ಸಹಯಾತ್ರಿಗಳೇ 'ಕವಿತಾ ಗುಚ್ಛದ' ಕವನಗಳಿಗೆ ನಿಮ್ಮಿಂದ ಸಿಕ್ಕಿದ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.ಪ್ರತಿಕ್ರಿಯಿಸಿದ ಪ್ರತಿಯೊಬ್ಬರು ಒಂದಲ್ಲ ಒಂದು ಕವಿತೆಯನ್ನ ಮೆಚ್ಚಿ ಮಾತನಾಡಿದ್ದಾರೆ. ಕವನ ಬರೆಯುವುದಕ್ಕಿಂತ ನಿಮ್ಮ ಮೆಚ್ಚುಗೆಯ,ವಿಶ್ವಾಸದ ನುಡಿಗಳು ನೀಡುವ ಸಂತಸ ಅಪಾರ. ನಿಮ್ಮೆಲ್ಲರ ವಿಶ್ವಾಸದಿಂದ ನನ್ನ ಆತ್ಮವಿಶ್ವಾಸ ಅಧಿಕವಾಗಿ ನನ್ನ ಮತ್ತೊಂದು ಕವನವನ್ನು ನಿಮ್ಮ ಓದಿಗೆ, ಪ್ರತಿಕ್ರಿಯೆಗೆ, ವಿಮರ್ಶೆಗೆ ನೀಡುತ್ತಿದ್ದೇನೆ. ಪ್ರೀತಿಯ ನಲುಮೆಯ ಭಾವದಲಿ ಮಿಂದು ತನ್ನ ಮನದನ್ನೆಯಿಂದ ದೂರಾದ ಹಕ್ಕಿಗೆ ಕಾಡುವ ನೆನಪುಗಳು. ಆ ನೆನಪಿನಲೇ ಕಾಲದೂಡುತ 'ಪರ್ಯಟನೆಯ ಬದುಕ' ಅರಸುವ ಒಂಟಿಹಕ್ಕಿಯ ಮನದ ತುಮುಲ,ತಳಮಳಗಳು ಒಂದು ಕ್ಷಣ ನಿಮ್ಮದಾಗುವಂತೆ ಮಗ್ನರಾಗಿ....
ಪ್ರೀತಿ ಮತ್ತು ಒಂಟಿ ಹಕ್ಕಿ....
ಎಲ್ಲೋ ಬೆಟ್ಟದ ತಪ್ಪಲಿಂದ ನುಸುಳಿಬಂದ
ಮನದಲಿ ತುಳುಕಿಸಲು ಬೆಟ್ಟದ
ತುದಿಯಲಿ ಒಂಟಿಹಕ್ಕಿಗೆ ಮುಸ್ಸಂಜೆಯ
ಮಬ್ಬಿನಲಿ ತನ್ನ ಸಂಗಾತಿಯ
ಬಿಸಿಯುಸಿರಿನ ಉನ್ಮಾದದ ನೆನಪು ಕಾಡಲು
ತಂಗಾಳಿಯ ತಂಪಲು ಹಕ್ಕಿಗೆ ಕಣ್ಣಿರ ಒರತೆ.
ಬೆಚ್ಚನೆ ಭಾವದ ಮೋಹದ ಕಿಚ್ಚಲಿ
ಒಂದೇ ಗೂಡಿನ ನಂಟಿನರಮನೆಯಲಿ
ಜಗದ ಆಗು-ಹೋಗುಗಳಿಗೆ ಕದವ ಮುಚ್ಚಿ
ಉಸಿರು-ಉಸಿರಲೆ ಪ್ರೀತಿಯ ಉಂಡು
ಕಾಲವ ಮರೆತ ಹಕ್ಕಿಗಳ ನಡುವಿಂದು
"ವಿಷಾದ"
ಬರಡು ಬರಡಾದ ಎದೆಯ ಹಂದರದ
ತುಂಬೆಲ್ಲ ವಿಷಾದದಲೆಗಳು
ಸುಳಿದಾಡುತಿರಲು ಒಂಟಿಹಕ್ಕಿಗೆ
ಹಸಿರೆಲೆಗಳ ಬನವೇ ಬೆಂಗಾಡು.
ಹಲವು ಆರಂಭ-ಅಂತ್ಯಗಳ
ತೊರೆಗಳೋಳಗೊಂಡ ಅನಂತತೆಯ
ನದಿಯೊಡಲು 'ಜೀವನ'.
ಹಕ್ಕಿಗದೋ ಭಾವ-ಭಾವಗಳು ಮಿಂದು
ಜೀವಮಿಡಿದ ಸಾಂಗತ್ಯದ ಅಂತ್ಯವು.
ಮನದ ತುಂಬೆಲ್ಲ ಪ್ರೀತಿ ಪ್ರೇಮದ ಹುಚ್ಚು ಹೊಳೆಯ
ನವೋನ್ವೇಷಣೆಯ ಹಾದಿಯಲಿ ಪೇರಿಸಿಕೊಂಡ
ಸವಿನೆನಪುಗಳ ಸರಮಾಲೆ ಸಾಲದೇನು?
ಕಾಲನ ಜೋಳಿಗೆಯಲಿ ಅಳಿದುಳಿದ
ಜೀವಮಾನವ ಸವೆಸಲು ಹಕ್ಕಿಗೆ;
ಹೊರಡಲು ಪರ್ಯಟನೆಯ ಬದುಕ ದಾರಿಯಲಿ.....?
ಎಚ್.ಎನ್.ಈಶಕುಮಾರ್