Tuesday, November 17, 2015

ಚರಿತ್ರೆಯ ಪುಟವೆಲ್ಲ..

ಚರಿತ್ರೆಯ ಪುಟವೆಲ್ಲ 
ಜೀವ ಪಡೆದವು ಒಮ್ಮೆಗೆ 
ತನ್ನೊಳಗೆ ಅಮರರಾಗಿದ್ದ 
ರಾಜರ ಮಹಾಮಹಿಮರ 
ಹೆಸರನೆಲ್ಲ ಕಾಪಾಡಿಕೊಂಡು 

ಗರ್ಭ ತುಂಬಿದ ಅವರ 
ಕೀರ್ತಿ ಅಪಕೀರ್ತಿಗಳೆಲ್ಲ 
ಉಸಿರು ಕಟ್ಟಿ ಯಾವುದೋ 
ದಿವ್ಯ ಗಳಿಗೆಯಲಿ ಪ್ರಸವವಾಗಿ 
ಗತದ ಗೊಂದಲವೆಲ್ಲ ಹರಿದಾಗ 
ಉತ್ತರ ದಕ್ಷಿಣ ಎಡ ಬಲಗಳ ವೈರುಧ್ಯ

ಹಾರಾಡಿ ಚಿರಾಡುತ ಶಪಿಸಿ 
ಹುತಾತ್ಮನ ಹೆಸರ ಕೂಗಲು  
ಹತನಾದನು ಇವನು ಇಲ್ಲಿ  
ನೋವಿನಲಿ ಸಾವಿನಲಿ 
ಹರಿಯಲು ಯಾರದೋ ರಕ್ತ 
ನಾಳೆಯ ಇತಿಹಾಸದ,,,,,,, 
ಪುಟಗಳೆಲ್ಲ ಕೆಂಪು.          
              - ಈಶಕುಮಾರ್

Tuesday, September 15, 2015

ಊರ ಓಣಿಯಲಿ..


ಊರ ಓಣಿಯಲಿ..

 ಮುಸ್ಸಂಜೆಯಲಿ
 ಜಿದ್ದಿಗೆ ಬಿದ್ದು
ಮಳೆ ಸುರಿಯಲು
ಊರ ಓಣಿಯ ತುಂಬಾ
ಕೆಂಪನೆ ರಂಗು
ಚುಕ್ಕಿ ಇಡದೇ
ರಂಗೋಲಿ ಹಾಕಿದೆ

 ಮುಂಜಾವಿನಲಿ
ಮೆಲ್ಲನೆ ನಡೆದ
ಓಣಿಯ ಆಕಳು
ಹಿಂದೆ ಚಿಗಿವ
ಆಕಳ ಕರುವಿನ
ಹೆಜ್ಜೆ ಗುರುತಿಗೆ
ಕೈಯೂರಿ ಕೂತ
ಅವ್ವನ ಸೆರಗ ಸ್ಪರ್ಶ

ಇರುಳಲಿ
ಊರ ತುಂಬಿದ
ಒರೆ ಕೋರೆಗಳ ದಾಟಿ
ಆಚೆಗಿನ ಬಯಲಲಿ
ಊರ ಕೆರೆಯ ಒಡಲ
ತುಂಬಿದ ನೀರಲಿ
ಬೀದಿಯ ಕಳೆಯೆಲ್ಲ
ಹೂಳಾಗಿ ತಳಸೇರಿದ
ಹೊತ್ತಿಗೆ ದಂಡೆಯಲಿ
ಸುಳಿದಾಡುತ್ತಿವೆ
ಬಾಯರಿದ ಒಡಲು..!
     -ಎಚ್. ಎನ್. ಈಶಕುಮಾರ್

Thursday, May 14, 2015

ಉಳಿದ ಮುಸ್ಸಂಜೆಯ ಹಾದಿ..

ಉಳಿದ ಮುಸ್ಸಂಜೆಯ ಹಾದಿ...
ಮುಸ್ಸಂಜೆಯ ಇಬ್ಬಂದಿತನ
ಅರೆ ಬಿರಿದ ಮೊಗ್ಗು
ಕವಿದ ಕಾರ್ಮೋಡವ
ಒಲ್ಲದ ಮನಸಲ್ಲಿ
ಸೀಳುವ ಸೂರ್ಯ

ಕತ್ತಲ ಕೊಲ್ಲದ
ಬೆಳದಿಂಗಳ ಚೆಲುವು
ತನ್ನ ಇರುವ
ಮುಸುಕಲೆ ತೋರುವ
ಚುಕ್ಕೆಗಳ ರಾಶಿ

ಹಡೆದ ದಡವನು
ಮೀರುವ ತವಕದಲೆ
ಸೋಲುವ ತೊರೆಯ ಓಟ
ಗರಿಕೆಯ ದಾಹವನು
ನೀಗದ ಇಬ್ಬನಿಯ ಒರಸೆ

ಯಾರ ನೋವಿಗೂ
ಕೈಗನ್ನಡಿಯಾಗದ
ಸ್ನಿಗ್ಧ ಚೆಲುವೆಯರ ಮುಗುಳ್ನಗೆ
ಹಸಿದೂರಿನ ಬವಣೆ
ಕಳೆಯದ ಕಾಣದ ಕೈಯ
ಮಮಕಾರ
ಭರವಸೆಯ ನಾಳೆಗಳ
ಹುಡುಕಿ ಮಬ್ಬಾಗಿಹ
ಕಂಗಳಲಿ ಉಳಿದ 
ಮುಸ್ಸಂಜೆಯ ಹಾದಿ...
     -ಈಶ



Sunday, March 29, 2015

ಕಾಮನ ಬಿಲ್ಲಾಗುವೆ..!


ಕಾಮನ ಬಿಲ್ಲಾಗುವೆ..!

ಬಂದು ಪಕ್ಕದಲ್ಲಿ ಕುಳಿತೆ
 ಮಾತು ಶುರುವಿಟ್ಟುಕೊಂಡಿತು
ಮನ
ಹುಂಬತನ ನಾಚಿಕೆಯ
ಮುಖವಾಡ ಹೊದ್ದು
ಹುಸಿ ನಕ್ಕಿತು
ಚೆಂದದ ಮೊಗವ
ಮತ್ತೆ ಮತ್ತೆ
ಕದ್ದು ನೋಡುವ
ಕಣ್ಣ ಒಳಗೆ
ಇದ್ದು ಬಿಡಬಾರದೇ ನೀನು
ಒರತೆ ನೀಗದೆ
ನದಿ ಹರಿದಿದೆ
ಮುಳುಗುವ ಮಾತಲ್ಲೆ
ಉಳಿದು ಹೋಗಿದೆ
ನಿನ್ನ ಕುರಿತೆ ಹೇಳಬೇಕಿದ್ದ
ನೂರೇ ನೂರು ಸುಳ್ಳುಗಳು...
ಆ ಒರೆ ನೋಟದಲೆ
ಜೀವ ಮಿಡಿಯುತ್ತಿದೆ
ಕಾಮನ ಬಿಲ್ಲಾಗುವೆ
ನೀ ಅನುಮತಿ ಇತ್ತು
ಮರೆತುಬಿಡು ನನ್ನ..!
     -ಈಶ

Tuesday, February 17, 2015

ಬಯಲ ಕರೆದಿದೆ

ಬಯಲ ಕರೆದಿದೆ

ನೂರು ಕಾಲ ಸವೆದು
ಇಂದಿಗೂ ತಣ್ಣಗೆ
ಹರವಿಕೊಂಡು ಬಯಲೆಡೆಗೆ
ಸಾಗಿಹ ಹಾದಿ
ತಿರುವಲಿ ಏಕಾಂತ ಬಯಸಿ
ನಿಂತ ಬದುಕು
ಸಂಧಿಸುವ ಬಿಂದುಗಳ
ಮೇಲೆ ಬಿದ್ದಿಹ
ಬೆವರ ಹನಿಗೆ
ನೆತ್ತರ ಬಣ್ಣ .

ಹರಿದ ಕನಸುಗಳು
ಚರಿತ್ರೆಯ ಭಾಗವಾಗಿ
ಉಸಿರುಕಟ್ಟಿವೆ   

 ಜೀವವೇ ಇಲ್ಲಿ  ಮೈಲಿಗಲ್ಲು
ಮೊದಲು ಕೊನೆಯಿಲ್ಲದ
ಹುಡುಕಾಟಕೆ.

ಅಂಕೆಗೆ ಸಿಗದ ಹೆಜ್ಜೆಗಳು
ಗುರುತನಿರಿಸಿ ಸರಿದಿವೆ
ಹೇಳಲು ಹೆಸರಿಲ್ಲ
ಶೃತಿ,ತಾಳ, ರಾಗ
ದ್ವೇಷಗಳ ಹಂಗಿಲ್ಲದ
ಹಾದಿ - ಬಯಲ ಕರೆದಿದೆ.

ಈಶ

Tuesday, January 13, 2015

ಜಾರಿದ ಹನಿ

 ಜಾರಿದ ಹನಿ

 ಖಾಸ ಕೋಣೆಯ 
ಇಂಚಿಂಚು ಆವರಿಸಿದ 
ಚಳಿಯ ಪ್ರಲಾಪವನು 
ಬೆಚ್ಚಿಸುವ ಹಾಗೆ 
ಎಲ್ಲೇ ಮೀರಿನಿಂತ 
ಮೋಹ !

ಕತ್ತಲ ಕಣ್ಣಲಿ 
ಉನ್ಮಾದದ ಕಾಮನಬಿಲ್ಲು 
ಸಂಗಾತಿಯ ಬಿಸಿಯುಸಿರಲಿ 
ಗರಿಗೆದರಿದ ದಾಹ 
ಬೆತ್ತಲಾದಷ್ಟು ಬಯಕೆ 
ಬೆವರ ಹನಿಯಾಗಿ 
ಮೈ ಜಾರಿದೆ.

ಸ್ಪರ್ಶದ ಪ್ರತಿ ಗೆರೆಯಲು 
ತನುವರಳಿ ಬೆಸೆಯುವ ತವಕ 
ತನ್ಮಯತೆಯ ಜೋಕಾಲಿ 
ಸುಖಿಸಿ ಸೋತ ಜೀವಗಳಲಿ 
ಬೆಳಕು ಹರಿಯಲು 
ಹಿಮದ ಮರೆಯ ಮುಂಜಾವು 
ಚಾದರದಡಿಯ ಆತ್ಮಗಳಿನ್ನೂ 
ನಿಗಿ ಕೆಂಡ !
      -ಈಶ