Thursday, August 19, 2010

ಕಂದಕಗಳ ನಡುವೆ...


A man in Mumbai sees a dog attacking a lady.
He kicks the dog and it dies.
News paper report: "Local hero saves lady from dog. "Man says i am not Indian.
Report is changed; "Foreign hero saves lady from dog".
Man says actually I am Pakistaani next day Headlines:

"TERRORIST KILLS INNOCENT DOG".

ಸ್ನೇಹಿತ ಕಳಿಸಿದ ಇಂತದೊಂದು ಸಂದೇಶ ಮೊಬೈಲಿನಲ್ಲಿ ಓದಿದ ತಕ್ಷಣವೇ ಅನಿಸಿದ್ದು ಎಂಥ 'ವಿಲಕ್ಷಣ ಸತ್ಯ'ವಿದು. ಅಮೆರಿಕ ಬ್ರಾಂಡ್ ಜೀನ್ಸ್ ಹಾಕಿ, ಜರ್ಮನ್ ಬ್ರಾಂಡ್ ಶರ್ಟ್ ಧರಿಸಿ,Black Berry ಮೊಬೈಲ್ ಫೋನ್ ಗೆ bluetooth ಸಿಕ್ಕಿಸಿಕೊಂಡು ಹರಟುವ ಗ್ಲೋಬಲ್ village ಕಾನ್ಸೆಪ್ಟ್ ತದ್ರೂಪಿನಂತೆ ದೊಡ್ಡ ದೊಡ್ಡ ನಗರಗಳಲ್ಲಿ ಚಿತ್ರ-ವಿಚಿತ್ರವಾಗಿ ಅಲೆದಾಡುವ ೨೧ ಶತಮಾನದ ಅರೆಬೆಂದ ಮನಸುಗಳಲಿ ವಿರಾಜಮಾನವಾಗಿರುವ 'ಸಂಕುಚಿತತೆಯ' ಭಾವವಿದು. ವೈಜ್ಞಾನಿಕವಾಗಿ,ತಾಂತ್ರಿಕವಾಗಿ ಜಗಕ್ಕೆ ಮಾದರಿ ಎನುವಂತೆ ನಾವಿದ್ದರು ನಮ್ಮ ನಮ್ಮ ನಡುವಿರುವ 'ಗೋಡೆಗಳನು' ಮೀರುವ ಪ್ರಯತ್ನ ನಮ್ಮಿಂದ ಆಗಿಯೇ ಇಲ್ಲವೇನೋ ಎನಿಸುವುದು. ನಾವೇ ಹಾಕಿಕೊಂಡ 'ಲಕ್ಷ್ಮಣ ರೇಖೆ'ಗಳನು, ನಾವೇ ನಿರ್ಮಿಸಿಕೊಂಡ ಕಂದಕಗಳನು ಮೀರುವುದು ಎಷ್ಟು ಕಷ್ಟ. ನಮ್ಮ ಸಂವೇದನೆಗಳನು ನಿಯಂತ್ರಿಸುತ, ಗಡಿದಾಟದ ಹಾಗೇ ಲಗಾಮು ಹಾಕಿವೆ ಅಮೂರ್ತ ಕಂದಕಗಳು.
ಮಾನವ- ಮಾನವನ ಸಹಿಸಲಾಗದ ಸ್ಥಿತಿಯಲಿ ನಾವಿದ್ದೇವೆ. ಅಸಹನೆಗೆ ಕಾರಣ ಧರ್ಮ-ಅಧರ್ಮಗಳ ನಡುವಿನ ಯುದ್ದವೇನು ಅಲ್ಲ, ಕೆಡುಕರನು, ಸಮಾಜ ವಿದ್ರೋಹಿಗಳನು ದೂರವಿಡುವ ಹೋರಾಟದ ಭಾವವೇನು ಅಲ್ಲ. ಪಾಕಿಸ್ತಾನ ಭಯೋತ್ಪಾದಕರನ್ನು ಉತ್ತೇಜಿಸಿ ಭಾರತ ಮತ್ತು ಭಾರತೀಯರ ಮೇಲೆ ನಡೆಸುತ್ತಿರುವ ಅವರ ಹೇಯ ಕೃತ್ಯಗಳನ್ನುಹಾಗೂ ಮೃಗೀಯ ವರ್ತನೆಯನ್ನು ಖಂಡಿಸುವ ರೀತಿ ಎಂಬಂತೆ ನಾವು ನಮ್ಮ ಮನೆಯ ಪಕ್ಕದ "ಮುಸ್ಲಿಮರನ್ನು ಪಾಕಿಸ್ತಾನದ ಭಯೋತ್ಪಾದಕನಂತೆ"ನೋಡುವ ವಿಚಿತ್ರ ಧೋರಣೆ ನಮ್ಮಲ್ಲಿ ಬೆಳೆಯುತ್ತಿದೆ. ಎಲ್ಲವನ್ನು ಒಂದೇ ರೀತಿಯಾಗಿ ನೋಡುವ ಮನೋಭಾವ. ರಾಜಕೀಯ ಪ್ರತಿಷ್ಠೆಗಾಗಿ ದೇವೇಗೌಡ, ಸಿದ್ದರಾಮಯ್ಯರು ಒಬ್ಬರನೊಬ್ಬರು ವಿರೋದಿಸಿದರೆ ಒಕ್ಕಲಿಗರೆಲ್ಲ ಕುರುಬರನ್ನು, ಕುರುಬರೆಲ್ಲ ಒಕ್ಕಲಿಗರನ್ನು ವೈರಿಗಳಂತೆ, ಅಸ್ಪೃಶ್ಯ ರಂತೆ ಕಾಣುವ ಮನೋಭಾವ ಬೆಳೆಸಿಕೊಳ್ಳುವ ಮ್ಮ ವರ್ತನೆ ಎಂಥ ವಿಚಿತ್ರ.ತನ್ನ ಧರ್ಮ,ತನ್ನ ಜಾತಿ, ಭಾಷೆ, ಜನಾಂಗಕ್ಕೆ ಸೇರದವನು 'ಉತ್ತಮನಲ್ಲ, ಶ್ರೇಷ್ಠ ನಲ್ಲ' ಎನುವ ಸಂಕುಚಿತ ಭಾವ ನಮ್ಮದಾಗಿದೆ ಇಂದು. ಮಾನವ ಯಾವುದೇ ಜಾತಿಗೆ,ಕೋಮಿಗೆ ಸೇರಿದ್ದರು 'ಮಾನವೀಯತೆಯ ಶ್ರೇಷ್ಠ ಗುಣ" ಜಾತಿ-ಧರ್ಮ,ಪ್ರಾಂತ್ಯಕ್ಕೆ ಸೋಗು ಹಾಕಿಕೊಂಡು ಅಂಟಿಕೊಂಡಾಗ ಮಾನವನ ವರ್ತನೆ ತೀರ ಅರ್ಥಹೀನವಾಗಿಬಿಡುವುದು. ಮಾನವೀಯ ಮೌಲ್ಯಗಳನೆಲ್ಲ ದೂರ ಸರಿಸಿ,ಸಮಷ್ಠಿಯ ಒಳಿತನ್ನು ಮರೆತು, ಸ್ವಾರ್ಥ ಸಾಧನೆಗಾಗಿ ತನ್ನ, ತನ್ನ(ಕೋಮಿನ)ವರ ಏಳಿಗೆಯನಷ್ಟೇ ದೃಷ್ಟಿಯಲಿಟ್ಟುಕೊಂಡು ಕೆಲಸ ಮಾಡುವ ಇಂದಿನ ರಾಜಕಾರಣಿಗಳು ತಮ್ಮ ಅಜ್ಞಾನ, ಅನಾಚಾರಗಳಿಂದ ತಮ್ಮ
ಕೂಪ
ಮಂಡುಕತನವನ್ನು ಎಲ್ಲರ ಮನದಲ್ಲೂ ಬಿತ್ತುತ್ತಾ ಸಾಗುತ್ತಿರುವುದು ಅರ್ಥಹೀನ ವರ್ತನೆಗೊಂದು ಉತ್ತಮ ನಿದರ್ಶನ. ಒಂದು ಜಾತಿಗೊಬ್ಬ ನಾಯಕ,ಅವನ ಶ್ರೇಷ್ಠ ಗುಣವೆಂದರೆ ಆತ ನಮ್ಮ ಜಾತಿಗೆ ಸೇರಿದವನು ಎಂಬುದು. ಅವನಿಗಲ್ಲದೆ ಬೇರೆಯವನಿಗೆ ಮತ ಚಲಾಯಿಸುವುದು ತನ್ನ ಹಂತದಲ್ಲಿ ನಿಷಿದ್ಧ ಮಾತ್ರವಲ್ಲದೆ ತಾನು "ತಮ್ಮವರಿಗೆ ಮಾಡುವ ದ್ರೋಹವೆಂಬ 'ಚಿಂತನ ಲಹರಿಯಲಿರುವ" ಜನರದು ಮುಗ್ದತೆಯೋ,ಮೂಢ ಆಚಾರವೋ ತಿಳಿಯಲಾಗದಷ್ಟು ಸೂಕ್ಷ್ಮ, ಸಂಕೀರ್ಣ ಮತ್ತು ಅಸ್ಪಷ್ಟವಾದ ವಿಚಾರ.

'ಗಂಡ-ಹೆಂಡತಿ-ಮಗು'ಎಂಬುದಷ್ಟಕ್ಕೆ ಮಾತ್ರ ಸೀಮಿತವಾಗಿಹ ವಿಭಕ್ತ ಕುಟುಂಬ ಜೀವನ ಪದ್ಧತಿ ಮುಖ್ಯವಾಹಿನಿಗೆ ಬಂದಂತೆಲ್ಲ 'ಸಮಾಜ ಜೀವಿಯಾಗಿ' ಮಾನವನಿಗೆ ಇರಬೇಕಾದ ಸಾಮಾನ್ಯ ಅಂಶಗಳು ನಮ್ಮಲ್ಲಿ ಇಲ್ಲವಾಗಿವೆ. ನೆರೆ-ಹೊರೆಯವರ ಮೇಲಿರಬೇಕಾದ ಮಾನವೀಯ ಸಹೋದರತ್ವ ಮಾಯವಾಗಿದೆ. ನಮಗೆ,ನಮ್ಮ ಮನೆಯವರಿಗೆ ಸಂಬಂಧಿಸದ ಯಾವುದೇ ವಿಚಾರ ನಮ್ಮದಲ್ಲ, ಯಾರದೋ ಸಾವು-ನೋವುಗಳಿಗೆಲ್ಲ ಮರುಕಪಡುವಷ್ಟು ಸಮಯ,ವ್ಯವಧಾನ ಇಲ್ಲವಾಗಿ ಪ್ರತಿ ಕುಟುಂಬವು ಸಾಗರದಲಿರುವ ಲಕ್ಷ ಲಕ್ಷ ದ್ವೀಪಗಳಂತೆ ಸಮಾಜದ ನಡುವೆ ಜೀವಿಸುತ್ತಿವೆ. ಎಲ್ಲ ವಿಚಿತ್ರ, ಅರ್ಥಹೀನ ಮಾನವ ನಡುವಳಿಗಳು ಎಗ್ಗಿಲ್ಲದೆ ಬೆಳೆಯುತ್ತಿರುವ ಮಾನವ ಸಮಾಜದಲಿನ ಜನರ ಎಲ್ಲ ಭಿನ್ನತೆಗಳನು, ಆಚಾರ-ವಿಚಾರಗಳನು ನಿರ್ಮಲ ಮನಸ್ಥಿತಿಯಲಿ ಸ್ವೀಕರಿಸುವ, ಹೃದಯ ಶ್ರೀಮಂತಿಕೆಯ ಸಹಿಷ್ಣುತ ಭಾವ ಮಾತ್ರ ಎಲ್ಲರೆದೆಯ ಗಡಿದಾಟಿದೆ..

Sunday, August 15, 2010

ಸರ್ವ ಜನಾಂಗದ ಶಾಂತಿಯ ತೋಟದಲಿ
ಸರ್ವ ಜನಾಂಗದ ಸಂತಸದ ಸಂಭ್ರಮವಿರಲಿ...
ಸ್ವತಂತ್ರ ಹಬ್ಬದ ಶುಭಾಶಯಗಳು...