Tuesday, December 9, 2014

ಅರೆ ಜೀವ!!

ಅರೆ ಜೀವ!!

ಮಾಗಿಯಾ ಶೀತಕೆ
ಮೈಒಡ್ಡಿದ ಭುವಿ
ಬರಿದಾಗುತ್ತಿರುವ  ತುಂಬಿದ
ಒಡಲ ರಾಶಿ ರಾಶಿ ಚೆಲುವು
ನೆರಳ ಆಶ್ರಯಿಸಿ ಒರಗಿದ
ಜೀವಕೆ ಬಾಯಾರಿಕೆಯ ಕಸಿವಿಸಿ
ಸಾಗಿಬಂದ ದಾರಿಯಲಿ
ಉಳಿದಿಹ ಅರೆಬರೆ
ಹೆಜ್ಜೆ ಗುರುತು
ಹಿನ್ನೋಟಕೆ ಅಂಕೆ ಮೀರುವ
ಹಂಗಿಲ್ಲ
ಮಂಜು ಮುಸುಕಿದೆ
ನಿತ್ಯದ ಜಗದ ಹಾದಿಗೆ...
ವಸಂತಕೆ ಇನ್ನು ಅರೆ ಜೀವ!!
         

Friday, October 31, 2014

ಮರೆತು ಎಲ್ಲವನು...


ಮರೆತು ಎಲ್ಲವನು...

ಸಾಲು ಸಾವಿರ ಮರದ
ತಂಗಾಳಿ ತಂಪಾಗಿ ನಿನ್ನ
ಸೊಬಗಿಗೆ ಸೋತು ಸುಳಿದಾಡಲು
ನಿನ್ನದೊಂದು ಕೊಂಕು ನೋಟಕೆ
ನಲಿದಾಡಿವೆ ಶರತ್ಕಾಲಕೆ
ಹಸಿರಾಗಿ ಮೈದುಂಬಿಹ
ರಾಶಿ ರಾಶಿ ಎಲೆಗಳು.

ಎಲ್ಲವನು ಮರೆತ ಹಾಗೆ
ಕ್ಷಣದಲಿ ಎಲ್ಲವು ಬದಲಾಗಿ
ಮೈದುಂಬಿಹ ಹೊಳೆಯ ರಭಸಕೆ
ಸಿಕ್ಕ ಎಲ್ಲೊ ಉದುರಿದ ಎಲೆಯೂ
ಮೇಲೇರುವ ಪ್ರತಿ ಅಲೆಯಲು
ಪುಳಕಗೊಂಡು ತನ್ನಿರುವ ಮರೆಯಲು
ಚಲನೆಯೊಂದೆ ಜೀವಂತ ತಾನಿರುವಲ್ಲೇ!

ತಡಕಾಡುತ ಹುಡುಕಾಡುವ ಬದುಕು
ನಿಟ್ಟುಸಿರಿಡುವ ಹೊತ್ತಿಗೆ
ಅರಿವಿರದೆ ಕೂಡುವ ನಂಟಿಗೆ
ಯಾವ ಬಂಧದ ಹೆಸರೋ
ಎಲ್ಲದಕು ಕಾರಣವ ತಿಳಿದು ತಿಳಿದು
ನಿರುತ್ತರವಾಗಿಹ ಜೀವಗಳೇ ಇಲ್ಲಿ
ಉಸಿರಾಡುತಿವೆ ಮರೆತು ಎಲ್ಲವನು...


Friday, September 19, 2014

ಮಳೆ ನಿಲ್ಲುವ ಸೂಚನೆಯಿಲ್ಲ...


" ನಿನ್ನ ಕುಂಚಕೆ
 ಮಾತ್ರ ಸಿಗುವ
ಕಾಮನಬಿಲ್ಲು ನಾ.."
&&&&&&&&&&&&&

ನಿನ್ನ ನೆನೆದು
ಕಾಲ ಕಳೆಯುತ ಕೂತೆ
ಹೂ ಅರಳಿ ನಿಂತಿತು
ಹುಸಿ ನಗೆಯ ಸುವಾಸನೆ
ಎಲ್ಲೆಯ ಮೀರಿತ್ತು.
 ##################

ಮುಗಿಲ ಮೇಲೆಲ್ಲಾ ಚೆಲ್ಲಿದೆ
ಗಾಳಿಯಲ್ಲಿ ಹಾಗೆ ತೇಲಿಬಂದ
ಯಾವುದೋ ಹಳೆ ಊರಿನ
ಹೆಸರಿನ ಜೊತೆಗೆ ಜೋತುಬಿದ್ದ
ಸಲ್ಲಾಪದ ನಾಲ್ಕು ಸವೆದ ಪದಗಳು...!
$$$$$$$$$$$$$$$$$$$$$$


ಕವಿದಿದೆ ಮೋಡ ಗೆಳತಿ
ಹೆಸರ ಬರೆದಿಟ್ಟು ಹೋಗು
ಮಳೆ ನಿಲ್ಲುವ ಸೂಚನೆಯಿಲ್ಲ...
                  ಈಶ

Tuesday, June 3, 2014

ನಿನ್ನದೇ ಹುನ್ನಾರ!!

 


 ಅಂತರಂಗದ ಮೌನ ಸರೋವರ 
ನೀನು ಮುಖವಿಟ್ಟು
 ಕಾಣುವ ಬಿಂಬಕೆ ನೂರು ರೂಪ
ಕಾಮನ ಕಲರವಕೆ ಬಯಕೆಯ ನೂರು ಬಣ್ಣ!!

************************ 
ಸುಮ್ಮನೆ ಬಿಂದುವಾದೆ
ಸಾಗುವ ದಾರಿಯಲಿ
ಹೇಳಲಾಗದ ಭಾವಗಳು ಹಾಗೇ ಬಿದ್ದಿವೆ
ಒಮ್ಮೆ ನಿನ್ನ ಸ್ಪರ್ಶಕೆ
ಕಾಯಲು ಜೀವಮಾನದ
ಲೆಕ್ಕವೆಕೆ!!
*******************
ನಿನ್ನೆದೆಯ ಮೇಲೆ ನಲಿಯುವ
ತುಟಿಗಳಿಗೆ ತಾಕುವ ನಿನ್ನ ಬಿಸಿಯುಸಿರಲಿ
ಹಸಿಯಾಗಿದೆ ನಿನ್ನೊಲವ ಭಾವವು
ಬಿಗಿಹಿಡಿದ ಬಾಹುಗಳಿಗೆ ಬಂಧನವೇ
 ಬಿಡುಗಡೆಯ ಹರುಷವು !!
******************** 
 ಮತ್ತೆ  ಮತ್ತೆ ಸಿಗುವ
ಸಂಭ್ರಮ ಸಡಗರಕೆ
ನಿನ್ನದೇ ಹುನ್ನಾರ!!

Saturday, February 15, 2014

ಖಾಲಿ ರಸ್ತೆ...

ಖಾಲಿ ರಸ್ತೆ...


ತಣ್ಣನೆ ಗಾಳಿ ಹರಿದಾಡುತ್ತಿದೆ
ಮಿಲನದ ರಾತ್ರಿಯೆಲ್ಲ ಕಳೆದ
ಖಾಲಿ ಮಂಚದ ಹಾಗೆ ಬಿದ್ದಿಹ
ರಸ್ತೆಯ ಮೇಲೆಲ್ಲ
ತಾಕಿ ನಿಂತು ಪಿಸುಮಾತನಾಡಲು
ಉಳಿದಿಲ್ಲ ಅರೆ ಜೀವವೂ
ಬರಿದಾದ ರಸ್ತೆ ನಿಟ್ಟುಸಿರಿಡುತ್ತಿದೆ
ಹಗಲೆಲ್ಲ ಹರಿದು-ಹಂಚಿ ಹರಿದಾಡಿದ
ಜೀವಗಳು ಹೊತ್ತು ಹೋದ
ನೋವುಗಳ ನೆನೆದು
ಮರುಗುವ ದಾರಿಯ ಮೇಲೆ
ಸುಳಿದಾಡುತ್ತಿದೆ ಗಾಳಿ
ಸೋನೆ ಮಳೆಯ
ಸುಳಿವನು ನೀಡದೆ.