ಕಾಲ ಸರಿಯುವ ಮುನ್ನ
ಮಾತು ಮುಗಿಯುವ ಮುನ್ನ
ನೆನಪ ಗಿಡವಾಗಿಬಿಡು
ಮನದ ಅಂಗಳದಿ
ಪೊರೆದು ತೊರೆವೆನು ನಿನ್ನ
ನಾ ಸರಿಯುವ ಮುನ್ನ.....
ನಿನ್ನ ಮರೆವ ಹೊತ್ತಿಗೆ
ನೆಪವಾಗಿ ನೆನಪಾತು
ನೀ ನಿಟ್ಟ ಆಣೆಯ ಮಾತು
'ನೀ ಮಡಿದರು ನೀನೆ
ನನ್ನ ಮೊದಲ ಪ್ರೀತಿಯು,
ನಾ ಮರೆತರು ಮನ
ಮರೆಯದ ಮೊದಲ
ಪ್ರಿಯತಮನು'.
ಮೋಡದ ಮರೆಯಲಿ
ನೇಸರ ಮರೆಯಾಗುವ
ಹೊತ್ತಲಿ ನಿನ್ನ ನೆನಪು
ಮನದಂಗಳದಲಿ
ದೀಪದಂತೆ ಬೆಳಗುತಿದೆ.
ಕಣ್ಣ ಆಳದಲಿ...
ಬಾಯಾರಿದ ಬದುಕು!
ಬೊಗಸೆಯೊಡ್ಡಿ ಬೇಡಿ
ದಣಿವಾರಿಸುವ ನೀರಿಗೆ
ಸಾಕೇನು ಬೊಗಸೆಯ
ಆಳ-ವಿಶಾಲ.
ಸಾಕೇನಿಸದಿರಲು ಅದು 'ಪ್ರೀತಿಯೇ'
ದಣಿವಾರುವುದು ಕ್ಷಣದಲಿ
ಬೊಗಸೆಯಲಿ ಆನಿಸಿ
ಕುಡಿದ ನೀರಿಗೆ.
ಹೊಟ್ಟೆ ಹೊರೆಯುವ
ಜೀತದ ಪರಿ,ದಣಿವುದು
ದೇಹ ಅನುಗಾಲವು
ಹಿಡಿ ಅನ್ನಕ್ಕಾಗಿ.
ಆದರೂ ಆವರಿಸಿಹುದು
ನನ್ನನು-ನಿನ್ನನು ಬಿಡಿಸಲಾಗದ
ಮೋಹ.
ಮೋಹದೊಡಲ ಕಿಚ್ಚನು
ತಣಿಸಲೇ ಸೋತು ಸೋತು
ಬಟಾ ಬಯಲಿನ ದಾರಿ ಬದಿಯ
ನೆಳಲಲಿ ಕೂತು
ದಿಗಂತದೆಡೆಗೆ ದಿಟ್ಟಿ ಬೀರಲು
ಬರಿದೇ ಬದುಕಿನ ಬರ್ಬರತೆಯ
ರಾಡಿ ರಾಚಲು ಕಣ್ಣ ಆಳದಲಿ
ಮಿರುಗುವುದು 'ನಶ್ವರತೆಯ ಹೊನಲು'
ಜೀವನ ಶೂನ್ಯವು...