
ನನ್ನ ನಿನ್ನ ಏಕಾಂತದ ಕ್ಷಣಗಳ
ಕುರುಹು, ಕಣ್ಣ ಮುಂದಿಂದು ನಲಿದಾಡುತಿರಲು
ಮನದಲಿ ಹೂತಿದ್ದ ಯಾವುದೋ ದುಗುಡ
ಮರೆಯಾದ ನಿರಾಳ. ನನ್ನ ನಿನ್ನಲ್ಲಿ
ಭಾವ-ಭಾವಗಳು ಮಿಂದು, ಉಸಿರು
ಬೆರೆತ ಪ್ರೇಮಾಂಕುರದ ಕೂಸೇನು ಅಲ್ಲ
ನನ್ನ ಕಂದ! ಬದುಕಿನ ನಿಷ್ಕರುಣ
ವಾಸ್ತವಕೆ ಸಾಕ್ಷಿ ನನ್ನ ಕಂದ!
ಜೀವದ ಹುಟ್ಟು 'ಕ್ರಿಯೆ'. ಕ್ರಿಯೆಗೂ
ಭಾವಕೂ ಸಂಬಂಧವೀಹಿನ ಪ್ರತಿರೂಪ
ನನ್ನ ಕಂದ!
ನೀರವ ಕತ್ತಲ ಕೋಣೆಯಲಿ ಹರವಿದ
ಹಾಸಿಗೆ

ಬೆವೆತು, ನಾಳೆಗಳ ಮರೆತು ದಾಹವ
ಇಂಗಿಸುತಲೇ, ಬಂಜೆಯ ಬಯಲಲಿ
ಬಿತ್ತಿದೊಂದು ಬೀಜವ ಪೊರೆದ ತಾಯ ಗರ್ಭ
ನೋವ ನುಂಗಿ ಪೋಷಿಸಲೇ ಅವಳ
ಸಹಜ ಪ್ರಕೃತಿ, ನೀ ಅವಳ ಕಣ್ಣಲ್ಲಿ ಮಗುವಾಗೆ,
ಎದೆಹಾಲ ಬಸಿದೆಳೆದ ಬಾಯಲಿ
ನೀ ಒಮ್ಮೊಮ್ಮೆಯು ಅಮ್ಮ ಎನಲು
ಮರೆತಳವಳು ನಿನಗಾಗಿ ಕತ್ತಲ ಕೋಣೆಯಲಿ
ತಾನುಂಡ ನೋವುಗಳ!