ನದಿಯ ಹರಿವು
ಆ ದಡ ಈ ದಡಗಳ
ನಡುವೆ ಜೀವಂತ
ಬದುಕು ಹರಿವ ಪ್ರೀತಿಯಲಿ
ನಿನ್ನೊಡಲಾಳದ ಎಳೆಯ
ಸೆಳೆತದಲಿ ಬೆಸೆದ ಮೋಹಕೆ
ತವಕ ಕೂಡಲು.
ಕೂಡುವ ಬಯಕೆಯ ನಡುವೆ'
'ಚಂದಿರ'ನ ಬಿಂಬ
ಅಲೆಯಲಿ ಇರುಳೆಲ್ಲ ಹುಣ್ಣಿಮೆ.
ಹಾಯುವ ತಂಗಾಳಿಯ ಮಾತು
ಆಲಿಸುವ ದಡದ ಹೆಬ್ಬಂಡೆಗೆ
ಮುನಿಸು ನಿಂತ ನಿಲುವಲ್ಲೆ
ತಾಕಿ ಹೋಗುವ ಅಲೆಯ ಸಪ್ಪಳಕೆ
ಕಾಯುವ ದಂಡೆಯ ಹೆಮ್ಮರ
ಮಣ್ಣು ಜಾರಿದ ಬೇರಿನ ನಂಟು
ಅರಸಿ ಬಂದ ಎಲೆ ಸೋಲುತಿಹುದು
ಹರಿವ ಮೋಹಕೆ
ನದಿಯ ಸೆಳೆತಕೆ....