Saturday, November 26, 2011

ಮೋಹದ ಮರುಕ

ನನ್ನದಲ್ಲದ ಭಾವಕೆ 
ನಿನ್ನದಲ್ಲದ ಮಾತಿಗೆ 
ಸಾಕ್ಷಿ ಮಾತ್ರ  
ನಾನು-ನೀನು.
```````````````````````````

ಕೂತು ತೂಕಡಿಸಲು ಬಿಡದು 
ನಿನ್ನ ನೆನಪು!
ಮಮಕಾರಕು ಮರುಕವುಟ್ಟುವುದು
ನನ್ನ ಕಂಡು!
``````````````````````````

ಸುಡುವ ಬಿಸಿಲು 
ಮೈಮನವ ತರಗುಡಿಸುವ ಶೀತದಲೋ  
ಮುಸಲಧಾರೆಯಲೋ  ಕೊಚ್ಚಿ ಹೋಗದೆ 
ನೀನು ಮಾತ್ರ ಯಾಕೆ ಉಳಿದೆ 'ನೆನಪೇ'
``````````````````````````````````````````` 

ನಿನ್ನ ತನುವಿನ 
ಆಸರೆಗೆ ದೂಡುವ 
ಚಳಿಯನು ದೂಷಿಸದೆ 
ನನ್ನ ತೆಗಳುವ ಜಗದ
ಬಗ್ಗೆ ನನಗೇಕೋ ಮರುಕ!
``````````````````````````````````````



Thursday, November 3, 2011

ಆವರಿಸಿದ ಛಾಯೆ!

ಚೀರುವ ದನಿಯಲಿನ ನಿನ್ನ
ವೇದನೆಯ ಆರದ ಗೊಳು  ಆಲಿಸಲೋ 
ಅಸಾಧ್ಯ ಹಿಂಸೆ, ಒಡಲಾಳದಲಿನ 
ನಿನ್ನ ನೋವು ಬರಿದಾಗದೇ
ಉಮ್ಮಳಿಸುತಿಹ ನಿನ್ನ ರೋದನೆ.

ಮರುಗುವ  ಜೀವಗಳಿಗೋ
ಜಗದ ನೋವಲ್ಲಿ ಮುಳುಗುತಲಿಹ 
ಹೊಸ  ಆಕ್ರಂದನ, ಆಲಿಸಿದಷ್ಟು 
ಇಮ್ಮಡಿಸುವ ಬೇಸರ,
ಇನ್ನಾವುದೋ ನೆವದಲಿ ಪಲಾಯನಕೆ
ದಾರಿ  ಹುಡುಕುವ ಮರುಕ ಮನ!

ನಿನಗಾದರೂ ಸಹ ಮತ್ತೇನೂ 
ಅಸಹಾಯಕತೆಯ ವ್ಯಕ್ತವೊಂದೇ 
ಉಳಿದಿಹುದು ಬದುಕಲಿ ಎನುವ                                     
 ಪರಿಯಲಿ ದನಿ ಸೋತು 
ಕ್ಷೀಣಿಸಲು, ಬತ್ತಿರುವ ಹನಿಯ 
ಕಣ್ಣಲೂ ಜಗಕೆ ಕಂಗೊಳಿಸುತಿಹ 
ಶೂನ್ಯವು! ಕಾರಣವೇ ತಿಳಿಯದೆ 
ನೊಂದ ಮನಕೆ ಆವರಿಸಿದ 
ಛಾಯೆ ದುಗುಡ!