
ಯಾವನು ತಾನೇ ನೆಟ್ಟ, ನೇರವಾಗಿ ಇದ್ದಾನೆ ಹೇಳಿ? ಹೇಳೋದೊಂದು ಮಾಡೋದು ಒಂದು, ಯಾರನ್ನು ನಂಬೋಕೆ ಆಗಲ್ಲ ಅಂತ ಕಾಲ ಕಣಪ್ಪ ಇದು. ಈ ತರದ ಲೋಕರೂಡಿಯ ಮಾತುಗಳನ್ನು ಎಲ್ಲರು ಆಗಾಗ ಕೇಳುತ್ತಲೆ ಇರುತ್ತೇವೆ. ಸುಖಾ ಸುಮ್ಮನೆ ಯಾರನ್ನು ನೇರವಾಗಿ ದೂಷಿಸದೆ, ಹೊಣೆಗಾರನನ್ನಾಗಿ ಮಾಡದೆ ಸಾಮನ್ಯನಾಡುವ ಮಾತಿನಲಿ ಅಡಗಿರುವ ' ಸಾರ್ವತ್ರಿಕ ಸತ್ಯದ' ಬಗ್ಗೆ ಕ್ಷಣ ಕಾಲ ಯೋಚಿಸಿ.
ನಮ್ಮೆಲ್ಲ ತತ್ವಗಳು, ಧರ್ಮಗ್ರಂಥಗಳು, ದೇವರು-ದಿಂಡರು, ನಮ್ಮ ಕಾನೂನು, ಸಂವಿಧಾನ, ಭಗವದ್ಗೀತೆ ಹೀಗೆ ಎಲ್ಲವು ನಮಗೆ ತಿಳಿಸುವ ನೀತಿ ಎಂದರೆ "ನುಡಿದಂತೆ ನಡೆಯಬೇಕು". 'ಮಾತು-ಕೃತಿ' ಗಳ ನಡುವೆ ಸಾಮ್ಯತೆಯನು ಕಾಪಾಡಿಕೊಳ್ಳುವ ಗುರುತರವಾದ ನೀತಿ ಪಾಠವನ್ನು ಹೇಳುತ್ತವೆ. ಹೇಳುವುದೇನೋ ಸರಿ ಯಾರಿಗೆ ಹೇಳುತ್ತವೆ ಅನ್ನುವುದೇ ಪ್ರಶ್ನೆ. ಆ ತತ್ವವನು ಪಾಲಿಸುವವರು ಯಾರು? ಪಾಲಿಸಬೇಕಾದರು ಯಾರು? ನಾನೋ, ನೀವುಗಳೋ, ರಾಜಕಾರಣಿಗಳೋ, ಸರ್ಕಾರಿ ನೌಕರರೋ,ಗುರು-ಹಿರಿಯರೋ ಯಾರು ನುಡಿದಂತೆ ನಡೆಯಬೇಕು ಎಂಬುದನ್ನು ಜನಗಳಿಗೆ ತಿಳಿಸಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿರುವುದು ಎಂಥ ವಿಪರ್ಯಾಸ ಅಲ್ಲವೇ.
ಎಲ್ಲಿಂದ ಹೇಗೆ ಯಾವ ರೀತಿ ನೋಡಿದರು ನಮ್ಮ ದೇಶದಲ್ಲಿ 'ರಾಜಕೀಯ'ಎಂಬುದು ನಮ್ಮ ಸಮಾಜದಲಿ ಹಾಸು ಹೊಕ್ಕಾಗಿದೆ. ರಾಜಕೀಯವಿಲ್ಲದೆ ಏನು ನಡೆಯುವುದಿಲ್ಲ ಎನುವಂತ ಸ್ಥಿತಿ ನಮ್ಮದು. "politics is the last resort for scoundrels" ಎಂದ ಇಂಗ್ಲೆಂಡ್ ನ ಮಹಾನ್ ಚಿಂತಕ, ನಾಟಕಕಾರ ಜಾರ್ಜಬರ್ನಾರ್ಡ್ ಷ. ಆ ಮಾತುಗಳೇನೋ ತ್ರಿಕಾಲ ಸತ್ಯವೇ ಸರಿ. ಕಾರಣ ನಮ್ಮ ಸಮಾಜದಲಿನ ಬಹಳ ಮಂದಿ ರಾಜಕೀಯ ವ್ಯಕ್ತಿಗಳು ಸಹ ಅದಕ್ಕೆ ತಕ್ಕಂತೆ ಇದ್ದಾರೆ ಮತ್ತು ಹಾಗೆಯೇ ವರ್ತಿಸುತ್ತಾರೆ. ಮೊದಲೆಲ್ಲ ಯಾಗೆ ಅಪ್ಪಟ್ಟವಾದ ನಿಜಗುಣವಿದ್ದರೂ ರಾಡಿಯಾದ ರಾಜಕೀಯ ಕ್ಷೇತ್ರ ಎಲ್ಲರನು ಆಪೋಷಿಸುತ ಭ್ರಷ್ಟ-ದುಷ್ಟರಾಗುವಂತೆ ತನ್ನ ತ್ರಿವಿಕ್ರಮ ಅಟ್ಟಹಾಸವನು ಮೆರೆಯುತ್ತಲೆ ಇದೆ.
ಇಂದಿನ ನಮ್ಮ ನಾಯಕರನೊಮ್ಮೆ ಹಿಂದಿನ ಸ್ವಾತಂತ್ರ್ಯ ಕಾಲದ, ಸ್ವಾತಂತ್ರ್ಯ ಪೂರ್ವದ ಜನನಾಯಕ ರೊಂದಿಗೆ ಹಾಗೇ ಸುಮ್ಮನೆ ಹೋಲಿಸಿ ನೋಡಿ, ಯಾರಾದರು ಒಬ್ಬ ರಾಜಕಾರಣಿ ನಮಗಿಂದು, ಅನುಕರಣಿಯನಾಗಿದ್ದಾನ ಎಂಬುದನ್ನು ಪರಿಗಣಿಸಿ ನೋಡಿ ನಿಮಗೆ ಉತ್ತರ ದೊರೆವುದು. "ಸರಳತೆಯೇ ಅಗರ್ಭವಾದ ಸಿರಿವಂತಿಕೆ" ಎನುವ ಮಾತಿದೆ. ಗಾಂಧಿಜಿ ಒಮ್ಮೆ 'ಉಪ್ಪಿನ ಸತ್ಯಾಗ್ರಹಕ್ಕೆ' ಕರೆಕೊಟ್ಟು ಚಳುವಳಿಗೆ ಹೊರಟರೆಂದರೆ ಹಿಂದೆ-ಮುಂದೆ ಯೋಚಿಸದೆ ಲಕ್ಷಾಂತರ ಮಂದಿ ಅವರನ್ನು ಹಿಂಬಾಲಿಸುತ್ತಿದ್ದರು. ಅವರ ಮಾರ್ಗದರ್ಶನದಲಾಗಲಿ, ಆದರ್ಶದಲಾಗಲಿ ಯಾರಿಗೂ ಎಳ್ಳಷ್ಟು ಅನುಮಾನಗಳಿರಲಿಲ್ಲ. ಅಲ್ಲದೆ ಎಂತಹ ಸಾಮಾನ್ಯನೇ ಆದರೂ 'ಗಾಂಧೀಜಿಯ ತತ್ವಗಳನು' ಆಶಾದಾಯಕವಾಗಿ ಯಾವುದೇ ಗೊಂದಲಕೆ ಒಳಗಾಗದೆ ಪಾಲಿಸುತಲಿದ್ದರು ಹಾಗೂ ಪಾಲಿಸಲು ಕಾರಣವೆಂದರೆ ಅವರ 'ಸರಳತನ'.
ಗಾಂಧಿಜಿಯವರ ಜೀವನವೇ "ಸರಳಾತಿಸರಳ" ಅಂತಹ ಜೀವನವನ್ನು ಪಾಲಿಸಲು ಎಲ್ಲರು ಯೋಗ್ಯರೆ. ಸಿರಿವಂತರೆ ಅಲ್ಲ ದೇಶದ ಕಡು ಬಡವನು ಗಾಂಧೀಜಿಯ ದಿನಚರಿಯಂತೆ ತನ್ನ ಜೀವನ ನಡೆಸಬಹುದಲ್ಲವೆ. ಗಾಂಧೀಜಿ ಸೂಟು,ಬೂಟು ಧರಿಸಿ ಜನರನ್ನು ಆಕರ್ಷಿಸಲಿಲ್ಲ, ಅವರ ಸರಳತೆ, ಮಾದರಿಯುತ ಜೀವನ, ಆದರ್ಶಮಯವಾದ ಬದುಕು ಜನರನ್ನು ಅವರತ್ತ ಸೆಳೆಯಿತು. ಹಾಗೆಯೇ ದೇಶದ ಪ್ರಧಾನಿಯಾಗಿದ್ದಾಗಲೇ ತೀರಿಕೊಂಡ ಲಾಲ್ ಬಹದ್ದೂರ್ ಶಾಸ್ರಿಗಳಿಗೆ ಅವರು ತೀರಿಕೊಂಡ ಸಮಯದಲಿ 4.600 ರೂಪಾಯಿಗಳಷ್ಟು ಬ್ಯಾಂಕ್ ನ ಸಾಲವಿತ್ತೆಂದು ಇಂದು ಹೇಳಿದರೆ ನಂಬೋಕೆ ಸಾಧ್ಯವೇ ಎನಿಸುವಷ್ಟು ಅನುಮಾನ ಮೂಡುತ್ತದೆ.
ಅಂತಹ ಮಹಾನ್ ನಾಯಕರೆಲ್ಲ ಮರೆಯಾಗಿ, ಪುಸ್ತಕದ ಹಚ್ಚಿನಲ್ಲಿ ಕಾಣ ಸಿಗುವ ಈ ಸಮಯದಲಿ ಅವರೆಲ್ಲ ನೆನಪಾಗಲು ಕಾರಣವಾದದ್ದು ನಮ್ಮ ಪ್ರಾಥಮಿಕ ಶಿಕ್ಷಣಮಂತ್ರಿ ಕಾಗೇರಿಯ ಹೆಣ್ಣು ಮಕ್ಕಳಿಬ್ಬರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬ ಪತ್ರಿಕೆಯ ವರದಿ ಓದಿ, ಈ ಕಾಲದಲ್ಲಿ ಹೀಗೂ ಉಂಟೆ? ಎನುವ ಹಾಗೆ ದಿಗಿಲಾಗುವುದಷ್ಟೇ ಉಳಿದಿತ್ತು. ಅದೇನೇ ಇರಲಿ ತಮ್ಮದೇ ಸರ್ಕಾರದ ಆಡಳಿತದ ಬಗ್ಗೆ ಅದರ ಮಂತ್ರಿಗಳಿಗೆ, ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ನಂಬಿಕೆ ಇಲ್ಲದ ಈ ವಿಚಿತ್ರ ಸಂಧಿಗ್ದ ಕಾಲದಲಿ ಅಂತ ಸಚಿವರ ಮಕ್ಕಳು ಸರ್ಕಾರಿ ಶಾಲೆಯಲಿ ಕಲಿಯುತ್ತಿದ್ದಾರೆ ಎನುವುದು ಪ್ರಶಂಸೆ ಪಡುವಂತ ವಿಷಯವೇ. "ಸಾಮಾನ್ಯನಲಿ ಸಾಮಾನ್ಯನಾಗುವ ಆ ಅನುಭವವೇ ಅಭೂತವಾದುದು"
ಬದಲಾವಣೆಯ ಹಾದಿಯಲಿ ಕ್ಷಿಪ್ರ ಬೆಳವಣಿಗೆಯ ಕನಸು ಕಾಣುವ ಪ್ರತಿಯೊಬ್ಬರು ತಾನೇ ಬದಲಾವಣೆಯ ಹರಿಕಾರನಾಗಿ, ತನ್ನ ಜೀವನವನೆ ಪರೀಕ್ಷೆಗೆ ಒಳಪಡಿಸುತ್ತ, ಇತರರಿಗೆ ಮಾದರಿಯಾದಾಗಲೇ ಅಲ್ಲವೇ ' ಬದಲಾವಣೆಗೊಂಡು ಅರ್ಥ,ಮಹತ್ವ ಸಿಗೋದು ಸಹಯಾತ್ರಿಗಳೇ'.