
ಬರೆದ ಅಕ್ಷರಗಳೆಲ್ಲ
ಬದುಕ ಕಾವ್ಯವಾಗಲೆಂಬ
ಭ್ರಮೆ, ಜೀವಂತವಾಗಿರಿಸಿದೆ
ಅಕ್ಷರಗಳ ಮೇಲಿನ
ನನ್ನ ಪ್ರೀತಿಯ.
**************************
ನಾ ಸೆಳೆದು ಬಿಡುವ
ಸಿಗರೇಟಿನ ಧೂಮದಂತೆ
ದೂರಾದೆ ನನ್ನ ಅಗಲಿ
ಕಾಡುತ್ತಿರುವೆ ಶ್ವಾಸದಲಿ
ಅಳಿದುಳಿದು ಕ್ಯಾನ್ಸರ್ ನಂತೆ
ಮಾಸದ ನೆನಪಾಗಿ...*****************************
ಆ ನಿನ್ನ ಹುಸಿ ನಗೆ
ನೋಟ,ಮಾತು,ಮೌನ
ಕೊಂಕು ಕಾರಣಗಳಿಗಾದರೂ
ನಾ ಬದುಕಬೇಕು
ಉಸಿರ ಬಿಗಿ ಹಿಡಿದು
ನೂರುಕಾಲ
ಪ್ರೀತಿಯ ನೆಪವಾಗಿ!*********************************

'ಆತ್ಮ'ಹತವಾಗಿ..ಹುಟ್ಟುತ್ತೆನೆಂದು ಎಣಿಸಿರಲಿಲ್ಲ
ಜೀವನವೇ 'ವಿಪರ್ಯಾಸ'
ಸೋಲಿನಲಿ ಗೆಲವು,ಗೆಲುವಿನಲಿ
ಸೋಲುಗಳ ಸರಮಾಲೆಯ
ಗೊಜಲಿನ ಎಳೆ ಎಳೆಯನು ಬಿಡಿಸುತ್ತ
ಅರಿವಿರದೆ ಸಾಗುವ ಬದುಕ
ಅರಿವ ಭ್ರಮೆಯ ಓಟವೇ ಕೊನೆತನಕ.
ಬದುಕಿಗೊಂದು ಅಂತ್ಯ 'ಸಾವು'
ದಿನ ದಿನವೂ ನಮ್ಮೊಳಗೇ ಉಸಿರುಕಟ್ಟಿ
ಸಾಯುತಿಹ ಕನಸ ಭ್ರೂಣಗಳೇ
ಕೇಕೆಯ ಹಾಕುತಿಹವು
ಬದುಕಲಾರದ ಬದುಕಿನ
ಕ್ರೂರ ಬರ್ಭರತೆಯ ಕಮಟು
ಪ್ರತಿ ಗರ್ಭಕೂ ತಾಕಿ ನಿಸ್ತೇಜ
ಜೀವಕೆ ಬದುಕಿನ ನಶ್ವರತೆಯ
ತಿಳಿಹಾಲ ಬಡಿಸುತಿಹವು.
ಎದೆಹಾಲ ಸವಿಯ ಸವಿವ ಮುನ್ನವೇ
ಭ್ರೂಣಗಳ 'ಆತ್ಮ'ಹತವಾಗಿ,ಜೀವ
ಜೀವಮಂಡಲದ ಹೊಸ್ತಿಲಲಿ
ಹಸಿಯ ಹುಸಿನಗೆಯಲಿ
ಹತಾಶೆಯ ಕಣ್ಣ ಅರಳಿಸುತಿಹವು..
ಎಚ್.ಎನ್.ಈಶಕುಮಾರ್