕನ್ನಡದ ಕೆಲಸ ಎಂಬುದರ ಅರಿವಿಲ್ಲ. ಕನ್ನಡದ ಬಗ್ಗೆ ಅದೇನೋ ಮೋಹ, "ಕನ್ನಡವೆಂದರೆ ನಾನು, ಕನ್ನಡ ನನ್ನ ಹೆಗ್ಗುರುತು" ಅನ್ನಿಸುತಿತ್ತು ಆಗಲೇ. ರಾಷ್ಟ್ರಕ್ಕೆ, ನಾಡಿಗೆ ಸಲ್ಲಿಸುವಷ್ಟೇ ಗೌರವವನ್ನು ನನ್ನ ಭಾಷೆಗೆ ಸಲ್ಲಿಸಬೇಕು ಎಂಬ ಹುಮ್ಮಸ್ಸು ಬೆಳೆದ ಕಾಲವೆಂದರೆ ನನ್ನ ಪ್ರಾಥಮಿಕ ಶಾಲಾ ದಿನಗಳು. ಅಂದು ನಾ ಕಂಡು ಕೊಂಡ ದಾರಿಯಲೇ, ನಾ ಸಾಗುತ ಹೊಸ ಹೊಸ ರೂಪಗಳನು, ಅನುಭವಗಳನು ಹರಸುತ್ತ, ಅನುಭವಿಸುತ್ತ ಬಂದಿದ್ದೇನೆ ಎಂಬುದು ಇಂದಿಗೂ ನನ್ನದೇ ಸತ್ಯ.

'ಏನೆಲ್ಲಾ ಸಿಕ್ಕಿಲ್ಲ ಎನುವುದಕ್ಕಿಂತ, ಏನೆಲ್ಲ ಸಿಕ್ಕಿದೆ! ಭಾಷೆಯಿಂದ ನಮಗೆ.. ಭಾಷೆಯೇ ಇಲ್ಲದ ನಮ್ಮ ಜೀವನವನೊಮ್ಮೆ ಊಹಿಸಿಕೊಳ್ಳಿ?..ಉತ್ತರ ದೊರೆವುದು ನಮಗೆ. ಇಂದು ನಾವುಗಳು ಏನಾಗಿದ್ದೇವೋ,ಮುಂದೆ ಏನಾಗುತ್ತೆವೋ, ಅದಕ್ಕೆಲ್ಲ ಭಾಷೆ ನೀಡಿರುವ, ನೀಡುವ ಸಹಕಾರ ಅಪಾರವಾದುದು. ನಮ್ಮೆಲ್ಲರ ಇಂದಿನ ಸ್ಥಾನ-ಮಾನ, ಸಂಗತಿ, ಸಂತೋಷಗಳು ದೊರೆವುದು ಭಾಷೆಯಿಂದಲೇ. ಭಾಷೆ ಇಲ್ಲದೇ ನಾವುಗಳು ಏನು ಅಲ್ಲ. ನಮ್ಮೆಲ್ಲರ ಅಸ್ಥಿತ್ವದ ಮೂಲಾಧಾರಗಳಲ್ಲಿ ಭಾಷೆಯು ನಮ್ಮ ಉಸಿರಿನಷ್ಟೇ ಅವಶ್ಯಕ. ಪ್ರಕೃತಿಯ ಜೀವಿಯಾಗಿ 'ಗಾಳಿ ಎಷ್ಟು ಅವಶ್ಯವೋ, ಸಾಮಾಜಿಕ ಜೀವಿಗೆ 'ಭಾಷೆಯು' ಅಷ್ಟೆ ಅತ್ಯವಶ್ಯ'.
ಭಾಷೆ ನಮಗೇನು ಕೊಟ್ಟಿದೆಯೋ, ನಾವು ಭಾಷೆಗೇನು ಕಾಣಿಕೆ ನೀಡಿದ್ದೆವೋ ಎಂಬುದನ್ನೆಲ್ಲ ಚರ್ಚಿಸುವ ಕನ್ನಡ ಹಬ್ಬದ ಈ ಸಂಧರ್ಭದಲ್ಲಿ ನನ್ನ ಮನದಲಿ ಎದ್ದ ಯೋಚನೆಯನಿಲ್ಲಿ ಹೇಳಬೇಕು ಎನಿಸಿತು. ನಮ್ಮ ಸುತ್ತ-ಮುತ್ತಲಿನ ಸಂಘಗಳ, ಪ್ರಗತಿಪರರ, ಚಿಂತಕರ ಭಾಷಣಗಳಲಿ, ಹೋರಾಟಗಳಲಿ ವ್ಯಕ್ತವಾಗುವ 'ನಮ್ಮ ಭಾಷೆಯ ಉಳಿವಿಗಾಗಿ ನಾವೆಲ್ಲರೂ ಶ್ರಮಿಸಬೇಕು ಎನುವ' ಹೋರಾಟಗಾರರ ಕರೆಯೊಂದು ಆಗಾಗ ನಮ್ಮ ಪಂಚೇಂದ್ರಿಯಗಳನ್ನು ಜಾಗೃತ ಗೊಳಿಸುತ್ತಿರುತ್ತದೆ.
ಭಾಷೆಯ ಉಳಿವಿನ ಬಗೆಗಿನ ವಿಷಯಕ್ಕೆ ಸಂಭಂದಿಸಿದಂತೆ ಮೂಲಭೂತವಾಗಿ ನನ್ನಲ್ಲಿ ಹುಟ್ಟುವ ಪ್ರಶ್ನೆ ಎಂದರೆ "ಮುಖ್ಯವಾಗಿ ಭಾಷೆಯನ್ನ ಉಳಿಸುವ ಕೆಲಸ ಕನ್ನಡಿಗರಿಂದ ಆಗಬೇಕ? ಅಥವಾ ಭಾಷೆಯನು ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕ? ನಾವೆಲ್ಲರೂ ಭಾಷೆಯ ಉಳಿವಿಗಾಗಿಯೇ ಹೋರಾಟ ಮಾಡುವುದಾದರೆ, ಬೆಳೆಸುವವರು ಯಾರು? ಭಾಷೆಯನ್ನೂ ಬೆಳೆಸುವಲ್ಲಿ ನಾವು ನಿರತರಾದರೆ, ಭಾಷೆಯನು ಉಳಿಸುವ ಪ್ರತ್ಯೇಕ ಹೋರಾಟ ಅನಿವಾರ್ಯವೇ?"
ನನ್ನಲ್ಲಿ ಹುಟ್ಟಿದ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟು, ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಗಾಗಿ ಕಾಯುವೆ ಅವುಗಳೊಂದಿಗೆ ಭಾಷೆಯ ವಿಚಾರವನು ಮತ್ತೆ ಪರಾಮರ್ಶಿಸಿ...ಉತ್ತರ ಸಿಕ್ಕರೆ ತಿಳಿಯಲು ನಿಮ್ಮಿಂದ.

Friday, October 23, 2009

ನಗೆಯಲ್ಲೊಂದು ಚೈತ್ರಧಾರೆ..

ಸೃಷ್ಟಿಯ ವಿಶೇಷವೇ ಹೊಸತನ, ಹೊಸತನದ ಬೆರಗು. ಯಾವುದೇ ಹೊಸತು ಸೂಜಿಗಲ್ಲಿನಂತೆ ನಮ್ಮನ್ನು ಸೆಳೆಯುವುದು. ಸೃಷ್ಟಿಯಲಿನ ನವೀನತೆಯ ಅನುಭವವೇ ಅಮೋಘ. ಅದರಲ್ಲೂ ಮಗುವಿನ ಹುಟ್ಟಿನ ಆ ದಿವ್ಯತೆಯ ನವ್ಯವಂತು ಅನುಭಾವವೇ ನಮಗೆ. ಹುಟ್ಟಿನಿಂದ ಇಲ್ಲಿಯವರೆಗೆ, ಹುಟ್ಟಿದ ದಿನವೇ ಯಾವುದೇ ಮಗುವನ್ನು ನೋಡದಿದ್ದ ನನಗೆ ನನ್ನ ಅಕ್ಕನ ಹುಟ್ಟಿದ ಮಗುವನ್ನು ಕಂಡ ಕ್ಷಣವೇ ನನಗನಿಸಿದ್ದು 'ನಾನು ಸಹ ಹೀಗೆ ಇದ್ದೇನೆ'. ಒಂಭತ್ತು ತಿಂಗಳು ತಾಯ ಗರ್ಭದಲ್ಲಿ ಕಲೆತು,ಜಗಕೆ ಬಂದ ದಿನದಿಂದಲ್ಲೇ ಶೂನ್ಯ ನೋಟವ ಬೀರುತ ಎಲ್ಲವ ಕಂಡು ಬೆರಗಾಗುತ್ತಿದ್ದೇನ. ನಾವೆಲ್ಲ ಆ ಹಂತದಿಂದಲೇ ಬೆಳೆದು ಹೀಗೆ ಆಗಿದ್ದೆವೆಯೇ ಎಂದು ತುಲನಾತ್ಮಕವಾಗಿ ಕಲ್ಪಿಸಿಕೊಳ್ಳಲು ಆಗುವುದೇ ಇಲ್ಲ. ಅದೇನೇ ಇದ್ದರು ಹುಟ್ಟಿನ ಆ ದಿವ್ಯತೆ, ಹಾಲುಗೆನ್ನೆ, ಹೂ ಮೈಯ ಬೆತ್ತಲೆ ಸೌಂದರ್ಯ, ಭಾವದ ಲೇಪವಿರದ ಕಂದನ ಆ ನಗು-ಅಳು ಎಲ್ಲವು ನನ್ನಲ್ಲಿ ಸೃಷ್ಟಿಸಿದ ಬೆರಗಿನ ಅನುಭವದ ಭಾವಹಂದರವೇ ಈ ಕವನ.

ಸೃಷ್ಟಿಯೇ!!


ಆ ನಗುವಿನಲ್ಲೊಂದು ಚೈತ್ರಧಾರೆ
ಹೊಸ ಬಗೆಯ ನವನೀತ ಚೆಲುವಿನಂದದ
ಸೊಬಗ ಬುಗ್ಗೆ ಚಿಮ್ಮಲು ಪ್ರತಿ ನಗೆಯಲು,
ಕಂಡ ಕಂಗಳಿಗಿನ್ನಾವ ಹರ್ಷಧಾರೆಯ
ಹೊನಲು ಸುರಿಯಬೇಕು ಸೃಷ್ಟಿಯೇ!

ಯಾವ ನಗುವದು? ಚೆಲುವು-ನಲಿವಿನ,
ಸಂತಸ-ಸಂಭ್ರಮದ ಆನಂದದ ಚಿಲುಮೆಯೆ
ರಾಗ-ದ್ವೇಷ,ಭಾವಗಳ ಗೊಜಲಿಲ್ಲದ,
ಆ ನಗೆಗಾವ ಹೆಸರಿಲ್ಲದ, ಮುಗ್ದವೆನಲು
ಜಗವೇ ಅರಿವಿಗೆ ಬಾರದ ಆ ಮೊದಮೊದಲ
ನಗು ಬರಿಯ ನಗುವಷ್ಟೇ ಸೃಷ್ಟಿಯೇ!
ನಿನ್ನಂತೆ ಭವಭಾರದ ಅಂಟಿಲ್ಲ
ಮೊಗಮೊಗದಲು ನಗೆ ಹೊಮ್ಮಿಸುವ ಆ ನಗೆಗೆ.

ಜೀವ-ಜೀವಗಳ ಸಂಭಂದ ಬೆಸೆದ
ಭಾವ-ಭಾವಗಳೋಲುಮೆಯ ಬಿಸಿಯುಸಿರ
ಬಸಿರು ನವಪಲ್ಲವ ಕಲೆತು ತಾಯ ಒಡಲಲಿ
ಹೂಮೈಯ ರೂಪ ತಾಳಿ,ಹಸಿಮೈಯ
ಚೆಲುವಲೇ ಧರೆಗೆ ಜಾರಿ ನಲಿವ
ನಗೆಯ ಹೊಂಬಣ್ಣಕೆ ನೀ ಮಾತ್ರ
ಸಾಟಿಯು ಸೃಷ್ಟಿಯೇ!
ಎಚ್.ಎನ್.ಈಶಕುಮಾರ್

Friday, October 16, 2009

ಒಲವ ದೀಪಾವಳಿ...







ಸಹಯಾತ್ರಿಗಳೇ ನಿಮಗೆಲ್ಲರಿಗೂ ಒಲವ ಹಬ್ಬ ದೀಪಾವಳಿಯ ಶುಭಾಶಯಗಳು...ಬೆಳಗಲಿ ಪ್ರೀತಿಯ ದೀವಿಗೆ ನಮ್ಮ ನಿಮ್ಮ ಬಾಳಲಿ..




ಒಲವ ಹಣತೆ
ಬೆಳಗೀತು ಮನವ,

ಬೆಳಗೀತು ಜಗವ
ಹರುಷದ ಹೊನಲಲಿ..
ಗೆಳತಿ ಹಚ್ಚೋಣ ಬಾ
ಒಲವ ಹಣತೆ
ನಮ್ಮ ನಮ್ಮ
ಮನದ ದೀವಿಗೆಯಲಿ..

ಜೀವ ಜೀವಕೆ ನಗುವಿನ
ಹೊನಲ ಹರಸಿ, ಹರಿಸಿ
ಜೀವನ ಪ್ರೇಮದ ಸುಳಿಯಲಿ
ಬದುಕಿನ ಪ್ರತಿ ಕ್ಷಣಗಳು ಬೆಳಗಲಿ,
ಒಲವ ದೀಪಿಕೆ ಮನೆ ಮನೆಗೂ
ಮನಕೂ ಹಬ್ಬಲಿ, ಹರಡಲಿ..

ಎಚ್.ಎನ್.ಈಶಕುಮಾರ್

Thursday, October 8, 2009

ಸರಳತೆಯ ಆದರ್ಶವೇ ಜೀವನ ಅವರಿಗೆ..


ಯಾವನು ತಾನೇ ನೆಟ್ಟ, ನೇರವಾಗಿ ಇದ್ದಾನೆ ಹೇಳಿ? ಹೇಳೋದೊಂದು ಮಾಡೋದು ಒಂದು, ಯಾರನ್ನು ನಂಬೋಕೆ ಆಗಲ್ಲ ಅಂತ ಕಾಲ ಕಣಪ್ಪ ಇದು. ಈ ತರದ ಲೋಕರೂಡಿಯ ಮಾತುಗಳನ್ನು ಎಲ್ಲರು ಆಗಾಗ ಕೇಳುತ್ತಲೆ ಇರುತ್ತೇವೆ. ಸುಖಾ ಸುಮ್ಮನೆ ಯಾರನ್ನು ನೇರವಾಗಿ ದೂಷಿಸದೆ, ಹೊಣೆಗಾರನನ್ನಾಗಿ ಮಾಡದೆ ಸಾಮನ್ಯನಾಡುವ ಮಾತಿನಲಿ ಅಡಗಿರುವ ' ಸಾರ್ವತ್ರಿಕ ಸತ್ಯದ' ಬಗ್ಗೆ ಕ್ಷಣ ಕಾಲ ಯೋಚಿಸಿ.
ನಮ್ಮೆಲ್ಲ ತತ್ವಗಳು, ಧರ್ಮಗ್ರಂಥಗಳು, ದೇವರು-ದಿಂಡರು, ನಮ್ಮ ಕಾನೂನು, ಸಂವಿಧಾನ, ಭಗವದ್ಗೀತೆ ಹೀಗೆ ಎಲ್ಲವು ನಮಗೆ ತಿಳಿಸುವ ನೀತಿ ಎಂದರೆ "ನುಡಿದಂತೆ ನಡೆಯಬೇಕು". 'ಮಾತು-ಕೃತಿ' ಗಳ ನಡುವೆ ಸಾಮ್ಯತೆಯನು ಕಾಪಾಡಿಕೊಳ್ಳುವ ಗುರುತರವಾದ ನೀತಿ ಪಾಠವನ್ನು ಹೇಳುತ್ತವೆ. ಹೇಳುವುದೇನೋ ಸರಿ ಯಾರಿಗೆ ಹೇಳುತ್ತವೆ ಅನ್ನುವುದೇ ಪ್ರಶ್ನೆ. ಆ ತತ್ವವನು ಪಾಲಿಸುವವರು ಯಾರು? ಪಾಲಿಸಬೇಕಾದರು ಯಾರು? ನಾನೋ, ನೀವುಗಳೋ, ರಾಜಕಾರಣಿಗಳೋ, ಸರ್ಕಾರಿ ನೌಕರರೋ,ಗುರು-ಹಿರಿಯರೋ ಯಾರು ನುಡಿದಂತೆ ನಡೆಯಬೇಕು ಎಂಬುದನ್ನು ಜನಗಳಿಗೆ ತಿಳಿಸಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿರುವುದು ಎಂಥ ವಿಪರ್ಯಾಸ ಅಲ್ಲವೇ.
ಎಲ್ಲಿಂದ ಹೇಗೆ ಯಾವ ರೀತಿ ನೋಡಿದರು ನಮ್ಮ ದೇಶದಲ್ಲಿ 'ರಾಜಕೀಯ'ಎಂಬುದು ನಮ್ಮ ಸಮಾಜದಲಿ ಹಾಸು ಹೊಕ್ಕಾಗಿದೆ. ರಾಜಕೀಯವಿಲ್ಲದೆ ಏನು ನಡೆಯುವುದಿಲ್ಲ ಎನುವಂತ ಸ್ಥಿತಿ ನಮ್ಮದು. "politics is the last resort for scoundrels" ಎಂದ ಇಂಗ್ಲೆಂಡ್ ನ ಮಹಾನ್ ಚಿಂತಕ, ನಾಟಕಕಾರ ಜಾರ್ಜಬರ್ನಾರ್ಡ್ ಷ. ಆ ಮಾತುಗಳೇನೋ ತ್ರಿಕಾಲ ಸತ್ಯವೇ ಸರಿ. ಕಾರಣ ನಮ್ಮ ಸಮಾಜದಲಿನ ಬಹಳ ಮಂದಿ ರಾಜಕೀಯ ವ್ಯಕ್ತಿಗಳು ಸಹ ಅದಕ್ಕೆ ತಕ್ಕಂತೆ ಇದ್ದಾರೆ ಮತ್ತು ಹಾಗೆಯೇ ವರ್ತಿಸುತ್ತಾರೆ. ಮೊದಲೆಲ್ಲ ಯಾಗೆ ಅಪ್ಪಟ್ಟವಾದ ನಿಜಗುಣವಿದ್ದರೂ ರಾಡಿಯಾದ ರಾಜಕೀಯ ಕ್ಷೇತ್ರ ಎಲ್ಲರನು ಆಪೋಷಿಸುತ ಭ್ರಷ್ಟ-ದುಷ್ಟರಾಗುವಂತೆ ತನ್ನ ತ್ರಿವಿಕ್ರಮ ಅಟ್ಟಹಾಸವನು ಮೆರೆಯುತ್ತಲೆ ಇದೆ.
ಇಂದಿನ ನಮ್ಮ ನಾಯಕರನೊಮ್ಮೆ ಹಿಂದಿನ ಸ್ವಾತಂತ್ರ್ಯ ಕಾಲದ, ಸ್ವಾತಂತ್ರ್ಯ ಪೂರ್ವದ ಜನನಾಯಕ ರೊಂದಿಗೆ ಹಾಗೇ ಸುಮ್ಮನೆ ಹೋಲಿಸಿ ನೋಡಿ, ಯಾರಾದರು ಒಬ್ಬ ರಾಜಕಾರಣಿ ನಮಗಿಂದು, ಅನುಕರಣಿಯನಾಗಿದ್ದಾನ ಎಂಬುದನ್ನು ಪರಿಗಣಿಸಿ ನೋಡಿ ನಿಮಗೆ ಉತ್ತರ ದೊರೆವುದು. "ಸರಳತೆಯೇ ಅಗರ್ಭವಾದ ಸಿರಿವಂತಿಕೆ" ಎನುವ ಮಾತಿದೆ. ಗಾಂಧಿಜಿ ಒಮ್ಮೆ 'ಉಪ್ಪಿನ ಸತ್ಯಾಗ್ರಹಕ್ಕೆ' ಕರೆಕೊಟ್ಟು ಚಳುವಳಿಗೆ ಹೊರಟರೆಂದರೆ ಹಿಂದೆ-ಮುಂದೆ ಯೋಚಿಸದೆ ಲಕ್ಷಾಂತರ ಮಂದಿ ಅವರನ್ನು ಹಿಂಬಾಲಿಸುತ್ತಿದ್ದರು. ಅವರ ಮಾರ್ಗದರ್ಶನದಲಾಗಲಿ, ಆದರ್ಶದಲಾಗಲಿ ಯಾರಿಗೂ ಎಳ್ಳಷ್ಟು ಅನುಮಾನಗಳಿರಲಿಲ್ಲ. ಅಲ್ಲದೆ ಎಂತಹ ಸಾಮಾನ್ಯನೇ ಆದರೂ 'ಗಾಂಧೀಜಿಯ ತತ್ವಗಳನು' ಆಶಾದಾಯಕವಾಗಿ ಯಾವುದೇ ಗೊಂದಲಕೆ ಒಳಗಾಗದೆ ಪಾಲಿಸುತಲಿದ್ದರು ಹಾಗೂ ಪಾಲಿಸಲು ಕಾರಣವೆಂದರೆ ಅವರ 'ಸರಳತನ'.
ಗಾಂಧಿಜಿಯವರ ಜೀವನವೇ "ಸರಳಾತಿಸರಳ" ಅಂತಹ ಜೀವನವನ್ನು ಪಾಲಿಸಲು ಎಲ್ಲರು ಯೋಗ್ಯರೆ. ಸಿರಿವಂತರೆ ಅಲ್ಲ ದೇಶದ ಕಡು ಬಡವನು ಗಾಂಧೀಜಿಯ ದಿನಚರಿಯಂತೆ ತನ್ನ ಜೀವನ ನಡೆಸಬಹುದಲ್ಲವೆ. ಗಾಂಧೀಜಿ ಸೂಟು,ಬೂಟು ಧರಿಸಿ ಜನರನ್ನು ಆಕರ್ಷಿಸಲಿಲ್ಲ, ಅವರ ಸರಳತೆ, ಮಾದರಿಯುತ ಜೀವನ, ಆದರ್ಶಮಯವಾದ ಬದುಕು ಜನರನ್ನು ಅವರತ್ತ ಸೆಳೆಯಿತು. ಹಾಗೆಯೇ ದೇಶದ ಪ್ರಧಾನಿಯಾಗಿದ್ದಾಗಲೇ ತೀರಿಕೊಂಡ ಲಾಲ್ ಬಹದ್ದೂರ್ ಶಾಸ್ರಿಗಳಿಗೆ ಅವರು ತೀರಿಕೊಂಡ ಸಮಯದಲಿ 4.600 ರೂಪಾಯಿಗಳಷ್ಟು ಬ್ಯಾಂಕ್ ನ ಸಾಲವಿತ್ತೆಂದು ಇಂದು ಹೇಳಿದರೆ ನಂಬೋಕೆ ಸಾಧ್ಯವೇ ಎನಿಸುವಷ್ಟು ಅನುಮಾನ ಮೂಡುತ್ತದೆ.
ಅಂತಹ ಮಹಾನ್ ನಾಯಕರೆಲ್ಲ ಮರೆಯಾಗಿ, ಪುಸ್ತಕದ ಹಚ್ಚಿನಲ್ಲಿ ಕಾಣ ಸಿಗುವ ಈ ಸಮಯದಲಿ ಅವರೆಲ್ಲ ನೆನಪಾಗಲು ಕಾರಣವಾದದ್ದು ನಮ್ಮ ಪ್ರಾಥಮಿಕ ಶಿಕ್ಷಣಮಂತ್ರಿ ಕಾಗೇರಿಯ ಹೆಣ್ಣು ಮಕ್ಕಳಿಬ್ಬರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬ ಪತ್ರಿಕೆಯ ವರದಿ ಓದಿ, ಈ ಕಾಲದಲ್ಲಿ ಹೀಗೂ ಉಂಟೆ? ಎನುವ ಹಾಗೆ ದಿಗಿಲಾಗುವುದಷ್ಟೇ ಉಳಿದಿತ್ತು. ಅದೇನೇ ಇರಲಿ ತಮ್ಮದೇ ಸರ್ಕಾರದ ಆಡಳಿತದ ಬಗ್ಗೆ ಅದರ ಮಂತ್ರಿಗಳಿಗೆ, ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ನಂಬಿಕೆ ಇಲ್ಲದ ಈ ವಿಚಿತ್ರ ಸಂಧಿಗ್ದ ಕಾಲದಲಿ ಅಂತ ಸಚಿವರ ಮಕ್ಕಳು ಸರ್ಕಾರಿ ಶಾಲೆಯಲಿ ಕಲಿಯುತ್ತಿದ್ದಾರೆ ಎನುವುದು ಪ್ರಶಂಸೆ ಪಡುವಂತ ವಿಷಯವೇ. "ಸಾಮಾನ್ಯನಲಿ ಸಾಮಾನ್ಯನಾಗುವ ಆ ಅನುಭವವೇ ಅಭೂತವಾದುದು"
ಬದಲಾವಣೆಯ ಹಾದಿಯಲಿ ಕ್ಷಿಪ್ರ ಬೆಳವಣಿಗೆಯ ಕನಸು ಕಾಣುವ ಪ್ರತಿಯೊಬ್ಬರು ತಾನೇ ಬದಲಾವಣೆಯ ಹರಿಕಾರನಾಗಿ, ತನ್ನ ಜೀವನವನೆ ಪರೀಕ್ಷೆಗೆ ಒಳಪಡಿಸುತ್ತ, ಇತರರಿಗೆ ಮಾದರಿಯಾದಾಗಲೇ ಅಲ್ಲವೇ ' ಬದಲಾವಣೆಗೊಂಡು ಅರ್ಥ,ಮಹತ್ವ ಸಿಗೋದು ಸಹಯಾತ್ರಿಗಳೇ'.

Thursday, October 1, 2009

ಬಯಲಲಿ ಬಯಲಾಗುತ...














ಬಯಲಲಿ ಬಯಲಾಗುತ...
ನಮ್ಮ ಹಮ್ಮು-ಬಿಮ್ಮುಗಳ ವಸ್ತ್ರ ಕಳಚಿ, ಸರಳತೆಯ,ನಿರಂಹಕಾರದ
ಬಟ್ಟೆತೊಟ್ಟು,ಎಲ್ಲರಲ್ಲೋಬ್ಬರಾಗುತ ಬಯಲಲಿ ಬಯಲಾಗುವ ಸವಿಯ ರಸಧಾರೆಯ ಪಡೆಯುವ ನಾವೆಲ್ಲ.....


ಹನಿ ಹನಿಯಾಗಿ ಬಿದ್ದ ಮಳೆಯ
ಮೋಹಕ ಚುಂಬನಕೆ ಬಯಲಾಗುತ
ಧರೆ, ತನ್ನೊಡಲ ಹಸಿವನೊಮ್ಮೆಗೆ
ನೀಗಿಕೊಳ್ಳುತ್ತ ಉಸಿರಾಡುವ ಕಣ ಕಣಕೂ
ತಾಯ ಗರ್ಭವ ಧಾರೆ ಎರೆದು
ಹಸಿ ಹಸಿರ ಚೆಲುವ ರಾಶಿ ನಳ ನಳಿಸೆ
ಬಯಲಾಂತ ಬಯಲ ತುಂಬೆಲ್ಲ
ಹನಿ ಹನಿಯಲು ಅಡಗಿ ಪ್ರೀತಿ
ಚಿಗುರಾಗಿ,ಎಲೆಯಾಗಿ, ಹೂವಾಗಿ ಹಬ್ಬಲು,
ಆ ಜಗದ ಸಿರಿಗೆ ಸೋಲುವ ಪ್ರತಿ ಎದೆಯಲು
ಲವಲೇಶ ಪ್ರೀತಿ ಅಂಕುರಿಸಿ ಬೆಳಗಲೋ!
ಬಯಲು ಅವರೆದೆಯ ಪ್ರೀತಿ ಬಯಲು.

ತನ್ನ ಒಡಲಲಿ ಕನಸ ಬುತ್ತಿಯ ಹೊತ್ತು
ಬರಡಾದ ಬಯಲಲಿ ಬಿತ್ತು, ಒಲವ
ರಸಧಾರೆಯ ಹರಿಸಿ ಹರಿವ ನದಿಯ
ಉನ್ಮಾದ ಕಲರವ, ಹಳವಳಿಸಿ ನಲಿವ
ಪೈರಿನ ಪಚ್ಹ ಹಸಿರಲಿ ಚಿಮ್ಮುತಿಹ
ಪ್ರೀತಿ, ಕುಡಿಯೊಡೆದು ಅರಳಿ ನಗಲಿ
ನಲಿವು ಬಯಲು ಬಯಲಲಿ
ಎಲ್ಲರೆದೆಯಲಿ ಬಚ್ಚಿಟ್ಟ ಕನಸು
ಬಯಲು ಬಯಲಲಿ ಬಯಲಾಗಲಿ....
..............ಎಚ್.ಎನ್.ಈಶಕುಮಾರ್


Wednesday, September 23, 2009

ವೈಟಿಂಗ್...ವೈಟಿಂಗ್...BUT ವೈಟಿಂಗ್...


ಸ್ನೇಹಿತರೆ ಬದುಕಿನ ಪರ್ಯಟನೆಯಲಿ ಕಾಯುವ ಅನಿವಾರ್ಯ ಸಂಗತಿಯ ಕೆಲ ಸ್ವ ಅನುಭವಗಳು ನಮ್ಮ ಜೀವನದ ಅನಿಶ್ಚಿತತೆಯ ಅರಿವನು ನಮಗೆ ಮೂಡಿಸುತ್ತದೆ. ಅಂತಹ ಅರಿವಿನ ಸಂಗತಿಯನು ನಿಮಗಾಗಿ ಇಲ್ಲಿ ವಿಷದಪಡಿಸಿದ್ದೇನೆ:



ಅದೇಕೋ ಹಾಗೇ ಅನಿಸುತ್ತದೆ: ವಿಶಾಲವಾದ ಬಯಲಲಿ ತಂಗಾಳಿ ಸಾಗಿದ ಹಾಗೇ. ಬಯಲೋ ಖಾಲಿ ಖಾಲಿ ಯಾವ ಹೂವ ಮೈಸ್ಪರ್ಶವು ಆಗದು ತಂಗಾಳಿಗೆ ಎನುವಂತೆ. ಏನಾದರು ಬರೆಯಬೇಕು ಎಂದೆನಿಸಿದರು ಏನ ಬರೆಯಬೇಕು ಎಂಬುದೇ ತಿಳಿಯದ ಸ್ಥಿತಿ.ಯಾವ ಘನಗೋರ ಕಾರ್ಯವಾಗಲಿ, ಮಹತ್ಸಾಧನೆಯಾಗಲಿ ಆಗದೆ;ಮಟ್ಟಸವಾಗಿ ಹರಿವ ನದಿ ಯಾವ ಪ್ರವಾಹವ ತಾನೇ ಸೃಷ್ಟಿಸಿತು? ತನ್ನ ಹರಿವಿನ ಪರಿವೇ ಇರದ ಹಾಗೇ ಅಂತ್ಯದೆಡೆಗೆ ಸಾಗುತಲೇ ಹತ್ತಿರವಾಗುವುದು ತನ್ನ ಕಾಲದ ಅಂಚು.
ದಿನಕಳೆದಂತೆ ಏನೋ ಬೇಸರ, ಜೀವನದೀ ಯಾವ ಅಂಶವು ಕೈಗೂಡದೆ ವಯೋವೃದ್ದಿಯಾಗುತಿದೆಯಲ್ಲ ಎನುವ ಅಂಶ ಮನಸನು ಕಸಿವಿಸಿಗೊಳಿಸುತ್ತದೆ. ದಿನ ದಿನವೂ ಅದೇ ದಿನಚರಿ, ಬದಲಾವಣೆಯೇ ಇಲ್ಲವೇ? ಮನ್ವಂತರದ ಹಾದಿಯೆಲ್ಲ ಭ್ರಮೆಯೇ? ಯಾವ ಮಹಾಮಾಯೆಯು ಇಲ್ಲವಲ್ಲ ಈ ಏಕತಾನತೆಯನ್ನು ಅಳಿಸಿ ಚೈತ್ರದ ರಸಧಾರೆಯ ಚಿತ್ರ-ವಿಚಿತ್ರ ತಲ್ಲಣಗಳು ಆವರಿಸಿ ನಮ್ಮಲೇನೋ ಸ್ಥಿತ್ಯಂತರವಾಗಿ ಬದುಕೇ ವಿಸ್ಮಯ ಕೂಪವಾಗುವಂತೆ ಮಾಡುವ ಮಾಯೆ ...?
ಕಟುವಾಸ್ತವ ನಮ್ಮ ಮುಂದಿರುವುದು. ಕನಸು ಕಾಣುವುದು ನಿದ್ರೆಯಲಿ, ಎಚ್ಚರದಲಲ್ಲ ಎನುವ ಸಾಮನ್ಯ ಅಂಶವು ಮರೆತಂತಾಗಿದೆ. ಆ ಕನಸುಗಳಲಿಯು ಹೊಸದಿಲ್ಲ ಅವೇ ಪೇಲವವಾಗಿಹ ಕನಸುಗಳು. ಕ್ಷಣಕಾಲವೂ ಮನ ಉಲ್ಲಸಿತಗೊಳ್ಳುವುದಿಲ್ಲ ಅಂತಹ ರುಚಿಸದ ಸ್ವಪ್ನಗಳು. ಈ ಬದುಕೇ ನಿರರ್ಥಕ ಎನುವಂತಹ ಮನಸ್ಥಿತಿಯಲಿ ಕೆಲ ದಿನಗಳು ಕಾಲದೂಡುವಂತಾಯಿತು, ನನಗೆ ಸರ್ಕಾರಿ ಕೆಲಸದ ಆದೇಶಕ್ಕಾಗಿ ಕಾಯುತ, ಕಾಯುತ ಬದುಕೇ ವ್ಯರ್ಥ ಎನುವಂತಾಯಿತು ನಿಜಕ್ಕೂ.
ಈ ಸರ್ಕಾರಿ ಕೆಲಸದ ಆದೇಶ ಬರುತ್ತದಲ್ಲ ಎಂಬ 'ಗುಮ್ಮನನ್ನು' ಕಾಯುತ್ತ ಕುಳಿತು ಇಂದಿನ ಅಮೂಲ್ಯ ಕ್ಷಣಗಳೆಲ್ಲ ನಿರಾಧಾರವಾಗಿ ಗತ ಇತಿಹಾಸವಾದವು. "ಎಂಥ ಅನಿಶ್ಚಿತತೆ ಆವರಿಸಿತು?" ಆ ದಿನಗಳಲಿ ಕೆಲವೊಮ್ಮೆ ದಿನದ ಅರ್ಧ ಸಮಯವನು ಮನೆಯಲ್ಲೇ ಕುಳಿತು ಸವೆಸಬೇಕಾದ ಘಳಿಗೆಯಲಿ ಮನದಲಿ ಪುಟಿದೆದ್ದ ಪ್ರಶ್ನೆ ಇದು. ಉತ್ತರ ಕಾಣದೆ ಸುಮ್ಮನಾದೇನಾದರು ಏನೋ ತಳಮಳ, ಸುಮ್ಮನಿರಲಾರದ ತುಮುಲ.
ನಮ್ಮ ವ್ಯವಸ್ಥೆಯೇ ನಮ್ಮನ್ನು ಜಡ್ಡು ಹಿಡಿಸಿ ಸೋಮಾರಿಗಳನ್ನಾಗಿ ಮಾಡಿಬಿಡುತ್ತದೆಯಾ? ಆ ಸಮಯದಲಿ ಹೌದೆನಿಸಿತು ನನಗೆ. ಕೆಲಸಕ್ಕೆ ಅರ್ಜಿ ಹಾಕಿ, ಸಂದರ್ಶನದ ಮಹಾಸಮರವನು ಎದುರಿಸಿ, ಆಯ್ಕೆಯಾದ ಸಂತಸವೆಲ್ಲ ಅಡಗಿ, ವರುಷಾನುಗಟ್ಟಲೆ, ನಿರುದ್ಯೋಗಿಯ ಬೇಸರ, ಯಾತನೆ, ಒಂಟಿತನವನು ದೂಡುವಂತಹ ಕೂಪದಲಿ ಕೆಲಕಾಲ ಬಳಲುವಂತೆ ವಿರಮಿಸಲು ಕಾರಣರಾರು? ಸ್ವತಃ ನಾನೆಯೇ? ಅಥವಾ ನಮ್ಮ ಸರ್ಕಾರಗಳ ಆಳು ವ್ಯವಸ್ಥ್ತೆಯೇ? ಸರಿಯಾದ ಸಮಯಕೆ ಆದೇಶ ಕೊಟ್ಟಿದ್ದರೆ ಈಗೆಲ್ಲ ಆಗುತಿತ್ತ ಎನುಸುತ್ತದೆಯಾದರೂ ಈ ವಯಸಿನಲ್ಲಿಯೇ ಏಕತಾನತೆಯನು ಅನುಭವಿಸುವಂತಹ ಪರಿಸ್ಥಿತಿ ಸೃಷ್ಟಿಸಿಕೊಂಡಿದ್ದಕ್ಕೆ ನನ್ನ ಬಗ್ಗೆಯೇ ಬೇಸರವಾಗುವುದು ಅಷ್ಟೆ ಸ್ಪಷ್ಟ.

'Waiting For Godot' ಎಂಬ ಅಸ್ತಂಗತ ನಾಟಕದಲಿ ಇಬ್ಬರು ಪಾತ್ರಧಾರಿಗಳು ತಮಗೆ ಯಾರೆಂಬುದೇ ತಿಳಿಯದ, ಅವರಿಗೆ ಪರಿಚಯವೇ ಇಲ್ಲದ Godot ಎಂಬ ವ್ಯಕ್ತಿ ಬರುತ್ತಾನೆ ಎಂದು ದಾರಿಬದಿಯ ಒಣ ಮರದಡಿಯಲಿ ಕಾಯುತ್ತಲೇ ಕೂಡುತ್ತಾರೆ. ಯಾವಗ ಬರುತ್ತಾನೆ Godot? ಗೊತ್ತಿಲ್ಲ, ನಾಳೆ ಬರುತ್ತಾನೆಯೇ; ನಾಳೆಯೇ ಅದು ಗೊತ್ತಿಲ್ಲ, ಹೋಗಲಿ ನಾಳಿದ್ದು, ನಾಳಿದ್ದು ಬಂದರು ಬರಬಹುದು, ಸರಿಯಾಗಿ ಗೊತ್ತಿಲ್ಲ. ಕೊನೆ ಪಕ್ಷ ಎಂದಾದರೂ ಬರುತ್ತಾನ ಅದು ಗೊತ್ತಿಲ್ಲ. ಮತ್ತೆ ಕಾಯುತ್ತಿರುವುದೇಕೆ ಅವನು ಬರುತ್ತಾನೆಂದು? 'ಅದು ಗೊತ್ತಿಲ್ಲ' . ಆದರೂ ನಾವು ಕಾಯಲೇ ಬೇಕೆಂಬ ಉತ್ತರ ಕೇಳಿ ಬರುತ್ತದೆ ಒಬ್ಬ ಪಾತ್ರಧಾರಿಯಿಂದ. Godot ಎಂತವ, ಯಾಗಿದ್ದಾನೆ, ಏನಾಗಿದ್ದಾನೆ ಏನೊಂದೂ ತಿಳಿಯದು ಅವನ ಬಗ್ಗೆ, ಆದರೂ ಅವನಿಗಾಗಿ ಕಾಯಲೇ ಬೇಕಾದ ಸಂಧಿಗ್ದತೆಯಲ್ಲಿ ಅವರಿರುತ್ತಾರೆ. ನಮ್ಮ ಜೀವನದ ಕಟು ವಾಸ್ತವವನು ಮೂದಲಿಸುತ ಅದರ ಗಮ್ಯತೆಯನು ಹಿಡಿದಿಡುವ ನಾಟಕಕಾರ SAMUEL BEKKET ನ ಕಲಾವಂತಿಕೆ ಅದ್ಭುತವಾದುದು. ಆಧುನಿಕ ಯುಗದಲಿನ ಮಾನವನ ಅಸಹಾಯಕ ಸ್ಥಿತಿಯನು ಯತಾವತ್ತಾಗಿ ಬಿಂಬಿಸುವ ನಾಟಕವದು. ಆ ಪಾತ್ರಧಾರಿಗಳ ಮಾತುಗಳು ನಮ್ಮ ಜೀವನದ ಎಳೆ ಎಳೆಯನು ಬಿಚ್ಚಿಡುತ್ತಿದ್ದಾರೆ ಎನಿಸುವಷ್ಟು ಹತ್ತಿರವಾಗಿದೆ ನಾಟಕದ ನಿರೂಪಣೆ. ನಮ್ಮ ಬದುಕಿನ ಅಣಕವೆಂದರೂ ತಪ್ಪಿಲ್ಲ.
ಜೀವನದಲಿ ಯಾವುದಕ್ಕಾಗಿಯೋ, ಯಾರಿಗಾಗಿಯೋ, ಏತಕ್ಕೋ, ಉದ್ದೇಶ ಪೂರ್ವಕವಾಗಿಯೋ, ಕಾರಣಾರ್ಥವೋ, ವಿನಾಕಾರಣವೋ, ಕಾಯಬೇಕಾದ ಪರಿಸ್ಥಿತಿಯಲ್ಲಿಯೇ ನಾವೆಲ್ಲಾ ಕಾಲ ದೂಡುತಿದ್ದೆವಲ್ಲ. ನೌಕರನೊಬ್ಬ ಪ್ರತಿದಿನ ಕಾಯುವ ಬಸ್ಸಿರಬಹುದು, ವಿದ್ಯಾರ್ಥಿಯೊಬ್ಬ ವರುಷ ವರುಷವು ಕಾಯುವ ಫಲಿತಾಂಶವಿರಬಹುದು, ಪ್ರೇಮಿಯೊಬ್ಬ ಇನಿಯಳ ಒಪ್ಪಿಗೆಗಾಗಿ ಕಾಯುವ ವಿರಹವಿರಬಹುದು, ಅಧಿಕಾರಕ್ಕಾಗಿ ಕಾಯುವ ನಾಯಕನಿರಬಹುದು, ನಮ್ಮ ಜೀವನದ ದಿಶೆಯನೆ ಬದಲಾಯಿಸುವ ಯಾವುದೋ ಒಂದು ಬದಲಾವಣೆಗಾಗಿ ಬದುಕಿನುದ್ದಕ್ಕೂ ಕಾಯುತ್ತಲೇ ಸಾಗುವ, ಸರಮಾಲೆಗಳ ನಡುವೆ ನಲುಗಿ-ನಲುಗಿ ಯಾವುದೋ ಸಮಯದಲಿ ಅರಿವಿರದೆ ಅಂತ್ಯವನ್ನು ಕಾಣುವುದೇ "ಜೀವನವ?" ಎಂಬ ಮಾಹನ್ ತಲೆ ಕೊರಕ ಅಂಶ ಕಾಯುವಿಕೆಯ ದಿನಗಳಲಿ ನನ್ನ ಕಾಡಿದಂತು ನನ್ನಷ್ಟೇ ಸತ್ಯ.
ಎತ್ತಲಿಂದೆತ್ತ ಯೋಚಿಸಿದರು ಈ ಯಾತನೆಗಳ ಸರಮಾಲೆಯೇ ಜೀವನವ? ಅಲ್ಲವ? ಎಂಬುದು ತಿಳಿಯದಾಗಿದೆ. ಆದರೂ ಒಂದು ಅಂಶವಂತೂ ಈ ಹಿಂದಿನ ಕೆಲ ದಿನಗಳ ಅನುಭವದೊಂದಿಗೆ ನಾನು ಕಂಡುಕೊಂಡ ಸತ್ಯ ಸಂಗತಿ ಎಂದರೆ, ಕಾಯದೆ ಬೇರೆ ದಾರಿಯೇ ಇಲ್ಲ.. ಬದುಕಿನಲಿ ಕೆಲವು ಸಂಕಿರ್ಣತೆಗಳಿಂದ ತಪ್ಪಿಸಿಕೊಳ್ಳಲು ಬೇರೆ ಇನ್ನಾವ ರಹದಾರಿಯಾಗಲಿ, ಕಳ್ಳದಾರಿಯಾಗಲಿ ಇಲ್ಲವೇ ಇಲ್ಲ ನುಸುಳಿಕೊಂಡು ಓಡಿಹೋಗಿ ಆ ಯಾತನೆಯಿಂದ ಪರಾದೇ ಎಂದು ಬೀಗಲು. ನಾವೆಲ್ಲ ಅಷ್ಟು ದುರ್ಬಲರು ನಿಜ ಜೀವನದಲಿ...ನಿಜವೇ? ಯೋಚಿಸಿ ಹೇಳಿ..ನೀವುಗಳೇ ಸ್ನೇಹಿತರೆ.



Tuesday, September 15, 2009

ನದಿಯ ಮೌನವೇ...!!


ಹರಿವ ನದಿಗೆ ತನ್ನದೇ ದಿಕ್ಕು; ತನ್ನದೇ ದಾರಿ.

ಯಾವ ತತ್ವ-ಚಿಂತನೆಯ ಸಾಲುಗಳು ನಿಲುಕದು, ನದಿಯ ನಿರಂತರತೆಯ ಚಲನಶೀಲ ಕಾಯಕ ತತ್ವದ ಎದುರು. ಅನುಗಾಲವೂ ತನ್ನ ಪಾಡಿಗೆ ತಾನು ತನ್ನ ಅರಿವಿನ ಕಾಯಕವನು ಮುಗಿಸಿ ಅನಂತತೆಯ, ಅಪಾರತೆಯಲಿ ಲೀನವಾಗುವ ನದಿಯ ಮೌನಯಾನವೇ ಅಭೂತ ವೆನಿಸುವುದು. ತನ್ನ ಹುಟ್ಟಿನಿಂದ ಚಲನೆಯನೆ ಕಾಯಕವಾಗಿಸಿಕೊಂಡು, ತನ್ನ ಮಾರ್ಗವನು ಸೃಷ್ಟಿಸಿಕೊಳ್ಳುತ ಅನಂತ ನೆಲೆಯನು ಅರಸುತ ಸಾಗುವ ನದಿಯ ಅನವರತ ಸಾಗಾಟದಲಿ ಯಾವ ನವ ಅನ್ವೇಷಣೆ ಅಡಗಿದೆಯೋ. ಅದರ ಅಖಂಡ ಮೌನವನೊಮ್ಮೆ ಹೊಕ್ಕು ಉತ್ತರ ಹುಡುಕುವಾಸೆ ಮನಕೆ. ಆದರೂ ಆ ಮೌನದಲೇ ಅಡಗಿರುವ ಅಮೂರ್ತ ಪರಿಭಾಷೆಯನು ಅರಿವ ಪ್ರಯತ್ನದಲಿ ಮೂಡಿಬಂದ ಕವನ 'ಮೌನ ನದಿ' ಅದರ ಮೌನ ಭಾಷೆಯಲಿನ ಅರಿವು ನಮ್ಮದಾಗಲಿ...
ಮೌನ ನದಿ
ನದಿಯ ಮೌನ
ಇರುಳ ನೀರವತೆಗೂ
ಧೃತಿಗೆಡದ ಮೌನ!
ಹೊಳೆವ ಅಪರಿಮಿತ
ನಕ್ಷತ್ರಗಳ ಬಿಂಬಗಳಲಿ
ಮಿರುಗುವ ನದಿಯಲೆಗಳು.
ಬೀಗುವ ಚಂಚಲ ಮೋಡದೊಡಲ
ಕಂಡು ಮೋಹಕ ಮರುಗುವ,
ಚದುರಿ ಉದುರುವ ಹನಿಗೆ
ಮಡಿಲೋಡ್ಡುವ ನದಿ ಮೌನ!
ಹನಿನೀರು ಜಲವಾಗಿ
ನದಿಯಾಗಿ ಹೊರಳಿ,
ಮಿರುಗಿ,ನಲುಗಿ,
ನೆಲೆಗೊಳ್ಳದೆ ಹರಿವನೆ
ಹರಸುವ ನದಿ ಮೌನ!
ಎಚ್.ಎನ್.ಈಶಕುಮಾರ್


Tuesday, September 8, 2009

ಆಹಾ! ಎಂಥ ಸಾವಿನ ಪರಿಯೋ...?















ಕಾಲ ಪ್ರವಾಹದ ನಿರಂತರ ಚಲನೆಯಲಿ
ಹುಟ್ಟು-ಸಾವುಗಳೆಂಬ ಆರಂಭ-ಅಂತ್ಯದಲಿ
ಅರಳುವ ಮುದುಡುವ ಹೂವುಗಳೆಷ್ಟೋ
ಅರಳಿ ಮುದುಡುವ ನಡುವೆ ಜನರ ಮನದ
ಮುಡಿಗೆರುವುದುಕೇವಲ ಕೆಲವಷ್ಟೇ.

ಜಗದ ಸಕ್ರಿಯತೆಯಲಿ ಮುಳುಗಿದ್ದವ, ಎಲ್ಲ ಚಲನ ವಲನಗಳಲ್ಲು ತನ್ನನ್ನು ತೊಡಗಿಸಿಕೊಂಡು, ಎಲ್ಲರ ಕಣ್ಣೆದುರೆ ತನಗೂ-ಇಲ್ಲಿಗೂ ಇನ್ಯಾವುದೇ ಸಂಭಂದವಿಲ್ಲ ಎಂದು ಸಂಭಂದ ಕಳಚಿಕೊಂಡು ಎಲ್ಲಿಗೆ ಹೋದ ತಿಳಿಯದು.ಜನರ ಮನದಲಿ ಅವರ ಅಚ್ಚು ಮೆಚ್ಚಿನ ನಾಯಕನಾಗಿ,ಅವರ ಕಷ್ಟ,ನೋವು;ನಲಿವಿನಲಿ ಭಾಗಿಯಾಗಿದ್ದವ ಇದ್ದಕಿದ್ದ ಹಾಗೇ ಕಣ್ಮರೆಯಾದರೆ ಅಂತಹ ನಾಯಕನ ಕಳೆದುಕೊಂಡ ಜನರೆಗೆ ಕಂಗಾಲಾಗಬೇಡ.
ಹುಟ್ಟು-ಸಾವು ನಿಗೂಢ, ಆದರೆ ಹುಟ್ಟಿನದು ಸಂತಸದ ಸಂಗತಿ,ಸಾವು ದುಖದ್ದು. ಸಾವಿನ ಭಯ ಎಲ್ಲರನ್ನು ಕಾಡುವುದೇ. ಆದರೂ ಯಾರ ಯಾರ ಸಾವು ಹೇಗೆ,ಎಲ್ಲಿದೆಯೋ ಅರಿತವರಿಲ್ಲ. ಆಂಧ್ರದ ಸಿಎಂ ರಾಜಶೇಖರರೆಡ್ಡಿ ಹಾಗೂ ಅವರ ಸಾವಿನ ಕಾರಣ, ಸಾವಿಗೆ ಶರಣಾದ ಜನರ ಸಾವುಗಳ ಬಗ್ಗೆ ಕ್ಷಣಕಾಲವು ಚಿಂತಿಸಲಾಗದೆ ಇದು ನಿಜ ಸಂಗತಿಯೇ ಎಂದು ನಮಗೆ ನಾವೇ ಪ್ರಶ್ನೆ ಕೇಳಿಕೊಳ್ಳುವಂತಹ ಶೋಚನಿಯ ಸ್ಥಿತಿ ನಮ್ಮದು. ಸಾವು ಯಾರದೇ ಆಗಿರಲಿ ನಮ್ಮ ಮನವನು ಕದಲಿಬಿಡುತ್ತದೆ. ನಮಗೆ ಸಂಭಂದ ಪಡಲಿ ಪಡದಿರಲಿ ಸಾವಿನ ಸಂಗತಿ ಮಾನವನಲಿ ಭಯ ಹುಟ್ಟಿಸುತ್ತದೆ.

ಒಂದು ದೇಹದಲಿ ಜೀವವಿರುವುದಕು, ಇಲ್ಲದಿರುವುದಕು ಇರುವ ವ್ಯತ್ಯಾಸವೇ ಅಜಗಜಾಂತರ. ಲವಲವಿಕೆಯಿಂದ ಓಡಾಡುತ, ಮಾತನಾಡುತ, ನಗುತ ನಮ್ಮ ಸುತ್ತ-ಮುತ್ತಲು ಕಾಣಸಿಗುವವರ ದೇಹ ಸ್ತಬ್ದವಾಗಿ ಯಾವುದೇ ಚಲನೆ ಇಲ್ಲದೆ ನಿಶ್ಚಲ ಜಡ ವಸ್ತುವಿನಂಥಾದ ಸ್ಥಿತಿಯನು ಕಂಡರಂತೂ ಎಂಥವರ ಗುಂಡಿಗೆಯಲು ನಡುಕ ಹುಟ್ಟುವುದು.
'ನಮ್ಮ ದೇಹವು ಇಂತಹ ಜಡತೆಯ,ನಿಷ್ಕ್ರಿಯ ಸ್ಥಿತಿಯನೊಮ್ಮೆ ತಲುಪುವುದಲ್ಲವೇ' ಎನ್ನುವ ಭವಿಷ್ಯವಾಣಿಯ ಮೂರ್ತ ಚಿತ್ರಣ ನಮ್ಮ ಮನದಲಿ, ಕ್ಷಣದಲಿ ಮೂಡಿ ಮರೆಯಾಗದೆ ಇರದು.
"ಸಾವು" ಎಂಬ ಅನಂತ ಸತ್ಯ ಯಾವ ಪರಿಯಲಿ,ವಿಧದಲಿ ನಮ್ಮ ಮೇಲೆ ಎರಗುವುದೋ ಎಂಬ ನಿಷ್ಪ್ರಯೋಜಕ ಮರ್ಮಚೇದ ಅಂಶವೊಂದು ಮನದಲಿ ಜಾಗೃತವಾಗಿಯೇ ಇರುತ್ತದೆ ಮಗುವನು ಕಾಡುವ ಗುಮ್ಮನಂತೆ. ರಾಜಶೇಖರ ರೆಡ್ಡಿ ಅಂತವರ ಸಾವು ದಟ್ಟ ಅರಣ್ಯದ ನಡುವೆಲ್ಲೋ, ನಿಗೂಢ, ನಿರ್ಜನ ಪ್ರದೆಶದಲಿತ್ತು ಅಂಥದಾರೆ, ನಮ್ಮ ಸಾವುಗಳು ಎಲ್ಲೆಲ್ಲಿವೆಯೋ ಅರಿವುದಾಗೋ ಹರಿಯೇ!
ಅವರ ಸಾವು ಹೇಗೆ ಇರಲಿ, YSR ಸಾವನು ಜನ ಸ್ವೀಕರಿಸಲು ಸಿದ್ದರಿರಲಿಲ್ಲ,ಎಲ್ಲಿಂದಲೋ ಎದ್ದು ಬಂದ ಸುಂಟರಗಾಳಿ ಹೊಲದಲಿ ಗುಡ್ಡೆ ಹಾಕಿದ ಹುಲ್ಲಿನ ರಾಶಿಯನು ಕಣ್ಣೆದುರೆ ಹೊತ್ತುಕೊಂಡು ಚೆಲ್ಲ ಪಿಲ್ಲಿಯಾಗಿ ಬಿಸಾಡಿ ಮರೆಯಾದಂತೆ. ನಮ್ಮ ಕಣ್ಣುಗಳನು ನಾವೇ ನಂಬದಂತಹ ಸ್ಥಿತಿ ಎಂದರೆ ಇದೆ ಏನೋ? ಸರ್ರನೆ ಬಂದೆರಗಿದ ದುರಂತ ಸುದ್ದಿಗೆ ದಿಗ್ಮುಡರಾಗಿ, ಅರಿವೇ ಇಲ್ಲದೇ ಹುಚ್ಚರಂತೆ ಪ್ರತಿಕ್ರಿಸಿದ ಅವರ ಅನುಯಾಯಿಗಳ, ಅಭಿಮಾನಿಗಳ, ಕಾರ್ಯ ಕರ್ತರ ವರ್ತನೆಯನು ಕಂಡ ಮೇಲಂತೂ "ಇದು ನಾಯಕನ ಮೇಲಿನ ನಿಜವಾದ ಅಭಿಮಾನವೇ?" ಎಂಬುದನು ಪರಾಮರ್ಶಿಸಬೇಕಾಗಿದೆ. ಮಾನಸಿಕ ಉದ್ವೇಗಕ್ಕೆ ಸಿಲುಕಿ ಕ್ಷಣಕ್ಕೆ ಜನರು ತೆಗೆದುಕೊಳ್ಳುವ ಆತ್ಮಹತ್ಯೆಯಂಥ ಅರ್ಥಹೀನ ನಿರ್ಧಾರಗಳು ಜನರ ಹುಚ್ಚುತನದ ಅತಿರೇಖಕೆ ನಿದರ್ಶನವೇ ಸರಿ ಮತ್ತೇನು ಅಲ್ಲ.
ಯಾವುದೇ ನಾಯಕನಿಗೆ ಮಟ್ಟದ ಜನ ಬೆಂಬಲ ದೊರೆಯುವುದು ಸುಲಭದ ಮಾತಲ್ಲ. ನಿಜಕ್ಕೂ ಜನಮಾನಸದಲಿ YSR 'ಮಹಾಮಹಿಮನಂತೆ'ಇದ್ದರೆನ್ನುವುದಕ್ಕೆ ಅವರ ಅಕಾಲ ಸಾವಿನ ದುರಂತಕ್ಕೆ ಆಂಧ್ರದ ಪ್ರಜೆಗಳ ರೋದನವೇ ಸಾಕ್ಷಿ. ದುಡ್ಡಿಗಾಗಿ ರಾಜಕಾರಣಿಗಳ ಹಿಂದೇ ಅಲೆಯುವ ಮಾಮೂಲು ಜನರ ಹಾವಳಿಯ ಕಾಲದಲಿ ಒಬ್ಬ ಜನ ನಾಯಕ ಮಟ್ಟದಲಿ ಜನರ ಮನವನು ಗೆದ್ದಿದ್ದನೆಂದರೆ ಅದರ ಹಿಂದಿನ ಅವರ ಜನಹಿತ ಕಾರ್ಯಗಳಿಗೆ ಸಿಕ್ಕಿದ ಮನ್ನಣೆಯೇ ಅದು. ಸಿನೆಮಾ ನಾಯಕರು, ಅವರ ಸಿನೆಮಾ ಜಗತ್ತಿನ ಭ್ರಮಲೋಕದಲಿ ಬಿದ್ದು ಸಾಯುವ ಆಂಧ್ರದ ಜನರು, ರಾಜಶೇಖರ ರೆಡ್ಡಿಯಂತಹ ರಾಜಕಾರಣಿಗೆ ತೋರಿದ ಆದರ, ಪ್ರೀತಿ ಅಪಾರವೇ. ಆದರೂ ಸಾವಿರಾರು ಕಿಲೋ ದೂರ ಪಾದಯಾತ್ರೆಯಲಿ ಸಾಗಿ ತನ್ನ ಜನರ, ರೈತರ, ಬಡವರ ಕಷ್ಟ,ಕಾರ್ಪಣ್ಯಗಳನು ಅರಿತು ಅವರ ನೋವಿಗೆ ಅಧಿಕಾರದ ಮುಖೇನ ಸ್ಪಂಧಿಸಿ ಮಾನವೀಯ ಅಂತಃಕರಣ ಮೆರೆದ YSR ರವರ ಸಾವಿಗೆ, ಮರುಕ ಪಡುತ ವಿನಾಕಾರಣ ತಮ್ಮ ಜೀವತ್ಯಾಗ ಮಾಡಿದ ನೂರಾರು ಜನರ ನಿಷ್ಠೆ ಮಾತ್ರ ಎಂತಹುದೋ ನೀವೇ ಅರಿಯಬೇಕು?
ಇಂತಹ ಮಹಾನ್ ಜೀವಿಗಳ ಸಾವು ಎಲ್ಲರನ್ನು ಕ್ಷಣಕಾಲ ಕಂಗೆಡಿಸುವುದಂತು ಸತ್ಯ. ಡಾ.ರಾಜ್ ಕುಮಾರ್ ಮರಣ ಹೊಂದಿದ ಸಮಯದಲು ನಮ್ಮ ಜನಗಳು ಅನಾಗರಿಕರಂತೆ ಅಶಾಂತಿ ಮೆರೆದರು. ಅದೇನೇ ಇರಲಿ ಅಂತವರ ಸಾವು ನಮಗೆ ' ಬದುಕು ಶಾಶ್ವತವಲ್ಲ' ಎಂಬ ತತ್ವ ತಿಳಿಸುವುದು. ಆಗಾಗಿ ಅವರು ಸಾಗಿದ ದಾರಿಯಲಿ ನಾವುಗಳು ಒಂದೊಂದು ಹೆಜ್ಜೆ ಮುಂದೆ ಸಾಗಿದರಷ್ಟೇ ಸಾಕು, ಅದೇ ನಮ್ಮ ಜೀವನ ಮೌಲ್ಯವು..ಎಂದು ಅರಿತು ಮುಂದೆ ಸಾಗೋಣ ಬನ್ನಿ.

Monday, August 31, 2009

ಪ್ರೀತಿ ಮತ್ತು ಒಂಟಿ ಹಕ್ಕಿ....







ಸಹಯಾತ್ರಿಗಳೇ 'ಕವಿತಾ ಗುಚ್ಛದ' ಕವನಗಳಿಗೆ ನಿಮ್ಮಿಂದ ಸಿಕ್ಕಿದ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.ಪ್ರತಿಕ್ರಿಯಿಸಿದ ಪ್ರತಿಯೊಬ್ಬರು ಒಂದಲ್ಲ ಒಂದು ಕವಿತೆಯನ್ನ ಮೆಚ್ಚಿ ಮಾತನಾಡಿದ್ದಾರೆ. ಕವನ ಬರೆಯುವುದಕ್ಕಿಂತ ನಿಮ್ಮ ಮೆಚ್ಚುಗೆಯ,
ವಿಶ್ವಾಸದ ನುಡಿಗಳು ನೀಡುವ ಸಂತಸ ಅಪಾರ. ನಿಮ್ಮೆಲ್ಲರ ವಿಶ್ವಾಸದಿಂದ ನನ್ನ ಆತ್ಮವಿಶ್ವಾಸ ಅಧಿಕವಾಗಿ ನನ್ನ ಮತ್ತೊಂದು ಕವನವನ್ನು ನಿಮ್ಮ ಓದಿಗೆ, ಪ್ರತಿಕ್ರಿಯೆಗೆ, ವಿಮರ್ಶೆಗೆ ನೀಡುತ್ತಿದ್ದೇನೆ. ಪ್ರೀತಿಯ ನಲುಮೆಯ ಭಾವದಲಿ ಮಿಂದು ತನ್ನ ಮನದನ್ನೆಯಿಂದ ದೂರಾದ ಹಕ್ಕಿಗೆ ಕಾಡುವ ನೆನಪುಗಳು. ಆ ನೆನಪಿನಲೇ ಕಾಲದೂಡುತ 'ಪರ್ಯಟನೆಯ ಬದುಕ' ಅರಸುವ ಒಂಟಿಹಕ್ಕಿಯ ಮನದ ತುಮುಲ,ತಳಮಳಗಳು ಒಂದು ಕ್ಷಣ ನಿಮ್ಮದಾಗುವಂತೆ ಮಗ್ನರಾಗಿ....

ಪ್ರೀತಿ ಮತ್ತು ಒಂಟಿ ಹಕ್ಕಿ....

ಎಲ್ಲೋ ಬೆಟ್ಟದ ತಪ್ಪಲಿಂದ ನುಸುಳಿಬಂದ

ತಿಳಿಗಾಳಿ ಸುಯ್ಯೆಂದು ಮರೆತ ಮಧುರತೆಯ
ಮನದಲಿ ತುಳುಕಿಸಲು ಬೆಟ್ಟದ
ತುದಿಯಲಿ ಒಂಟಿಹಕ್ಕಿಗೆ ಮುಸ್ಸಂಜೆಯ
ಮಬ್ಬಿನಲಿ ತನ್ನ ಸಂಗಾತಿಯ
ಬಿಸಿಯುಸಿರಿನ ಉನ್ಮಾದದ ನೆನಪು ಕಾಡಲು
ತಂಗಾಳಿಯ ತಂಪಲು ಹಕ್ಕಿಗೆ ಕಣ್ಣಿರ ಒರತೆ.


ಬೆಚ್ಚನೆ ಭಾವದ ಮೋಹದ ಕಿಚ್ಚಲಿ
ಒಂದೇ ಗೂಡಿನ ನಂಟಿನರಮನೆಯಲಿ
ಜಗದ ಆಗು-ಹೋಗುಗಳಿಗೆ ಕದವ ಮುಚ್ಚಿ
ಉಸಿರು-ಉಸಿರಲೆ ಪ್ರೀತಿಯ ಉಂಡು
ಕಾಲವ ಮರೆತ ಹಕ್ಕಿಗಳ ನಡುವಿಂದು
"ವಿಷಾದ"
ಬರಡು ಬರಡಾದ ಎದೆಯ ಹಂದರದ
ತುಂಬೆಲ್ಲ ವಿಷಾದದಲೆಗಳು
ಸುಳಿದಾಡುತಿರಲು ಒಂಟಿಹಕ್ಕಿಗೆ
ಹಸಿರೆಲೆಗಳ ಬನವೇ ಬೆಂಗಾಡು.

ಹಲವು ಆರಂಭ-ಅಂತ್ಯಗಳ
ತೊರೆಗಳೋಳಗೊಂಡ ಅನಂತತೆಯ
ನದಿಯೊಡಲು 'ಜೀವನ'.
ಹಕ್ಕಿಗದೋ ಭಾವ-ಭಾವಗಳು ಮಿಂದು
ಜೀವಮಿಡಿದ ಸಾಂಗತ್ಯದ ಅಂತ್ಯವು.

ಮನದ ತುಂಬೆಲ್ಲ ಪ್ರೀತಿ ಪ್ರೇಮದ ಹುಚ್ಚು ಹೊಳೆಯ
ನವೋನ್ವೇಷಣೆಯ ಹಾದಿಯಲಿ ಪೇರಿಸಿಕೊಂಡ
ಸವಿನೆನಪುಗಳ ಸರಮಾಲೆ ಸಾಲದೇನು?
ಕಾಲನ ಜೋಳಿಗೆಯಲಿ ಅಳಿದುಳಿದ
ಜೀವಮಾನವ ಸವೆಸಲು ಹಕ್ಕಿಗೆ;
ಹೊರಡಲು ಪರ್ಯಟನೆಯ ಬದುಕ ದಾರಿಯಲಿ.....?
ಎಚ್.ಎನ್.ಈಶಕುಮಾರ್

Monday, August 24, 2009

ಕವಿತಾ ಗುಚ್ಛ...


ಕವಿತೆಗಳ ಓದಲು ನನಗೆ ಇನ್ನಿಲ್ಲದ ಬಯಕೆ ,ಅದರ ನವಿರುತನ, ಲಾಲಿತ್ಯ ನನ್ನನ್ನೇ ಮರೆಯುವಂತೆ ಮಾಡುತ್ತವೆ.ಕವಿತೆಯ ಕೆಲವೇ ಪದಗಳು, ಸಾಲುಗಳು ಹಿಡಿದಿಡುವ ಭಾವನೆಗಳು ಅಪಾರ.ಎರಡೇ ಸಾಲಿನ ಕವನ ಜೀವನದ ಶ್ರೇಷ್ಟತೆಯನ್ನೋ, ನಶ್ವರತೆಯನ್ನೋ, ಪ್ರೀತಿಯ ಆಗಧಾತೆಯನ್ನೋ, ಮೋಹಕವನ್ನೋ, ವಿರಹದ ಬೇಗೆಯನ್ನೂ, ಏಕಾಂಗಿಯ ಬೇಸರವನ್ನೂ, ಇನ್ನಾವುದೋ ಸಂಸಾರದ ಸಾರವನ್ನೋ ಮನವನು ತಟ್ಟುವಂತೆ ಹೇಳಿಬಿಡುತ್ತವೆ. ಅಂತಹ ಯಾವುದೇ ಕವಿಯ ಸೃಜನತೆಯ ಬಗೆಗೆ ನನಗಿನ್ನೂ ಕೌತುಕತೆ ಇದೆ.ಇಂದಿಗೂ ಯಾವುದೇ ಹಿರಿಯ-ಕಿರಿಯ ಕವಿಯ ಅಚ್ಚರಿಯ ಕವನದ ಸಾಲುಗಳನು ಓದಿದಾಗಲೂ ನನ್ನಲ್ಲಿ ಹುಟ್ಟುವ ಪ್ರಶ್ನೆ ಎಂದರೆ 'ಅಬ್ಬಾ!ಈ ಸಾಲುಗಳು ಆ ಕವಿಮನಸಿಗೆ ಹೇಗೆ ಒಲಿದವು ಎಂದು'.ಕವಿಯ ತಪಕ್ಕೆ ಒಲಿವ ವರದಾನ ಕವನ, ಮಗ್ನತೆ ಇದ್ದಾಗ ಮಾತ್ರ ಭಾವದಲೆಗಳು ಸೊಗಸಾಗಿ ಮೂಡುವವು.ಸುಮ್ಮ ಸುಮ್ಮನೆ ಜಾಳು ಜಾಳಗಿ ಬರೆದರೆ ಕವನವಾಗುವುದಿಲ್ಲ ಎಂಬುದು ನನ್ನ ನಂಬಿಕೆ. "ಕಪ್ಪೆ ಚಿಪ್ಪಿನಲ್ಲಿ ಅವಿತು ಮುತ್ತಾಗುವ ಹಾಗೇ ಸ್ವಾತಿಯ ಮಳೆ ಹನಿ...ಬಳ್ಳಿಯಲಿ ಮೊಗ್ಗಾಗಿ ತಾನಾಗಿ ಅರಳುವ ಹೂವಿನಂತೆ, ಸುಂದರವಾದ ಮನದ ಪದ ಗುಚ್ಛವು ಕವಿತೆಯು".
ನನ್ನ ಕೆಲವು ಕವಿತಾ ಗುಚ್ಛಗಳನು ನಿಮ್ಮ ಓದಿಗೆ,ಪ್ರತಿಕ್ರಿಯೆಗೆ ಹಾಕಿದ್ದೇನೆ, ಓದಿ ಆನಂದಿಸಿ ಹಾಗೇ ನಿಮ್ಮ ಮಾತುಗಳು ನನ್ನ ಎಚ್ಚರಿಸಲಿ ಸ್ನೇಹಿತರೆ..ಓದಲು ಅಣಿಯಾಗಿ..

ಕವಿತಾ ಗುಚ್ಛ.

ಅರಿಯದೆ ಆದ ಪ್ರಮಾದಕೆ ಮನ
ಬಿರಿಯುವ ಮೌನವೇಕೆ?ತೊರೆದು ಹೋಗಿಬಿಡು
ಅಳಿಸಿಹಾಕಿ ಮನದ ಹೂ ಹಾಸಿನ ಮೇಲಿನ
ನೆನಪಿನ ಮಧುವ,ಇಲ್ಲವೇ ಒಮ್ಮೆ ಮರೆತುಬಿಡು
ಆದ ಪ್ರಮಾದವ ಉಳಿಸಿಬಿಡುವೆ ಜೀವಮಾನ
ನಿನ್ನ ಹಸಿ ಹಸಿ ಆರದ ಪ್ರೀತಿಯಲಿ....ಗೆಳತಿ.

ಮಳೆಯಲಿ ನೆನೆವ ಆ ರೋಮಾಂಚನದಲಿ
ಸಿಂಗಾರಗೊಂಡು ಮೆದುವಾಗಲು ಇಳೆ
ನಿನ್ನ ಕಾಲ ಹೂ ಸ್ಪರ್ಶಕೆ ಗಡಿಬಿಡಿಯ
ಚಿತ್ತಾರ ಮೂಡಲು ನನ್ನ ಮನದಲಿ
ಹುಚ್ಚೆದ್ದ ನವಿಲ ವಯ್ಯಾರವು.

ನಿನ್ನೆಡೆಗೆ ಸೆಳೆವ ಹುಚ್ಚು ಮೋಹವನು
ಮನದಲೆ ತಣಿಸಲೇ ಸೋತು, ಹರಿಯಲು
ಬಿಟ್ಟ ಹುಚ್ಚು ಹೊಳೆಯಲಿ ಕೊಚ್ಚಿ ಹೋದವಲ್ಲೇ
ನನ್ನ ಹರೆಯದ ದಿನಗಳು. ಈಗಲೂ ಕೆಟ್ಟ
ನೆನಪಲೆ ನನ್ನ ಜೀವ ಜೀಕಾಟ...ಒಲವು
ಸುಂಕ ಕಟ್ಟೆಯೇ ಅಲ್ಲವೇ?

ಅವನ ಕೈಸೆರೆಯಲಿ ಬೆಚ್ಚನೆ
ಪ್ರೀತಿಯ ಹವಣಿಸುತ ಬಂದ
ಪ್ರೇಮ ಪಕ್ಷಿಯ ಮುಕ್ತವಾಗಿಸುವ
ಹುಂಬ ತವಕದಲಿ ಹಾರಿಬಿಟ್ಟ
ಹಕ್ಕಿಯ ಸ್ವಚ್ಚಂದ ಹಾರಾಟವನು
ಆನಂದಿಸಲಾಗದೆ ವಿರಹದ ಬೇಗೆಯಲಿ
ಬಳಲಿದನಂತೆ ಅಮರ ಪ್ರೇಮ ತ್ಯಾಗಿ.

ಆ ಕಂಗಳಲಿ ನೀ ಸುರಿವ ಸುಧೆಯ
ಹರಸುತ ಎಷ್ಟು ವರುಷಗಳು ಸರಿದರು ಸರಿಯೇ
ಸರಿದು ಹೋಗಲಿ ಜೀವಮಾನವು ಕ್ಷಣಮಾತ್ರದಲಿ
ಗೆಳತಿ! ಸುಧೆಯ ಆ ಅಮಲಿನಲಿ ಮುಳುಗಿಸಿಬಿಡು
ನನ್ನ ಬೇಡುವೆನು, ದಯಪಾಲಿಸು
ನಿನ್ನ ಅಮಲಿನಲಿ ನನ್ನ ಸಾವನ್ನ!