Tuesday, May 25, 2010

ಹಾದಿಯ ಹಂಗು ತೊರೆದ ನದಿ...











ನದಿ ತೊರೆದು ಹೋದ ಪಥದಂತೆ
ಜೀವನದಿ ನೀ ತೊರೆದರು
ಕಡು ಕತ್ತಲ ನೀರವದಿ ತುಡಿವ
ನನಂತರಾಳದ ಬೇಗುದಿ ನೀನು.
ಕಾಲ ಎಡವಿನಂತರದಲೇ ನೀನಿರುವಾಗ
ನಿನ್ನ ಅಂತರಾಳವ ಅರಿಯಲಾಗದೆ
ನೀ ಅಗಲಿ, ನೆನಪಾಗಿ
ಮಾಗಿಯ ಚಳಿಯಲಿ ವಿರಹಿಯ
ಮೈ ಕೊರೆವ ಹಿಮಶೀತದ
ತಂಡಿಯಂತಾಗಲು,
ಪ್ರೀತಿ ಪ್ರೇಮ ಕೊನರುವ
ಮನದಿ ಬರದ ಬರನಾಡಿನ
ನಿರ್ಲಿಪ್ತವು ಆವರಿಸೆ
ಬದುಕ ಹಾಯಿದೊಣಿಗೆ
ಬೈಗಿನ ಮಬ್ಬು ಮುತ್ತಿ
ಕತ್ತಲ ಕರಾಳ ಬಾಳಿನಾದಿಗೆ
ಹೊತ್ತೊಯ್ಯುತ್ತಿತ್ತು .

ನದಿ ಹಂಗು ತೊರೆದ ಹಾದಿಗುಂಟ
ಹಾಸಿ ಹೋದ ಮರಳ ರಾಶಿಯ
ನುರುಚುಗಲ್ಲ ಮೈ ಅಪರಾಹ್ನ
ಸುಡುಬಿಸಿಲಿನ ಬೇಗೆಯಲಿ
ಬೇಯುವಂತೆ,ಒಲವದೂಡಿದ
ಮನದ ಒಳಗುದಿ ನೆನಪ
ಯಜ್ಞ ಕುಂಡ ಜ್ವಲಿಸುತಿಹುದು
ಎನ್ನದೆ ಜೀವ ಬತ್ತಿಯ ಸುಡುತಿಹುದು
ಅಹರ್ನಿಶಿ .
ಈಶಕುಮಾರ್

Saturday, May 8, 2010

ತ್ರಿಶಂಕುವಾಗಿ..






ನನ್ನನ್ನೆ ಮರೆತು
ಉಸಿರಾಟದ ನೆಪದಲಿ
ಜೀವವ ಜೀಕುವ
ಪರಿ ನನ್ನದು.
ನಿನ್ನ ನೆನೆದು ನೆನೆದು
ನನ್ನ ವಿರಹವ
ಮರೆಯುವ ನೆಪದಲ್ಲೆ
ಲೋಕವನು ಸಹ
ಮರೆತು ನನ್ನಲ್ಲೂ
ನಿನ್ನಲ್ಲೂ ಇದ್ದು
ಇಲ್ಲದಾಗಿರುವೆ
ನಾ ಜೀವಿಸುತ
ತ್ರಿಶಂಕುವಾಗಿ...