Wednesday, August 31, 2011

ಸ್ಪರ್ಶ..ಮೌನ!


ಕಾಯುವ ಹಪಾ ಹಪಿಯಲ್ಲೇ

ದಿನ ದೂಡುವ ಬದುಕಿಗೆ

ಇನ್ನಾವ ಹೊಸ ಅರ್ಥವನ್ನು

ನೀಡುವ ಹುಚ್ಚುತನ ನನ್ನಲ್ಲಿ ಉಳಿದಿಲ್ಲ!
~~~~~~~~~~~~~~~~~~

ನನ್ನವರ ಕಂಡಾಗ

ಅವರ ಮುಖದಲಿ

ಹೊಳೆವ ಸ್ವಚ್ಛಂದ ನಗುವಿನ

ಚೈತನ್ಯ ನನ್ನ ಸ್ವಾತಂತ್ರ.
~~~~~~~~~~~~~~~~~

ನದಿಯ ದಡದಲಿ ನಿಂತ

ಏಕಾಂತದಲಿ ನನ್ನ ಕೂಡಿದ

ಹಕ್ಕಿ ನುಡಿಯಿತು;

ನಿನ್ನ ಹಾಗೇ ನನಗೂ

ಇದುವೇ ಜೀವನ, ಇದರಲ್ಲೇ ಬದುಕು!
~~~~~~~~~~~~~~~~~
ಆವರಿಸಿದ್ದ ಮೌನದ ನಡುವೆ

ಮಾತನಾಡಿದ್ದು ಮಾತ್ರ

ಸ್ಪರ್ಶ!



Monday, August 8, 2011

ಜೀವಕೆ ಭಾವ!

ಜೀವಕೆ ಭಾವ!

ಆ ನದಿ -ದಡದ ನಿರಂತರ
ಸಲ್ಲಾಪದ ನಡುವೆ ನಿನ್ನ ಏಕಾಂತ!
ನಿನ್ನ ಕಾಲ ಬೆರಳ ಸೋಕಿ
ತೆರಳುತಿಹ ಅಲೆಯ ಪುಳಕ
ಕಂಡ ಪ್ರತಿ ಅಲೆಯು
ನಿನ್ನತ್ತ ತೆವಳಲು
ನೀ ನಿಂತ ನೆಲೆ, ನದಿಯ ಸೆಳೆತಕೆ
ಸಿಗದ ದಡದ ಬಿಂದು
ಅಲ್ಲಿ ನೀನಿತ್ತ ಸ್ಪರ್ಶದಲೇ ಉಳಿದಿಹ
ಭೂಮಿ ತೂಕದ ಎದೆಯ ಭಾರ!

ನಿಸರ್ಗದ ಮೃದು ನಿನ್ನ ತನ
ಮೆಲ್ಲಗೆ ಮಂಜು ಹೂವಿನ ಎಳೆಯ ಮೇಲೆ
ಮೂಡಿಸಿದ್ದು ಮಾತ್ರ ಹನಿಯ ಚಿತ್ತಾರ.
ಬಸುವಿನ ಹುಳು ತನ್ನ ದಾರಿಯಲಿ
ಗೆರೆ ಎಳೆದು ಬಿಡಿಸಿದ್ದು ಮಾತ್ರ
ಸರಳಾತಿಸರಳ ರೇಖೆ.
ಆವರಿಸಿಹ ಮೌನದ ನಡುವೆ
ಮಾತನಾಡಿದ್ದು ಮಾತ್ರ ಸ್ಪರ್ಶ!
ಇದೆಲ್ಲದರ ನಡುವೆ ನಿನ್ನಲ್ಲಿ
ಉಳಿದಿಹುದು ಮಾತ್ರ
ಜೀವಕೆ ಭಾವ!
ಭಾವಕೆ ಜೀವ!

ಎಚ್.ಎನ್. ಈಶಕುಮಾರ್