Wednesday, September 23, 2009

ವೈಟಿಂಗ್...ವೈಟಿಂಗ್...BUT ವೈಟಿಂಗ್...


ಸ್ನೇಹಿತರೆ ಬದುಕಿನ ಪರ್ಯಟನೆಯಲಿ ಕಾಯುವ ಅನಿವಾರ್ಯ ಸಂಗತಿಯ ಕೆಲ ಸ್ವ ಅನುಭವಗಳು ನಮ್ಮ ಜೀವನದ ಅನಿಶ್ಚಿತತೆಯ ಅರಿವನು ನಮಗೆ ಮೂಡಿಸುತ್ತದೆ. ಅಂತಹ ಅರಿವಿನ ಸಂಗತಿಯನು ನಿಮಗಾಗಿ ಇಲ್ಲಿ ವಿಷದಪಡಿಸಿದ್ದೇನೆ:



ಅದೇಕೋ ಹಾಗೇ ಅನಿಸುತ್ತದೆ: ವಿಶಾಲವಾದ ಬಯಲಲಿ ತಂಗಾಳಿ ಸಾಗಿದ ಹಾಗೇ. ಬಯಲೋ ಖಾಲಿ ಖಾಲಿ ಯಾವ ಹೂವ ಮೈಸ್ಪರ್ಶವು ಆಗದು ತಂಗಾಳಿಗೆ ಎನುವಂತೆ. ಏನಾದರು ಬರೆಯಬೇಕು ಎಂದೆನಿಸಿದರು ಏನ ಬರೆಯಬೇಕು ಎಂಬುದೇ ತಿಳಿಯದ ಸ್ಥಿತಿ.ಯಾವ ಘನಗೋರ ಕಾರ್ಯವಾಗಲಿ, ಮಹತ್ಸಾಧನೆಯಾಗಲಿ ಆಗದೆ;ಮಟ್ಟಸವಾಗಿ ಹರಿವ ನದಿ ಯಾವ ಪ್ರವಾಹವ ತಾನೇ ಸೃಷ್ಟಿಸಿತು? ತನ್ನ ಹರಿವಿನ ಪರಿವೇ ಇರದ ಹಾಗೇ ಅಂತ್ಯದೆಡೆಗೆ ಸಾಗುತಲೇ ಹತ್ತಿರವಾಗುವುದು ತನ್ನ ಕಾಲದ ಅಂಚು.
ದಿನಕಳೆದಂತೆ ಏನೋ ಬೇಸರ, ಜೀವನದೀ ಯಾವ ಅಂಶವು ಕೈಗೂಡದೆ ವಯೋವೃದ್ದಿಯಾಗುತಿದೆಯಲ್ಲ ಎನುವ ಅಂಶ ಮನಸನು ಕಸಿವಿಸಿಗೊಳಿಸುತ್ತದೆ. ದಿನ ದಿನವೂ ಅದೇ ದಿನಚರಿ, ಬದಲಾವಣೆಯೇ ಇಲ್ಲವೇ? ಮನ್ವಂತರದ ಹಾದಿಯೆಲ್ಲ ಭ್ರಮೆಯೇ? ಯಾವ ಮಹಾಮಾಯೆಯು ಇಲ್ಲವಲ್ಲ ಈ ಏಕತಾನತೆಯನ್ನು ಅಳಿಸಿ ಚೈತ್ರದ ರಸಧಾರೆಯ ಚಿತ್ರ-ವಿಚಿತ್ರ ತಲ್ಲಣಗಳು ಆವರಿಸಿ ನಮ್ಮಲೇನೋ ಸ್ಥಿತ್ಯಂತರವಾಗಿ ಬದುಕೇ ವಿಸ್ಮಯ ಕೂಪವಾಗುವಂತೆ ಮಾಡುವ ಮಾಯೆ ...?
ಕಟುವಾಸ್ತವ ನಮ್ಮ ಮುಂದಿರುವುದು. ಕನಸು ಕಾಣುವುದು ನಿದ್ರೆಯಲಿ, ಎಚ್ಚರದಲಲ್ಲ ಎನುವ ಸಾಮನ್ಯ ಅಂಶವು ಮರೆತಂತಾಗಿದೆ. ಆ ಕನಸುಗಳಲಿಯು ಹೊಸದಿಲ್ಲ ಅವೇ ಪೇಲವವಾಗಿಹ ಕನಸುಗಳು. ಕ್ಷಣಕಾಲವೂ ಮನ ಉಲ್ಲಸಿತಗೊಳ್ಳುವುದಿಲ್ಲ ಅಂತಹ ರುಚಿಸದ ಸ್ವಪ್ನಗಳು. ಈ ಬದುಕೇ ನಿರರ್ಥಕ ಎನುವಂತಹ ಮನಸ್ಥಿತಿಯಲಿ ಕೆಲ ದಿನಗಳು ಕಾಲದೂಡುವಂತಾಯಿತು, ನನಗೆ ಸರ್ಕಾರಿ ಕೆಲಸದ ಆದೇಶಕ್ಕಾಗಿ ಕಾಯುತ, ಕಾಯುತ ಬದುಕೇ ವ್ಯರ್ಥ ಎನುವಂತಾಯಿತು ನಿಜಕ್ಕೂ.
ಈ ಸರ್ಕಾರಿ ಕೆಲಸದ ಆದೇಶ ಬರುತ್ತದಲ್ಲ ಎಂಬ 'ಗುಮ್ಮನನ್ನು' ಕಾಯುತ್ತ ಕುಳಿತು ಇಂದಿನ ಅಮೂಲ್ಯ ಕ್ಷಣಗಳೆಲ್ಲ ನಿರಾಧಾರವಾಗಿ ಗತ ಇತಿಹಾಸವಾದವು. "ಎಂಥ ಅನಿಶ್ಚಿತತೆ ಆವರಿಸಿತು?" ಆ ದಿನಗಳಲಿ ಕೆಲವೊಮ್ಮೆ ದಿನದ ಅರ್ಧ ಸಮಯವನು ಮನೆಯಲ್ಲೇ ಕುಳಿತು ಸವೆಸಬೇಕಾದ ಘಳಿಗೆಯಲಿ ಮನದಲಿ ಪುಟಿದೆದ್ದ ಪ್ರಶ್ನೆ ಇದು. ಉತ್ತರ ಕಾಣದೆ ಸುಮ್ಮನಾದೇನಾದರು ಏನೋ ತಳಮಳ, ಸುಮ್ಮನಿರಲಾರದ ತುಮುಲ.
ನಮ್ಮ ವ್ಯವಸ್ಥೆಯೇ ನಮ್ಮನ್ನು ಜಡ್ಡು ಹಿಡಿಸಿ ಸೋಮಾರಿಗಳನ್ನಾಗಿ ಮಾಡಿಬಿಡುತ್ತದೆಯಾ? ಆ ಸಮಯದಲಿ ಹೌದೆನಿಸಿತು ನನಗೆ. ಕೆಲಸಕ್ಕೆ ಅರ್ಜಿ ಹಾಕಿ, ಸಂದರ್ಶನದ ಮಹಾಸಮರವನು ಎದುರಿಸಿ, ಆಯ್ಕೆಯಾದ ಸಂತಸವೆಲ್ಲ ಅಡಗಿ, ವರುಷಾನುಗಟ್ಟಲೆ, ನಿರುದ್ಯೋಗಿಯ ಬೇಸರ, ಯಾತನೆ, ಒಂಟಿತನವನು ದೂಡುವಂತಹ ಕೂಪದಲಿ ಕೆಲಕಾಲ ಬಳಲುವಂತೆ ವಿರಮಿಸಲು ಕಾರಣರಾರು? ಸ್ವತಃ ನಾನೆಯೇ? ಅಥವಾ ನಮ್ಮ ಸರ್ಕಾರಗಳ ಆಳು ವ್ಯವಸ್ಥ್ತೆಯೇ? ಸರಿಯಾದ ಸಮಯಕೆ ಆದೇಶ ಕೊಟ್ಟಿದ್ದರೆ ಈಗೆಲ್ಲ ಆಗುತಿತ್ತ ಎನುಸುತ್ತದೆಯಾದರೂ ಈ ವಯಸಿನಲ್ಲಿಯೇ ಏಕತಾನತೆಯನು ಅನುಭವಿಸುವಂತಹ ಪರಿಸ್ಥಿತಿ ಸೃಷ್ಟಿಸಿಕೊಂಡಿದ್ದಕ್ಕೆ ನನ್ನ ಬಗ್ಗೆಯೇ ಬೇಸರವಾಗುವುದು ಅಷ್ಟೆ ಸ್ಪಷ್ಟ.

'Waiting For Godot' ಎಂಬ ಅಸ್ತಂಗತ ನಾಟಕದಲಿ ಇಬ್ಬರು ಪಾತ್ರಧಾರಿಗಳು ತಮಗೆ ಯಾರೆಂಬುದೇ ತಿಳಿಯದ, ಅವರಿಗೆ ಪರಿಚಯವೇ ಇಲ್ಲದ Godot ಎಂಬ ವ್ಯಕ್ತಿ ಬರುತ್ತಾನೆ ಎಂದು ದಾರಿಬದಿಯ ಒಣ ಮರದಡಿಯಲಿ ಕಾಯುತ್ತಲೇ ಕೂಡುತ್ತಾರೆ. ಯಾವಗ ಬರುತ್ತಾನೆ Godot? ಗೊತ್ತಿಲ್ಲ, ನಾಳೆ ಬರುತ್ತಾನೆಯೇ; ನಾಳೆಯೇ ಅದು ಗೊತ್ತಿಲ್ಲ, ಹೋಗಲಿ ನಾಳಿದ್ದು, ನಾಳಿದ್ದು ಬಂದರು ಬರಬಹುದು, ಸರಿಯಾಗಿ ಗೊತ್ತಿಲ್ಲ. ಕೊನೆ ಪಕ್ಷ ಎಂದಾದರೂ ಬರುತ್ತಾನ ಅದು ಗೊತ್ತಿಲ್ಲ. ಮತ್ತೆ ಕಾಯುತ್ತಿರುವುದೇಕೆ ಅವನು ಬರುತ್ತಾನೆಂದು? 'ಅದು ಗೊತ್ತಿಲ್ಲ' . ಆದರೂ ನಾವು ಕಾಯಲೇ ಬೇಕೆಂಬ ಉತ್ತರ ಕೇಳಿ ಬರುತ್ತದೆ ಒಬ್ಬ ಪಾತ್ರಧಾರಿಯಿಂದ. Godot ಎಂತವ, ಯಾಗಿದ್ದಾನೆ, ಏನಾಗಿದ್ದಾನೆ ಏನೊಂದೂ ತಿಳಿಯದು ಅವನ ಬಗ್ಗೆ, ಆದರೂ ಅವನಿಗಾಗಿ ಕಾಯಲೇ ಬೇಕಾದ ಸಂಧಿಗ್ದತೆಯಲ್ಲಿ ಅವರಿರುತ್ತಾರೆ. ನಮ್ಮ ಜೀವನದ ಕಟು ವಾಸ್ತವವನು ಮೂದಲಿಸುತ ಅದರ ಗಮ್ಯತೆಯನು ಹಿಡಿದಿಡುವ ನಾಟಕಕಾರ SAMUEL BEKKET ನ ಕಲಾವಂತಿಕೆ ಅದ್ಭುತವಾದುದು. ಆಧುನಿಕ ಯುಗದಲಿನ ಮಾನವನ ಅಸಹಾಯಕ ಸ್ಥಿತಿಯನು ಯತಾವತ್ತಾಗಿ ಬಿಂಬಿಸುವ ನಾಟಕವದು. ಆ ಪಾತ್ರಧಾರಿಗಳ ಮಾತುಗಳು ನಮ್ಮ ಜೀವನದ ಎಳೆ ಎಳೆಯನು ಬಿಚ್ಚಿಡುತ್ತಿದ್ದಾರೆ ಎನಿಸುವಷ್ಟು ಹತ್ತಿರವಾಗಿದೆ ನಾಟಕದ ನಿರೂಪಣೆ. ನಮ್ಮ ಬದುಕಿನ ಅಣಕವೆಂದರೂ ತಪ್ಪಿಲ್ಲ.
ಜೀವನದಲಿ ಯಾವುದಕ್ಕಾಗಿಯೋ, ಯಾರಿಗಾಗಿಯೋ, ಏತಕ್ಕೋ, ಉದ್ದೇಶ ಪೂರ್ವಕವಾಗಿಯೋ, ಕಾರಣಾರ್ಥವೋ, ವಿನಾಕಾರಣವೋ, ಕಾಯಬೇಕಾದ ಪರಿಸ್ಥಿತಿಯಲ್ಲಿಯೇ ನಾವೆಲ್ಲಾ ಕಾಲ ದೂಡುತಿದ್ದೆವಲ್ಲ. ನೌಕರನೊಬ್ಬ ಪ್ರತಿದಿನ ಕಾಯುವ ಬಸ್ಸಿರಬಹುದು, ವಿದ್ಯಾರ್ಥಿಯೊಬ್ಬ ವರುಷ ವರುಷವು ಕಾಯುವ ಫಲಿತಾಂಶವಿರಬಹುದು, ಪ್ರೇಮಿಯೊಬ್ಬ ಇನಿಯಳ ಒಪ್ಪಿಗೆಗಾಗಿ ಕಾಯುವ ವಿರಹವಿರಬಹುದು, ಅಧಿಕಾರಕ್ಕಾಗಿ ಕಾಯುವ ನಾಯಕನಿರಬಹುದು, ನಮ್ಮ ಜೀವನದ ದಿಶೆಯನೆ ಬದಲಾಯಿಸುವ ಯಾವುದೋ ಒಂದು ಬದಲಾವಣೆಗಾಗಿ ಬದುಕಿನುದ್ದಕ್ಕೂ ಕಾಯುತ್ತಲೇ ಸಾಗುವ, ಸರಮಾಲೆಗಳ ನಡುವೆ ನಲುಗಿ-ನಲುಗಿ ಯಾವುದೋ ಸಮಯದಲಿ ಅರಿವಿರದೆ ಅಂತ್ಯವನ್ನು ಕಾಣುವುದೇ "ಜೀವನವ?" ಎಂಬ ಮಾಹನ್ ತಲೆ ಕೊರಕ ಅಂಶ ಕಾಯುವಿಕೆಯ ದಿನಗಳಲಿ ನನ್ನ ಕಾಡಿದಂತು ನನ್ನಷ್ಟೇ ಸತ್ಯ.
ಎತ್ತಲಿಂದೆತ್ತ ಯೋಚಿಸಿದರು ಈ ಯಾತನೆಗಳ ಸರಮಾಲೆಯೇ ಜೀವನವ? ಅಲ್ಲವ? ಎಂಬುದು ತಿಳಿಯದಾಗಿದೆ. ಆದರೂ ಒಂದು ಅಂಶವಂತೂ ಈ ಹಿಂದಿನ ಕೆಲ ದಿನಗಳ ಅನುಭವದೊಂದಿಗೆ ನಾನು ಕಂಡುಕೊಂಡ ಸತ್ಯ ಸಂಗತಿ ಎಂದರೆ, ಕಾಯದೆ ಬೇರೆ ದಾರಿಯೇ ಇಲ್ಲ.. ಬದುಕಿನಲಿ ಕೆಲವು ಸಂಕಿರ್ಣತೆಗಳಿಂದ ತಪ್ಪಿಸಿಕೊಳ್ಳಲು ಬೇರೆ ಇನ್ನಾವ ರಹದಾರಿಯಾಗಲಿ, ಕಳ್ಳದಾರಿಯಾಗಲಿ ಇಲ್ಲವೇ ಇಲ್ಲ ನುಸುಳಿಕೊಂಡು ಓಡಿಹೋಗಿ ಆ ಯಾತನೆಯಿಂದ ಪರಾದೇ ಎಂದು ಬೀಗಲು. ನಾವೆಲ್ಲ ಅಷ್ಟು ದುರ್ಬಲರು ನಿಜ ಜೀವನದಲಿ...ನಿಜವೇ? ಯೋಚಿಸಿ ಹೇಳಿ..ನೀವುಗಳೇ ಸ್ನೇಹಿತರೆ.



7 comments:

ಜಲನಯನ said...

ಈಶ್, ನಮ್ಮ ನಿರೀಕ್ಷೆಗಳು ನಮ್ಮ ಅನುಭವಗಳು ಮತ್ತು ವಾಸ್ತವವಾಗಿ ನಡೆವುದು...ಎಲ್ಲವನ್ನೂ ವಿಶ್ಲೇಷಿಸಿದರೆ...ನಾವು ನಿಜಕ್ಕೂ ಎಷ್ಟು ಅಸಹಾಯಕರು ವಿಧಿಯೆಂಬುದರ ಮುಂದೆ ಎನಿಸುತ್ತದೆ. ನನಗೆ ವೈ.ಎಸ್.ಆರ್ ದುರ್ಮರಣ ಇತ್ತೀಚಿನ ಜ್ವಲಂತ ಉದಾಹರಣೆಯಾಗಿ ಸಿಗುತ್ತದೆ...ನಿಮ್ಮ ಈ ನಾಟಕದ ಉಲ್ಲೇಖ ಇದೇ ದಿಶೆಯಲ್ಲಿ ಸಾಗುವ ಯೋಚನಾ ಲಹರಿಯನ್ನು ಬಿಂಬಿಸಬಹುದು.
ನಿಮ್ಮ ವಿಚಾರಗಳ ಮಂಥನ ಸೊಗಸಾಗಿದೆ ಮತ್ತು ಅದನ್ನು ಈ ನಾಟಕದ ಪರಿಚಯದ ಮೂಲಕ ಹೊರಹಾಕಿದ್ದೀರಿ...ಅಂದಹಾಗೆ ನಿಮಗೆ ನಾಟಕಗಳ ಬಗ್ಗೆ ವಿಶೇಷ ಆಸಕ್ತಿಯಿರುವಂತೆ ಕಾಣುತ್ತೆ...

ಸೀತಾರಾಮ. ಕೆ. / SITARAM.K said...

ಕಾಯುವಿಕೆಯ ಕ್ಷಣಗಳ ತಳಮಳ, ವ್ಯರ್ಥಸಮಯ ಸೋರಿಕೆಯ ಬೇಗುದಿಯೊಡನೆ ಕಾಯುವಿಕೆಯ ಅನಿವಾರ್ಯತೆಯನ್ನು - ಮನೋಜ್ಞವಾಗಿ ವಿವರಿಸುತ್ತಾ, ವ್ಯವಸ್ಥೆ ಮತ್ತು ನಮ್ಮ ಹತಾಶ ನೀರೀಕ್ಷೆಗಳ ಮನೋಭಾವದ ಸಾಣೆ ಹಿಡಿಯುವ ತಮ್ಮ ಲೇಖನ ಸು೦ದರವಾಗಿ ಹೊರಹೊಮ್ಮಿದೆ.

Babitha Kumbar said...

the write up is too perfect for a youth in the nation. even i am fed up of this waiting...........ondara hinde innoundu waiting...........we really dont know what are we waiting for antha...........aadruuuuu we wait..........but where do we end up....sadya kadidhu sartha adre we are safe, but on the other hand we it happens like Vladimir or the other, who wont meet GODOT till the end, then we are gone. uake gotta...........navu kaytha irodu anno bharavasea mele navu iruttivi, adu sikkala andre aago frusatration saviginthu heart wetting.......to kill oneself antharala aa thara, one tara homicide, Michaeal Jacksona tara.......even i am waiting for The D Day of my life.............dont know how long does it goesss................anyways super agidhe nimma article...........:):):)

udaya said...

ನೀರಿಕ್ಷೆಯಲ್ಲೇ ಜೀವನ ಮುಗಿಸುತ್ತೇವೆ.. ಓದುವಾಗ ಕೆಲಸದ ನೀರಿಕ್ಷೆ... ಕೆಲಸ ಸಿಕ್ಕ ಮೇಲೆ ಜೀವನದಲ್ಲಿ ಮುಂದೆ ಎತ್ತರಕ್ಕೆ ಹೊಗೊಬೇಕು ಎನ್ನುವ ನೀರಿಕ್ಷೆ..
ಎಲ್ಲೋ ಒಂದು ಕಡೆ ನಾವು ನೆಲೆಕಂಡುಕೊಳ್ಳಲು.. ಜೀವನವನ್ನ ನೀರಿಕ್ಷೆಯಲ್ಲೇ ಕಳೆಯುತ್ತೇವೆ. ಸಿಕ್ಕಿದರೆ ಸಂತೋಷ ಸಿಗದೇ ಇದ್ದಾಗ ದುಗುಡ...

ಚರಿತಾ said...

ನಿರೀಕ್ಷೆ ಮತ್ತು ಭೀತಿ ನಮ್ಮಲ್ಲಿ ಹುಟ್ಟಿಸುವ ಕಂಪನ ವಿಚಿತ್ರವಾದದ್ದು.ತಳಮಳ ಮತ್ತು ಹತಾಶೆಯನ್ನು ಹತ್ತಿಕ್ಕಿ ಸಾಂತ್ವನದ ಹಾದಿ ಹುಡುಕುತ್ತ ಎಷ್ಟೆಲ್ಲ ಕಾಲುದಾರಿ ಸವೆಸಿ,ಮಾತು ಪೋಣಿಸಿ,ರಾಗ ಕಟ್ಟಿ,..ಜೀವಿಸಿಬಿಟ್ಟಿರುತ್ತೇವೆ..!!
ಬಹುಶಃ ಈ ನಿರೀಕ್ಷೆ ಮತ್ತು ನಂಬಿಕೆಯೇ ನಮ್ಮ ಜೀವನದ ಹಾಡು ಎನಿಸುತ್ತದೆ.ಆ ಹಾಡಿಗೆ ರಾಗ ಹೂಡುವುದು ಮಾತ್ರ ಅವರವರ ಭಕ್ತಿ-ಭಾವಕ್ಕೆ ಬಿಟ್ಟದ್ದು.

Madhu H R said...

Fantabulous writing Esha Keep going.

Savitha P R said...

niriksheya haadiyali niraashe manasugala mele biruva parinamada ondu nija anavarana ninna ee lekhana. Thumba sogasagide matte aste besara mudutte ninu saha nammanteye obba sahayaatri adeyalla e sarkari chakariya hudukaatadalli endu....