Tuesday, September 15, 2015

ಊರ ಓಣಿಯಲಿ..


ಊರ ಓಣಿಯಲಿ..

 ಮುಸ್ಸಂಜೆಯಲಿ
 ಜಿದ್ದಿಗೆ ಬಿದ್ದು
ಮಳೆ ಸುರಿಯಲು
ಊರ ಓಣಿಯ ತುಂಬಾ
ಕೆಂಪನೆ ರಂಗು
ಚುಕ್ಕಿ ಇಡದೇ
ರಂಗೋಲಿ ಹಾಕಿದೆ

 ಮುಂಜಾವಿನಲಿ
ಮೆಲ್ಲನೆ ನಡೆದ
ಓಣಿಯ ಆಕಳು
ಹಿಂದೆ ಚಿಗಿವ
ಆಕಳ ಕರುವಿನ
ಹೆಜ್ಜೆ ಗುರುತಿಗೆ
ಕೈಯೂರಿ ಕೂತ
ಅವ್ವನ ಸೆರಗ ಸ್ಪರ್ಶ

ಇರುಳಲಿ
ಊರ ತುಂಬಿದ
ಒರೆ ಕೋರೆಗಳ ದಾಟಿ
ಆಚೆಗಿನ ಬಯಲಲಿ
ಊರ ಕೆರೆಯ ಒಡಲ
ತುಂಬಿದ ನೀರಲಿ
ಬೀದಿಯ ಕಳೆಯೆಲ್ಲ
ಹೂಳಾಗಿ ತಳಸೇರಿದ
ಹೊತ್ತಿಗೆ ದಂಡೆಯಲಿ
ಸುಳಿದಾಡುತ್ತಿವೆ
ಬಾಯರಿದ ಒಡಲು..!
     -ಎಚ್. ಎನ್. ಈಶಕುಮಾರ್