Sunday, January 23, 2011

ನೀಲು ಕಾವ್ಯ

ಲಂಕೇಶರ ನೀಲುವಿನ ಸರಳ ಸುಂದರ ಕವನಗಳು ಓದಿದಾಗೆಲ್ಲ ಮನವ ತಣಿಸುವವು...






ಅವಳ ಆಕರ್ಷಕ ಯೌವ್ವನ
ತಾಯಿಯಲ್ಲಿ ಆತಂಕ
ಅಜ್ಜಿಯಲ್ಲಿ ನಿಟ್ಟುಸಿರು
ಮತ್ತು ಇಡೀ ಕೇರಿಯಲ್ಲಿ
ಉಲ್ಲಾಸ ಮೂಡಿಸಿತು
```````````````````````````````
ನನ್ನ ಚೆಲುವನೊಂದಿಗೆ
ನೋಡಿದ ತಾವರೆಕೆರೆ
ಈಗ ಒಬ್ಬಳೇ ನೋಡುವಾಗ
ನೀರು ತುಂಬಿದ ಕಣ್ಣಿನಂತೆ
ಕಾಣುವುದು.
~~~~~~~~~~~~~~~~~~~
ಗಂಡಿನ ಖಡ್ಗ, ಬಂದೂಕು
ಬಾಂಬ್ ಗಳೆಲ್ಲ
ನನ್ನೆದುರು ತಣ್ಣಗಾಗಿ
ಹಬ್ಬ ಆಚರಿಸುವುವು.
``````````````````````````````
ಚೆನ್ನಮಲ್ಲಿಕಾರ್ಜುನನನ್ನು
ಕುರಿತು ಹಾಡಿದ ಅಕ್ಕನ
ಹಾಡಿನ ಮುಂದೆ
ನನ್ನ ಕವನಗಳೆಲ್ಲ
ಮಿಣುಕು ಹುಳುಗಳು ಮಾತ್ರ.

Saturday, January 1, 2011

ಚರಿತ್ರೆಯ ಪ್ರತಿ ಪುಟವು...













ಮೂರಾಬಟ್ಟೆಯಾದ ಜೀವನದಲ್ಲಿ
ತೆವಲುಗಳಿಗೇನು ಕಡಿಮೆ
ನಾ ಸುಮ್ಮನೆ ಹರಿಬಿಟ್ಟು
ಮನದ ಹುಚ್ಚು ಹೊಳೆಯ
ದಂಡೆಯಲಿ ಮೈ ಹರವಿ
ಕುಳಿತ ಗಳಿಗೆಯಲಿ
ಹಿಗ್ಗಿನಲಿ ತೆವಳುತ ಬಂದ
ಪುಟ್ಟ ಅಲೆಯ ಲಲನೆ
ಅಣಕಿಸಿ ಕರೆಯಿತು ಬಾ!

ಚರಿತ್ರೆಯ ಪಾಪವನೆಲ್ಲ
ಒಡಲಲಿ ತುಂಬಿ ತುಳುಕುತಿಹುದು
ನನ್ನ ತಾಯಿ ಸಾಗರ
ನಿನ್ನ ಚರಿತ್ರ ಹೀನ
ಚರಿತೆಯನೆಲ್ಲ ಒಮ್ಮೆಗೆ
ತೊಳೆದು, ಬಿಡುವುದು
ನಿನ್ನ ಮತ್ತೆ ಈ ಜಗಕೆ!

ಯಾರಿಗೆ ಬೇಕು ಹೇಳು
ನಿನ್ನ ಚರಿತ್ರೆ
ಪ್ರತಿ ಪುಟವು ಕಳಂಕಿತ
ರಾಜನಾರೋ ತನ್ನ ಅಂತಪುರದ
ಕತ್ತಲಲಿ ತೆಕ್ಕೆಗೆ ಬಿದ್ದ
ದಾಸಿಯ ಒಡಲಾಳದಲಿ ಇಳಿಸಿದ
ಕಾಮ ತೃಷೆಯ ಪಾಪ
ಗರ್ಭ ಕಟ್ಟಿದಂತೆ
ಉಳಿದು ಬಿಡಲಿ ಆ ಸಾಗರದಲಿ
ನಿನ್ನ ಚರಿತೆಯು!
ಸಾಗರನ ಅಲೆ ನಲಿವಿನ
ಒಲವಿನ ಸೂಚಕವು
ಯಾರು ಬಲ್ಲರು
ಒಡಲಾಳದ ಬೇನೆಯ
ಚರಿತ್ರೆಯ ಪುಟಗಳಲಿ
ಪೊಣಿಸಿದ ಅಕ್ಷರಗಳಲೇನುಂಟು
ನಿಜ ಜೀವನದ ಸಾವೇ-ನೋವೆ?

ಬಾ ಬಟ್ಟೆ ಕಳಚಿದೆಯಷ್ಟೇ
ಸಾಗಲಿ ಬದುಕು ಮತ್ತೇನೂ ಇಲ್ಲ.