
ಕರ್ಫ್ಯೂ ವಿಧಿಸಿದ ಬೀದಿ ಬೀದಿಯಲಿ
ಆತಂಕದ ನಡುವೆ
ರಾಮನ ಜಪತಪ
ಪುರಾಣ ಪುಣ್ಯಕತೆಗಳ
ಕೆದಕಿ ಮತ್ತೆ ಮುಂದಿಟ್ಟ
ತ್ರೇತಾ ಯುಗದ
ನಂಬುಕೆಯ ಕಗ್ಗಂಟು.
ಬಿಡಿಸಲಾಗದ ಮಹಾಪುರುಷರದಷ್ಟೇ
ವಾದ ಅಪ್ಪ ಹೇಳಿದ ಕಥೆಯಲಿ
ರಾಮನುಟ್ಟಿದ 'ಅಯೋಧ್ಯೆಯಲಿ'.
ತಂದೆಗೆ ತಕ್ಕ ಮಗ 'ರಾಮ'
ಬಿಟ್ಟು ನಡೆದ ಕಾಡಿಗೆ 'ರಾಜ್ಯವ'
ಮರ್ಯಾದ ಪುರುಷೋತ್ತಮ 'ಶ್ರೀರಾಮ'
ಅಟ್ಟಿದ ಕಾಡಿಗೆ ಮಡದಿಯ
ಒಡ್ಡಿದ ಅಗ್ನಿಗೆ ತನ್ನೊಡತಿಯ
'ನಿಷ್ಕರುಣಿ' ರಾಮ.
ಸೀತೆಯುಂಡ ನೋವಲಿ ಅವನಾದ
ಏಕಪತ್ನಿವ್ರತನು ರಾರಾಜಿಸುತಿಹ
ಇಂದಿಗೂ ಪ್ರತಿ ಪತ್ನಿಯರೆದೆಯಲಿ
ಪತಿಯ ಮೇಲಿಹ ದೈವತ್ವದ
'ಸರ್ವನಾಮ'ವಾಗಿ
ಸರ್ವಾಂತರ್ಯಾಮಿಯಾಗಿಹ ರಾಮನನು
ಪವಿತ್ರ ಜನ್ಮಸ್ಥಳವೆಂಬ
ಕುರುಡು ನಂಬಿಕೆಯಲಿ
ಅಯೋಧ್ಯೆಯ ಗರ್ಭಗುಡಿಯ
ಕತ್ತಲಲಿ ಕೂಡಿಹುದು ದುರ್ದೈವ
'ಭರತಭೂಮಿಯ' ರಾಮನ.