Thursday, December 31, 2009

ಹೊಸ ವರುಷದ ಹಾದಿ..






















ಹಳೆಯ ಕ್ಯಾಲೆಂಡರ್ ಬದಲಿಸಿದಂತೆ,
ನನ್ನ ಹಳೆಯ ಕಹಿ ನೆನಪುಗಳೆಲ್ಲ
ನನ್ನಿಂದ ದೂರಾಗಿ, ಬದುಕಿನ
ಕಷ್ಟಗಳೆಲ್ಲ ಒಮ್ಮೆಗೆ ಮರೆಯಾಗಿ,
ನೋವಿನ ಬವಣೆಗಳೆಲ್ಲ ಅಂದಿನ
ದಿನಕೆ ಕೊನೆಯಾಗಿ,
ಜೀವನದ ಜಂಜಡ ಜಡತೆಗಳೆಲ್ಲ
ಆ ವರುಷದ ಹೊಳೆಯಲಿ
ಕೊಚ್ಚಿ ಹೋಗಿ, ನನ್ನೆಲ್ಲ ಗತ
ಸೋಲುಗಳು ಹೊಸ ಕನಸುಗಳ
ಹುರುಪಿನಲಿ ಸಮಾಧಿಯಾಗಿ
ಹೊಸ ವರುಷದ ದಿನ ರವಿತೇಜ

ನನ್ನ ಬಾಳಲ್ಲಿ ಹಳೆಯ

ದುಗುಡವನೆಲ್ಲ ದೂಡಿ
ಹೊಸ ಕ್ಯಾಲೆಂಡರ್ ನಂತೆ
ನವ್ಯತೆಯ ಅರುಹಿದರಷ್ಟೇ

ಹೊಸವರುಷಕೆ ಸ್ವಾಗತವು,ಸಂಭ್ರಮವು
ಈ ಜೀವಮಾನದಲಿ..ಎಂದಿಗೂ ಎಂದೆಂದಿಗೂ.


ಆದರೂ ಸಹಯಾತ್ರಿಗಳೇ ನಿಮಗೆಲ್ಲ ಹೊಸ ವರುಷ ಸಂತಸ, ಸಂಭ್ರಮ,ನಲುಮೆಯ ತುಂಬಿ ತರಲಿ ವರುಷವೆಲ್ಲ.
ಎಚ್.ಎನ್.ಈಶಕುಮಾರ್.

Saturday, December 26, 2009

ಬಿಡಿ ಬಿಡಿ ಕವಿತೆಗಳು















ನನ್ನ ಪದಗಳಿಗೆ ಮಿಡಿವ
ನಿನ್ನ ಮನದ ಭಾವಗಳೇ
ನನ್ನ ಕವಿತೆಯ ಜೀವಾಳ
ಕವನದ ಸೆಲೆಯೇ ನೀ

ಆಗಿರುವಾಗ ನೀ ಇಲ್ಲದೆ

ಪದಗಳಿಗಾವ ಜೀವ ಗೆಳತಿ..
*********************************
ಅದೆಲ್ಲೋ ಬಾಳೇ ತೋಟದ
ಹಸಿರ ನಡುವೆ ಬಳಕುತ

ನಿಂತ ಚೆಲುವೆ ನೀ
ಕರೆಯಲು ಕಾಡುವ ಕಂಗಳ
ಸನ್ನೆಯಲೇ ಮರುಳಾದೆ
ನಾ ನಿಂತ ನಿಲುವಲೇ...

**************************************
ನಿನ್ನ ಮೌನ ಮಾತಾದಾಗ
ಮಲ್ಲಿಗೆ ಅರಳಿತು ಸಂಜೆಯಲಿ..

ನಿನ್ನ ಕನಸು ನನಸಾದಾಗ
ನನ್ನ ಬದುಕು ಹಿತವೆನಿಸಿತು
ಮುಸಂಜೆಯ ಮಬ್ಬಿನಲಿ.....

******************************************
ನಿ
ನ್ನೊಂದಿಗೆ ದಿನರಾತ್ರಿ ಕಳೆವ
ಕನಸು ನನಸಾದ ದಿನದ
ನೆನಪ ಭಾರ ಹೊತ್ತು ಹೊತ್ತು
ದಿನದೂಡುತ್ತಿರುವ ವಿರಹಿಯ
ಸವಿ ನೋವ ನಿವೆದಿಸುತಲೇ
ಹುಣ್ಣಿಮೆಯ ಚಂದಿರ ಒಮ್ಮೆಗೆ
ಮರೆಯಾದ ಮೋಡದ ಮರೆಯಲಿ..

Wednesday, December 16, 2009

ಒಂದು-ನೂರರ....ಅಂತರ

ಒಂದು-ನೂರರ....ಅಂತರ


ಯಾಕೆಂಬುದೆ ತಿಳಿಯದ ಹಾಗೇ
ಎಚ್ಚರವೆಂಬುದು ನೆಪ ಮಾತ್ರ
ಮತ್ತೆ ಮತ್ತೆ ಮೈ ಮರೆವು
ಸಂಜೆ ಸೂರ್ಯನೊಡನೆ ಕಣ್ಣಾಮುಚ್ಚಾಲೆಯಾಡಲು
ಕಪ್ಪನೆ ಮೋಡ ಬುವಿಯಲೆಲ್ಲ
ಕೆಂಬಣ್ಣದ ತಂಪು,ಮನದಲೋ ಮಂಪರು.

ನೀ ಮೋಡದಂತೆ ಆವರಿಸಿ
ಮಳೆಯಂತೆ ಜಿನುಗಿ ಮರೆಯಾಗಿ
ಮರೆಯಲು, ನನ್ನ ಬದುಕು
ಒಂಟೆತ್ತಿನ ಗಾಡಿಯಾ ಹಾಗೇ
ಸಾಗುತ್ತಲೇ ಇದೆ ಅನವರತ.
ಅದೇನೋ ವಿಪರ್ಯಾಸ! ಅಣಕಿಸಿದೆ
ಹೊಟ್ಟೆಯ ಜೀತದ ಪ್ರತಿದಿನದ ಜೂಟಾಟಿಕೆ.
ಸೋಲು ಸಾವಲ್ಲ! ಜೀವನವೇರಿದ
ಘಟ್ಟವ ಸೂಚಿಸುವ ಮೈಲಿಗಲ್ಲು.

ನಾ ಮರೆಯಲೊಲ್ಲದ ಜೀವಮಾನದ
ಸೋಲು ನೀ, ಅಂದು ದಾರಿ ತಪ್ಪಿದವಗೆ
ಹಾದಿ ತೋರಿದ ಸೂಚನಫಲಕ.
ಸಂಬಂಧಗೂಡದ ಆ ಕಹಿ ಅನುಭವದ
ಶೂನ್ಯಭಾವಕೆ ಕಿಚ್ಚನ್ನ ಹಚ್ಚಿದಲ್ಲವೇ
ನಿನ್ನ ಅಗಲಿಕೆ.ಆ ವಿರಹದ
ಬೇಗೆಯಲಿ ಚಿಗುರೊಡೆದ ನನ್ನ
ಜೀವನ ಸೂಚ್ಯಂಕದ ಮೊದಲಂಕಿ ನೀನು.


ನೀ ಅಗಲಿ ದೂರಾದರೇನು?
ಬದುಕು ಎಲ್ಲಿಂದ ಪ್ರಾರಂಭವಾದರೇನು?
ನನ್ನ ನಿನ್ನ ನಡುವಿರುವುದು
ಒಂದು-ನೂರರ ನಡುವಿನ ಅಂತರ.

ಎಚ್.ಎನ್.ಈಶಕುಮಾರ್

Thursday, December 10, 2009

ಅರಿವಿರದ ಪಯಣವೇ...












ತೀರದ ಮನದ ಬಯಕೆಗಳು
ಕೊನೆಗಾಣದ ಅಪರಿಮಿತ ಬವಣೆಗಳು
ದಣಿವರಿಯದ ಅನಿಶ್ಚಿತಿತ ದಾಹಗಳು
ಕಣ್ಣ ಅಂಚಿನಲೆ ಬಿಂಬವಾಗಿ
ಕೂತು ಕಾಡುವ ಕಾಮನೆಗಳು
ಕೊನೆ ಕ್ಷಣದವರೆಗೂ ಅಂತಿಮ ತಾಣವ
ಕಾಣದ ಅರಿವಿಲ್ಲದ ಸುಧೀರ್ಘ
ಪಯಣವೇ ಜೀವನವ?



ಬದುಕ ದೋಣಿ ನೀರ ಅಲೆಗಳ ಮೇಲೆ ಅತ್ತಿಂದಿತ್ತ-ಇತ್ತಿಂದಿತ್ತ ತೋಯುತ್ತ, ನನ್ನ ಅಂತಿಮ ತಾಣವೆಲ್ಲೋ ಎಂದು ಮನಸಿನಲ್ಲಿ ಹುಟ್ಟಿದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೆಂಬಂತೆ ದೂರದ ದಿಗಂತದತ್ತ ಒಂದು ನೋಟ ಬೀರಿ ಅಲ್ಲಿರಬಹುದೇನೋ ನನ್ನ ಜೀವನದ ವಿಶ್ರಾಂತ, ನೆಮ್ಮದಿಯ ತಾಣ ಎಂದುಕೊಳ್ಳುತ್ತ, ತನ್ನ ಮನಸನ್ನು ತಾನೇ ಸಮಾಧಾನ ಪಡಿಸಿಕೊಳ್ಳುತ್ತ ಸಾಗುತ್ತಿತ್ತು. ಎಲ್ಲಿಯೂ ನಿಲ್ಲಲು ಮನಸಿಲ್ಲ, ಪಯಣದ ದಾರಿಯ ಬಿಟ್ಟು ಅಂತಿಮ ನೆಲೆ ಎಲ್ಲೆಂಬುದು ಸ್ಪಷ್ಟವಿಲ್ಲ, ಎಂದಾದರು ಒಂದು ದಿನ ಸಿಕ್ಕಬಹುದೆಂಬ ಆಶಾಭಾವದ ಭ್ರಮೆಯಲಿ ಸಿಲುಕಿ, ಆಶಾಭಾವವೇ ಜೀವನ ಸೆಲೆಯನು ಹೆಚ್ಚಿಸಿ ತನ್ನ ಪಯಣ ಮುಂದುವರೆಸಿದೆ. ಪಯಣ ಮಾತ್ರ ಸಾಗಿದೆ ಅದರ ಮಹತ್ವದ ಅರಿವಿಲ್ಲ. ತನ್ನ ಚೇತನ ಎಲ್ಲಿಯವರೆಗೂ ಮುನ್ನಡೆಸುತ್ತದೋ ಅಲ್ಲಿಯವರೆಗೂ ಸಾಗುತ್ತೇನೆ ಎಂಬ ಸಂಕಲ್ಪ ದೇಹಕ್ಕೆ.

ದೇಹ-ಮನಸುಗಳ ಸಾಂಗತ್ಯವೇ ವಿಭಿನ್ನ. ದೇಹದ ದಣಿವಿಗೆ ಮನಸಿನ ಸ್ಪೂರ್ತಿಯೇ ಔಷದ. ಮನಸಿನ ಅಭಿಲಾಷೆಗಳಿಗೆ ತಕ್ಕಂತೆ ತನ್ನನು ತಾನೇ ಹುರಿದುಂಬಿಸಿಕೊಳ್ಳುತ್ತ, ದೇಹ ಮನಸಿನ ತಾಣದ ಹುಡುಕಾಟದಲ್ಲಿ ಮುನ್ನಡೆಯುತ್ತದೆ. ದೇಹ-ಮನಸುಗಳ ನಡುವಿನ ಸಂಭಂದವೇ ಅಂತಹುದು. ಒಂದು ರೀತಿಯ ಬಿಟ್ಟು ಬಿಡದ ಅವಿನಾಭಾವ ಸಂಭಂದ. ಆದರೂ ವೈರುದ್ಯವಾಗಿ ಅವುಗಳ ನಡೆ. ತನ್ನದೇ ಆದ ಆಕಾರ, ಮೂರ್ತತೆಯ ದೇಹಕ್ಕೆ ತನ್ನದೇ ಈರ್ಷ್ಯೆ, ಬಯಕೆಗಳು ಕಡಿಮೆ ಆದರೇ ಮನಸಿಗೆ ತನ್ನದೇ ಆದ ಮೂರ್ತ ಅಸ್ಥಿತ್ವ ಇಲ್ಲವಾದರೂ ಅದರ ಬಯಕೆಗಳು ಈರ್ಷ್ಯೆಗಳು ಅಪಾರ. ಮನಸಿನ ವಾಂಛೆಗೆ ಮಿತಿಯೇ ಇಲ್ಲ. ಅಂತಹ ಮನಸನ್ನು ಸಾವಧಾನದ ಸ್ಥಿಥಿಯಲ್ಲಿರಿಸುವುದು ಅಸಾಧ್ಯದ ಸಂಗತಿ ಮತ್ತು ಮಾನವನಿಗಿರುವ ಬದುಕಿನ ಹೋರಾಟ.

ಜೀವನವೆಂಬ ನಿತ್ಯ ಚಲನೆಯಲಿ ದೇಹ-ಮನಸುಗಳ ಮಿಳಿತದ ಸಾಗಾಟವಿದ್ದರು ಮೂರ್ತ ರೂಪದ ದೇಹದ ಚಟುವಟಿಕೆಗಳಿಗೆ ಮನಸಿನ ಅಮೂರ್ತ ಶಕ್ತಿಯ ಬೆಂಬಲ ಅಪಾರ. ಬದುಕಿನ ನಿರಂತರ ಯುದ್ದದಲಿ ಎಂಬಿಡದೆ ಸೈನಿಕರಂತೆ ಕಾದಾಡುತ್ತ ಸಾಗುವ ಮಾನವನ ಎರಡು ಶಕ್ತಿಗಳು ಅವನ ಸೋಲು-ಗೆಲುವು, ಏಳು-ಬಿಳುಗಳಲ್ಲಿ ಮಹತ್ವದ ಪಾತ್ರದಾರಿಗಳು. ದೇಹ-ಮನಸುಗಳು ಎರಡು ನಮ್ಮಯ ಏಳು-ಬಿಳುಗಳಿಗೆ ಕಾರಣವಾದರು ಅವುಗಳಿಂದ ಉಂಟಾಗುವ ಸುಖ-ದುಖಗಳಲ್ಲಿ ಮನಸಿನ ಭಾಗಿತ್ವವೇ ಅಧಿಕ. ನಮ್ಮ ಸೋಲು-ಗೆಳವುಗಳಿಗೆ ಮನ ಸಂವೇದನೆಯಾಗಿ ವರ್ತಿಸುತ್ತದೆ. ಎಲ್ಲ ಫಲಾನುಫಲಗಳನ್ನು ಮನಸು ಅನುಭವಿಸುತ್ತದೆ. ಸಾಂಘಿಕ ಕಾರ್ಯದಲ್ಲಿ ಅಮೂರ್ತ ಚೇತನವಾದ ಮನಸಿನ ಕಾರ್ಯ ಅಧಿಕ. ಮಾನವ ಜೀವನದ ಏಳಿಗೆಯಲ್ಲಿ ಸದೃಢ ಮನಸು ಕೆಲಸ ಮಾಡುತ್ತದೆ. ಅದರಿಂದಾಗಿಯೇ ನಮ್ಮ ಮನಸನ್ನು ಸದೃಢ ಗೊಳಿಸಿಕೊಂಡು, ಉತ್ತಮ ಜೀವನವನ್ನು ಕಟ್ಟಿಕೊಳ್ಳುವತ್ತ ನಮ್ಮಯ ಜೀವನ ಯಾನ ಸಾಗಲಿ...

Thursday, December 3, 2009

ಚುಟುಕ!

ಮನದ ಯೋಚನ ಲಹರಿಯೇ ವಿಚಿತ್ರ. ಅಂತಹ ವಿಚಿತ್ರಕ್ಕೆ ಸಾಕ್ಷಿ ಚುಟುಕ. ಚುಟುಕವನ್ನ ಓದಿ, ಹೊಗಳಿಕೆ,ತೆಗಳಿಕೆಗಳನ್ನ ಕಾಮೆಂಟ್ ಮಾಡಿ ನೇರವಾಗಿ ನನ್ನನ್ನು ದೂಷಿಸಬೇಡಿ ಇದು ನನ್ನ ತಪ್ಪಲ್ಲ ನನ್ನ ಮನದ ತಪ್ಪು.

ಅಪಶಕುನ!!


ಎದುರು ಮನೆಯ
ಬೆಳ್ಳನೆಯ ಹುಡುಗಿ
ತೊನೆದಾಡುತ ಗೇಟಿನ
ಬಳಿ ಬರಲು
ಎದುರಿನ ಎಲೆಕ್ಟ್ರಿಕ್ ತಂತಿಯ
ಮೇಲಿದ್ದ ಕಾಗೆಗೆ
ಅಪಶಕುನದ ಭಾಸವಾಯ್ತು.