Tuesday, July 26, 2016

ಆ ಹಾದಿಯಲಿ..

೨. ಆ ಹಾದಿಯಲಿ..

ಕೇಕೆಯ ಹಾಕಿ
ಧೂಳು ಎಬ್ಬಿಸಿವೆ
ಕಾಣುವ ದಾರಿಗಳೆಲ್ಲ
ಅದೇ ಹಳೆಯ ಊರ
ದಾರಿಯಲಿ ದಾರಿಹೋಕರ
ಹೆಜ್ಜೆಗಳು ಕೂಡಿ ತನ್ನವರ
ಹಾದಿಯ ಹುಡುಕುವ
ಕಿಂಚಿತ್ತು ಆಸೆಯೂ ಉಳಿದಿಲ್ಲ.

ಯೌವನದ ಇಳಿಕೆಯ ಕಾಲ
ಬೇಲಿಯ ಸಾಲು ಸಾಲು
ಬಳ್ಳಿಯ ಹೆಸರುಗಳು ಮರೆತು
ಬಣ್ಣಗಳ ಚಂದ ಕಳೆದಾಗ
ಮುಳ್ಳುಗಳು ಗೋಚರಿಸಲು
ಒಡಲ ಕಾಡುವ ಪರಿಮಳಕೆ
ಯಾರೋ ಇಟ್ಟ ಹೆಸರ ನೆನಪಿಲ್ಲ.

ಇರುಳ ನೀರವತೆಯಲಿ
ಕಾಡುವ ಬದುಕು
ಬೆಳಗಿನ ಬಯಲಲಿ
ಹೊಂಚು ಹಾಕುತ್ತಿದೆ
ನಿದ್ದೆಗೆ ಜಾರಲು!
             -ಎಚ್.ಎನ್.ಈಶಕುಮಾರ್

Monday, January 25, 2016

ಸಾವು-ಸ್ಪಂದನೆ-ಗೊಂದಲ.

ಸಾವು-ಸ್ಪಂದನೆ-ಗೊಂದಲ.
ಇಂದು ಕೆಲವರ ಸಾವಿಗೆ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ  ವ್ಯಕ್ತವಾಗುತ್ತಿರುವ ಪರ ವಿರೋಧಗಳ ಕೇಳಿ,ಓದಿ ತಿಳಿಯುವ ಹೊತ್ತಿಗೆ ಅದರ ಮೂಲ ವಿಷಯವೇ ಮರೆತು ಹೋಗಿ ವಿಚಿತ್ರ ಸಂದಿಗ್ಧತೆ ಎದುರಾಗುವುದು. ಇಲ್ಲಿ ಪ್ರತಿ ವಿಚಾರವು ಎಡ-ಬಲ,  ಹಿಂದುತ್ವ, ಮುಸ್ಲಿಂ,ಅಭಿವೃದ್ಧಿಪರ, ದಲಿತಪರ, ಪ್ರಗತಿಪರ, ಪ್ರಾದೇಶಿಕವಾದ, ರಾಷ್ಟ್ರೀಯತೆ ಹೀಗೆ ಇನ್ನೂ ಹಲವಾರು ಸಂಕೀರ್ಣತೆಗಳ ನಡುವೆ ನಮ್ಮ ಮಾನವೀಯ ಮೌಲ್ಯಗಳನು ಯಾವ ರೀತಿ ಸಮಷ್ಟಿಗೆ ನಿಲುಕುವಂತೆ ನಿರೂಪಿಸುವುದು ಎಂಬುದೇ ತಿಳಿಯದ ಅತಂತ್ರ ಪರಿಸ್ಥಿತಿ.
ಸಾಹಿತಿಯ ಸಾವಿನ ತನಿಖೆಯನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಕೆಲವು ಸಾಹಿತಿಗಳು, ಪತ್ರಕರ್ತರು, ಚಿಂತಕರು ತಮಗೆ ದೊರೆತ ಪ್ರಶಸ್ತಿಗಳನ್ನು ಹಿಂದುರುಗಿಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಒಂದು ಘಟನೆಗೆ ಸ್ಪಂಧಿಸುವ  ಮನಸುಗಳು ಆ ಘಟನೆಯ ತೀವ್ರತೆಯನ್ನು ಅರಿತು ತಮ್ಮ ಪ್ರತಿಕ್ರಿಯೆಯನ್ನು, ಪ್ರತಿಭಟನೆಯನ್ನು ನೀಡುತ್ತ ಬಂದಿರುವುದು ತೀರ ಸಹಜ ಮತ್ತು ಸಾಮನ್ಯ. ಅದು ಆ ವ್ಯಕ್ತಿಗಳು ಅಹಿತಕರ ಘಟನೆಯನ್ನು ವಿರೋಧಿಸುವ ಮೌಲ್ಯಯುತ ನಡೆ, ಅದು ಅವರ ಅಭಿವ್ಯಕ್ತಿ ಸ್ವಾತಂತ್ರವು ಕೂಡ.

ಸಾಹಿತಿಯ ಸಾವಿಗೆ ಸ್ಪಂದಿಸುವ ಬುದ್ದಿಜೀವಿಗಳು, ಚಿಂತಕರು, ರೈತನ ಸಾವಿಗಾಗಲಿ,ಒಬ್ಬ ನಿಷ್ಠ ಅಧಿಕಾರಿಯ ಸಾವಿಗಾಗಲಿ ಏಕೆ ಸ್ಪಂದಿಸುವುದಿಲ್ಲ ? ಎಂಬ ಪ್ರಶ್ನೆಗಳನ್ನು ಸಮಾನಾಂತರವಾಗಿ ನೋಡುವ ಇಂದಿನ ರೀತಿಯೇ ಅಸಂಮಜಸ. ಬಡತನದ ಮೂಸೆಯಲ್ಲಿ ಬೆಂದು ತನ್ನ ಅಸಹಜ ಸಾವನ್ನು ತಂದುಕೊಳ್ಳುವ ಸಾವಿಗೂ, ಕೊಲೆಗೇಡಿಗಳು ಪ್ರಾಣಭಯದಿಂದ ಅಚಾತುರ್ಯವಾಗಿ ಮಾಡುವ ಅನಾಹುತಕು ಸಂಭಂದ ಕಲ್ಪಿಸಿ ನೋಡುವುದೇ ನಮ್ಮೆಲ್ಲರ ನಡುವಿನ ವಿಪರ್ಯಾಸ.
ವೈಯಕ್ತಿಕವಾಗಿ ಹಾಗೂ ತತ್ವದ ವಿಷಯವಾಗಿ ಈ ಎಲ್ಲ ಸಾವಿಗೂ ಒಂದೇ ರೀತಿಯ ಅರ್ಥವಿದೆ.ಜೀವನವ ಕೊನೆಗಾಣಿಸುವ ಈ ಎಲ್ಲ ಸಾವುಗಳಿಗೂ ಮಾನವೀಯ ಮರುಕವಿದೆ, ಅವರ ಬಾಂಧವರ ನೋವಿನ ಅಳಲೂ ಮನವನು ಕಲಕುವಂತದ್ದೆ. ಇಂತಹ ಸಾವಿನಲ್ಲಿ ಜನಪರವಾದೂದು ಯಾವುದು,ಅಲ್ಲದ್ದು ಯಾವುದು ಎಂಬ ಪ್ರಶ್ನೆಯೇ ಅರ್ಥಹೀನ.
ಒಬ್ಬ ಸೂಕ್ಷ್ಮ ಮನಸಿನ ಸಾಹಿತಿಯು ಅಕ್ಷರದ ಮುಖೇನ ಜನರ ಜೀವನ ರೀತಿ, ಸಾಮಾಜಿಕ ಪ್ರಜ್ಞೆಯನು ರೂಪಿಸುವ,ಬೆಳೆಸುವ,  ಎಚ್ಚರಿಸುವ ಮೌಲ್ಯಯುತ ಪ್ರತಿಪಾದನೆಗಳಿಗೆ ನಾವು ಯಾವುದೇ ಮೂರ್ತ ರೂಪದ ನಿದರ್ಶನಗಳನು ನೀಡಲಾಗುವುದಿಲ್ಲ. ಸಾಹಿತಿ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಇತರರಂತೆ ಕರ್ತವ್ಯದ ಆದರ್ಶ ಪಾಲನೆಗಾಗಲಿ ಮತ್ತೆ ಇತರರನು ಮೆಚ್ಚಿಸಿ ಸೇವೆಯ ಹೆಸರಲ್ಲಿ ಪ್ರಶಸ್ತಿ ಗಿಟ್ಟಿಸುವ ಕಾರಣಕ್ಕಾಗಲಿ ನಿರ್ವಹಿಸಿರುವುದಿಲ್ಲ. ತನ್ನ ಅನುಭವದ ರಸವನ್ನು ಓದುಗರಿಗೆ ನೀಡುವ ಹಂಬಲ ಮಾತ್ರವಿರುವ ಯಾವುದೇ ಬರಹಗಾರನ ಉದ್ದೇಶವು ಸಮಷ್ಟಿಯ ವಿಕಸನವೇ ಹೊರತು, ಕೆಟ್ಟ ಬೆಳವಣಿಗೆಯ ಸಾಧನೆಯಲ್ಲ. ನಿರುಪದ್ರವಿಯಾಗಿ ಯಾವುದೇ ಲಾಭದ ಲವಲೇಶವು ಉಳ್ಳದೆ ತನ್ನ ಕೆಲಸವನ್ನು ಸಾಮಾಜಿಕ ಬೆಳವಣಿಗೆಗಾಗಿ ನಿರ್ವಹಿಸುವ ಬರಹಗಾರ ಎಂದಿಗೂ ಯಾವುದೇ ಸಮಾಜದ ಆದರ್ಶವಾಗಿಯೇ ಉಳಿಯುತ್ತಾನೆ.

ಒಬ್ಬ ರೈತನ ಸಾವಿಗೆ ಮೂಲ ಕಾರಣವಿರುವುದು ನಾವು ವ್ಯವಸ್ಥೆ ಎಂದು ನಂಬಿರುವ ಅವ್ಯವಸ್ಥೆಯಲಿ. ರೈತನ ಶ್ರಮಕ್ಕೆ ಅವನ ಬೆವರಿಗೆ ನಮ್ಮ ಸ್ವಾತಂತ್ರ ಸರ್ಕಾರಗಳು ಇಂದಿಗೂ ನ್ಯಾಯಯುತ ಬೆಲೆಯನು ಒದಗಿಸಲಾಗದ ರೈತ ವಿರೋಧಿ ಸರಕಾರಗಳು. ರೈತರ ಉದ್ದಾರವೇ ನಮ್ಮ ಆದ್ಯ ಕರ್ತವ್ಯವೆಂದು ಅಧಿಕಾರ ಏರಿರುವ ಸರಕಾರಗಳು ಇಲ್ಲಿವರೆಗೂ ಅವನಿಗೆ ಮಾಡಿರುವುದು ಬೆನ್ನಿಗೆ ಚೂರಿ ಹಾಕುವ ಮೀರ್ ಸಾಧಿಕನ ಕೆಲಸ. ರೈತನ ಬದುಕಿಗೆ ಆತ್ಮಸ್ಥೆರ್ಯ ತುಂಬದ ಒಣಗೇಡಿ ಸಮಾಜವೂ ಸಹ ಅವನ ಸಾವಿಗೆ ಕಾರಣವಾಗಿರುವಾಗ ಇಲ್ಲಿ ಎಲ್ಲರು ತಪ್ಪಿತಸ್ಥರೆ. ಆದರೆ ಯಾರು ಸಹ ತಮ್ಮ ತಪ್ಪಿನ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದ, ಅದನ್ನು ಒಪ್ಪಲು ಸಹ ಮನವಿಲ್ಲದ ರೋಗಿಷ್ಟರಿರುವ ಸಮಾಜದ ಜೀವಿಗಳು.
ಇಂತವರಿಂದ ತುಂಬಿರುವ ನಮ್ಮ ಇಂದಿನ ಸಮಾಜ ಎಂತಹ ತಿರುವಿನಲಿ ನಿಂತಿದೆ ಎಂಬುದೇ ಘಾಸಿಯಾಗುವ ವಿಷಯವಾಗಿದೆ. ಯಾರಿಗೂ ಯಾವ ಸೂಕ್ಷ್ಮತೆಯ ಬಗ್ಗೆಯೂ ಸಾವಧಾನವಾಗಲಿ, ಸಹಿಷ್ಣುತೆಯಾಗಲಿ ಇಲ್ಲವೇ ಇಲ್ಲ. ಜನರ ಕ್ರಿಯೆಗಳಿಗೆ ಪ್ರತಿಕ್ರಿಯೆಯೂ ಅವನು ಯಾವ ಜಾತಿ, ಧರ್ಮ, ಸಂಘ, ರಾಜಕೀಯ ಪಕ್ಷಗಳ ಬೆಂಬಲಿಗ ಎನ್ನುವುದರ ಮೇಲೆ ಅವಲಂಬಿತವಾಗಿದೆ.  ಮುಸ್ಲಿಂನಾಗಿದ್ದರೆ ಹಿಂದೂಗಳು ವಿರೋದಿಸಲೇಬೇಕು, ಆರ್ ಎಸ್ ಎಸ್ ನವರನ್ನು ಕಾಂಗ್ರೆಸ್ಸಿಗರು,ಪ್ರಗತಿಪರರು ವಿರೋಧಿಸಲೇ ಬೇಕು, ಕಾಂಗ್ರೆಸ್ಸಿಗರನ್ನು ಬಿಜೆಪಿಯವರು, ಸಂಘ ಪರಿವಾರದವರು ವಿರೋಧಿಸಲೇಬೇಕು, ಕೆಳವರ್ಗದವರನ್ನು ಮೇಲ್ಜಾತಿಯವರು ವಿರೋಧಿಸುವ "ವಿರೋಧಕ್ಕಾಗಿಯೇ ವಿರೋಧ ಎನ್ನುವ ನೀತಿ" ಇಂದಿನದಾಗಿದೆ. ಈ ಎಲ್ಲ ಹಾರಾಟ-ಚೀರಾಟಗಳ ನಡುವೆ ಮಾನವೀಯ ಮೌಲ್ಯಗಳು ಕೊಚ್ಚೆ ರಾಡಿಯಲಿ ಕೊಚ್ಚಿಹೋಗಿವೆ.  ನಾವು ಯಾವ ಸೂಕ್ಷ್ಮತೆಗಳನ್ನು ಅರಿಯಬೇಕು ಎಂಬುದೇ ಗೊಂದಲ.  ಆ ಅರಿವು ಮೂಡಿಸುವವರು ಯಾರು ಮೂಡಿಸುವವರಲ್ಲಿ ಯಾರನ್ನು ನಾವು ಅನುಕರಿಸಬೇಕು ಎಂಬುದೇ ತಿಳಿಯದ ತ್ರಿಶಂಕು ಸ್ಥಿತಿಯಲ್ಲಿದೆ ನಮ್ಮ ಸಮಾಜ. ಆ ಸೂಕ್ಷ್ಮತೆಯನ್ನು ಕಳೆದುಕೊಂಡು ಅಸಹಜ ಬೆಳವಣಿಗೆಯಲ್ಲಿ ಇತರರನ್ನು ಹಿಯಾಳಿಸುವ, ಅವಮಾನಿಸುವ,ಹಿಂಸಿಸುವ ದಾರಿಯಲಿ ಸಾಗಿದೆ ಪ್ರಜ್ಞೆ ಕಳೆದುಕೊಂಡ ಸಮಾಜ.

ತಾನಿರುವ ಪ್ರಕೃತಿಯಲಿ ಎಲ್ಲವು ಸಮ್ಮಿಳಿತವಾಗಿವೆ, ಸಮಾಜವು ಎಲ್ಲ ಸೂಕ್ಷ್ಮ ವರ್ಗಗಳನ್ನು ಒಳಗೊಂಡ ಸಮಗ್ರ ತಾಣ. ಇಲ್ಲಿ ಸಾತ್ವಿಕವಾದ ಎಲ್ಲ ಆಚಾರ ವಿಚಾರಗಳಿಗೂ, ನಡೆ ನುಡಿ, ಸಂಸ್ಕೃತಿ, ಸಂಸ್ಕಾರಗಳಿಗೂ ಅವಕಾಶವಿದೆ ಎಂಬ ಅಗಾಧವಾದ ಸಾಮಾನ್ಯ ಸತ್ಯವನ್ನು ಪ್ರತಿ ಜೀವಿಯು ತಿಳಿಯುವ ವರೆಗೂ ಇಲ್ಲಿಯ ಸಾಹಿತಿಯ, ಸಮಾಜ ಸೇವಕನ, ರೈತನ,ಅಧಿಕಾರಿಯ ಸಾವಿಗೆ ಹೀಗೆ ಯಾರ ಸಾವಿಗೆ ಆಗಲಿ ಮಾನವೀಯ ಸ್ಪಂದನೆಗಳು ದೊರೆಯುವುದೇ ದುಸ್ತರ.
 ಇಂತಹ ಸಂಧಿಗ್ಧತೆಯ ನಡುವೆ ಸಾಮಾಜಿಕ ಪ್ರಜ್ಞೆ, ನ್ಯಾಯ, ಸಮಾನತೆ ಎಂಬುದೆಲ್ಲ ಭ್ರಮೆಯೇ..?
                  - ಎಚ್.ಎನ್.ಈಶಕುಮಾರ್