ಸಂಜೆಯ ಕೆಂಧೂಳಿಯಲಿ.
ನನ್ನ ನೀ ಕರೆದರೂ
ಕಾಯುವೆ ಇನ್ನಾರಿಗೋ
ಬೇಡಿ ಬಂದರೂ ನಿನ್ನ ಬಳಿ
ಹರಸುವೆ ಸಾಂಗತ್ಯದ ಸವಿ
ನಿನ್ನ ತನವಳಿದ ಅವಳ ಬದುಕಲಿ.
ಎಂದೋ ನನ್ನ-ನಿನ್ನ ಸೇರಿಸಿ
ಆಟವಾಡಿಸುತ್ತಿದೆ ವಿಧಿಯೂ
ಯಾರು-ಯಾರ ವಂಚಿಸಿ
ವಿರಮಿಸುವರು,
ದಾರಿ ಬದಿಯ ಹೆಜ್ಜೆಗುರುತು.
ಆಕಾರವಿಹ ನಶ್ವರ ಬದುಕು
ಎಂದೋ ಬಂದು,ಇಂದು ಸಾಗಿ
ಮುಂದೆ ಮರೆತು ಹೋಗುವ
ನಾವು-ನೀವು ಋಣಿಗಳು
ನಿಮ್ಮೆದೆಯಲಿ ನಮ್ಮೆಡೆಗೆ
ಪುಟಿವ ಬೆಚ್ಚಗಿನ ಪ್ರೀತಿಯ
ಅಮೂರ್ತ ಭಾವಕೆ...
ಭಾವ ಭಾವದೊಲುಮೆಯ
ಸವಿಯನೊಮ್ಮೆ ತಾ ಸವಿದು
ತನ್ನವರಿಗೆ ಹಂಚುತಿರಲು
ಒಲುಮೆ ಉಯ್ಯಾಲೆಯ
ಸಂಭ್ರಮದ ಜೀಕಾಟ ಬದುಕಲಿ,
ಎಲ್ಲರೆದೆಯಲು ರಂಗು ರಂಗಿನ
ರಂಗವಲ್ಲಿ ಸಂಜೆಯ ಕೆಂಧೂಳಿಯಲಿ.