ಹೀಗೆ ಬಾಂಬೆಯ ಬಗ್ಗೆ ತರಾವರಿಯಾಗಿ ಕೇಳಿಯೆ ಕುತೂಹಲಿಯಾಗಿದ್ದ "ಕಾರ್ಮಿಕರ ಕೈಲಾಸವಾದ ಮುಂಬೈ"ನಗರಿಯನು ನೋಡಬೇಕೆಂಬ ಅಲೆಮಾರಿಯ ಹಂಬಲ ಕಳೆದ ವರ್ಷ ಸಾಕಾರವಾಹಿತು.ಹಲವು ವಿಚಿತ್ರ, ವಿಕ್ಷಿಪ್ತ, ವೈಶಿಷ್ಟ್ಯಗಳಿಗೆ ಹೆಸರಾಗಿದ್ದರು ಮುಂಬೈನ 'Local Train' ವ್ಯವಸ್ಥೆಯೇ ನನಗೆ ಅದ್ಭುತವೆನಿಸಿದ್ದು.ಎಡಬಿಡದೇ ಮುಂಬೈ ನಾಗರಿಕರನ್ನು ಹೊತ್ತು ಸಾಗುವ ಸಂವಹನ Local train ಎಂಬ ಗರೀಭಿ ರಥದ ವೈಶಿಷ್ಟ್ಯವನ್ನು ನಾ ಕಂಡಂತೆ ನಿಮಗೆ ಹೇಳಬೇಕೆನಿಸುತ್ತದೆ. ರೈಲು ಲೋಕಲ್ ಆದರೂ, ಅದರ ವೈವಿಧ್ಯತೆ ಮಾತ್ರ 'Local' ಎಂದು ನಿಮಗನಿಸುವುದಿಲ್ಲ ಎಂಬುದು ನನ್ನ ನಂಬಿಕೆ ಸ್ನೇಹಿತರೆ.
ದುಡಿಯುವವರ ನಗರವೆಂದೇ ಖ್ಯಾತಿಯಾದ ಮುಂಬೈಯನ್ನು ಪೂರ್ವ-ಪಶ್ಚಿಮ ಮುಂಬೈ ಎಂದು ಸೀಳು ಮಾಡಿರುವ ಹಳಿಗಳ ಮೇಲೆ ಜಗದ ಪರಿವೇ ಇಲ್ಲದೆ ತನ್ನ ಪಾಡಿಗೆ ತಾನು ದಿನಂಪ್ರತಿ ಸವೆಸಿಯು ಸವೆಸದ ಹಳಿಗಳ ಮೇಲೆ ಅತ್ತಿಂದಿತ್ತ ಅಡ್ಡಾಡುತ 'ಮಾನವ ಸಂಪರ್ಕ ಸೇತುವೆಯಾಗಿರುವ' local train' ಎಂಬ ಆಧುನಿಕ ಅನ್ವೇಷಣೆಯು ನಿಜಕ್ಕೂ "ಮುಂಬೈ ಎಂಬ ದೇಹಕ್ಕೆ ರಕ್ತನಾಳವಿದ್ದಂತೆ".ಒಂದಿಲ್ಲೊಂದು ಕಾರಣಕ್ಕೆ ಮುಂಬೈ ನಿವಾಸಿಗರ ಜೀವನದಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈ ರೈಲು ಬಂಡಿಗಳು,ಪ್ರದೇಶ-ಪ್ರದೇಶಗಳ ಜೊತೆಗೆ ಮಾನವರ ನಡುವೆಯು ಸಂಪರ್ಕ,ಸಂಬಂಧಗಳನು ನಿರ್ಮಿಸುತ್ತಲೇ ಸಾಗಿದೆ.
ಎಲ್ಲಿ ಸಂಪರ್ಕ ಸಂವಹನಗಳ ಸೌಲಭ್ಯ ಉತ್ತಮವಾಗಿರುತ್ತದೋ ಅಲ್ಲಿ ಮಾನವನ ಸಂಬಂಧಗಳು ಉತ್ತಮವಾಗಿ ಬೆಳೆಯುತ್ತವೆ ಅನ್ನೋದಕ್ಕ್ಕೆ ಬಾಂಬೆಯ ಜನ ಜೀವನ ಸ್ವರೂಪವೇ ಸಾಕ್ಷಿ.ಬಡವರು,ಕಾರ್ಮಿಕರು,ಕಾಲೇಜು ಹುಡುಗ ಹುಡುಗಿಯರು, ಶೋಕಿಗಾಗಿ ಊರು ಸುತ್ತುವವರು ಹೀಗೆ ಯಾರು-ಯಾರೋ ರೈಲಿನ ಬೋಗಿಯೊಳಗೆ ಸೇರಿ ತಮ್ಮ ನೀವೆದನೆಗಳೊಂದಿಗೆ ಎದುರಿಗಿರುವವರನ್ನು ಮಾತಿಗೆಳೆಯುತ್ತ ಪಯಣವನು ಹಗುರಗೊಳಿಸಿಕೊಳ್ಳುತ್ತ ಸಾಗುವ ಅವರ ಅನುದಿನದ ಪಯಣ, ಅಂಟುರೋಗವೆಂಬಂತೆ ದಿನವೂ ಒಬ್ಬ ಅಪರಿಚಿತನನ್ನಾದರು ಮಾತಿಗೆಳೆಯುತ್ತದೆ. ಆ ಕ್ಷಣದ ಮಾತಿಗಸ್ಟೇ ಸ್ಪಂಧಿಸುವ ಅವರ ಮಾತುಗಳು,ಆಪ್ತತೆಗೆ ನಮಗಾಗೋ ಅ ಅನುಭವವೇ ಅಭೂತವೆನಿಸುವುದು.
ಎಲ್ಲರು ಯಾವುದೋ ಅವಸರಕ್ಕೆಬಿದ್ದವರಂತೆ,ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಅವರ ಬಾಳಿನಲಿ ಹಾಸುಹೊಕ್ಕಿರುವ ರೈಲು ಬಂಡಿಯ ಒಡನಾಟ ನಮ್ಮನ್ನ ಚಕಿತಗೊಳಿಸುತ್ತದೆ. ರೈಲು ಬರೋದು ಒಂದು ನಿಮಿಷ ತಡವಾದರೂ ಫ್ಲಾಟ್ಫಾರಂ ಮೇಲೆ ನಿಂತು ಚಡಪಡಿಸೋ ಪಯಣಿಗರ ಕಣ್ಣುಗಳು ಹಳಿಗಳೆಡೆಗೆ ಹೊರಳಿ ಕಾತರಿಸುವುದು. ಹಳಿಗಳ ಮೇಲೆ ತ್ರಿವಿಕ್ರಮನಂತೆ ಸಾಗಿ ಬರುವ ರೈಲು, ನಿಲ್ಲುವ ಕೆಲವೇ ಕ್ಷಣಗಳಲ್ಲಿ ಇಳಿಯುವವರೆಷ್ಟೋ,ಹತ್ತುವವರೆಷ್ಟೋ ಕ್ಷಣ ಮಾತ್ರದಲಿ ಎಲ್ಲವೂ ಆಗಿ ಮುಗಿದಂತೆ. ಆಗತಾನೇ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ನಿಲ್ದಾಣ ನಿಮಿಷದಲ್ಲಿಯೇ ಖಾಲಿ ಖಾಲಿ.ಎಲ್ಲರಿಗೂ ಅವರದೇ ಆದ ಅನಿವಾರ್ಯತೆಗಳ ಅರಿವಾಗಿದೆಯೇನೋ ಎನುವಂತೆ ಸುಮ್ಮನಿದೆ ನಿಲ್ದಾಣ.
ಬೆಳಗಿನ ಜಾವದ 6 ರ ರೈಲೋ, ಆಫೀಸಿನ ಸಮಯಕೆ ಹಿಡಿಯಬೇಕಾದ 8 ರ ರೈಲೋ,ಅವಳತ್ತುವ ರೈಲಿಗೆ ಕಾಯುವ ಪುಂಡನ ರೈಲು,ಶಾಲಾ-ಕಾಲೇಜುಗಳಿಗಾಗೆ ವಿದ್ಯಾರ್ಥಿಗಳು ಕಾಯುವ ರೈಲು,ಹೀಗೆ ಯಾವುದಾದರೊಂದು ರೈಲಿನ ಚಲನೆಯೊಂದಿಗೆ ಮುಂಬೈ ವಾಸಿಗಳ ನಿರಂತರ ಯಾನ ಬೆಸೆದುಕೊಂಡಿದೆ. ಸಿಕ್ಕ ಸೀಟಿನ ಮೇಲೆ ಕೂತು ಪೇಪರ್ ಓದುವವರು,ರೇಡಿಯೋ ಆಲಿಸುತ ತಲೆಯಾಡಿಸುವವರು,ಬೆಳಗಿನ ನಿದ್ದೆ ಹರಿಯದೇ ತೂಕಡಿಸುವವರು,ಪ್ರೇಯಸಿಯೋಟ್ಟಿಗೆ ಫೋನ್ ನಲಿ ಹರಟುತ ಸಾಗುವವರು,ಕೆಲಸದ ತೀವ್ರತೆಯನು ಕಡಿಮೆ ಮಾಡಿಕೊಳ್ಳಲು ಅಲ್ಲೇ ತಯಾರಿ ನಡೆಸುವವರು,ಊರ ಸುತ್ತಲು ಹೋರಾಟ ಅನಾಮಿಕರ ಪರಿಪಾಟಲುಗಳು ಹೀಗೆ ಸೀಮೆ ಸೀಮೆಯ ಜನರನೋಳಗೊಂಡ ಸೀಮಾತೀತವೆನಿಸಿದ ಬೋಗಿಗಳ ರೈಲಿಗೆ ಇದೆಲ್ಲ ಮಾಮೂಲಿ ಎನಿಸಿ, ಯಾವುದೇ ಭೇದವಿಲ್ಲದೆ ತನ್ನ ಪಾಡು ತನಗೆಂದು ಸೈರನ್ ಕೂಗುತ ಅಳಿಗಳ ಮೇಲೆ ಚಕ್ರ ಉರುಳಿಸುತ್ತದೆ.